Site icon Vistara News

Kanaka Jayanti 2022 | ಕಾಗಿನೆಲೆಯಾದಿ ಕೇಶವನ ಬಾಡದ ಕುಸುಮ ಈ ಕನಕ

Kanaka Jayanti 2022

ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು
ಕನಕ ಗುರು ಪೀಠ, ಶ್ರೀ ಕ್ಷೇತ್ರ ಕಾಗಿನೆಲೆ
ಮನುಷ್ಯ ಇಂದು ವೈಜ್ಞಾನಿಕ ಮತ್ತು ವೈಚಾರಿಕತೆಯ ಬೆನ್ನು ಬಿದಿದ್ದಾನೆ. ಹೊಸದನ್ನು ಹುಡುಕುವ ಹಂಬಲದಲ್ಲಿ, ಹುಡುಕಿದ್ದನ್ನು ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯ ಎಷ್ಟೇ ಎತ್ತರದ ಪ್ರಗತಿಯ ಶಿಖರಕ್ಕೆ ಏರಿದ್ದರೂ ನೆಮ್ಮದಿ ಎನ್ನುವುದು ಇಂದು ಮರಿಚೀಕೆಯಾಗಿದೆ. ನೆಮ್ಮದಿಯನ್ನು ಅರಸುತ್ತಾ ಹೊರಟರೆ ಅದಕ್ಕೆ ಸಾಂತ್ವನ ಹೇಳುವುದು ಆಧ್ಯಾತ್ಮ. ಆಧ್ಯಾತ್ಮ ಪರಂಪರೆಯ ಮೇರು ಪ್ರವರ್ತಕರಾದ ಕನಕದಾಸರ ತತ್ವಸಂದೇಶಗಳು (kanaka jayanti 2022) ಪ್ರಸ್ತುತ ಸಂದರ್ಭಕ್ಕೆ ಊರುಗೋಲು ಅಷ್ಟೇ ಅಲ್ಲ, ಆಧಾರ ಸ್ತಂಭಗಳೇ ಆಗಿವೆ.

ಮನುಷ್ಯನ ಬದುಕು ಸುಧೀರ್ಘ ಆಯುಷ್ಯ ಹೊಂದಿದೆ. ಒಬ್ಬ ವ್ಯಕ್ತಿ ನೂರು ವರ್ಷ ಬದುಕುತ್ತಾನೆಂದು ಅಂದಾಜಿಸಿದರೆ ಕನಕದಾಸರು ಅದಕ್ಕೆ ತುಂಬಾ ಮಾರ್ಮಿಕವಾದ ಉತ್ತರವನ್ನು ನೀಡುತ್ತಾರೆ. ಒಬ್ಬ ವ್ಯಕ್ತಿಗೆ ನೂರು ವರ್ಷ ಆಯುಷ್ಯ ಎಂದಾದರೆ ಅದರಲ್ಲಿ ಐವತ್ತು ವರ್ಷ ರಾತ್ರಿಗಳೇ ಕಳೆದು ಹೋಗುತ್ತವೆ. ಉಳಿದ ಐವತ್ತು ವರುಷಗಳಲ್ಲಿ ವೃದಾಪ್ಯ, ಶಿಶುತನ, ಹುಡುಗಾಟಿಕೆಯಲ್ಲಿ ಮೂವತ್ತು ವರುಷಗಳು ಕಳೆದು ಹೋಗುತ್ತವೆ. ಆಗ ಕೇವಲ ಇಪ್ಪತ್ತು ವರುಷಗಳು ಉಳಿಯುತ್ತವೆ. ಅದರಲ್ಲಿಯೇ ಪರಿಪೂರ್ಣವಾದ ಬದುಕನ್ನು ಕಟ್ಟಿಕೊಳ್ಳಬೇಕು. ಆಯುಷ್ಯದ ಈ ಸತ್ಯವನ್ನು ಇಂದು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕನಕದಾಸರ ತತ್ವ ಸಂದೇಶ ಮನದಟ್ಟು ಮಾಡುತ್ತದೆ.

