Site icon Vistara News

Kempegowda Jayanti | ಬೆಂಗಳೂರನ್ನು ದೇಗುಲಗಳ ನಗರವನ್ನಾಗಿಸಿದ ಕೆಂಪೇಗೌಡ

kempegowda jayanti

ರಾಮಸ್ವಾಮಿ ಹುಲಕೋಡು
ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಜಯಂತಿ (kempegowda jayanti) ಇಂದು. ವಿಜಯನಗರ ಅರಸರ ಸಾಮಂತ ಪಾಳೆಗಾರನಾಗಿ ಬಳಿಕ ಸ್ವತಂತ್ರ ರಾಜನಾಗಿ ವಿಜಯನಗರ ಸಾಮ್ರಾಜ್ಯದ ವೈಭವ ತೋರುವ ಮಾದರಿ ತನ್ನ ರಾಜ್ಯದಲ್ಲೂ ಒಂದು ನಗರವನ್ನು ಕಟ್ಟುವ ಕನಸು ಹೊತ್ತು, ಬೆಂಗಳೂರು ನಗರವನ್ನು ಕಟ್ಟುವ ಮೂಲಕ ಕನಸನ್ನು ನನಸಾಗಿಸಿಕೊಂಡ ರಾಜ ಕೆಂಪೇಗೌಡ.

ವಿಜಯ ನಗರದ ಅರಸರಂತೆ ದೈವಭಕ್ತರಾಗಿದ್ದ ಕೆಂಪೇಗೌಡರು, ಬೆಂಗಳೂರನ್ನು ನಿರ್ಮಿಸುವಾಗ ದೇವಾಲಯಗಳ ಅಭಿವೃದ್ಧಿಯನ್ನು ಮರೆಯಲಿಲ್ಲ. ಬೆಂಗಳೂರಿಗೆ ಕೋಟೆ ಕಟ್ಟಿ, ರಾಜಧಾನಿಯ ನಿರ್ಮಾಣದ ಹೊತ್ತಿನಲ್ಲೇ ಕೆಂಪೇಗೌಡರು ಬೆಂದಕಾಳೂರಿನ ಸರಹದ್ದಿನೊಳಗೆ 54 ಪೇಟೆಗಳನ್ನು ನಿರ್ಮಿಸಿದರು. ಅದೇ ರೀತಿಯಾಗಿ ಕೆರೆಗಳನ್ನು ಕಟ್ಟಿಸಿದರು, ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದರು.

ರಾಜ ಕೆಂಪೇಗೌಡರು ಆಗಾಗ ಬಿಡುವು ಮಾಡಿಕೊಂಡು ದೇವಾಲಯಗಳನ್ನು ಸಂದರ್ಶಿಸುತ್ತಿದ್ದರು. ಹೆಂಡತಿ ಮಕ್ಕಳು ಪರಿವಾರದವರೊಡನೆ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿದ್ದರು ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರತ್ತದೆ. ಅವರ ದೈವಭಕ್ತಿ ಮನೆಮಾತಾಗಿತ್ತು. ಬೆಂಗಳೂರು ದೇವಾಲಯಗಳ ಊರು ಎಂದು ಆಗ ಹೆಸರು ಪಡೆಯುವಷ್ಟು ನಗರದಲ್ಲಿ ದೇಗುಲಗಳು ನಿರ್ಮಾಣಗೊಂಡಿದ್ದವು.

ಭೈರವೇಶ್ವರನ ಪರಮ ಭಕ್ತ

ಸ್ವತಃ ಭೈರವೇಶ್ವರನ ಪರಮ ಭಕ್ತರಾಗಿದ್ದ ಕೆಂಪೇಗೌಡರು ಹಲವಾರು ಶಿವನ ದೇಗುಲ ನಿರ್ಮಿಸಿದ್ದಾರೆ. ಜತೆ ಜತೆಗೆ ಬೇರೆ ದೇವರುಗಳ ದೇವಾಲಯಗಳನ್ನು ಕಟ್ಟಲು ನೆರವಾದರಲ್ಲದೆ, ತಾವೇ ಮುಂದೆ ನಿಂತು ಕೆಲ ದೇವಾಲಯಗಳ ಅಭಿವೃದ್ಧಿ ಪಡಿಸಿದ್ದಾರೆ. ಜಾತಿ ಮತಗಳ ತಾರತಮ್ಯ ಮಾಡದೆ, ಧಾರ್ಮಿಕ ವಿಷಯದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದರು. ಯಾವುದೇ ವರ್ಗದವರು ತಮಗೆ ಇಷ್ಟಬಂದ ದೇವರನ್ನು ಸ್ಥಾಪಿಸಿ, ಪೂಜಿಸುವುದಕ್ಕೆ ಅವಕಾಶ ಮಾಡಿಕೊಟ್ಟರು. ಇದಕ್ಕೆ ಸಾಕಷ್ಟು ನಿದರ್ಶನಗಳು ಇಂದೂ ದೊರೆಯುತ್ತಿವೆ.

