Site icon Vistara News

Kaivara Tatayya Jayanthi : ಜೀವಪರ ಸಂತ ಕೈವಾರ ತಾತಯ್ಯ

About Kaivara Narayanappa An Outstanding Saint-Poet of Karnataka

#image_title

ತಳಗವಾರ ಆನಂದ್
ನರನಿಗೆ ಹುಲ್ಲಿನಲ್ಲಿರುವ ಬೀಜಗಳು ಆಧಾರ, ಪಶುಗಳಿಗೆಲ್ಲಾ ಹುಲ್ಲು ಆಧಾರ, ಎರೆಹುಳುಗಳಿಗೆ ಮಣ್ಣು ಆಧಾರ ಎಂದು ಪ್ರಕೃತಿಯ ಹೊಣೆಗಾರಿಕೆಯನ್ನು ಸಾರಿದ ಜೀವಪರ ಸಂತ ಕೈವಾರದ ತಾತಯ್ಯನವರು. (ತೃಣ ಬೀಜಮುಲವಲ್ಲ ನರುಲಕಾಧಾರಮು, ತೃಣಮು ಆಧಾರಮು ಪಶುಲಕೆಲ್ಲ ಮನ್ನು ಆಧಾರಮು ಪರಿ ಯರ‍್ರ ಪುರುಗುಲಕು).

ಪ್ರಪಂಚದ ಎಲ್ಲಾ ಜೀವರಾಶಿಗಳಿಗೂ ಪ್ರಕೃತಿಯೇ ಆಧಾರ. ಪ್ರಕೃತಿಯ ಯಾವುದೇ ಪದಾರ್ಥವೂ ವ್ಯರ್ಥವಲ್ಲ. ಪ್ರಕೃತಿಯೊಂದಿಗಿನ ಪರಸ್ಪರ ಸಹಕಾರದಿಂದ ಮಾತ್ರ ಮಾನವನು ಚಿಂತೆಯಿಲ್ಲದೆ ಜೀವಿಸಬಲ್ಲ ಎಂದು ಬೋಧಿಸುತ್ತಾ ಪ್ರಕೃತಿಯಂತೆ ಮಾನವನು ಪರೋಪಕಾರದ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬ ಸತ್ಯವನ್ನು ಪರೋಕ್ಷವಾಗಿ ತಿಳಿಸುತ್ತಿದ್ದಾರೆ ತಾತಯ್ಯನವರು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಯೋಗಿನಾರೇಯಣ ತಾತಯ್ಯನವರು ಅಧ್ಯಾತ್ಮ ಚಿಂತಕರು, ಸಮಾಜ ಸುಧಾರಕರು, ದಾಸ ಸಾಹಿತ್ಯದ ಹರಿಕಾರರು, ಯೋಗತತ್ವಸಿದ್ದಾಂತದ ಪ್ರತಿಪಾದಕರಾಗಿ ಜನಿಸಿದವರು. ಇವರ ತಪೋಭೂಮಿ ಶ್ರೀಕ್ಷೇತ್ರ ಕೈವಾರ. ಇವರು ಕ್ರಿ.ಶ. 1726 ರಲ್ಲಿ ಹುಟ್ಟಿ ಕ್ರಿ.ಶ 1836 ರ ಜೇಷ್ಠ ಶುದ್ಧ ತದಿಗೆಯಂದು ಪರಮಾತ್ಮನಲ್ಲಿ ಐಕ್ಯವಾದರು.