ಈ ಬದುಕು ಹೇಗಿದೆ ಎಂಬುದನ್ನು ಕನಕದಾಸರು “ಡಿಂಬದಲ್ಲಿರುವ ಜೀವ ಕಂಬ ಸೂತ್ರಗೊಂಬೆಯಂತೆʼʼ ಎಂಬ ಕೀರ್ತನೆಯಲ್ಲಿ “ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದುಒಡೆಯುವAತೆ” ಎಂದು ಹೇಳಿದ್ದಾರೆ. ಪ್ರತಿ ಜೀವಿಯ ಜೀವನವೂ ಅಷ್ಟೇ ಸೂಕ್ಷ್ಮತೆಯಿಂದ ಕೂಡಿದೆ. ಈ ಬದುಕನ್ನು ಸೌಂದರ್ಯ ಪ್ರಜ್ಞೆ ಹಿನ್ನೆಲೆಯಲ್ಲಿ ನೋಡಬೇಕು. ಬಣ್ಣದ ಕನ್ನಡಕ ಹಾಕಿ ಬದುಕನ್ನು ನೋಡಬಾರದು. ಆ ಸೌಂದರ್ಯವನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಅದು ಹೇಗೆಂದು ಕನಕದಾಸರು ಈ ಕೀರ್ತನೆಯಲ್ಲಿ ಹಾಡಿದ್ದಾರೆ.

ನಯನ ಬುದ್ಧಿಯ ಒಳಗೊ…
“ನೀ ಮಾಯೇಯೊಳಗೊ ನಿನ್ನೊಳು ಮಾಯೇಯೋʼʼ ಎಂಬ ಕೀರ್ತನೆಯಲ್ಲಿ ಕನಕದಾಸರು ‘‘ನಯನ ಬುದ್ಧಿಯ ಒಳಗೊ, ಬುದ್ಧಿ ನಯನದೊಳಗೊ’’ ಎಂದು ಹೇಳುತ್ತ ನೋಡುವ ಕಣ್ಣು ಹಾಗೂ ಯೋಚಿಸುವ ಬುದ್ಧಿ ಯನ್ನು ನೀಡಿದ್ದು ಭಗವಂತ. ಆದ್ದರಿಂದ ನಾವು ನೋಡುವ ದೃಷ್ಟಿ ಆಲೋಚನೆಯಿಂದ ಕೂಡಿ ಸೌಂದರ್ಯ ಪ್ರಜ್ಞೆಯಿಂದ ಕೂಡಿರಬೇಕು. ಮಧುಮೇಹಿಯಾದವನು ಸಪ್ಪೆ ಪದಾರ್ಥ ತಿಂದರೂ ಹೇಗೆ ಚಪ್ಪರಿಸಿ ತಿನ್ನುತ್ತಾನೋ ಹಾಗೇ ಒಂದು ವೇಳೆ ಸೌಲಭ್ಯವಿಲ್ಲದ, ಸಮಸ್ಯೆಯಿಂದ ಬದುಕು ನಿಸಾರತೆಯಿಂದಕೂಡಿದ್ದರೂ ಅದನ್ನು ಸಾಮರಸ್ಯದಿಂದ ಕೂಡಿದಂತೆ ಭಾವಿಸಿ ಬದುಕು ನಡೆಸಬೇಕೆಂದು ಆಧ್ಯಾತ್ಮದ ಹಿನ್ನೆಲೆಯಲ್ಲಿ ಕನಕದಾಸರು ಹೇಳಿದ್ದಾರೆ.

