ಬೆಂಗಳೂರು: ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಈ ವಿಚಾರದಲ್ಲಿ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿರುವ ಅವರ ತಮ್ಮ ಹೇಳಿಕೆಗೆ ಹಲವು ಸ್ಪಷ್ಟನೆಗಳನ್ನು ನೀಡಿದ್ದಾರೆ.
ಎಲ್ಲ ದೇಗುಲಗಳು ತಳಪಾಯದಿಂದ ತುದಿಯವರೆಗೆ ಒಂದೇ ಹಂತದಲ್ಲಿರುತ್ತದೆ. ಆದರೆ ರಾಮಮಂದಿರದಲ್ಲಿ 3 ಖಂಡಗಳನ್ನು ಮಾಡಲಾಗಿದೆ. ಈ ಮೂರು ಖಂಡಗಳು ಒಂದಕ್ಕೊಂದು ನಂಟು ಹೊಂದಿಲ್ಲ. ಅದೇ ರೀತಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯುವ ಖಂಡದ ಗರ್ಭಗುಡಿ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಹೀಗಾಗಿ ಆರೋಪಗಳಲ್ಲಿ ಹುರುಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಕಾಮಗಾರಿ ಮುಗಿದಿಲ್ಲ ಎಂಬ ಆರೋಪಗಳೆಲ್ಲವೂ ಸುಳ್ಳು. ಈ ವಿಚಾರದಲ್ಲಿ ಶಂಕರಾಚಾರ್ಯರಿಗೂ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಸತ್ಯೇಂದ್ರ ದಾಸ್ ಮಾತು ಮುಂದುವರಿಸಿ, ರಾಮಮಂದಿರದಲ್ಲಿ 3 ಖಂಡಗಳಿವೆ, 2 ಖಂಡಗಳ ಕಾಮಗಾರಿ ಬಾಕಿ ಇದೆ. ಆದರೆ, ಒಂದಕ್ಕೊಂದು ಸಂಬಂಧ ಇಲ್ಲದ ಕಾರಣ ಕಾಮಗಾರಿ ಮುಂದುವರಿಸಬಹುದು. ಪ್ರಸ್ತುತ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡುವ ಗರ್ಭಗುಡಿ ನಿರ್ಮಾಣ ಪೂರ್ಣಗೊಂಡಿದೆ. ಅಂತೆಯೇ ಪ್ರಾಣಪ್ರತಿಷ್ಠಾಪನೆಗೆ ನಿಗದಿ ಮಾಡಿರುವ ಮುಹೂರ್ತ ಕೂಡ ಶ್ರೇಷ್ಠವಾಗಿದೆ. ಆ ಸಮಯದ ನಕ್ಷತ್ರ, ತಿಥಿ, ಗ್ರಹಗತಿಗಳು ಪ್ರಾಣ ಪ್ರತಿಷ್ಠಾಪನೆಗೆ ಅನುಕೂಲಕರವಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Ram Mandir : ಮಂದಿರ ಉದ್ಘಾಟನೆಗೆ ಅನುಷ್ಠಾನ ಸ್ವೀಕರಿಸಿದ ಪ್ರಧಾನಿ ಮೋದಿ; ಏನಿದು ಕಠಿಣ ಅಧ್ಯಾತ್ಮ ಸಾಧನೆ?
ನಿಗದಿಯಂತೆ 84 ಸೆಂಕೆಂಡ್‌ಗಳಲ್ಲಿ ಪ್ರಾಣಪ್ರತಿಷ್ಠಾಪನೆ ವಿಧಿವಿಧಾನ ನಡೆಯಲಿದೆ. ರಾಮಮಂದಿರ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಆದರೆ ನಮಗೆ ರಾಮನೇ ಎಲ್ಲ ಎಂದು ನುಡಿದಿದ್ದಾರೆ. ನಾನು ಮತ್ತು ಟ್ರಸ್ಟ್‌ನಲ್ಲಿರುವವರಿಗೆಲ್ಲ ರಾಮಲಲ್ಲಾನೇ ಜೀವ. ಕೆಲವರ ಪ್ರಕಾರ ರಾಮನ ಅಸ್ತಿತ್ವವೇ ಇಲ್ಲ, ರಾಮಾಯಣ ನಡೆದೇ ಇಲ್ಲ. ಅವರವರಿಗೆ ತೋಚಿದ್ದನ್ನು ಅವರು ಹೇಳುತ್ತಾರೆ. ನಮ್ಮ ನಂಬಿಕೆ, ನಿಲುವುಗಳಿಗೆ ನಾವು ಬದ್ಧ. ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭ ನಿಗದಿಯಂತೆ ನಡೆಯಲಿದೆ ಎಂದು ಅವರು ಸ್ಪಷ್ಟನುಡಿಗಳಲ್ಲಿ ಹೇಳಿದ್ದಾರೆ.
