ಕದ್ರಿ ನವನೀತ ಶೆಟ್ಟಿ, ಸಾಂಸ್ಕೃತಿಕ ತಜ್ಞರು, ಕಲಾವಿದರು, ಮಂಗಳೂರು
ಭೂತಾರಾಧನೆ ಎನ್ನುವ ವಿಶಾಲ ಪರಿಕಲ್ಪನೆಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಇದು ಹಿಂದು ಸಂಸ್ಕೃತಿ ಅಲ್ಲ ಎನ್ನುವುದು ಈ ಭಾಗದ ಆಚರಣೆ, ನಂಬಿಕೆ ಮತ್ತು ನಡೆಯುತ್ತಿರುವ ವಾಸ್ತವಿಕ ಘಟನಾವಳಿಗಳ ಅರಿವಿಲ್ಲದದವರು ಮಾತ್ರ ಮಾಡಬಹುದಾದ ಕೆಲವರಿಗೆ ಸೀಮಿತವಾದ ವಾದ. ಈಗ ಅದು ಹಿಂದೂ ಧರ್ಮವನ್ನು ಮಾತ್ರವಲ್ಲ, ಅನ್ಯ ಧರ್ಮಗಳನ್ನು ಕೂಡಾ ತನ್ನ ಭಕ್ತಿಯ ತೆಕ್ಕೆಗೆ ಸೆಳೆದುಕೊಳ್ಳುವಷ್ಟು ಸಶಕ್ತವಾದ ದೈವಿಕ ಆರಾಧನೆಯಾಗಿ ಬೆಳೆದಿದೆ.
ಭೂತಾರಾಧನೆಯಲ್ಲಿ ಭೂತ ಕಟ್ಟುವವರು, ಅದಕ್ಕೆ ಸಂಬಂಧಿಸಿದ ಪಾಡ್ದನಗಳನ್ನು ಹೇಳುವವರು ಪಂಬದ, ನಲಿಕೆ ಮತ್ತು ಪರವ ಜನಾಂಗದವರು ಎನ್ನುವುದು ಸತ್ಯ. ಹಾಗಂತ, ಭೂತಾರಾಧನೆಯಲ್ಲಿ ಅದೊಂದೇ ಇರುವುದಲ್ಲ. ಭೂತಾರಾಧನೆ ಎನ್ನುವುದು ಸಮಾಜದ ಎಲ್ಲ ಜನ ವರ್ಗಗಳು ಸೇರಿ ಜತೆಯಾಗಿ ರೂಪಿಸಿರುವ ಒಂದು ಆರಾಧನಾ ಕಲೆ. ಇಲ್ಲಿ ಭೂತ ಕಟ್ಟುವ ಪಂಬದ, ನಲಿಕೆ, ಪರವ ಜನಾಂಗದವರೂ ಇದ್ದಾರೆ, ಪರಿಚಾರಕರಾಗಿ ಕೆಲಸ ಮಾಡುವ ವರ್ಗವೂ ಇದೆ, ಭೂತ ನರ್ತನಕ್ಕೆ ಬೆಂಬಲವಾಗುವ ಶೇರೆಗಾರರು ಇದ್ದಾರೆ. ಮುಕ್ತಾಲ್ದಿ, ಮೊಕ್ತೇಸರರು ಸಮಾಜದ ಯಾವುದೇ ಜಾತಿಯವರೂ ಇರುತ್ತಾರೆ. ದೈವವೇ ಹೆಬ್ಬಾರ್ರೆ, ಪೂಜಾರ್ರೆ ಎಂದು ಬ್ರಾಹ್ಮಣರನ್ನು ಕರೆಯುವ ರೂಢಿ ಇದೆ. ಜೈನರು, ಬಂಟರು, ಬಿಲ್ಲವರು, ಕುಲಾಲರು, ಮಡಿವಾಳರು, ದೇವಾಡಿಗರು, ಪರಿಶಿಷ್ಟ ಜಾತಿ, ಪಂಗಡಗಳ ಎಲ್ಲರೂ ಭೂತಾರಾಧನೆಯಲ್ಲಿ ಒಂದಾಗಿ ನಿಲ್ಲುತ್ತಾರೆ. ಆ ಮಟ್ಟಿಗೆ ಇದು ಖಂಡಿತವಾಗಿಯೂ ಸರ್ವ ಜನಾಂಗಗಳು ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ಪಾಲ್ಗೊಳ್ಳುವ ಪ್ರಕ್ರಿಯೆ ಇಲ್ಲಿದೆ. ಹಾಗಿದ್ದರೆ ಇವರು ಹಿಂದುಗಳಲ್ಲವೇ?