ತ್ರಿಕಾಲ ಜ್ಞಾನಿಗಳಾದ ಕನಕದಾಸರು ಈ ದೇಹವನ್ನು ಕುರಿತು ಬಹು ವಿಶಿಷ್ಟ ಬಗೆಯಲ್ಲಿ ಹೇಳುತ್ತಾರೆ ‘‘ಎಂಟುಗೇಣಿನ ದೇಹದಲ್ಲಿ ಎಂಟು ಕೋಟಿ ರೋಮಗಳಿವೆ, ಅರವತ್ತೆಂಟು ಕೀಲುಗಳಿವೆ ಮಾಂಸದಿಂದ ಕೂಡಿದ ಈ ಶರೀರದಲ್ಲಿ ಭಗವಂತನಿದ್ದಾನೆ. ಒಂದು ವೇಳೆ ಭಗವಂತ ಈ ದೇಹದಿಂದ ಅಗಲಿದರೆ, ಈ ದೇಹವನ್ನು ಒಣ ಹೆಂಟಿಯಲ್ಲಿ ಮುಚ್ಚಿ ಬಿಡುತ್ತಾರೆʼʼ ಎಂದು ಹೇಳುವಲ್ಲಿ ದೇಹವೇ ದೇವಾಲಯ ಎಂದು ಬಹು ಸೂಕ್ಷ್ಮವಾಗಿ ವಿಶಿಷ್ಟ ಬಗೆಯಲ್ಲಿ ವಿವರಿಸಿದ್ದಾರೆ. ಉಸಿರಿಗೆ ಹೆಸರು ಬಂದು, ಹೆಸರಿನ ಉಸಿರು ಹೋಗುವುದರೋಳಗಾಗಿ ಸಾರ್ಥಕತೆಯ ಬದುಕು ಮೇರೆಯ ಬೇಕೆಂಬುದು ಕನಕದಾಸರ ತತ್ವ ಸಂದೇಶಗಳ ಆಶಯವಾಗಿದೆ. ಆದ್ದರಿಂದ ಬದುಕಿನ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಕನಕದಾಸರು ಅವರತತ್ವ ಸಂದೇಶಗಳು ನಮಗಿಂದು ಪ್ರಸ್ತುತವಾಗುತ್ತಿವೆ.

Kanaka Jayanti 2022

ಸಮಾನತೆಯ ಪ್ರತಿಪಾದನೆ
ಸಂಕೀರ್ಣವಾದ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕು, ಇಲ್ಲಿ ಸ್ಪೃಶ್ಯ-ಅಸ್ಪೃಶ್ಯವೆಂಬುದಿಲ್ಲ ಎಲ್ಲರೂ ಸಮಾನರುಎಂದು ಹೇಳುತ್ತ;
ತೊಲಗುವರಕಡೆಕಡೆಗೆತಾ ಹೊಲೆ
ಹೊಲೆಯೆನುತ ಕಳವಳಿಸೆ ಮೂತ್ರದ
ಬಿಲದೊಳಗೆ ಬಂದಿಹುದುಕಾಣದೆ ಬರಿದೆ ಮನನೊಂದು|
ಜಲದೊಳಗೆ ಮುಳುಗಿದರೆ ತೊಲಗದು
ಹೊಲೆಗೆಲಸವೀ ದೇಹದೊಳು ನೀ
ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ |

ಈ ದೇಹವು ಅಸ್ಪೃಶ್ಯ, ಹೊಲೆ ಎನ್ನುತ್ತಾ ಜನರು ಒಂದು ದಿನ ಸತ್ತು ಹೋಗುತ್ತಾರೆ. ಆ ಮೇಲೆ ಮೂತ್ರದ ಬಿಲದೊಳಗೆ ಬಿದ್ದು ಮತ್ತೆ ಮತ್ತೆ ಹುಟ್ಟುತ್ತಾರೆ. ಆಗ ದೇಹ ಹೊಲೆಯಾಗದೆ?ಎಲ್ಲರ ದೇಹದಲ್ಲಿ ಪವಿತ್ರವಾದ ಪರಮಾತ್ಮನಿರುವುದರಿಂದ ದೇಹ ಎಂದಾದರೂ ಅಸ್ಪೃಶ್ಯವಾದೀತೆ, ಹೊಲೆಯಾದೀತೆ? ಎಂದು ಕನಕದಾಸರು ಪ್ರಶ್ನೆ ಮಾಡುವ ಮೂಲಕ ಎಲ್ಲರೂ ಸಮಾನರು ಎಂದು ಹೇಳುತ್ತಾರೆ.