ರಾಜಧಾನಿ ಬೆಂಗಳೂರಿನ ಕೋಟೆ ನಿರ್ಮಾಣದ ಸಮಯದಲ್ಲಿ ಕೋಟೆಯ ಒಳಗೆ ಬಸವೇಶ್ವರನ ಗುಡಿಯನ್ನು ಕಟ್ಟಿಸಿದರು. ಕೋಟೆಯ ಉತ್ತರ ದ್ವಾರದ ಹತ್ತಿರ ವಿನಾಯಕ ಮತ್ತು ಆಂಜನೇಯನ ಗುಡಿ ಕಟ್ಟಿಸಿದರು. ದಕ್ಷಿಣ ದಿಕ್ಕಿನ ಕಾರಂಜಿ ಕೆರೆಯ ದಡದಲ್ಲಿ ಬೃಹದಾಕಾರದ ದೊಡ್ಡ ಗಣಪತಿ, ಆಂಜನೇಯ ಮತ್ತು ಬೃಹತ್‌ ಬಸವನ ವಿಗ್ರಹ (೧೫ ಅಡಿ ಎತ್ತರ) ನಿರ್ಮಾಣವಾದವು. ಇಂದು ಈ ದೇಗುಲಗಳು ಪ್ರಸಿದ್ಧಿ ಪಡೆದಿವೆ, ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ.

ಇದಲ್ಲದೆ ಮಲ್ಲಿಕಾರ್ಜುನ, ಮಾವಳ್ಳಿ ಮಾರಮ್ಮ, ದೊಡ್ಡ ಮಾವಳ್ಳಿ ಬಿಸಿಲು ಮಾರಮ್ಮ, ಈಗಿನ ವಿಶ್ವೇಶ್ವರಪುರದ ಹುತ್ತದ ಆಂಜನೇಯ, ಗವೀಪುರದ ಬಂಡೆ ಮಾಂಕಾಳಿ ದೇವಾಲಯಗಳ ನಿರ್ಮಾಣ, ಗವಿಗಂಗಾಧರೇಶ್ವರ ಗುಹಾಂತರ ದೇವಾಲಯದ ಅಭಿವೃದ್ದಿ, ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯದ ಅಭಿವೃದ್ಧಿ, ನಗರ ದೇವತೆ ಅಣ್ಣಮ್ಮ ಮತ್ತು ಶಿವಗಂಗೆಯ ಅಭಿವೃದ್ಧಿ ಕಾರ್ಯವನ್ನೂ ಕೆಂಪೇಗೌಡರು ಕೈಗೊಂಡಿದ್ದರು.

ದೇವಸ್ಥಾನದಲ್ಲಿಯೇ ನ್ಯಾಯ ಮಂಟಪ

ಮಾಗಡಿ ಪಟ್ಟಣದಲ್ಲಿ ನಿರ್ಮಿಸಿದ ಸೋಮೇಶ್ವರ ದೇವಾಲಯ ಕೆಂಪೇಗೌಡರ ಇತಿಹಾಸವನ್ನು ಇಂದಿಗೂ ಸಾರುತ್ತಿದೆ. ಇಲ್ಲಿ ಶಿವಸಾಲಿಗ್ರಾಮವಾಗಿದ್ದು, ಪೀಠದಲ್ಲಿ ಮೃತ್ಯುಂಜಯ ಚಕ್ರವಿದೆ. ಈ ದೇವರಿಗೆ ಮಾಡಿದ ಅಭಿಷೇಕದ ತೀರ್ಥ ಹಾಗೂ ಪ್ರಸಾದವನ್ನು ಸ್ವೀಕರಿಸಿದಲ್ಲಿ ಅಕಾಲಮೃತ್ಯು, ಅಪಮೃತ್ಯು ತಪ್ಪುತ್ತದೆ ಎಂಬ ನಂಬಿಕೆ ಇದೆ.