ಭೂತಾರಾಧನೆ ಎಂದರೆ ಕೇವಲ ಒಂದೆರಡು ದೈವ, ಭೂತಗಳ ಆರಾಧನೆಯಲ್ಲ. ಕೇವಲ ಕಾಂತಾರ ಸಿನಿಮಾದಲ್ಲಿ ತೋರಿಸಿರುವ ಪಂಜುರ್ಲಿ, ಗುಳಿಗಗಳಂತೆ ಸಾವಿರಾರು ದೈವಗಳು ಕರಾವಳಿಯಲ್ಲಿವೆ. ಇದರಲ್ಲಿ ಊರಿನ ದೈವವಿದೆ, ಗ್ರಾಮ ದೈವವಿದೆ, ಪರಿವಾರದ ದೈವವಿದೆ, ಕುಟುಂಬದ ದೈವವಿದೆ, ಮಾತ್ರವಲ್ಲ ಮನೆಗೇ ಸೀಮಿತವಾದ ದೈವವೂ ಇದೆ. ಕೊಡಮಣಿತ್ತಾಯ ಮೊದಲಾದ ರಾಜನ್ ದೈವಗಳಿವೆ. ಕೆಲವು ದೈವಗಳು ಇಡೀ ಕರಾವಳಿ, ಮಲೆನಾಡನ್ನು ವ್ಯಾಪಿಸಿದ್ದರೆ ಇನ್ನು ಕೆಲವು ಕೇವಲ ಗ್ರಾಮಕ್ಕೆ ಸೀಮಿತವಾದ ದೈವಗಳೂ ಇವೆ. ಕೆಲವು ಒಂದು ಮನೆಗೆ ಮಾತ್ರ ದೈವವಾಗಿವೆ.
ಕರಾವಳಿಯ ಬಿಲ್ಲವ ಜನಾಂಗದ ಅವಳಿ ವೀರರಾದ ಕೋಟಿ ಚೆನ್ನಯರು ದೈವಗಳಾಗಿ ಆರಾಧನೆಗೆ ಒಳಗಾಗುತ್ತಿದ್ದಾರೆ. ಆದರೆ ಅವರನ್ನು ಗರಡಿ ಕಟ್ಟಿ ಆರಾಧನೆ ಮಾಡುತ್ತಿರುವುದು ಕೇವಲ ಬಿಲ್ಲವರಲ್ಲ. ಜೈನರು, ಬಂಟರು ಮತ್ತು ಇತರ ಜನಾಂಗದವರೂ ಆರಾಧಿಸುತ್ತಿದ್ದಾರೆ. ಹೀಗಿರುವಾಗ ಅದು ಒಂದು ಜಾತಿಗೆ ಹೇಗೆ ಸೀಮಿತವಾಗುತ್ತದೆ?
