ನಗರ ಪ್ರದೇಶದ ಅದೆಷ್ಟೋ ಜನರಿಗೆ ಅರಿವೂ ಇರದ, ಹಳ್ಳಿಗಾಡಿನ ರೈತಾಪಿ ವರ್ಗದವರು ಆಚರಿಸಿಕೊಂಡು ಬರುತ್ತಿರುವ ಪಕ್ಕಾ ಗ್ರಾಮೀಣ ಹಬ್ಬ ಕಾರ ಹುಣ್ಣಿಮೆ. ಇದು ಮುಂಗಾರು ಆರಂಭವಾಗುತ್ತಿದ್ದಂತೆಯೇ ರೈತರು ಆಚರಿಸುವ ಮೊದಲ ಹಬ್ಬ. ಉತ್ತರ ಕರ್ನಾಟಕ ಭಾಗದಲ್ಲಿ ಮುಖ್ಯವಾಗಿ ಈ ಹಬ್ಬದ ಸಂಭ್ರಮ ಜೋರಾಗಿರುತ್ತದೆ.
‘ಕಾರ್’ ಎಂದರೆ ಮಳೆಗಾಲ, ಮಳೆ ನೀರಿನಿಂದ ತೆಗೆಯುವ ಫಸಲು, ಮಳೆಗಾಲದ ಮೋಡ ಎಂದೆಲ್ಲಾ ಅರ್ಥವಿದೆ. ಮಳೆಗಾಲದ ಆರಂಭದಲ್ಲಿ ಬರುವ ಹುಣ್ಣಿಮೆಯನ್ನು ಹೀಗಾಗಿ ಕಾರ್ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಮುಂದೆ ರೈತರು ಬೆಳೆಯುವ ಬೆಳೆಗೆ ಮಳೆ ಸರಿಯಾಗಿ ಬಿಳಲಿ ಎಂದು ಪೂಜಿಸುವ ಹಬ್ಬ ಇದು.
‘‘ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನೊಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ’’
ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದ.ರಾ ಬೇಂದ್ರೆಯವರು ಕವನವೊಂದರಲ್ಲಿ ಬರೆದಿದ್ದಾರೆ. ಕಾರಹುಣ್ಣಿಮೆಯ ನಂತರ ಬರುವ ಮಳೆಗಾಲವನ್ನು ಅವರು ಹೀಗೆ ವರ್ಣಿಸಿದ್ದಾರೆ.
ರೈತಾಪಿಗಳ ಹಬ್ಬಗಳ ಸಾಲಿನಲ್ಲಿ ಬರುವ ಮೊದಲ ಹಬ್ಬ ಇದು. ‘ಕಾರ ಹುಣ್ಣಿಮೆ ಕರಕೊಂಡು ಬಂದ್ರ ಉಗಾದಿ ಉಡುಕ್ಕೊಂಡು(ಗುಡಿಸಿಕೊಂಡು) ಹೋಗ್ತದ’ ಎಂಬ ಮಾತೊಂದಿದೆ. ಅಂದರೆ ಕಾರ ಹುಣ್ಣಿಮೆಯಿಂದ ಶುರುವಾಗುವ
ಆಚರಣೆಯ ಹಬ್ಬಗಳ ಸಾಲು ಕೊನೆಯಾಗುವುದು ಯುಗಾದಿಗೇನೆ. ಅದಕ್ಕಾಗೇ ಈ ಹಬ್ಬವನ್ನ ಎಲ್ಲಾ ಹಬ್ಬಗಳ ಹೊಸ್ತಿಲು ಅಂತ ಕೂಡ ಕರೆಯಲಾಗುತ್ತದೆ.
ಮೂರು ದಿನಗಳ ಹಬ್ಬ
ಕಾರ ಹುಣ್ಣಿಮೆ 3 ದಿನಗಳ ಹಬ್ಬ. ಹುಣ್ಣಿಮೆಯ ಹಿಂದಿನ ದಿನ ‘ಹೊನ್ನುಗ್ಗಿ’ ಹಬ್ಬ ಆಚರಿಸಲಾಗುತ್ತದೆ. ಅಂದಿನ ದಿನ ರೈತರ ಮನೆಯಲ್ಲಿನ ಕುಂಟಿ, ಕುರಿಗೆ, ಬಾರುಕೋಲು, ಮೊದಲಾದ ರೈತಾಪಿ ಸಾಮಗ್ರಿಗಳನ್ನು ಕ್ಯಾವಿಯಿಂದ ಸಾರಿಸಿ ಅಲಂಕರಿಸಿ ಪೂಜಿಸುವ ವಾಡಿಕೆಯುಂಟು. ಒಟ್ಟಾರೆಯಾಗಿ ಇದು ಹಬ್ಬದ ತಯಾರಿಯ ದಿನ. ಈ ದಿನ ಎತ್ತುಗಳಿಗೆ ಹೊಸ ಹಗ್ಗ, ಕಾಂಡಾ(ಕೊರಳಿಗೆ ಕಟ್ಟುವ ಹಗ್ಗ), ಮೂಗುದಾಣಿ (ಎತ್ತುಗಳ ಹತೋಟಿಗೆ ಮೂಗಿನ ಮೂಲಕ ಹಾಕುವ ಹಗ್ಗ), ಬಾಸಿಂಗ(ಹಣೆಗೆ ಕಟ್ಟುವ ಹೂವಿನ ಇಲ್ಲವೇ ಬಣ್ಣದ ಹಾಳೆಯ ಮಾಲೆ), ಕೋಡಿಗೆ ಕಟ್ಟಲು ಬಣ್ಣದ ಬಟ್ಟೆ ಇಲ್ಲವೇ ರಿಬ್ಬನ್ನು ಎಲ್ಲವನ್ನೂ ಕೊಂಡು ತಂದು ತಯಾರಿ ಮಾಡಿಕೊಳ್ಳುತ್ತಾರೆ.
