ಬೆಂಗಳೂರು: ರಾಜಧಾನಿ ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆ 2022ಕ್ಕೆ (Kadlekai Parishe 2022) ಅದ್ಧೂರಿ ಚಾಲನೆ ಸಿಕ್ಕಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಅಧಿಕೃತವಾಗಿ ಪರಿಷೆಗೆ ಚಾಲನೆ ನೀಡಿದರು.
ನಂತರ ತುಲಾಭಾರ ಮಾಡಿ ಮೊದಲ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿದ ಸಿಎಂ ಬೊಮ್ಮಾಯಿ, ನೆರೆದಿದ್ದವರಿಗೆ ಕಡ್ಲೆಕಾಯಿ ಅಳೆದುಕೊಟ್ಟರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ರವಿ ಸುಬ್ರಹ್ಮಣ್ಯ, ಎಂಎಲ್‌ಸಿ ಶರವಣ ಮತ್ತಿತರರು ಇದ್ದರು.
ಕೆಂಪೇಗೌಡರಿಂದ ಕಡಲೆಕಾಯಿ ಪರಿಷೆ ಪರಂಪರೆಗೆ ನಾಂದಿ
ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬಸವನಗುಡಿ ಕಡಲೆಕಾಯಿ ಪರಿಷೆ ಎಂದರೆ ನಮ್ಮೆಲ್ಲರಿಗೂ ಅತ್ಯಂತ ಸಂತಸ, ಸಡಗರದ ಕಾರ್ಯಕ್ರಮ. ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನತೆಗೆ ಧನ್ಯವಾದ. ಬಸವನಗುಡಿ ಬಹಳ ದೊಡ್ಡ ಇತಿಹಾಸ ಪರಂಪರೆ ಇರುವಂತಹ ಕ್ಷೇತ್ರ. ರೈತರಿಗೆ ಮಾರುಕಟ್ಟೆ ಸಂಬಂಧವಿರಬೇಕು ಎನ್ನುವ ದೃಷ್ಟಿಯಿಂದ ಈ ಪರಿಷೆ ಶುರುವಾಗಿದ್ದು, ಕೆಂಪೆಗೌಡರು ಈ ಪರಂಪರೆಗೆ ನಾಂದಿ ಹಾಡಿದರು ಎಂದು ಹೇಳಿದರು.
ನಾನು ಶಾಲೆಯ ರಜೆಗಳಲ್ಲಿ ಮನೆಗೆ ಹೋದಾಗ ಮನೆಯ ಹಸು, ಆಕಳಿಗೆ ಸಮಯ ನೀಡಿ ಅವುಗಳೊಂದಿಗೆ ಸಮಯ ಕಳೆಯುತ್ತಿದ್ದೆ. ಅಂತಹ ಬಸವಣ್ಣನಿಗೆ ಇವತ್ತು ಪೂಜೆ ಸಲ್ಲಿಸಿದ್ದೇನೆ. ನನಗೆ ಕಡಲೆಕಾಯಿ ಎಂದರೆ ಬಹಳ ಇಷ್ಟ. ಕಡಲೆಕಾಯಿ ಇದ್ದರೆ ಊಟವೇ ಬೇಡ ಎನ್ನಿಸುತ್ತದೆ. ಹೊಲದಲ್ಲಿ ಹಸಿ ಕಡಲೆಕಾಯಿ ತಿಂದರೆ ಬಹಳ ಮಜವಾಗಿರುತ್ತದೆ ಎಂದು ತಿಳಿಸಿದರು.
ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಶಾಸಕರು ಮನವಿ ಮಾಡಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ. ಈ ಭಾಗವನ್ನು ಪಾರಂಪರಿಕ ಪ್ರದೇಶ ಎಂಬುವುದಾಗಿ ಘೋಷಿಸಲಾಗುವುದು. ರೋಪ್ ವೇ ನಿರ್ಮಾಣಕ್ಕೆ ಅನುದಾನ ಕೇಳಿದ್ದಾರೆ, ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಕೆಂಪೆಗೌಡರ ಕಾಲದಿಂದಲೂ ವಿಶೇಷವಾಗಿ ಪರಿಷೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಸೊಗಡನ್ನು ಪ್ರತಿನಿದಿಸುವ ಐತಿಹಾಸಿಕ ಪರಿಷೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿರುವುದು ಬಹಳ ಸಂತಸದ ವಿಚಾರ. ಕಡಲೆಕಾಯಿ ಪರಿಷೆ ಒಂದೊಳ್ಳೆ ಗ್ರಾಮೀಣ ವಾತಾವರಣ ಕಟ್ಟಿಕೊಡಲಿದೆ ಎಂದು ಹೇಳಿದರು.
ಬಸವನಗುಡಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಲ್ಲ ರೀತಿಯ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ. ಅದಕ್ಕೆ ಆಭಾರಿಯಾಗಿದ್ದೇನೆ. ಜಿಂಕೆ ಪಾರ್ಕ್‌ನಿಂದ ಕೆಂಪಾಬುದಿ ಕೆರೆಗೆ ರೋಪ್ ವೇ ಮಾಡುವ ಪ್ರಯತ್ನ ಮಾಡಿದ್ದೇವೆ. ಈ ಯೋಜನೆಗೆ ಮುಖ್ಯಮಂತ್ರಿಗಳ ಸಹಕಾರ ಬೇಕಿದೆ. ಬಸವನಗುಡಿ ನೋಡಲು ಬರುವ ಪ್ರವಾಸಿಗರಿಗೆ ರೋಪ್ ವೇ ನಿರ್ಮಾಣದಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಿಕ್ಕಿರಿದು ತುಂಬಿದ ಜನರು
ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ ಕಳೆಗಟ್ಟಿದೆ. ದೊಡ್ಡಗಣಪತಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಉದ್ಘಾಟನೆಯ ಮೊದಲ ದಿನವೇ ಪರಿಷೆ ಜನರಿಂದ ತುಂಬಿ ಹೋಗಿದೆ. ಪರಿಷೆಯಲ್ಲಿ ಕಡಲೆ ಕಾಯಿ ಖರೀದಿ ಭರಾಟೆ ಒಂದು ಕಡೆಯಾದರೆ ಮತ್ತೊಂದು ಕಡೆ ಅಂಗಡಿ- ಮುಗ್ಗಟ್ಟುಗಳ ಮುಂದೆ ಜನರು ಕಿಕ್ಕಿರಿದು ಸೇರಿದ್ದಾರೆ. ದೊಡ್ಡ ಬಸವಣ್ಣ ದೇವಸ್ಥಾನಕ್ಕೆ ಶಾಸಕ ಉದಯ್ ಗರುಡಾಚಾರ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಹಾಗೂ ರಾಜ್ಯದ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ಭೇಟಿ ನೀಡಿ ದರ್ಶನ ಪಡೆದರು. 1,೦೦೦ ಕೆಜಿ ಕಡಲೆಕಾಯಿಯಿಂದ ಬಸವಣ್ಣನಿಗೆ ಅಭಿಷೇಕ ಮಾಡಲಾಯಿತು. ಬಳಿಕ ಬಂದ ಭಕ್ತರಿಗೆ ಕಡಲೆ ಕಾಯಿ ಪ್ರಸಾದ ವಿನಿಯೋಗ ಮಾಡಲಾಯಿತು.
ಮೂರು ದಿನವೂ ಇರಲಿದೆ ವಿಶೇಷ ಕಾರ್ಯಕ್ರಮ
ಭಾನುವಾರ ಸಂಜೆ ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಲಾಗಿದ್ದು, ಈ ದಿನವೇ ಶ್ರೀ ಶ್ರೀಧರ್ ಸಾಗರ್ ತಂಡದಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ಇರಲಿದೆ. ನ.21ರಂದು ಸೋಮವಾರ ಸಂಜೆ 6ಕ್ಕೆ ಕೆಂಪಾಗುಡಿ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಯಿಂದ ರಂಗಲಕ್ಷ್ಮಿ ಶ್ರೀನಿವಾಸ್ ಅವರಿಂದ ಬೀದಿ ನಾಟಕ ಹಾಗು ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ವೀಣಾ ಮುರಳಿಧರ್ ಅವರ ತಂಡದಿಂದ ಭರತನಾಟ್ಯ, ಕಾಸಿಂ [ಮಲ್ಲಿಗೆ ಮಡು] ಅವರಿಂದ ಸಂಗೀತ ಸಂಜೆಯು ಇರಲಿದೆ.
22ರಂದು ಮಂಗಳವಾರ ಸಂಜೆ 6 ಗಂಟೆಯಿಂದ ವಿಜಯ ವಿಠಲ ಶಾಲೆಯ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಜೆ ನಡೆದರೆ, ನರಸಿಂಹಸ್ವಾಮಿ ಉದ್ಯಾನವನ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ಇರಲಿದೆ. ಗಾಯತ್ರಿ ಶ್ರೀಧರ್ ಅವರಿಂದ ಸುಗಮ ಸಂಗೀತ ಸೇರಿ ಸಿರಿಕಲಾ ಮೇಳ ತಂಡದಿಂದ ಯಕ್ಷಗಾನ ಇರಲಿದೆ.
ಇದನ್ನೂ ಓದಿ | Weekend style | ಪುರುಷರಿಗಾಗಿ ಸ್ಟೈಲಿಶ್ ವಿಕೆಂಡ್ ಔಟ್‌ಫಿಟ್