ಮಂಗಳೂರು: ರಾಜ್ಯದ ದೇವಾಲಯಗಳಲ್ಲಿ ಅನ್ಯಮತೀಯರಿಗೆ ವ್ಯವಹಾರ ಮಾಡಲು ಅವಕಾಶ ನೀಡಬಾರದು ಎಂಬ ಕೂಗು ಮತ್ತೆ ಜೀವಪಡೆದಿದೆ. ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅನ್ಯ ಮತೀಯರಿಗೆ ವ್ಯಾಪಾರ ನಿರ್ಬಂಧ ವಿಧಿಸಬೇಕು ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದೆ.
ಈ ಹಿಂದೆ ಹಲವು ಬಾರಿ ದೇವಸ್ಥಾನದ ನಿಗದಿತ ಅಂಗಡಿಗಳ ಏಲಂನಲ್ಲಿ ಅನ್ಯ ಧರ್ಮೀಯರು ಪಾಲ್ಗೊಳ್ಳಲು ಅವಕಾಶವಿರಬಾರದು ಎಂದು ಆಗ್ರಹಿಸಲಾಗಿತ್ತು. ಹಿಂದು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಲ್ಲೇ ಈ ವಿಚಾರ ಉಲ್ಲೇಖವಾಗಿರುವುದನ್ನು ಬೊಟ್ಟು ಮಾಡಲಾಗಿತ್ತು. ಅದರ ಜತೆಯೇ ಹಿಂದು ದೇವಳಗಳ ಜಾತ್ರೆ ಸಂದರ್ಭದಲ್ಲಿ ಅನ್ಯಮತೀಯರಿಗೆ ಅಂಗಡಿ ಇಡಲು ಅವಕಾಶ ನೀಡಬಾರದು ಎಂಬ ವಾದ ಜೋರಾಗಿ ಕೇಳಿಬಂದಿತ್ತು. ಕೆಲವು ಕಡೆಗಳಲ್ಲಿ ಮುಸ್ಲಿಂ ಅಂಗಡಿಕಾರರ ಮೇಲೆ ಹಲ್ಲೆಯೂ ನಡೆದಿತ್ತು.
ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಅನ್ಯಮತೀಯರಿಗೆ ವ್ಯಾಪಾರ ಅವಕಾಶ ನೀಡಬಾರದು ಎಂಬ ಕೂಗು ಎದ್ದಿದೆ. ಕುಕ್ಕೆ ಕ್ಷೇತ್ರದಲ್ಲಿ ನವೆಂಬರ್ ೨೮ರಂದು ಪಂಚಮಿ ಮತ್ತು ೨೯ರಂದು ಚಂಪಾ ಷಷ್ಠಿ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಯ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ನೂರಾರು ಅಂಗಡಿಗಳಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಚಂಪಾಷಷ್ಠಿಯ ಸಮಯದಲ್ಲಿ ಅಂಗಡಿ ತೆರೆಯಲು ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಕ್ಷೇತ್ರದ ಒಳಗೆ ಅನ್ಯ ಧರ್ಮೀಯರ ವ್ಯಾಪಾರ ವಹಿವಾಟಿಗೆ ಅವಕಾಶ ಕೊಡಬಾರದು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನೇ ಇದೆ. ಅದರ ನಿಯಮಗಳನ್ನು ಅನುಸರಿಸಿ ಅವಕಾಶ ನಿರಾಕರಿಸಬೇಕು. ಕಾನೂನು ಸುವ್ಯವಸ್ಥೆ ಹಾಗೂ ಪಾವಿತ್ರ್ಯತೆ ಕಾಪಾಡಬೇಕು ಎಂದು ಜಾಗರಣ ವೇದಿಕೆಯ ಹರಿಪ್ರಸಾದ್ ಎಂಬವರು ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ | ಹಲಾಲ್ ಬಾಯ್ಕಾಟ್ ಮಾಡಿ ಬೆಳಕಿನ ಹಬ್ಬ ಆಚರಿಸಿ: ಚಿಂತಕ ಚಕ್ರವರ್ತಿ ಸೂಲಿಬೆಲೆ