ಅಷ್ಟೇ ಅಲ್ಲದೆ ಈ ದಿನ ಸಾಯಂಕಾಲ ಎತ್ತುಗಳಿಗೆ ಮೈತೊಳೆದು ಮೈಗೆಲ್ಲ ಅರಿಸಿನ ಹಚ್ಚಿ ‘ಮದುಮಕ್ಕಳು’ ಎಂದು ಪೂಜಿಸ್ತಾರೆ. ಇದಾದ ನಂತರ ಎತ್ತುಗಳಿಗೆ ಅಂತ ಮಾಡಿರುವ ವಿಶೇಶ ತಿಂಡಿ ಕಿಚಡಿ-ಅಗಸಿಪುಡಿ ತಿನ್ನಿಸುವರು. ಕೆಲವೆಡೆ ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನ್ನಿಸುತ್ತಾರೆ. ಕಾರ ಹುಣ್ಣಮೆ ಹಬ್ಬದಂದು ಎಲ್ಲರೂ ಎತ್ತುಗಳನ್ನು ಸ್ನಾನ ಮಾಡಿಸಿ ಅವುಗಳ ಕೊಂಬಿಗೆ ಗೆಜ್ಜೆ, ಕೊಂಬನಸು, ರಿಬ್ಬನ್ ಮತ್ತು ಬಣ್ಣಗಳನ್ನು ಬಳಸಿ ಅಲಂಕರಿಸಿ, ಹಣಿಪಟ್ಟಿ ಜೂಲಾಗಳನ್ನು ಹಾಕಿ ಮದುಮಗನಂತೆ ಶೃಂಗರಿಸುತ್ತಾರೆ. ಎತ್ತುಗಳಿಗೆ ಸಿಹಿ ಅಡುಗೆ ನೈವೇದ್ಯ ಸಲ್ಲಿಸುತ್ತಾರೆ. ಮಧ್ಯಾಹ್ನ ಅಲಂಕಾರಗೊಂಡಿರುವ ಎತ್ತುಗಳನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಎತ್ತಿನ ಮೂಲಕ ಭವಿಷ್ಯ
ಆ ದಿನ ಸಂಜೆ ಊರ ಅಗಸಿಯಲ್ಲಿ ಊರವರೆಲ್ಲ ಸೇರಿರುತ್ತಾರೆ. ಎರಡೂ ಕಡೆ ಅಗಸಿಗಳಲ್ಲಿ ಉದ್ದನೆಯ ಬೊಂಬುಗಳಿಗೆ ಬೆವಿನೆಲೆಗಳನ್ನು ಕಟ್ಟಿ ಆಚೆ ಈಚೆ ಹಿಡಿದು ನಿಂತಿರುತ್ತಾರೆ. ಶೃಂಗರಿಸಿದ ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಿಸುತ್ತಾರೆ. ಯಾವ ಎತ್ತು ತನ್ನ ಕೊಂಬಿನ ಸಹಾಯದಿಂದ ಆ ಬೆವಿನೆಲೆಗಳನ್ನು ಕಟ್ಟಿದ ಹಗ್ಗವನ್ನು ತಿವಿದು ಹರಿಯುತ್ತದೆಯೋ ಆ ಎತ್ತು ವಿಜಯಶಾಲಿ. ಆಗ ಯಾವ ಬಣ್ಣದ ಎತ್ತು (ಅಂದರೆ ಬಿಳಿ ಎತ್ತು,ಕರಿ ಎತ್ತು, ಕಂದು ಬಣ್ಣದ ಎತ್ತು) ಹಗ್ಗವನ್ನು ಹರಿಯುತ್ತದೆಯೋ ಅದರ ಆಧಾರದ ಮೇಲೆ ಆ ವರ್ಷದ ಬೆಳೆಗಳು ಮತ್ತೆ ಮಳೆಗಳನ್ನು ನಿರ್ಧರಿಸುತ್ತಾರೆ.
