ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಅರ್ಚಕರು ಪೂಜೆ ಪುನಸ್ಕಾರ ಮಾಡುವುದನ್ನು ನೀವು ಕಾಣಲಾರಿರಿ. ಏಕೆಂದರೆ ಅವರಿಗೂ ನಿವೃತ್ತಿಯ ವಯಸ್ಸನ್ನು ನಿಗದಿಪಡಿಸಿ, ಸೇವೆಯಿಂದ ಬಿಡುಗಡೆ ಮಾಡಲು ಮುಜರಾಯಿ ಇಲಾಖೆ ಚಿಂತಿಸುತ್ತಿದೆ.
65 ವರ್ಷ ಮೇಲ್ಪಟ್ಟ ಅನೇಕರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವುದರಿಂದ ದೇವಾಲಯಗಳ ದೈನಂದಿನ ಪೂಜಾ ಕೈಂಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕಷ್ಟವಾಗುತ್ತಿರುವುದನ್ನು ಗಮನಿಸಿರುವ ಇಲಾಖೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯದ ಪ್ರಕಾರ ದೇವಾಲಯಗಳ ನೌಕರರ ನಿವೃತ್ತಿ ವಯಸ್ಸು 65 ವರ್ಷಗಳಾಗಿವೆ. ಆದರೆ ಸುಪ್ರೀಂಕೋರ್ಟ್ ನ ಮಧ್ಯಂತರ ತೀರ್ಪಿನಿಂದಾಗಿ ಇದು ದೇವಾಲಯಗಳ ಅರ್ಚಕರು ಸೇರಿದಂತೆ ಒಳಾಂಗಣ ನೌಕರರಿಗೆ ಅನ್ವಯವಾಗುತ್ತಿರಲಿಲ್ಲ. ಹೊರಾಂಗಣದ ನೌಕರರು ಮಾತ್ರ 65 ವರ್ಷಗಳಿಗೆ ನಿವೃತ್ತರಾಗುತ್ತಿದ್ದರು.
ಹೀಗಾಗಿ ರಾಜ್ಯದ ಬಹುತೇಕ ದೇವಾಲಯಗಳಲ್ಲಿ 65 ವರ್ಷ ಪೂರೈಸಿದ ಅರ್ಚಕರು ಮತ್ತು ಇತರೆ ಒಳಾಂಗಣ ನೌಕರರು ಈಗಲೂ ಕಾರ್ಯ ನಿರ್ವಹಿಸುತ್ತಿದ್ದರು. ವಯಸ್ಸಾದ ನೌಕರರಿಗೆ ಸರಿಯಾದ ಸೇವೆ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.
ಸದ್ಯ ಇಲಾಖೆಯು 65 ವರ್ಷ ಮೇಲ್ಪಟ್ಟ ಎಷ್ಟು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ, ನಿವೃತ್ತಿ ನಿಯಮ ಜಾರಿಗೆ ತಂದರೆ ಎಷ್ಟು ಮಂದಿಯನ್ನು ಕೆಸಲದಿಂದ ಬಿಡುಗಡೆ ಮಾಡಬೇಕಾಗುತ್ತದೆ, ಮುಂದಿನ ವರ್ಷದ ಏಪ್ರಿಲ್‌ವರೆಗೆ ಎಷ್ಟು ಮಂದಿ ನಿವೃತ್ತಿಯ ವಯಸ್ಸನ್ನು ಮೀರಲಿದ್ದಾರೆ ಎಂಬೆಲ್ಲಾ ಮಾಹಿತಿ ಸಂಗ್ರಹಿಸುತ್ತಿದೆ. ಮಾಹಿತಿ ಬಂದ ಮೇಲೆ ಸಚಿವರೊಂದಿಗೆ ಚರ್ಚಿಸಿ, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ʼವಿಸ್ತಾರ ನ್ಯೂಸ್ʼ ಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ|New twist: ಕೃಷ್ಣ ಜನ್ಮಭೂಮಿಗೆ 1991ರ ಪೂಜಾ ಸ್ಥಳಗಳ ಕಾಯಿದೆ ಅನ್ವಯಿಸದು?