ಬಾಲ್ಯದಿಂದಲೇ ಅಧ್ಯಾತ್ಮದತ್ತ ಒಲವಿದ್ದ ಯೋಗಿ ನಾರೇಯಣರು ದಿನದ ಬಹುಸಮಯವನ್ನು ಧ್ಯಾನದಲ್ಲೇ ಕಳೆಯುತ್ತಿದ್ದರು. ಇವರ ಕುಲವೃತ್ತಿ ಮುತ್ತೈದೆಯರಿಗೆ ಬಳೆ ತೊಡಿಸುವ ಕಾಯಕ. ಬಳೇ ವ್ಯಾಪಾರಕ್ಕಾಗಿ ಊರೂರು ಸುತ್ತುತ್ತಾ ಮಹಾಲಕ್ಷ್ಮೀ ಸ್ವರೂಪರಾದ ಮುತ್ತೈದೆಯರಿಗೆ ಬಳೆಯನ್ನು ತೊಡಿಸುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಜನರ ಮನೋನಾಡಿಯನ್ನು ಅರಿತವರಾಗಿದ್ದರು.

ತಾತಯ್ಯನವರನ್ನು ಒಬ್ಬ ಮನೋವೈದ್ಯ ಎಂದರೆ ತಪ್ಪಾಗಲಾರದು. ಆಗ ಅವರು ಕಂಡುಕೊಂಡ ಜೀವನದ ಸತ್ಯಗಳನ್ನು ತಮ್ಮ ಲೇಖನಿಯ ಮೂಲಕ ಸಂತರಾಗಿ ಎಚ್ಚರಿಸಿದ್ದಾರೆ. ಸಾಮಾನ್ಯರಂತೆ ಸಂಸಾರಸ್ಥರಾದರೂ ನಾರೇಯಣರೂ ಅಧ್ಯಾತ್ಮದತ್ತ ಅಪಾರವಾಗಿ ಆಸಕ್ತರಾಗಿದ್ದವರು. ಒಮ್ಮೆ ಬಳೆ ವ್ಯಾಪಾರಕ್ಕೆ ಚಿತ್ತೂರಿನ ಪ್ರಾಂತ್ಯಕ್ಕೆ ತೆರಳಿದ್ದಾಗ ಪರದೇಶಸ್ವಾಮಿಗಳೆಂಬ ಯೋಗಿಗಳ ದರ್ಶನವಾಗಿ ಆತ್ಮಪ್ರಕಾಶ ಮಾಡಿಕೊಂಡರು. ನಂತರ ಕೈವಾರಕ್ಕೆ ಹಿಂತಿರುಗಿ, ಸಂಸಾರ ತ್ಯಜಿಸಿ ಕಠಿಣವಾದ ತಪಸ್ಸನ್ನು ಆಚರಿಸಿ, ಸಿದ್ದಿಪುರುಷರಾದರು. ಕಲ್ಲನ್ನು ಕಲ್ಲುಸಕ್ಕರೆಯಾಗಿ ಮಾರ್ಪಡಿಸಿದರು. ಅಂದಿನಿಂದ ಅವರು ಕೈವಾರ ತಾತಯ್ಯನೆಂದು ಪ್ರಸಿದ್ದಿ ಪಡೆದರು. ಯೋಗ ಸಾಧನೆಯ ಮೂಲಕ ಹಲವಾರು ಪವಾಡಗಳನ್ನು ಮಾಡುತ್ತಾ, ಜನರಿಗೆ ತತ್ವಬೋಧನೆ, ಕೀರ್ತನೆಗಳನ್ನು ರಚಿಸುತ್ತಾ ನಾದೋಪಾಸಕರಾದರು.

