ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯನ್ನು ಜಯ ಏಕಾದಶಿ (Jaya Ekadashi 2023) ಎಂದು ಕರೆಯಲಾಗುತ್ತದೆ. ಪ್ರತಿ ಮಾಸದ ಏಕಾದಶಿಯೂ ವಿಶೇಷವೇ ಆಗಿರುತ್ತದೆ. ಏಕಾದಶಿಯಂದು ಉಪವಾಸ ಮತ್ತು ಮೌನ ವ್ರತವನ್ನು ಆಚರಿಸುತ್ತಾರೆ. ಏಕಾದಶಿಯ ದಿನವನ್ನು ದೇವರ ಸ್ಮರಣೆಯಲ್ಲಿ ಕಳೆಯುವುದರಿಂದ ಇಷ್ಟಾರ್ಥ ಸಿದ್ಧಿಸುವುದಲ್ಲದೇ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಮಾಘ ಮಾಸದಲ್ಲಿ ಬರುವ ಏಕಾದಶಿಗೆ ವಿಶೇಷ ಮಹತ್ವವಿದೆ.
ಈ ಬಾರಿ 2023 ಫೆಬ್ರವರಿ 01ರ ಬುಧವಾರದಂದು ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಜಯ ಏಕಾದಶಿ ವ್ರತವನ್ನು ಆಚರಿಸುವವರಿಗೆ ಯಾವುದೇ ಭೂತ, ಪ್ರೇತ ಮತ್ತು ಪಿಶಾಚಿಗಳ ಬಾಧೆ ತಟ್ಟುವುದಿಲ್ಲ. ಈ ದಿನ ವ್ರತವನ್ನು ಆಚರಿಸುವವರು ಜನ್ಮಗಳ ಪಾಪಗಳಿಂದ ಮುಕ್ತಿ ಹೊಂದುತ್ತಾರೆ. ಅಷ್ಟೇ ಅಲ್ಲದೇ ಜಯ ಏಕಾದಶಿಯ ದಿನ ವಸ್ತ್ರ, ಹಣ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ದಾನವಾಗಿ ನೀಡುವುದರಿಂದ ಶುಭವಾಗುತ್ತದೆ.
ಈ ಜಯ ಏಕಾದಶಿಯನ್ನು ದಕ್ಷಿಣ ಭಾರತದಲ್ಲಿ ಭೂಮಿ ಏಕಾದಶಿ ಭೀಷ್ಮ ಏಕಾದಶಿ ಎಂದು ಸಹ ಆಚರಿಸುತ್ತಾರೆ. ಭೀಷ್ಮ ಏಕಾದಶಿ ಎಂದು ಕರೆಯಲು ಕಾರಣವೇನೆಂದರೆ ಮಾಘ ಮಾಸದ ಶುಕ್ಷ ಪಕ್ಷದ ಅಷ್ಟಮಿಯಂದು ಶರಶೈಯೆಯಲ್ಲಿ ಮಲಗಿದ್ದ ಪಿತಾಮಯ ಭೀಷ್ಮರು ದೇಹ ತ್ಯಾಗ ಮಾಡಿದ್ದರು. ಆ ಕಾರಣದಿಂದಾಗಿ ಆ ದಿನವನ್ನು ಭೀಷ್ಮಾಷ್ಟಮಿ ಎಂದು ಕರೆಯುತ್ತಾರೆ. ಅದರ ನಂತರದಲ್ಲಿ ಬರುವ ಏಕಾದಶಿಯನ್ನು ಭೀಷ್ಮ ಏಕಾದಶಿ ಎಂದು ಕರೆಯಲಾಗುತ್ತದೆ.