ಕ್ರಿ.ಶ.1712ರಲ್ಲಿ ಇಮ್ಮಡಿ ಕೆಂಪೇಗೌಡ ಹನುಮಾಪುರದ ಶಿಲ್ಪಿ ಮುನಿಯಾಭೋವಿ ಮತ್ತು ತಂಡದ ಶಿಲ್ಪಿಗಳಿಂದ ಸ್ಥಳೀಯವಾಗಿ ದೊರೆಯುತ್ತಿದ್ದ ಕೆಂಪುಮಿಶ್ರಿತ ಕಲ್ಲನ್ನು ಬಳಸಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ದೇವಾಲಯದ ಗರ್ಭ ಗೃಹದಲ್ಲಿರುವ ಶಾಸನ ತಿಳಿಸಿದೆ. ಮಾಗಡಿ ಸೋಮೇಶ್ವರ ದೇವಾಲಯದ ಪೌಳಿಯೊಳಗೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಮ್ಮಡಿ ಕೆಂಪೇಗೌಡರ ಹಜಾರಗಳಿವೆ. ಪರಶುರಾಮ, ಸತ್ಯನಾರಾಯಣಸ್ವಾಮಿ, ಭ್ರಮರಾಂಭಿಕೆ ಅಮ್ಮನವರ ದೇಗುಲಗಳಿವೆ. ಹಂಪಿಯಲ್ಲಿನ ವಿರೂಪಾಕ್ಷ ದೇಗುಲದ ಮುಂದೆ ಇರುವಂತಹ ನೃತ್ಯ ಮಂಟಪವಿದೆ. ಪೌಳಿ ಗೋಡೆಯ ನಾಲ್ಕು ದಿಕ್ಕಿನಲ್ಲಿ ಮತ್ತು ಹಜಾರದ ಮೇಲೆ ಚಿತ್ರಾಲಂಕೃತ ಗೋಪುರಗಳಿವೆ. ಒರಟು ಕಲ್ಲಿನಲ್ಲೂ ಶಿಲ್ಪಿ ಚತುರತೆಯಿಂದ ಗಿರಿಜಾಕಲ್ಯಾಣದ ಚಿತ್ರಗಳನ್ನು ಚಿತ್ರಿಸಿದ್ದಾನೆ.

ದೇಗುಲದ ಪ್ರಧಾನ ಪ್ರವೇಶ ದ್ವಾರದ ಪಕ್ಕದಲ್ಲಿ ನಾಡಪ್ರಭು ಕೆಂಪೇಗೌಡರು ನ್ಯಾಯ ತೀರ್ಮಾನ ಮಾಡುತ್ತಿದ್ದ ಮಂಟಪ ಇದೆ. ದೇಗುಲದ ಹಿಂಭಾಗದಲ್ಲಿ ಕೂಡ ಒಂದು ಪ್ರವೇಶ ದ್ವಾರವಿದ್ದು, ಇದಕ್ಕೆ ಬೃಹತ್‌ ರಾಜಗೋಪುರ ನಿರ್ಮಿಸಲಾಗಿದೆ ದೇಗುಲದ ಮುಂಭಾಗದಲ್ಲಿ ಕೆಂಪೇಗೌಡರು ಆಡಳಿತ, ದರ್ಬಾರು ನಡೆಸುತ್ತಿದ್ದ ಕೆಂಪೇಗೌಡರ ಹಜಾರ ಕಾಣುತ್ತದೆ.

ತಾಯಿಗಾಗಿ ದೇಗುಲ ಕಟ್ಟಿಸಿದ್ದರು!

ಕೆಂಪೇಗೌಡರ ಮನೆದೇವರು ಕಾಲ ಭೈರವೇಶ್ವರ. ಹೀಗಾಗಿ ಅವರ ತಾಯಿ ತಾವು ಕಂಚಿ ಹಾಗೂ ಕಾಶಿಯಾತ್ರೆಗೆ ಹೋಗಬೇಕು ಕಾಶಿ ವಿಶ್ವೇಶ್ವರನ ದರ್ಶನ ಮಾಡಬೇಕು ಎಂದು ಬಯಸುತ್ತಾರೆ. ಹಿಂದೆ ಕಾಶಿಗೆ ಹೋದವರು ಹಿಂತಿರುಗಿ ಬರುತ್ತಾರೆ ಎಂಬ ಗ್ಯಾರಂಟಿ ಇರಲಿಲ್ಲ. ಹೀಗಾಗಿ ವೃದ್ಧ ತಾಯಿಯನ್ನು ಕಾಶಿಗೆ ಕಳುಹಿಸಲು ಒಪ್ಪದ ಕೆಂಪೇಗೌಡರು ಪಂಡಿತರು ಹಾಗೂ ವಿದ್ವಾಂಸರೊಂದಿಗೆ ಚರ್ಚಿಸಿ, ತಾಯಿಗೆ ಕಾಶೀಯಾತ್ರೆಯ ಪುಣ್ಯ ದೊರಕಿಸಲು ಮಾಗಡಿಯ ಪುಟ್ಟ ಬೆಟ್ಟವೊಂದರ ಮೇಲೆ ಈ ದೇವಾಲಯ ನಿರ್ಮಿಸಿ, ಕಾಶಿಯಿಂದಲೇ ಸಾಲಿಗ್ರಾಮ ಲಿಂಗ ತರಿಸಿ ಪ್ರತಿಷ್ಠಾಪಿಸಿದ್ದರು!