ಕೊರಗಜ್ಜನೆಂಬ ದೈವ ದಲಿತ ವರ್ಗಕ್ಕೆ ಸೇರಿದ ಒಬ್ಬ ವ್ಯಕ್ತಿ ದೈವವಾಗಿದ್ದಾರೆ ಎನ್ನುವುದು ಎಲ್ಲರ ನಂಬಿಕೆ. ಆದರೆ, ಕೊರಗಜ್ಜನನ್ನು ಇಡೀ ಸಮಾಜ ಭಕ್ತಿಯಿಂದ ಆಧರಿಸುತ್ತದೆ. ಅದರಲ್ಲೂ ಈಗಿನ ಯುವಜನರಿಗಂತೂ ಕೊರಗಜ್ಜನ ಮೇಲೆ ಅಪಾರವಾದ ನಂಬಿಕೆ. ಕೊರಗಜ್ಜ ಎಲ್ಲ ಜಾತಿ, ಧರ್ಮಗಳಿಗೂ ಪ್ರಿಯವಾದ ದೈವ. ಇದು ಇಲ್ಲಿನ ಧಾರ್ಮಿಕ ಸ್ವೀಕರಣ ಶಕ್ತಿಯ ಪ್ರತೀಕ.
ಭೂತ ಅಥವಾ ದೈವ ಎನ್ನುವುದು ಜಗತ್ತಿಗೆ ಒಳಿತು ಮಾಡುವ ಮಾಯಾಶಕ್ತಿ ಎನ್ನುವುದು ನಂಬಿಕೆ. ಇವುಗಳಲ್ಲಿ ಹೆಚ್ಚಿನವು ಹಿಂದೆ ಜೀವಂತವಾಗಿದ್ದು, ಮರಣದ ಬಳಿಕ ಮಾಯಾಶಕ್ತಿಯಾಗಿ ಪೊರೆಯುತ್ತಿರುವ ದೈವಗಳು. ಕೆಲವು ದೇವರ ಶಕ್ತಿಗಳು. ಗುಳಿಗ ಎಂದರೆ ಶಿವನ ಶಕ್ತಿ, ಚಾಮುಂಡಿ ದೇವಿ ಶಕ್ತಿ, ಪಂಜುರ್ಲಿ ವಿಷ್ಣು ಶಕ್ತಿ ಹೀಗೆ. ಇಲ್ಲಿ ಪ್ರಾಣಿಗಳೂ ದೈವಗಳಾಗುತ್ತವೆ. ಕರಾವಳಿ ಭಾಗದಲ್ಲಿ ಈಗಾಗಲೇ ದಾಖಲಾದಂತೆ ಸಾವಿರಕ್ಕೂ ಅಧಿಕ ದೈವಗಳಿವೆ. ಪ್ರತಿಯೊಂದಕ್ಕೂ ಒಂದೊಂದು ಐತಿಹ್ಯವಿದೆ. ಮತ್ತು ಇವೆಲ್ಲವೂ ಯಾವುದೋ ಕಾಲದಲ್ಲಿ ಹುಟ್ಟಿದವು ಎಂದೇನಲ್ಲ. ಈ ಭೂತಗಳ ಸೃಷ್ಟಿ ಎಷ್ಟು ಉದಾರವಾಗಿದೆ ಎಂದರೆ, ಒಳ್ಳೆಯ ಕೆಲಸ ಮಾಡಿ ಅಗಲಿ ಹೋದ ಒಬ್ಬ ವ್ಯಕ್ತಿ ಕೂಡಾ ನಮ್ಮನ್ನು ಈಗಲೂ ಕಾಯುತ್ತಿದ್ದಾನೆ ಎನ್ನುವ ನಂಬಿಕೆಯಲ್ಲಿ ದೈವದ ಸ್ಥಾನ ನೀಡಿ ಗೌರವಿಸಲು, ಪೂಜಿಸಲು, ಆರಾಧಿಸಲು ಅವಕಾಶವಿದೆ. ಇಲ್ಲಿ ಪೊಲೀಸ್ ಭೂತವೂ ಇದೆ, ಆಲಿ ಭೂತವೂ ಇದೆ. ಆಲಿ ಭೂತವೆಂದರೆ ಹಿಂದೆ ಅಗಲಿ ಹೋದ ಒಬ್ಬ ಒಳ್ಳೆಯ ಮುಸಲ್ಮಾನ ವ್ಯಕ್ತಿ ಈಗಲೂ ನಮ್ಮನ್ನು ಕಾಯುತ್ತಾನೆ ಎಂಬ ನಂಬಿಕೆಯಲ್ಲಿ ಜನರೇ ಕಲ್ಪಿಸಿಕೊಂಡ ಭೂತ. ಕೆಲವು ಮನೆಗಳಲ್ಲಿ ಹಿರಿಯಾಯೆ ಎನ್ನುವ ಭೂತಗಳಿವೆ. ಅದು ಕೇವಲ ಆ ಮನೆಗೆ ಸೀಮಿತವಾದ ಒಂದು ದೈವವಾಗುತ್ತದೆ. ಆ ಮನೆಯಲ್ಲಿ ತೀರಿಕೊಂಡ ಹಿರಿಯರೊಬ್ಬರು ದೈವವಾಗಿ ಕಾಯುತ್ತಾರೆ ಎನ್ನುವ ನಂಬಿಕೆಯಲ್ಲಿ ಅವರಿಗೆ ಆರಾಧನಾ ಕಲಾ ರೂಪದಲ್ಲಿ ಸೇವೆ ಸಲ್ಲಿಸುವ ವಾಡಿಕೆಯೂ ಇದೆ.