ಜಯ ಏಕಾದಶಿಯ ಮುಹೂರ್ತ
ಹಿಂದೂ ಪಂಚಾಂಗದ ಪ್ರಕಾರ ಏಕಾದಶಿಯ ಉದಯ ತಿಥಿಯು ಫೆಬ್ರವರಿ 1ರಂದು ಇರುವ ಕಾರಣ ಬುಧವಾರದಂದೇ ಜಯ ಏಕಾದಶಿ ವ್ರತವನ್ನು ಆಚರಿಸಲಾಗುತ್ತದೆ. ಏಕಾದಶಿ ವ್ರತ ಪಾರಾಯಣ ಮಾಡಲು ಫೆಬ್ರವರಿ 2ರ ಬೆಳಗ್ಗೆ 7 ಗಂಟೆಗೆ ಮುಹೂರ್ತವಿದೆ. ಹಾಗೆಯೇ ಸರ್ವಾರ್ಥ ಸಿದ್ಧಿ ಯೋಗವು ಫೆಬ್ರವರಿ 1ರ ಬೆಳಗ್ಗೆ 7:10 ರಿಂದ ಫೆಬ್ರವರಿ 2ರ ವರೆಗೂ ಇರಲಿದೆ.
ಜಯ ಏಕಾದಶಿಯ ಪೂಜಾ ವಿಧಿ
ಏಕಾದಶಿಯ ದಿನ ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳಿಂದ ನಿವೃತ್ತರಾಗಿ ವ್ರತ ಸಂಕಲ್ಪವನ್ನು ಮಾಡಬೇಕು. ನಂತರ ವಿಧಿ ವಿಧಾನಗಳಿಂದ ವಿಷ್ಣುವಿನ ಶ್ರೀಕೃಷ್ಣ ಅವತಾರಕ್ಕೆ ಪೂಜೆ ಮಾಡಲಾಗುತ್ತದೆ. ಏಕಾದಶಿಯಂದು ರಾತ್ರಿ ಜಾಗರಣೆ ಮಾಡುತ್ತಾ ಶ್ರೀಕೃಷ್ಣನ ನಾಮ ಸ್ಮರಣೆ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ದ್ವಾದಶಿಯಂದು ಅಗತ್ಯವಿರುವವರಿಗೆ ಭೋಜನವನ್ನು ನೀಡಿ, ದಕ್ಷಿಣೆ ಕೊಟ್ಟ ನಂತರ ವ್ರತ ಪಾರಾಯಣ ಮಾಡಬೇಕು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ವಿಷ್ಣು ಸಹಸ್ರನಾಮ ಪಠಣ
ಭೀಷ್ಮ ಪಿತಾಮಹರು ದೇಹ ತ್ಯಾಗಕ್ಕಾಗಿ ಉತ್ತರಾಯಣದ ಪುಣ್ಯಕಾಲವನ್ನು ಎದುರು ನೋಡುತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಕಾಣಲು ಪಾಂಡವರು ಬರುತ್ತಾರೆ. ಆಗ ಭೀಷ್ಮಾಚಾರ್ಯರು, ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜಗತ್ತಿಗೆ ತಿಳಿಸಲು ಮಾಘ ಮಾಸದ ಅಷ್ಟಮಿಯಂದು ಧರ್ಮರಾಯನಿಗೆ ವಿಷ್ಣುಸಹಸ್ರನಾಮವನ್ನು ಉಪದೇಶಿಸುತ್ತಾರೆ.
ಶ್ರೀಕೃಷ್ಣನೇ ಪರಮಜ್ಞಾನಿಗಳಾದ ಭೀಷ್ಮರ ಮುಖಾಂತರ ಲೋಕಕ್ಕೆ ಅನೇಕ ಧಾರ್ಮಿಕ ರಹಸ್ಯಗಳ ಜೊತೆಗೆ ವಿಷ್ಣು ಸಹಸ್ರನಾಮವನ್ನು ತಿಳಿಯುವಂತೆ ಮಾಡುತ್ತಾನೆ. ಹಾಗಾಗಿ ಜಯ ಏಕಾದಶಿಯಂದು ವಿಷ್ಣುವಿನ ಅವತಾರವಾದ ಕೃಷ್ಣನನ್ನು ಪೂಜಿಸುವುದರೊಂದಿಗೆ ವಿಷ್ಣು ಸಹಸ್ರನಾಮವನ್ನು ಸಹ ಪಠಿಸಲಾಗುತ್ತದೆ. ಏಕಾದಶಿಯ ದಿನ ವಿಷ್ಣು ಸಹಸ್ರನಾಮವನ್ನು ಪಠಿಸುವುದು ಮತ್ತು ಲಕ್ಷ್ಮೀ ಸಹಿತ ವಿಷ್ಣುವನ್ನು ಶ್ರದ್ಧೆಯಿಂದ ಪೂಜಿಸುವುದು ಅತ್ಯಂತ ಶುಭವೆಂದು ಹೇಳುತ್ತಾರೆ.