ತಾತಯ್ಯನವರು ಸಮಾಜದ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ತತ್ವ ಕೀರ್ತನೆಗಳಿಂದ ಮಾನವರನ್ನು ಎಚ್ಚರಿಸಿದ್ದಾರೆ. ಅವರು ಮೀಟಿದ ತಂಬೂರಿಯ ನಾದದಲ್ಲಿ ತತ್ವಪದಗಳ ಗ್ರಾಮೀಣ ಭಾಷೆಯ ಸೊಗಡನ್ನು ಜೀವಂತವಾಗಿರಿಸಿದ್ದಾರೆ. ಸನ್ಮಾರ್ಗದ ಹಾದಿಯಲ್ಲಿ ನಡೆದಾಗ ಬದುಕು ಹಸನಾಗಿ ನೆಮ್ಮದಿಯಿಂದ ಬದುಕಬಹುದು ಎಂದು ಅನುಭವಿಸಿ ಸಾರಿ ಸಾರಿ ಹೇಳಿದ್ದಾರೆ. ತಾತಯ್ಯನವರು ಭಕ್ತಿ – ಜ್ಞಾನ– ತತ್ವ–ಯೋಗ ಸಾಧನೆಯ ಸಮ್ಮಿಶ್ರಣದ ಸಾಧಕರಾಗಿದ್ದರು. ಅಕ್ಷರ ಸಾಕ್ಷತ್ಕಾರವನ್ನು ಪಡೆದ ಇವರು ವರಕವಿಗಳಾದರು. ಅವರ ಉಪದೇಶ ಪ್ರತಿಯೊಬ್ಬ ವ್ಯಕ್ತಿಗೆ ಅವರೇ ನೇರವಾಗಿ ಬೋಧಿಸಿದಂತೆ ಕಾಣಿಸುತ್ತದೆ. ಇದರಿಂದ ಮನಸ್ಸುಗಳಿಗೆ ಹತ್ತಿರವಾದ ತಾತಯ್ಯನವರು ಅಧ್ಯಾತ್ಮ ಚೇತನರಾದರು. ಅಮರನಾರೇಯಣ ಅಂಕಿತದಿಂದ ಅವರು ರಚಿಸಿರುವ ಕೃತಿಗಳು ಜನಜನಿತವಾದವು.

ತಾತಯ್ಯನವರ ಪವಾಡಗಳು ಹಲವು

ಯೋಗಿಗಳಾಗಿ, ತ್ರಿಕಾಲಜ್ಞಾನಿಗಳಾಗಿ ತಾತಯ್ಯನವರು ಹಲವಾರು ಪವಾಡಗಳನ್ನು ಮಾಡಿದ್ದಾರೆ. ಸಂಸಾರವನ್ನು ತ್ಯಜಿಸಿ ಯೋಗನರಸಿಂಹಸ್ವಾಮಿ ಗುಹೆಯ ಬಳಿ ಚಿಂತಾಕ್ರಾಂತರಾಗಿ ಕುಳಿತಿದ್ದ ತಾತಯ್ಯನವರಿಗೆ ಪರಮಾತ್ಮನ ರೂಪದಲ್ಲಿ ಬಂದ ಗೋಪಾಲಕನು ಈ ಗುಹೆಯಲ್ಲಿ ತಪಸ್ಸು ಆಚರಿಸುವಂತೆ ಆದೇಶಿಸಿದರು. ಉದ್ಭವ ಯೋಗನರಸಿಂಹಸ್ವಾಮಿ ಗುಹೆಯಲ್ಲಿ ತಾತಯ್ಯನವರು ಘೋರ ತಪಸ್ಸು ಮಾಡುತ್ತಿರುವಾಗ ಘಟಸರ್ಪ ಹಾಗೂ ಹುಲಿ ಕಾವಲಿದ್ದು ರಕ್ಷಣೆಯನ್ನು ನೀಡಿತ್ತು. ತಾತಯ್ಯನವರಿಗೆ ಪ್ರತಿನಿತ್ಯ ಪ್ರಾತಃಕಾಲದಲ್ಲಿ ಪೂಜಾ ನಂತರ ಗರುಡ ಪಕ್ಷಿ ದರ್ಶನ ನೀಡುತ್ತಿತ್ತು. ಒಮ್ಮೆ ಮಣ್ಣಿನಿಂದ ಮಾಡಿದ ಗರುಡಪಕ್ಷಿಗೆ ತಾತಯ್ಯನವರು ನಮಸ್ಕರಿಸಿದಾಗ ಪಕ್ಷಿಗೆ ಜೀವ ಬಂದು ಹಾರಿ ಹೋಯಿತು.