ಇಷ್ಟಕ್ಕೆ ಸುಮ್ಮನಾಗದೇ ಕೆಲವರು ವೃತ್ತಿ ಆಧಾರಗಳ ಮೇಲೆ ಮೇಲು-ಕೀಳು ಎಂಬುದನ್ನು ಹೆಣೆಯುವವರು ಸಮಾಜದಲ್ಲಿದ್ದಾರೆ. ಅಂಥ ಬಂಢತನದ ಉದ್ದಂಡರಿಗಾಗಿಯೇ ‘‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’’ ಎಂಬ ಕೀರ್ತನೆಯ ಮೂಲಕ ಯಾವುದೇ ಒಬ್ಬ ವ್ಯಕ್ತಿಯಾವುದೇ ವೃತ್ತಿಯನ್ನು ಮಾಡಿದರೂ, ಅದು ಯಾರನ್ನೂ ಉದ್ಧಾರ ಮಾಡಲಿಕ್ಕೆ ಅಲ್ಲ, ಅದು ಆತನ ಹೊಟ್ಟೆ ಬಟ್ಟೆಗಾಗಿಯೇ ವಿನಃ, ಪರೋಪಕ್ಕಾರಕ್ಕಾಗಿ ಅಲ್ಲ. ಆ ವೃತ್ತಿಗಳ ಹಿಂದೆ ಇರುವ ಉದೇಶ ಒಂದೇ ಹೊಟ್ಟೆ, ಬಟ್ಟೆ ಅಂದರೆ ಬದುಕು ಕಟ್ಟಿಕೊಳ್ಳುವುದು. ವೃತ್ತಿ ಬೇರೆ ಬೇರೆಯಾದರು ಉದ್ದೇಶ ಒಂದೇ ಆದ್ದರಿಂದ ವೃತ್ತಿತಾರತಮ್ಯ ಸಲ್ಲದು. ಯಾರು ಯಾವುದರಿಂದಲೂ ಅಧಿಕವಲ್ಲ. ಹಾಗಾಗಿ ಎಲ್ಲರೂ ಸಮನಾರು ಎಂದು ಹೇಳುತ್ತ ಸಮಾನತೆಯ ಸಂದೇಶ ಸಾರುತ್ತಾರೆ.