ಜಯ ಏಕಾದಶಿಯ ವ್ರತ ಕಥೆ
ಇಂದ್ರನ ಸಭೆಯಲ್ಲಿ ಉತ್ಸವ ನಡೆಯುತ್ತಿತ್ತು. ಈ ಸಭೆಯಲ್ಲಿ ದೇವಗಣ, ಸಂತ ದಿವ್ಯ ಪುರುಷರು ಆ ಉತ್ಸವದಲ್ಲಿ ಉಪಸ್ಥಿತರಿದ್ದರು.ಮಾಲ್ಯವಾನ್ ಎಂಬ ಗಂಧರ್ವ ಪುರುಷ ಅತ್ಯಂತ ಸ್ವರ ಬದ್ಧವಾಗಿ ಹಾಡುತ್ತಿದ್ದನು. ಅದೇ ರೀತಿ ಪುಷ್ಪವತಿ ಎಂಬ ಗಂಧರ್ವ ಕನ್ಯೆಯು ಅಷ್ಟೇ ಸುಂದರವಾಗಿ ನೃತ್ಯ ಮಾಡುತ್ತಿದ್ದಳು. ಆ ಉತ್ಸವದ ಸಂದರ್ಭದಲ್ಲಿ ಮಾಲ್ಯವಾನ್ ಮತ್ತು ಪುಷ್ಪವತಿ ಇಬ್ಬರೂ ಆ ಸಭೆಯಲ್ಲಿ ಮೋಹಿತರಾಗುತ್ತಾರೆ. ಇದರಿಂದ ಕೋಪಗೊಂಡ ಇಂದ್ರನು ಅವರಿಬ್ಬರಿಗೆ ಮೃತ್ಯುಲೋಕದಲ್ಲಿ ಪಿಶಾಚಿ ಜೀವನ ವ್ಯತೀತ ಮಾಡುವಂತೆ ಶಾಪ ನೀಡುತ್ತಾನೆ.
ಶಾಪದ ಪ್ರಭಾವದಿಂದ ಇಬ್ಬರೂ ಪ್ರೇತವಾಗಿ ಕಷ್ಟದಿಂದ ಪಿಶಾಚಿ ಜೀವನವನ್ನು ನಡೆಸುತ್ತಾರೆ. ಮಾಘ ಮಾಸದ ಶುಕ್ಷ ಪಕ್ಷದ ಏಕಾದಶಿ ವ್ರತದ ಬಗ್ಗೆ ನಾರದರಿಂದ ತಿಳಿದುಕೊಂಡು ವ್ರತಾಚರಣೆ ಮಾಡುತ್ತಾರೆ. ಇದರ ಫಲವಾಗಿ ಅವರಿಗೆ ಪೂರ್ವ ಶರೀರ ಪ್ರಾಪ್ತಿಯಾಗುತ್ತದೆ. ಹಾಗಾಗಿ ಅವರಿಬ್ಬರೂ ಜಯ ಏಕಾದಶಿಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತಿಳಿಸುತ್ತಾರೆ. ಈ ಜಯ ಏಕಾದಶಿ ವ್ರತದ ಆಚರಣೆಯಿಂದ ಉತ್ತಮ ಜನ್ಮವು ಪ್ರಾಪ್ತವಾಗುತ್ತದೆ. ಹೀಗಾಗಿಯೇ ಈ ಏಕಾದಶಿಯನ್ನು ಶಾಪ ವಿಮೋಚನಾ ಏಕಾದಶಿ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: Prerane : ಅಲ್ಲಿರುವುದು ನಮ್ಮನೆ, ಇಲ್ಲಿಗೆ ಬಂದೆವು ಸುಮ್ಮನೆ!