ಬೆಂಗಳೂರು: ನಾಡದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಯತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ನೀಡಿದ್ದು, ಸ್ಥಳೀಯರ ಬೇಡಿಕೆಯನ್ನು ಮನ್ನಿಸಿ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸುವ ತೀರ್ಮಾನವನ್ನು ಈ ಬಾರಿಯ ಬಜೆಟ್‌ನಲ್ಲಿ (Karnataka Budget 2023) ಪ್ರಕಟಿಸಿದ್ದಾರೆ.
ʻʻದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಮತ್ತು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ದಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದುʼʼ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ಚಾಮುಂಡಿ ಬೆಟ್ಟದ ಅಭಿವೃದ್ಧಿಯತ್ತ ಗಮನ ನೀಡಲು ʻಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರʼ ಇರುವಂತೆಯೇ ಪ್ರಾಧಿಕಾರ ರೂಪಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಾ ಬಂದಿದ್ದರು. ಈ ಹಿಂದಿನ ಸರ್ಕಾರ ಈ ಕುರಿತು ಚಿಂತನೆ ಕೂಡ ನಡೆಸಿತ್ತು. ತವರು ಜಿಲ್ಲೆಯ ಜನರ ಈ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಈ ಸರ್ಕಾರದ ಮೊದಲ ಬಜೆಟ್‌ನಲ್ಲಿಯೇ ಪ್ರಾಧಿಕಾರ ರಚಿಸುವ ಘೋಷಣೆ ಮಾಡಿದ್ದಾರೆ.
ಹೇಗಿರಲಿದೆ ಪ್ರಾಧಿಕಾರ?
ಮುಖ್ಯಮಂತ್ರಿಗಳ ಅಧ್ಯಕ್ಷತೆಯಡಿಯಲ್ಲಿ ಈ ಪ್ರಾಧಿಕಾರ ರಚನೆಯಾಗಲಿದ್ದು, ಸಂಬಂಧಪಟ್ಟ ಸಚಿವರು, ಸಂಸತ್ ಸದಸ್ಯರು, ಶಾಸಕರು, ಸರ್ಕಾರೇತರ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಈ ಪ್ರಾಧಿಕಾರದ ಸದಸ್ಯರಾಗಲಿದ್ದಾರೆ. ಪ್ರಾಧಿಕಾರಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತಾಧಿಕಾರಿಯಾಗಿರುವ ಕಾರ್ಯದರ್ಶಿ ನೇಮಕಗೊಳ್ಳಲಿದ್ದಾರೆ. ಇವರ ನೇತೃತ್ವದಲ್ಲಿಯೇ ಪ್ರಾಧಿಕಾರವು ಕಾರ್ಯನಿರ್ವಹಿಸಲಿದೆ. ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಮತ್ತು ನಿರ್ವಹಣೆ ಈ ಪಾಧಿಕಾರದ ಜವಾಬ್ದಾರಿಯಾಗಲಿದ್ದು, ವಿಶೇಷ ನಿಧಿಯ ಸ್ಥಾಪನೆಯೂ ಆಗಲಿದೆ. ಈ ಪ್ರಾಧಿಕಾರ ರೂಪಿಸಲು ಸರ್ಕಾರ ವಿಧೇಯಕ ರಚಿಸಿ, ವಿಧಾನಸಭೆಯಲ್ಲಿ ಮಂಡಿಸಬೇಕಿರುತ್ತದೆ.
ದೇವಸ್ಥಾನದ ಚರ ಮತ್ತು ಸ್ಥಿರ ಆಸ್ತಿಯನ್ನು ಸಂರಕ್ಷಿಸುವುದು, ನಿರ್ವಹಿಸುವುದು, ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು ಹಾಗೂ ಕಾರ್ಯಗತಗೊಳಿಸುವುದು ಈ ಪ್ರಾಧಿಕಾರದ ಪ್ರಮುಖ ಕಾರ್ಯವಾಗಿರಲಿದೆ.