ಸಕಲ ಕಷ್ಟಗಳನ್ನು ಕೊಟ್ಟ ಶಾನುಭೋಗ ಮಲ್ಲಯ್ಯನಿಗೆ ಕರುಣೆಯಿಂದ ಕಣ್ಣಿನ ದೃಷ್ಠಿ ಬರುವಂತೆ ಮಾಡಿದರು. ವಡಿಗೆಪುರ (ಈಗಿನ ಬೆಂಗಳೂರು ಗ್ರಾಮಂತರ ಜಿಲ್ಲೆಯ ವಿಜಯಪುರ)ದಲ್ಲಿ ಕ್ಷಾಮ ತಲೆದೋರಿದಾಗ ಅಷ್ಟದಿಕ್ಪಾಲಕರನ್ನು ಪ್ರಾರ್ಥಿಸಿ ವರ್ಷಧಾರೆಯನ್ನು ಸುರಿಸಿದರು. ತುಳಸಿವನಕ್ಕೆ ನೀರಿಗಾಗಿ ಬಾವಿಯನ್ನು ತೋಡಿದಾಗ ನೀರು ಬರಲಿಲ್ಲ. ಆಗ ತಾತಯ್ಯನವರು ಗಂಗಾಭವಾನಿಯನ್ನು ಪ್ರಾರ್ಥಿಸಿದಾಗ ನೀರು ಧಾರಕಾರವಾಗಿ ಹರಿದು ಬಂತು. ಹೀಗೆ ಹಲವಾರು ಪವಾಡಗಳನ್ನು ಮಾಡುತ್ತಾ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ ತಾತಯ್ಯನವರು.

ದಾಸ ಸಾಹಿತ್ಯಕ್ಕೆ ಮೇರು ಕೊಡಿಗೆ

ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡತ್ತಿರುವ ಈ ಭಾಗದಲ್ಲಿ ತೆಲುಗು ಭಾಷಿಗರೇ ಹೆಚ್ಚು. ಆದ್ದರಿಂದ ತಾತಯ್ಯನವರು ಅವರ ಕೃತಿಗಳಲ್ಲಿ ಪ್ರಾಂತೀಯ ಭಾಷೆಯಾದ ತೆಲುಗನ್ನು ಬಹಳವಾಗಿ ಬಳಸಿಕೊಂಡಿದ್ದಾರೆ. ಇವರು ರಚಿಸಿರುವ ಕೃತಿಗಳಲ್ಲಿ ಮುಖ್ಯವಾದವು ಭವಿಷ್ಯದ ಘಟನೆಗಳಿಂದ ಕೂಡಿರುವ ಕಾಲಜ್ಞಾನ, ತತ್ವಪದಗಳ ಸಾರವಿರುವ ವೇದಾಂತ ಸಾರಾವಳಿ ಕೀರ್ತನೆಗಳು, ನಾದಬ್ರಹ್ಮನಂದ ನಾರೇಯಣ ಕವಿ ಶತಕ, ಅಮರನಾರೇಯಣ ಶತಕ, ಬ್ರಹ್ಮಾಂಡಪುರಿ ಶತಕ, ಶ್ರೀ ಕೃಷ್ಣ ಚರಿತ ಯೋಗಸಾರಮು, ತಾರಕಬ್ರಹ್ಮಾನಂದ ಶತಕ, ಆತ್ಮಬೋದಾಮೃತ ವಚನಗಳು ಪ್ರಮುಖವಾದವುಗಳು. ಜನಸಾಮಾನ್ಯರಿಗೂ ಜ್ಞಾನದ ಬೆಳಕು ಪಸರಿಸಬೇಕು ಎನ್ನುವ ದೃಷ್ಟಿಯಿಂದ ಸುಲಭ ಬೋಧೆಗಳನ್ನು ಸುಲಲಿತವಾಗಿ ಸರಳ ಭಾಷೆಯಲ್ಲಿ ತಾತಯ್ಯನವರು ರಚಿಸಿದರು. ಅವರು ರಚಿಸಿರುವ ಎಲ್ಲಾ ಕೃತಿಗಳ ತಾಳೆಗರಿಗಳನ್ನು ಸಂರಕ್ಷಿಸಿ ಇಡಲಾಗಿದೆ.