ಇವತ್ತಿಗೂ ಒಂದು ಭೂತವನ್ನು ಸೃಷ್ಟಿ ಆರಾಧನೆ ಮಾಡುವಷ್ಟು ಲಿಬರಲ್ ಆಗಿದೆ ಭೂತಾರಾಧನೆ. ಹೇಗೆ ದೇವರನ್ನು ಬಹುನಾಮಗಳಿಂದ ಪೂಜಿಸುತ್ತೇವೋ, ಬಹು ದೇವರನ್ನು ಪೂಜಿಸುತ್ತೇವೋ ಹಾಗೆಯೇ ಒಬ್ಬ ವ್ಯಕ್ತಿ ಹಲವು ದೈವಗಳನ್ನು ಆರಾಧಿಸುತ್ತಾನೆ. ತನ್ನ ನಂಬಿಕೆಯ ದೈವಗಳನ್ನು ನಂಬಲು ಅವಕಾಶವಿದೆ. ಇದು ಹಿಂದೂ ಧರ್ಮದ ವೈವಿಧ್ಯತೆಯ ಶಕ್ತಿಯೂ ಹೌದು.
ಬಹುಶಃ ಭೂತಾರಾಧನೆ ಎನ್ನುವುದು ಒಂದು ವರ್ಗಕ್ಕೆ ಸೀಮಿತಗೊಳ್ಳದೆ ಎಲ್ಲರನ್ನೂ ಒಳಗೊಂಡ ಕಾರಣಕ್ಕಾಗಿಯೇ ಇಷ್ಟೊಂದು ಸಮೃದ್ಧವಾಗಿ ಬೆಳೆದಿದೆ. ಎಲ್ಲರನ್ನೂ ಒಳಗೊಂಡಿರುವುದರಿಂದಲೇ ದೈವಕ್ಕೂ ಶಕ್ತಿ ಬಂದಿದೆ. ಇದನ್ನು ಸ್ವತಃ ದೈವವೇ ತನ್ನ ಮಾತುಗಳಲ್ಲಿ ಹೇಳುವ ರೂಢಿ ಇದೆ.