ಅಣ್ಣಮ್ಮ ದೇವಿಯ ಕಥೆ
ಬರಗ ಮುದ್ದೇನಹಳ್ಳಿಯ ಎಣ್ಣೆ ವ್ಯಾಪಾರಿಗಳು ಬೇವಿನ ಮರದ ತಾಳಿನಲ್ಲಿ ದೇವತೆಯೊಂದನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ವ್ಯಾಪಾರಕ್ಕೆ ಹೋಗುವ ಮೊದಲು ಪೂಜೆ ಸಲ್ಲಿಸುತ್ತಿದ್ದರು. ಹಾಗೆ ಮಾಡಿದರೆ ಅಧಿಕ ಮಟ್ಟದಲ್ಲಿ ವ್ಯಾಪಾರವಾಗುವುದೆಂದು ನಂಬಿಕೆ. ಜೊತೆಗೆ ಜನರಿಗೆ ತಗಲುವ ಸೋಂಕು ರೋಗ ನಿವಾರಣೆಗೂ ಆ ದೇವತೆ ಅನುಗ್ರಹಿಸುವಳೆಂದು ಭಾವಿಸಿದರು. ಬೆಂಗಳೂರು ರಾಜಧಾನಿ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ತಾವು ಪೂಜಿಸುತ್ತಿರುವ ದೇವತೆಗೆ ಗುಡಿ ಕಟ್ಟಿಸಿಕೊಡಬೇಕೆಂದು ವರ್ತಕರು ಕೆಂಪೇಗೌಡನನ್ನು ಪ್ರಾರ್ಥಿಸಿದರು. ನಾಡಪ್ರಭು ಕೆಂಪೇಗೌಡ ಆ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿದರು. ಜ್ಯೋತಿಷಿಗಳೊಡನೆ, ದೈವಭಕ್ತ ಹಿರಿಯರೊಡನೆ ಸಮಾಲೋಚಿಸಿದರು. ಸೂಕ್ತ ಸ್ಥಳವನ್ನು ಆಯ್ಕೆಮಾಡಿದನು. ಬೇವಿನ ಮರದ ತಾಳಿನಲ್ಲಿದ್ದ ದೇವತೆಯನ್ನು ಶಾಸ್ತ್ರೋಕ್ತವಾಗಿ ಸ್ಥಳಾಂತರಿಸಿ ದೇವಾಲಯವನ್ನು ನಿರ್ಮಿಸಿ, ಸುತ್ತಮುತ್ತಲ ವಿಶಾಲ ಪ್ರದೇಶವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿ ಪೂಜೆ ಹಬ್ಬ ಜಾತ್ರೆ ನಡೆಯಲು ಕಾರಣರಾದರು. ಅದೇ ಅಣ್ಣಮ್ಮ ದೇವತೆ. ಅಂದಿನಿಂದ ಅಣ್ಣಮ್ಮದೇವಿಯ ಪೂಜೆ ನಡೆಯುತ್ತಿದೆ. ಅಣ್ಣಮ್ಮ ಈಗಲೂ ಬೆಂಗಳೂರು ನಗರ ದೇವತೆಯಾಗಿದ್ದಾಳೆ. ಮೂಲ ಜನಾಂಗದವರೇ ಈಗಲೂ ಪೂಜಾರಿಗಳಾಗಿದ್ದಾರೆ. ಅಣ್ಣಮ್ಮನಿಗೆ ಶಿಷ್ಟರು ಅಂಜುಜಮ್ಮ, ಅಂಬುಜಮ್ಮದೇವಿ ಎಂದು ನಾಮಕರಣ ಮಾಡಿದರು. ಆದರೆ ಆ ಹೆಸರು ನಿಲ್ಲಲಿಲ್ಲ. ಕೆಲವರು ʼಅಣ್ಣಮ್ಮದೇವಿ’ಬೆಂಗಳೂರು ಮಾರಮ್ಮ ಎನ್ನುತ್ತಾರೆ ಎಂದು ಅಣ್ಣಮ್ಮದೇವಿ ಬೆಂಗಳೂರಿನ ದೇವಿಯಾದ ಕಥೆಯನ್ನು ದಾಖಲಿಸಿದ್ದಾರೆ ಇತಿಹಾಸ ತಜ್ಞ ಪ್ರೊ. ಡಿ.ಲಿಂಗಯ್ಯ.