ಎತ್ತುಗಳು ಓಡುವಾಗ ಅವುಗಳ ಕಾಲು ಹೆಜ್ಜೆಗಳೂ ಮಳೆ ಬೆಳೆಯ ಹೇಳಿಕೆಯಾಗುತ್ತವೆ. ಕಾಲು ಹಿಂದೆ ಇಡೋದು, ಕಾಲು ಸಿಕ್ಕಿಸಿಕೊಳ್ಳುವುದು ಮಾಡಿದ್ರೆ ಮುಂಗಾರಿ ಮಳೆ ಕೈ ಕೊಟ್ಟಿತು, ಹಿಂಗಾರು ಬರುತ್ತದೆ ಎಂದು. ಇನ್ನು ಸರಾಗವಾಗಿ ಓಡಿತು ಅಂದ್ರ ಹಿಂಗಾರು- ಮುಂಗಾರು ಎರಡೂ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಇದನ್ನು ‘ಕರಿ ಹರಿಯುವ’ ಪದ್ಧತಿ ಎಂದು ಕರೆಯುತ್ತಾರೆ.
ಇದಾದ ನಂತರ ರೈತಾಪಿ ಜನರು ನಾವೂ ಕೃಷಿ ಕೆಲಸಕ್ಕೆ ಯೋಗ್ಯರಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿಲು ವಿವಿಧ ಕಸರತ್ತಿನ ಸ್ಪರ್ಧೆಗಳನ್ನು ನಡೆಸುತ್ತಾರೆ. ಬಾರ ಎತ್ತುವುದು, ಎತ್ತಿನ ಗಾಡಿ ಓಡಿಸುವ ಸ್ಪರ್ಧೆ, ಕುಸ್ತಿ, ಹೀಗೆ ಹಲವಾರು ರೀತಿಯ ಕಸರತ್ತು ಪ್ರದರ್ಶನ ನಡೆಯಲಿದೆ. ಇದೆಲ್ಲಾ ಮುಗಿಸಿಕೊಂಡು ಕೊಟ್ಟಿಗೆ ಸೇರುವ ಎತ್ತು ಗಳನ್ನು ಆರತಿ ಮಾಡಿ ಒಳಗೆ ಕಟ್ಟಲಾಗುತ್ತದೆ. 3ನೇ ದಿನ ಹಬ್ಬದ ಕರಿ ನಡೆಯುತ್ತದೆ. ಆದಿನ ಬಾಡೂಟ ಮಾಡುವುದು ಸಾಮಾನ್ಯ. ಹಿಂದೆಲ್ಲಾ ಕರಿಯ ದಿನ ಊರಿನ ಯುವಕರೆಲ್ಲ ಸೇರಿ ಬೇಟೆಗೆ ಹೋಗುತ್ತಿದ್ದರು. ಬೇಟೆಯಾಡಿದ ಯಾವುದಾದರೂ ಒಂದು ಪ್ರಾಣಿಯ ತಲೆಯನ್ನು ಊರ ಅಗಸಿಯೊಳಗೆ ಹುಗಿಯುತ್ತಿದ್ದರು. ಈಗ ಈ ಆಚರಣೆ ಹೆಚ್ಚು-ಕಡಿಮೆ ನಿಂತೇ ಹೋಗಿದೆ.
ಪೌರಾಣಿಕ ಕತೆಯೂ ಇದೆ
ಈ ಹಬ್ಬದ ಆಚರಣೆಯ ಹಿಂದೆ ಒಂದು ಕತೆಯೂ ಇದೆ. ಹಿಂದೆ ಸಮುದ್ರ ಮಂಥನದ ಸಮಯದಲ್ಲಿ ಸುರ ಅಸುರರು ಅಮೃತಕ್ಕಾಗಿ ಪರಿಶ್ರಮಿಸುವ ಸಂದರ್ಭದಲ್ಲಿ ಇತ್ತ ರಾಕ್ಷಸಿಯೊಬ್ಬಳೂ ಈಡೀ ವಿಶ್ವಕ್ಕೆ ಕಾಟ ಕೊಡುತ್ತಿದ್ದಳಂತೆ ಆಗ ಜಗದೀಶ್ವರನು ತನ್ನ ಮಗ ನಂದಿಗೆ ಅವಳನ್ನು ಸಂಹರಿಸುವಂತೆ ಆಜ್ಞೆಯನ್ನು ಮಾಡಿದನಂತೆ ಆಗ ನಂದಿಯು ತನ್ನ ಕೊಂಬಿನಿಂದ ಚುಚ್ಚಿ ಆ ರಕ್ಕಸಳನ್ನು ಸಂಹರಿಸಿ ಜನರಿಗೆ ನೆಮ್ಮದಿ ನೀಡಿದನಂತೆ. ನಂದಿಯ ಆ ವಿಜಯದ ಸಂಕೇತವಾಗಿ ನಂದಿಗಳನ್ನು ಶೃಂಗರಿಸಿ ಪೂಜಿಸಲಾಗುತ್ತದೆ.
ಇದನ್ನೂ ಓದಿ| Super Moon 2022| ನಾಳೆ ಬಾನ ಚಂದಿರನನ್ನು ನೋಡುವುದೇ ಚೆಂದ!