ಸರ್ವಕಾಲದ ಅಚ್ಚರಿ ಕನಕದಾಸರು
ಕನಕರು ಆ ಕಾಲಕ್ಕೂ, ಈ ಕಾಲಕ್ಕೂ ಎಲ್ಲ ಕಾಲಕ್ಕೂ ಒಂದು ಆಚ್ಚರಿ! ಶೂದ್ರರಾಗಿ ಕುರುಬರ ಮನೆಯಲ್ಲಿ ಹುಟ್ಟಿದ ಈ ವಿಶಿಷ್ಟ ಚೇತನಕ್ಕೆ ಅಚ್ಚರಿ ಮೂಡಿಸುವ ವಿಷಯ ಜ್ಞಾನ, ವೇದ ಶಾಸ್ತ್ರ ಪುರಾಣಾದಿಗಳ ಪರಿಜ್ಞಾನ, ಕಾವ್ಯನಿರ್ಮಾಣ ಪ್ರತಿಭೆ, ಪದಸಂಪತ್ತು, ಅಭಿವ್ಯಕ್ತಿಯ ಶ್ರೀಮಂತಿಕೆ, ಪರಮಾತ್ಮನಲ್ಲಿ ಅನನ್ಯಭಕ್ತಿ-ಸಲಿಗೆ ಇತ್ಯಾದಿಗಳು ಆ ಕಾಲದಲ್ಲಿ ಹೇಗೆ ಎಲ್ಲಿಂದ ಬಂದವು ಎಂಬುದೇ ಅರ್ಥವಾಗದ ಬೆರಗು!! ವಿಶ್ವಮಾನವ ಹಕ್ಕುಗಳ ಘೋಷಣೆಗಳು ನಮ್ಮ ದೇಶದ ಶ್ರೇಷ್ಠ ಸಂವಿಧಾನದ ಮೌಲ್ಯಗಳು. ವಿಶ್ವವನ್ನು, ನಮ್ಮನ್ನು ಆಳುತ್ತಿರುವ, ಅಳಬೇಕಾದ ಅನಿವಾರ್ಯ ಜಗತ್ತಿನಲ್ಲಿಯೂ ಕನಕದಾಸರ ಉನ್ನತ ಚಿಂತನೆಗಳು, ಮಹೋನ್ನತ ನಿಲುವುಗಳೂ ಅರ್ಥಪೂರ್ಣವಾಗಿ ಕಾಣುತ್ತಿರುವುದೂ ಕೇಳಿಬರುತ್ತಿರುವುದೂ, ಸಂಬದ್ಧವಾಗಿ ತೋರುವುದೂ 16ನೇ ಶತಮಾನದಲ್ಲಿ ಬಾಳಿ-ಬೆಳಗಿದ ಸಂತಶ್ರೇಷ್ಠ ಭಕ್ತಶಿರೋಮಣಿ, ಸಮಾಜ ಸುಧಾರಕ ಬಹುಮುಖ ಪ್ರತಿಭೆಯ, ಪ್ರತಿಭೆಯ ಬಹುಮುಖದ ಸಾರ್ವಕಾಲಿಕ ಚಿಂತಕ ಈ ನಮ್ಮ ಕನಕರೆಂಬುದನ್ನು ಸಾರುತ್ತದೆ!!
ಕಾಗಿನೆಲೆಯಾದಿ ಕೇಶವನ ಬಾಡದ ಕುಸುಮ ಈ ಕನಕ!!

ಕನಕದಾಸರ ಪದಗಳಲ್ಲಿ ಸಾಂತ್ವನ
ಇಂದು ಬದುಕು ಹಲವು ಸಮಸ್ಯೆಗಳ ಸುಳಿಗೆ ಸಿಕ್ಕಿದೆ. ಆರ್ಥಿಕ ಸಂಕಷ್ಟ, ಬೆಂಕಿ, ಬಿರುಗಾಳಿ, ಯುದ್ಧದ ಭೀತಿ, ಭ್ರಷ್ಟಾಚಾರದ ಹಾಹಾಕಾರ, ಅಲ್ಲದೇ ಅನೇಕ ಬಗ್ಗೆಯ ಪ್ರಕೃತಿ ವಿಕೋಪಗಳ ಮಧ್ಯೆ ಬದುಕು ತತ್ತರಗೊಂಡಿದೆ. ಜೀವಿಸುವ ಮನುಷ್ಯನ ಬದುಕು ತಲ್ಲಣಗೊಂಡಿದೆ ಈ ತಲ್ಲಣಗೊಂಡ ಬದುಕಿಗೆ ಸಾಂತ್ವನತೆ ಬಹು ಅವಶ್ಯವಾಗಿದೆ. ಆ ಸಾಂತ್ವನ ಹೇಳಿ ಸಮಾಧಾನಿಸುವ ಶಕ್ತಿ ಇರುವುದು ಕನಕದಾಸರಂತಹ ವಿಶ್ವಬಂಧು, ದಾರ್ಶನಿಕರಿಗೆ ಮಾತ್ರ.