ಕಂಬಳದ ಕುರಿತಾದ ತಪ್ಪು ನಂಬಿಕೆಗಳು
ಇನ್ನು ಚೇತನ್ ಅವರು ತಮ್ಮ ಮಾತುಗಳಲ್ಲಿ ಕಂಬಳದ ಕುರಿತಾಗಿಯೂ ತಪ್ಪು ಮಾಹಿತಿ ನೀಡಿದ್ದಾರೆ. ಕಂಬಳ ಎನ್ನುವುದು ಉಳ್ಳವರು ಅದರಲ್ಲೂ ಬಂಟರ ಕೈಯಲ್ಲಿರುವ ಆಡುಂಬೊಲ ಎನ್ನುವ ಹಾಗೆ. ಇಲ್ಲಿ ಬಂಟರು ಕೋಣ ಕಟ್ಟುತ್ತಾರೆ, ಬಿಲ್ಲವರು ಓಡಿಸುತ್ತಾರೆ, ದಲಿತರನ್ನು ಕಂಬಳ ಪೂರ್ವದಲ್ಲಿ ಓಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ, ಇದು ಕಂಬಳದ ಬಗ್ಗೆ ವಾಸ್ತವಿಕ ಜ್ಞಾನವಿಲ್ಲದೆ ಮಾಡುವ ಆರೋಪಗಳು. ಕಂಬಳದ ಹುಟ್ಟು ಒಂದು ಧಾರ್ಮಿಕ ಆಚರಣೆಯಾಗಿ ಆರಂಭವಾಗಿದ್ದು, ಅದು ದೇವರ ಆರಾಧನೆಯೂ ಆಗಿದೆ. ಆದರೆ, ಕಾಲಾಂತರದಲ್ಲಿ ಅದು ಆಧುನಿಕತೆಯೊಂದಿಗೆ ಮೇಳೈಸುತ್ತಾ ಒಂದು ಕ್ರೀಡಾಕೂಟವಾಗಿ ಬೆಳೆದಿದೆ. ಇಲ್ಲಿ ಎಲ್ಲ ಜಾತಿ, ಧರ್ಮಗಳೂ ಇವೆ. ಕೋಣ ಕಟ್ಟುವುದು ಕೇವಲ ಬಂಟರಲ್ಲ, ಜೈನರಲ್ಲ. ಬ್ರಾಹ್ಮಣರು, ಬಿಲ್ಲವರು, ದಲಿತರು ಅಷ್ಟೇ ಏಕೆ ಮುಸ್ಲಿಂ, ಕ್ರೈಸ್ತರೂ ಕೋಣಗಳ ಯಜಮಾನರಾಗಿದ್ದಾರೆ, ಪ್ರಶಸ್ತಿ ಗೆಲ್ಲುವುದರಲ್ಲೂ ಮುಂದಿದ್ದಾರೆ. ಕೋಣ ಓಡಿಸುವವರಲ್ಲಿ ಜೈನರೂ ಇದ್ದಾರೆ, ಬಂಟರೂ, ಬ್ರಾಹ್ಮಣರೂ ಎಲ್ಲರೂ ಇದ್ದಾರೆ. ಆರನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಪುಟ್ಟ ಬ್ರಾಹ್ಮಣ ಹುಡುಗಿ ಚೈತ್ರಾ ಪರಮೇಶ್ವರ ಭಟ್ ತಾನು ಕಂಬಳದ ಜಾಕಿ ಆಗುತ್ತೇನೆ ಎಂದು ತರಬೇತಿ ಪಡೆಯುತ್ತಿದ್ದಾಳೆ.
ಚೇತನ್ ಅವರಿಗೆ ಮಾಹಿತಿಯ ಕೊರತೆ ಇದೆ. ಇತಿಹಾಸದ ಯಾವುದೋ ಎಳೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಈಗಲೂ ಅದೇ ರೀತಿ ನಡೆಯುತ್ತಿದೆ ಎನ್ನುವಂತೆ ಮಾತನಾಡುತ್ತಿದ್ದಾರೆ. ಸಮಾಜ ಅಲ್ಲಿಂದ ಅದೆಷ್ಟೋ ಮುಂದೆ ಸಾಗಿಬಂದಿದೆ. ಅವರು ಮಾತ್ರ ಅದೇ ಹಳೆಯದನ್ನೇ ಕನವರಿಸುತ್ತಿದ್ದಾರೆ. ನಿಜವೆಂದರೆ, ಇವರು ಪೂರ್ವಗ್ರಹಪೀಡಿತ ಮನಸುಗಳ ಪ್ರತಿನಿಧಿ. ಇವರಿಗೆಲ್ಲ ಮೇಲ್ಜಾತಿ, ಕೀಳ್ಜಾತಿ ಎನ್ನುವುದು ತಮ್ಮ ಅಸ್ಮಿತೆಯನ್ನು ಪ್ರಕಟಿಸಲು ಇರುವ ಅಸ್ತ್ರ.