ಅಯೋಧ್ಯೆಗೆ ಬಂತು ವಿಶೇಷ ಡೋಲು
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ayodhya Aam Aandir) ಲೋಕಾರ್ಪಣೆ, ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ (Pran Pratishtha) ದಿನ ಗಣನೆ ಆರಂಭವಾಗಿದೆ. ಜನವರಿ 22ರಂದು ಈ ಐತಿಹಾಸಿಕ ಸಮಾರಂಭ ನಡೆಯಲಿದ್ದು, ಭರದ ಸಿದ್ದತೆ ನಡೆಯುತ್ತಿದೆ. ಇಗೀಗ ಸುಮಾರು 500 ಕೆ.ಜಿ. ಭಾರದ ‘ನಗಾಢ’ (Nagada-ಡೋಲು)ವನ್ನು ಗುಜರಾತ್‌ನಿಂದ ವಿಶೇಷ ರಥದ ಮೂಲಕ ಅಯೋಧ್ಯೆಗೆ ತರಲಾಗಿದೆ.
ಡೋಲಿನ ವೈಶಿಷ್ಟ್ಯ
ಈ ವಿಶೇಷ ಡೋಲನ್ನು ಗುಜರಾತ್‌ನ ಕರ್ಣಾವತಿಯ ದರಿಯಾಪುರ್‌ನಲ್ಲಿರುವ ದಬ್ಗರ್ ಸಮುದಾಯದವರು ಸಿದ್ಧಪಡಿಸಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮ ಮಂದಿರದ ಆವರಣದಲ್ಲಿ ಇದನ್ನು ಅಳವಡಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಳೆ ಮತ್ತು ಬಿಸಿಲಿನಿಂದ ಹಾನಿಗೊಳಗಾಗದಂತೆ ಈ ಡೋಲನ್ನು ತಯಾರಿಸಲಾಗಿದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಕೋಟಿಂಗ್ ನೀಡಲಾಗಿದೆ. ಕಬ್ಬಿಣ ಮತ್ತು ತಾಮ್ರವನ್ನು ಬಳಿಸಿ ಮಾಡಲಾದ ಈ ಡೋಲಿನ ಶಬ್ದ ಮೈಲುಗಟ್ಟಲೆ ದೂರಕ್ಕೆ ಕೇಳಿಸಲಿದೆ. ಈ ಹಿಂದೆ ಗುಜರಾತ್ ವಿಶ್ವ ಹಿಂದೂ ಪರಿಷತ್‌ನ ನಾಯಕರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪತ್ರ ಬರೆದು ಈ ಡೋಲನ್ನು ಸ್ವೀಕರಿಸುವಂತೆ ಮನವಿ ಸಲ್ಲಿಸಿದ್ದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜನವರಿ 5ರಂದು ಈ 56 ಇಂಚಿನ ಬೃಹತ್ ಡೋಲು ಹೊತ್ತು ಸಾಗುವ ವಿಶೇಷ ರಥಕ್ಕೆ ಚಾಲನೆ ನೀಡಿದ್ದರು. ಈ ವಿಶೇಷ ‘ನಗಾಢ’ ಜತೆಗೆ ಗುಜರಾತ್‌ನ ಅಹಮದಾಬಾದ್‌ನಿಂದ 4,600 ಕೆ.ಜಿ. ತೂಕದ ಧ್ವಜ ದಂಡ್ (ಧ್ವಜ ಸ್ತಂಭ) ಸಹ ಜನವರಿ 8ರಂದು ಅಯೋಧ್ಯೆಗೆ ತಲುಪಿದೆ. ಈ ಹಿತ್ತಾಳೆ ಕಂಬವು 44 ಅಡಿ ಉದ್ದವಿದ್ದು, ಇದನ್ನು ದೇವಾಲಯದ ಮುಖ್ಯ ಗೋಪುರದಲ್ಲಿ ಸ್ಥಾಪಿಸಲಾಗುವುದು. ಇದಲ್ಲದೆ ಅಷ್ಟಧಾತು(ಎಂಟು ಲೋಹಗಳು)ವಿನಿಂದ ಮಾಡಿದ ವಿಶಿಷ್ಟ ದೇವಾಲಯದ ಗಂಟೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಿಂದ ಅಯೋಧ್ಯೆಗೆ ಆಗಮಿಸಿದೆ. ಈ ಗಂಟೆ ಸುಮಾರು 2,400 ಕೆ.ಜಿ ತೂಕವಿದೆ. ಸುಮಾರು 30 ಕಾರ್ಮಿಕರ ತಂಡವು ಇದನ್ನು ತಯಾರಿಸಿದೆ.