Site icon Vistara News

Kashi Vishwanath Temple : ಭಕ್ತರ ಭೇಟಿಯಲ್ಲಿ ದಾಖಲೆ ನಿರ್ಮಿಸಿದ ಕಾಶಿ ವಿಶ್ವನಾಥ ಮಂದಿರ

Kashi Temple

ವಾರಾಣಸಿ: ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾ ಸ್ಥಳವಾಗಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ (Kashi Vishwanath Temple) ಎರಡು ವರ್ಷಗಳಲ್ಲಿ ದಾಖಲೆಯ 12.92 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಈ ಮೂಲಕ ಮಂದಿರವು ಭಕ್ತರ ಭೇಟಿಯಲ್ಲಿ ಹೊಸ ದಾಖಲೆ ಬರೆದಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುವ ಮೂಲಕ ಭಾರತದ ಪ್ರಮುಖ ಯಾತ್ರಾ ಸ್ಥಳ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್​ನಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು. ಅಂದಿನಿಂದ ವಿಶ್ವನಾಥನ ಭೇಟಿಗೆ ಬರುತ್ತಿರುವ ಭಕ್ತರ ಸಂಖ್ಯೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಗುಲದ ಆವರಣ ದೊಡ್ಡದಾಗಿರುವುದು ಹಾಗೂ ಭಕ್ತರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಯಾತ್ರೆಯನ್ನು ಹೆಚ್ಚು ಸರಳ ಹಾಗೂ ಪಾವನಗೊಳಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋದಿ ಕಾರಿಡಾರ್​ ಉದ್ಘಾಟಿಸಿದ ಬಳಿಕ ಹೆಚ್ಚಿನ ಭಕ್ತರು

ಶ್ರೀ ಕಾಶಿ ವಿಶ್ವನಾಥ ಧಾಮವನ್ನು 2021 ರ ಡಿಸೆಂಬರ್ 13 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಅಂದಿನಿಂದ 2023 ರ ಡಿಸೆಂಬರ್ 6 ರವರೆಗೆ, 12 ಕೋಟಿ 92 ಲಕ್ಷ 24 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಅವರ ದರ್ಶನ ಪಡೆದಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಸಂಖ್ಯೆ 13 ಕೋಟಿ ದಾಟುವ ನಿರೀಕ್ಷೆಯಿದೆ ಎಂದು ದೇವಾಲಯದ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ವರ್ಮಾ ಹೇಳಿದ್ದಾರೆ.

ಶ್ರಾವಣ ತಿಂಗಳೊಂದರಲ್ಲೇ 1.6 ಕೋಟಿಗೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಜುಲೈನಲ್ಲಿ 72 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರೆ, ಆಗಸ್ಟ್​​ನಲ್ಲಿ ಈ ಸಂಖ್ಯೆ 95.6 ಲಕ್ಷದಷ್ಟಿತ್ತು. ಜನವರಿ 2023ರಿಂದ ಡಿಸೆಂಬರ್ ವರೆಗೆ ದೇವಾಲಯದಲ್ಲಿ 5.3 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ, ಕಾಶಿ ವಿಶ್ವನಾಥ ಟ್ರಸ್ಟ್ ಪ್ರವಾಸಿಗರು ಮತ್ತು ಭಕ್ತರಿಗೆ ನೀಡುವ ಸೌಲಭ್ಯಗಳನ್ನು ಹೆಚ್ಚಿಸಿದೆ. ಅಂತಹ ಬದಲಾವಣೆಗಳು ಭಕ್ತರ ಭೇಟಿಯನ್ನು ಸರಳಗೊಳಿಸುತ್ತಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ವ್ಯಾಪ್ತಿ ವಿಸ್ತರಣೆಯಿಂದ ಅನುಕೂಲ

ಈ ಮೊದಲು ದೇವಾಲಯದ ವಿಸ್ತೀರ್ಣ ಕೇವಲ 3000 ಚದರ ಅಡಿಗಳಷ್ಟಿತ್ತು. 2021 ರಲ್ಲಿ, ಇದನ್ನು ಸುಮಾರು 5 ಲಕ್ಷ ಚದರ ಅಡಿಗೆ ವಿಸ್ತರಿಸಲಾಯಿತು. ಇದು ದೇವಾಲಯದ ಆವರಣದಲ್ಲಿ ಏಕಕಾಲಕ್ಕೆ 50,000 ರಿಂದ 75,000 ಭಕ್ತರಿಗೆ ಪ್ರವೇಶ ಪಡೆಯಲು ಅವಕಾಶ ನೀಡಿದೆ. ಬೇಸಿಗೆಯಲ್ಲಿ ಸುಡುವ ಬಿಸಿಲು, ಚಳಿ ಮತ್ತು ಮಳೆಯಿಂದ ರಕ್ಷಿಸಲು ಜರ್ಮನ್ ಹ್ಯಾಂಗರ್ ಗಳು, ಚಾಪೆಗಳು, ಕೂಲರ್ ಗಳು, ಕುಡಿಯುವ ನೀರು, ಗಾಲಿಕುರ್ಚಿಗಳು, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇತರ ವ್ಯವಸ್ಥೆಗಳಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಲಾದ ಇತರ ಸೌಲಭ್ಯಗಳಲ್ಲಿ ಸೇರಿವೆ.

Exit mobile version