ನಿಜವೆಂದರೆ, ಕಾಂತಾರ ಸಿನಿಮಾ ಭೂತಾರಾಧನೆ, ದೈವಾರಾಧನೆ ಮತ್ತು ದೇವತಾರಾಧನೆಗಳ ಕಡೆಗೆ ಜನರನ್ನು ಮತ್ತೆ ಜಾಗೃತಗೊಳಿಸಿದೆ. ಇದು ಹಿಂದುಗಳ ಧಾರ್ಮಿಕ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡಿದೆ. ಇದುವರೆಗೆ ಭೂತ, ದೈವದ ಬಗ್ಗೆ ಅಷ್ಟೊಂದು ಆಸಕ್ತಿ ಪ್ರಕಟಿಸದೆ ಇದ್ದವರು ಕೂಡಾ ಈಗ ಇನ್ನು ಮತ್ತೆ ತಮ್ಮ ಮೂಲ ನೆಲೆಗಳನ್ನು ಹುಡುಕಲು ಶುರುಮಾಡಿದ್ದಾರೆ. ಹಿಂದುಗಳಲ್ಲಿ ಆಸ್ತಿಕ ಭಾವ, ಧಾರ್ಮಿಕ ಭಾವ ಹೆಚ್ಚಿರುವುದು ಕೂಡಾ ಕೆಲವರ ಕೆಂಗಣ್ಣಿಗೆ ಕಾರಣವಾಗಿರಬಹುದು. ಹಿಂದುಗಳ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿರುವ ಇಂಥ ಶಕ್ತಿಗಳಿಗೆ ಕಾಂತಾರ ಸೃಷ್ಟಿಸಿದೆ ಧಾರ್ಮಿಕ ಗಟ್ಟಿಗೊಳ್ಳುವಿಕೆ, ಧಾರ್ಮಿಕ ಜಾಗೃತಿ ಕೆಂಡದಂತೆ ಸುಡುತ್ತಿರುವಂತಿದೆ. ಹೀಗಾಗಿ ಸಹಬಾಳ್ವೆಯನ್ನು ಮುರಿಯಲು ಇಂಥ ಸಂಶಯದ ಬೀಜಗಳನ್ನು ಬಿತ್ತುತ್ತಿದ್ದಾರೆ.
ಒಂದು ಮಾತು ಸ್ಪಷ್ಟವಾಗಿ ಹೇಳಬೇಕು.. ನಾವು ದೇವರನ್ನು ಅವನ ಹುಟ್ಟಿನ ಜಾತಿ ನೋಡಿ ಪೂಜಿಸುವುದಿಲ್ಲ. ಕೃಷ್ಣ ಗೊಲ್ಲನಾದರೂ ಗೊಲ್ಲರಿಗೆ ಸೀಮಿತನಲ್ಲ, ರಾಮ ಕ್ಷತ್ರಿಯನಾದರೂ ಸರ್ವರಿಗೂ ಪೂಜ್ಯ. ಇದೇ ಮಾತು ನಮ್ಮ ದೈವಗಳಿಗೂ ಅನ್ವಯವಾಗುತ್ತದೆ. ದೈವದ ಮೂಲವನ್ನಷ್ಟೇ ನೋಡದೆ ಅದರ ಒಳಿತನ್ನೂ ಗಮನಿಸಿ ಸರ್ವರೂ ಆರಾಧಿಸುವುದು ನಮ್ಮ ಇಲ್ಲಿನ ನೆಲದ ನಂಬಿಕೆ. ಇಂಥ ಸಹಬಾಳ್ವೆಯನ್ನು ಕದಡುವ ಪ್ರಯತ್ನ ಯಾವತ್ತೂ ಫಲಿಸುವುದಿಲ್ಲ.
ಇದನ್ನೂ ಓದಿ | ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ | ಕಾಂತಾರ ಅಭಿಮಾನಿಗಳ ಕಿಡಿ