ಕೆಂಪೇಗೌಡರ ನೆಚ್ಚಿನ ಕ್ಷೇತ್ರ ಶಿವಗಂಗೆ

ಕೆಂಪೇಗೌಡರು ಮಾಡಿರುವ ದೇಗುಲಗಳ ಅಭಿವೃದ್ಧಿಯಲ್ಲಿ ಗಮನ ಸೆಳೆಯುವಂತಹದ್ದು ದಕ್ಷಿಣ ಕಾಶಿ ಎಂದು ಹೆಸರಾಗಿರುವ ಶಿವಗಂಗೆಯ ಅಭಿವೃದ್ಧಿ. ಕೆಂಪೇಗೌಡರು ಶಿವಗಂಗೆ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದರು. ಕಡಿದಾದ, ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಿದರು. ದೇವಾಲಯದ ಹಜಾರಗಳನ್ನು ನಿರ್ಮಿಸಿದರು. ಈ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ವ್ಯವಸ್ಥೆ ಮಾಡಿದರು. ಇಲ್ಲಿನ ಸ್ವರ್ಣಾಂಬೆ ದೇವಾಲಯಗಳನ್ನು ವಿಸ್ತರಿಸಿ ಜೀರ್ಣೋದ್ಧಾರ ಮಾಡಿದರು. ಗರ್ಭಗೃಹ, ಯಾಗಶಾಲೆ, ಕಲ್ಯಾಣ ಮಂಟಪ, ಪಡಸಾಲೆಗಳನ್ನು ಕಲಾತ್ಮಕಗೊಳಿಸಿದರು.

ಇದು ಕೆಂಪೇಗೌಡರ ನೆಚ್ಚಿನ ಧಾರ್ಮಿಕ ಕ್ಷೇತ್ರವಾಗಿತ್ತು, ಇಲ್ಲಿ ಅವರ ಹೆಸರಿನ ಹಜಾರವೊಂದಿದೆ.ಈ ಪವಿತ್ರ ಕ್ಷೇತ್ರವನ್ನು ಧಾರ್ಮಿಕ ಕೇಂದ್ರವನ್ನಾಗಿ ಮಾಡುವಲ್ಲಿ ಕೆಂಪೇಗೌಡ ನಾಡಪ್ರಭುವಾಗಿ ರಾಜಾದಾಯದಿಂದ ಹಣ ಖರ್ಚು ಮಾಡಿದುದಲ್ಲದೆ, ಸ್ಥಳೀಯರೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆಡಳಿತ ಜಾಣ್ಮೆಯನ್ನೂ ತೋರಿದ್ದರು.

ಬೆಂಗಳೂರು ಕೆಂಪೇಗೌಡನ ಕಾಲದಲ್ಲಿ ಪ್ರಾರಂಭವಾದ ಅನೇಕ ಧಾರ್ಮಿಕ ಉತ್ಸವಗಳು ಈಗಲೂ ನಡೆಯುತ್ತಿವೆ. ಅವುಗಳಲ್ಲಿ ಧರ್ಮರಾಯಸ್ವಾಮಿ (ದ್ರೌಪದಿ) ಕರಗ ʼಬೆಂಗಳೂರು ಕರಗ’ವೆಂದು ಪ್ರಸಿದ್ಧಿ ಪಡೆದಿದೆ. ಇಂದು ಬೆಂಗಳೂರು ಧಾರ್ಮಿಕವಾಗಿಯೂ ಹೆಸರು ಮಾಡಿರುವುದಕ್ಕೆ ಈ ನಗರವನ್ನು ನಿರ್ಮಿಸಿದ ಕೆಂಪೇಗೌಡರೇ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ.

ಇದನ್ನೂ ಓದಿ| 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕೆಲಸ ಎಷ್ಟಾಗಿದೆ ನೋಡಿ!

Exit mobile version