ಅದಕ್ಕೆ ಕನಕದಾಸರು ಹೇಳುತ್ತಾರೆ. “ಕಷ್ಟಗಳು ಬರುವುದುಅನುಭವಿಸಲಿಕ್ಕೆ ಅಲ್ಲ ಆ ಕಷ್ಟಗಳನ್ನು ಎದುರಿಸಿ ಗಟ್ಟಿಯಾದ ಬದುಕನ್ನು ಕಟ್ಟಿಕೊಳ್ಳಲು ಅನಿಮಾಡುವುದಕ್ಕೆ ಬಂದಿರುತ್ತವೆ. ಆದ್ದರಿಂದ ಅಷ್ಟಕೇ ಹೇ ಜೀವವೇ ನೀ
ತಲ್ಲಣಿಸದಿರುಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ||

ಬೆಟ್ಟದ ತುದಿಯಲಿರುವ ವೃಕ್ಷಕ್ಕೆ ಆರೈಕೆ ಮಾಡಿ ಮನುಷ್ಯರಾರೂ ನೀರು ಹಾಕಿಲ್ಲ. ಆದರೂ ಹಸಿರಾಗಿದೆ. ಭೂಮಿ ಮೇಲೆ ಎಂತೆಂಥ ದಟ್ಟ ದಟ್ಟವಾದ ಕಾಡುಗಳಿವೆ, ಅವುಗಳಲ್ಲಿ ಕ್ರೂರ ಹಾಗೂ ಸಾತ್ವಿಕ ಎರಡೂ ರೀತಿಯ ಪ್ರಾಣಿ-ಪಕ್ಷಿಗಳಿವೆ, ಅಲ್ಲದೆ ಕಲ್ಲಿನ ತಳದಲ್ಲಿ ಜನಿಸಿ, ಅಲ್ಲಿಯೇ ಬದುಕುವ ಕಪ್ಪೆಗಳಿವೆ ಅವುಗಳಿಗೆಲ್ಲ ಆಹಾರ, ಇತರ ಅನುಕೂಲತೆಯನ್ನು ಮನುಷ್ಯರ್ಯಾರೂ ಮಾಡಿಲ್ಲ. ಆದರೂ ಬದುಕುತ್ತಿವೆ. ಸೃಷ್ಟಿಯ ವಿಸ್ಮಯದಂತೆ ನವಿಲುಗರಿಗೆ ಚಿತ್ರ ಬರೆದವರು ಯಾರು? ಇದು ಮನುಷ್ಯನ ಸೃಷ್ಟಿಯೇ ಸಾಧ್ಯವೇ ಇಲ್ಲ. ಹಾಗಾದರೆ ಮಾಡಿದವರಾರು? ಈ ಪ್ರಕೃತಿಯನ್ನು ನಿರ್ಮಿಸಿ ಪ್ರಕೃತಿಯಲ್ಲೇ ಅಡಗಿದ ಒಂದು ಚೇತನ ಶಕ್ತಿ ಅದೇ ದೇವರು, ಭಗವಂತ ಆ ಸಕಲ ಜೀವರಾಶಿಗಳನ್ನು ಹೇಗೆ ಎಡಬಿಡದೆ ಸಲಹುತ್ತಾನೋ, ಹಾಗೆಯೇ ನಿನ್ನನ್ನೂ ಸಲಹುತ್ತಾನೆ. ಆದ್ದರಿಂದ ಕಳವಳಗೊಂಡು “ತಲ್ಲಣಿಸದಿರು, ತಾಳು ಮನವೇʼʼ ಎಂದು ಹೇಳಿದ ಕನಕದಾಸರತತ್ವ ಸಂದೇಶಗಳು ಪ್ರಸ್ತುತ ಸಂದರ್ಭಕ್ಕೆ ಆಧಾರ ಸ್ತಂಭ, ದಾರಿ ದೀಪಗಳಾಗಿವೆ.

ಇಂದು ಕನಕದಾಸರ ಜಯಂತಿ (Kanaka Jayanti 2022). ಜಯಂತಿಯನ್ನು ಆದರ್ಶಮಯ ಮತ್ತು ಮಾದರಿಯಾಗಿ ಆಚಾರಿಸೋಣ, ಎಲ್ಲರಿಗೂ ಕನಕ ದಾಸರ ಜಯಂತಿಯ ಶುಭಾಷಯಗಳು.

ಇದನ್ನೂ ಓದಿ | Modi In Bengaluru | ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ

Exit mobile version