ಸಂಕಷ್ಟದಲ್ಲಿರುವ ಜನರಿಗೆ ಜ್ಞಾನದ ಮಾರ್ಗದ ಬೆಳಕನ್ನು ತೋರಿಸುವುದೇ ಅವರ ತತ್ವಗಳ ಉದ್ದೇಶವಾಗಿತ್ತು. ಸದ್ಗುರು ತಾತಯ್ಯನವರು ತಮ್ಮ 87 ನೇ ವಯಸ್ಸಿನಲ್ಲಿ ದಿವ್ಯವೃಷ್ಟಿಯಿಂದ ಅಮೂಲ್ಯವಾದ “ಭವಿಷ್ಯವಾಣಿ – ಕಾಲಜ್ಞಾನ” ಎಂಬ ಭವಿಷ್ಯತ್ತಿನ ಚಿಂತನೆಯುಳ್ಳ ಗ್ರಂಥವನ್ನು ಕ್ರಿ.ಶ. 1814 ರಲ್ಲಿರಚಿಸಿದರು. ಇಂಗ್ಲೀಷರ ಆಳ್ವಿಕೆಯಲ್ಲಿ ನರಳುತ್ತಿದ್ದಾಗ ರಚಿಸಿದ ಈ ಕೃತಿಯು ಬಹಳ ಪ್ರಸಿದ್ದವಾದುದು. ಇದರಲ್ಲಿ ಹೇಳಿರುವಂತೆ ಬ್ರಿಟಿಷರು ಭಾರತವನ್ನು ಬಿಟ್ಟಿ ತೊಲಗಿದರು, ಗುತ್ತಿಗೆ ಜಗತ್ತು ಹುಟ್ಟುಕೊಂಡಿತು, ರಾಜರುಗಳಿಲ್ಲದಂತಾದರು, ಬೆಲೆಗಳು ಗಗನ ಮುಟ್ಟಿತು, ಲಂಚ ಪ್ರಬಲ್ಯವಾಯಿತು ಇನ್ನು ಅನೇಕ ವಿಷಯಗಳು ಸತ್ಯವಾಗಿದೆ.

ಭಕ್ತರ ಆಕರ್ಷಣೆಯ ಕೇಂದ್ರ ತಾತಯ್ಯರ ಮಠ

ತಾತಯ್ಯನವರು ಪರಮಾತ್ಮನಲ್ಲಿ ಐಕ್ಯವಾದ ಸ್ಥಳದಲ್ಲಿ ಶ್ರೀ ಯೋಗಿನಾರೇಯಣ ಮಠ ಈಗ ಇದೆ. ಪ್ರಸಿದ್ಧ ಯಾತ್ರಾಸ್ಥಳವಾಗಿ ರೂಪಗೊಂಡಿರುವ ಶ್ರೀ ಯೋಗಿ ನಾರೇಯಣ ಮಠ ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸದ್ಗುರು ತಾತಯ್ಯನವರ ತತ್ವ ಕೀರ್ತನೆಗಳ ಪ್ರಚಾರದ ಜೊತೆಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದೆ. ದಿನನಿತ್ಯ ಬೆಳಿಗ್ಗೆ ಘಂಟಾನಾದ, ಗೋಪೂಜೆಯೊಂದಿಗೆ ಸನಾತನ ಧರ್ಮದ ಪರಂಪರೆಯಲ್ಲಿ ಪೂಜಾ ಕಾರ್ಯಗಳು ಪ್ರಾರಂಭವಾಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಪ್ರತಿ ನಿತ್ಯ ಕ್ಷೇತ್ರಕ್ಕೆ ಬರುವ ಮುತ್ತೈದೆಯರಿಗೆ ಉಚಿತವಾಗಿ ಬಳೆಯನ್ನು ತೊಡಿಸಲಾಗುತ್ತದೆ. ಸದ್ಗುರುಗಳಿಗೆ, ಅಭಿಷೇಕ, ಪ್ರಾಕಾರೋತ್ಸವ ಮತ್ತು ಮಹಾಮಂಗಳಾರತಿ ಸೇವೆಗಳು ಪ್ರತಿನಿತ್ಯ ನಡೆಯುತ್ತಿರುತ್ತದೆ. ಪ್ರತಿನಿತ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಉಚಿತ ದಾಸೋಹವನ್ನು ಶ್ರೀಮಠದ ಟ್ರಸ್ಟ್ ಸಮಿತಿಯವರು ಶ್ರದ್ದಾ ಭಕ್ತಿಗಳಿಂದ ಉಣಬಡಿಸುತ್ತಿದ್ದಾರೆ. ಪ್ರತಿನಿತ್ಯ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಬಡವರ ಪಾಲಿಗೆ ಈ ವಿವಾಹಗಳು ವರದಾನವಾಗಿದೆ.

ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ ಸಮಿತಿಯು ಸದ್ಗುರು ತಾತಯ್ಯನವರ ಕೀರ್ತನೆ, ಭಜನೆ, ತತ್ವಪದ ಮತ್ತು ಸಾಹಿತ್ಯವನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕಂಕಣಬದ್ದವಾಗಿದೆ. ಕೈವಾರ ಕ್ಷೇತ್ರದಲ್ಲಿ ಭಕ್ತಿಯನ್ನು ಹೆಚ್ಚಿಸುವ ಭಜನೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ನಾಡಿನ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೈವಾರದ ಯೋಗಿನಾರೇಯಣ ಮಠವು ಯೋಗೀಂದ್ರರ ತತ್ವ, ಸಂದೇಶಗಳನ್ನು ಪ್ರಸಾರ ಮಾಡಿ ಅದರ ಅನುಷ್ಠಾನ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ಗುರುಪೂಜಾ ಸಂಗೀತೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ. ಪ್ರಖ್ಯಾತ ಸಂಗೀತ ವಿದ್ವಾಂಸರುಗಳು ಭಾಗವಹಿಸಿ ಸಂಗೀತದ ರಸದೌತಣವನ್ನು ಹಲವಾರು ವರ್ಷಗಳಿಂದ ನೀಡುತ್ತಿದ್ದಾರೆ.

ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜಯಂತಿಯನ್ನು ಮೂರು ದಿನಗಳ ಕಾಲ ಶ್ರೀ ಕ್ಷೇತ್ರ ಕೈವಾರದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಗುತ್ತದೆ. ಶ್ರೀ ಅಮರನಾರೇಯಣ ಸ್ವಾಮಿಗೆ ಶ್ರೀ ಕೃಷ್ಣಗಂಧೋತ್ಸವ ಸೇವೆ, ರಥೋತ್ಸವಗಳು ನೆರವೇರಲಿವೆ. ವಿದ್ವಾಂಸರುಗಳಿಂದ ಪ್ರವಚನ, ಗಾಯಕರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ನಾವೆಲ್ಲರೂ ತಾತಯ್ಯರನ್ನು ಸ್ಮರಿಸೋಣ, ಪೂಜಿಸೋಣ, ಗುರುಗಳ ಕೃಪೆಗೆ ಪಾತ್ರರಾಗೋಣ.

ಇದನ್ನೂ ಓದಿ : Holi 2023 : ಇಲ್ಲಿ ಚಿತೆಯ ಭಸ್ಮವೇ ಬಣ್ಣ! ಸ್ಮಶಾನವೇ ಹೋಳಿ ಮೈದಾನ! ಮಸಣ ಹೋಳಿಯ ವಿಶೇಷತೆಯಿದು

Exit mobile version