ಬಜೆಟ್‌ನ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
15 ಸಾವಿರ ಸಹಾಯ ಧನ ನಿಗದಿ
ರಾಜ್ಯದಲ್ಲಿನ ಯಾವುದೇ ಗಮನಾರ್ಹ ಆದಾಯವಿಲ್ಲದ ʻಸಿʼ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳಿಗೆ ಕನಿಷ್ಠ 35 ರೂ.ಗಳಿಂದ 15,000 ರೂ.ಗಳವರೆಗೆ ನಗದು ಸಹಾಯಾನುದಾನವನ್ನು ಈಗ ನೀಡಲಾಗುತ್ತಿದೆ. ಇನ್ನು ಮುಂದೆ ಎಲ್ಲಾ ದೇವಸ್ಥಾನಗಳಿಗೆ ಸಮಾನವಾಗಿ 15,000 ರೂ.ಗಳ ಸಹಾಯಾನುದಾನವನ್ನು ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಹೊರ ರಾಜ್ಯದ ಶಿಲ್ಪಿಗಳ ಮೇಲೆ ಅವಲಂಬಿತರಾಗಿದ್ದು, ನಮ್ಮ ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆ, 1974 ರನ್ವಯ ನಾನ್ ಇನಾಂ ಜಮೀನುಗಳು ಸರ್ಕಾರದಲ್ಲಿ ವಿಹಿತವಾಗಿರುವುದಕ್ಕೆ ಪರಿಹಾರಾರ್ಥವಾಗಿ ಒಟ್ಟು 3,721 ಸಂಸ್ಥೆಗಳಿಗೆ ಪ್ರಸ್ತುತ ಮಂಜೂರು ಮಾಡುತ್ತಿರುವ ವರ್ಷಾಸನ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದಕ್ಕಾಗಿ ಒಟ್ಟು 22 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ದೇಗುಲಗಳ ಅಭಿವೃದ್ಧಿಗೆ ಕ್ರಮ
ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಬರುವ ಹಂಪಿ, ಮೈಲಾರ, ಗಾಣಗಾಪುರ, ಸನ್ನತಿ ಮತ್ತು ಮಳಖೇಡಗಳ ಸಮಗ್ರ ಅಭಿವೃದ್ಧಿಗಾಗಿ 75 ಕೋಟಿ ರೂ. ಗಳನ್ನು ಒದಗಿಸಲಾಗುವುದು. ಕಿತ್ತೂರು ಕರ್ನಾಟಕ ಭಾಗದಲ್ಲಿನ ಸವದತ್ತಿ ಯಲ್ಲಮ್ಮನ ಗುಡ್ಡ, ದೇವರಗುಡ್ಡ, ಕಪ್ಪತ್ತಗುಡ್ಡ, ಬಾದಾಮಿ ಬನಶಂಕರಿ, ಲಕ್ಕುಂಡಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ : Karnataka budget 2023 : ಬಡತನ ಮುಕ್ತ ರಾಜ್ಯಕ್ಕಾಗಿ ಎಂಪಿಐಗೆ 3000 ಕೋಟಿ ರೂ; 4,000 ʻಕೂಸಿನ ಮನೆʼ!
ರಾಜ್ಯದಲ್ಲಿರುವ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯವಿಠಲ ದೇವಸ್ಥಾನ, ಬೀದರ್ ಕೋಟೆ, ನಂದಿಬೆಟ್ಟದ ಶ್ರೀ ಭೋಗನಂದೀಶ್ವರ ದೇವಸ್ಥಾನ, ವಿಜಯಪುರದ ಗೋಲಗುಂಬಜ್, ಕಿತ್ತೂರು ಕೋಟೆ ಮತ್ತು ಬಾದಾಮಿ ಗುಹೆಗಳ ಬಳಿ ರಾತ್ರಿ ವೇಳೆ ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು ಹಾಗೂ ಕರ್ನಾಟಕ ರಾಜ್ಯದ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಲು 3D ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸೌಂಡ್ ಮತ್ತು ಲೈಟ್ ಶೋ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದೂ ಸಹ ಬಜೆಟ್‌ನಲ್ಲಿ ಹೇಳಲಾಗಿದೆ.