ಬೆಂಗಳೂರು: ಕೇರಳ ಸರ್ಕಾರ ಅಲ್ಲಿನ ಹಿಂದು ದೇಗುಲಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಭಾವ ಹೊಂದಿದೆ ಎಂಬುದಕ್ಕೆ ನೂರಾರು ಪುರಾವೆಗಳಿವೆ. ಅವುಗಳು ಪುನರಾವರ್ತನೆಗಳಾಗುತ್ತಿವೆ. ಇದೀಗ ಅಲ್ಲಿನ ಪ್ರಸಿದ್ಧ ಶ್ರದ್ಧಾಕೇಂದ್ರವಾಗಿರುವ ಶಬರಿಮಲೆ (sabarimala temple) ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವ್ಯವಸ್ಥಾಪನಾ ದೋಷ ಉಂಟಾಗಿದ್ದು ಭಕ್ತಿ- ಭಾವದಿಂದ ಅಲ್ಲಿಗೆ ತೆರಳಿರುವ ಲಕ್ಷಾಂತರ ಭಕ್ತರು ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರದ ಪಾಲಿಗೆ ದೊಡ್ಡ ಪ್ರಮಾಣದಲ್ಲಿ ಆದಾಯ ತರುವ ಈ ದೇಗುಲದ ಬಗ್ಗೆ ಸರ್ಕಾರ ಅಲಕ್ಷ್ಯ ಮಾಡಿರುವ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಬಲು ನಿಷ್ಠೆಯಿಂದ ವ್ರತ ಮಾಡಿಕೊಂಡು ಅಲ್ಲಿಗೆ ಹೋದರೆ ಕುಡಿಯಲು ನೀರಿಲ್ಲದೆ ಸಂಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ದೇಶದ ಬೇರೆ ಬೇರೆ ಕಡೆಯಿಂದ ಅಲ್ಲಿಗೆ ಹೋಗಿರುವ ಭಕ್ತರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ತಿರುವಾಂಕೂರು ದೇವಸ್ವ ಮಂಡಳಿ ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲವನ್ನು ನಿರ್ವಹಣೆ ಮಾಡುತ್ತದೆ. ಅಲ್ಲಿನ ಸರ್ಕಾರದ ಮುಜರಾಯಿ ಇಲಾಖೆಯಡಿ ಬರುವ ಮಂಡಳಿ ಅದು. ವರದಿಗಳ ಪ್ರಕಾರ ಕಳೆದ ವರ್ಷ ಕೇವಲ ಎರಡು ತಿಂಗಳ ಅವಧಿಯ ಭಕ್ತರ ದರ್ಶನದ ವೇಳೆ 310 ಕೋಟಿ ರೂಪಾಯಿ ಆದಾಯ ಸಂಗ್ರಹಗೊಂಡಿದೆ. ಅಂದರೆ ಈ ದೇವಾಲಕ್ಕೆ ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಖರ್ಚುಗಳನ್ನು ಕಳೆದ ಬಳಿಕವೂ ಅಲ್ಲಿನ ಸರ್ಕಾರದ ದೊಡ್ಡ ಮೊತ್ತ ಭಕ್ತರ ಕಾಣಿಕೆ ರೂಪದಲ್ಲಿ ಹಣ ಸಲ್ಲಿಕೆಯಾಗುವುದು ಖಾತರಿ. ಇಷ್ಟೊಂದು ಹಣ ಬರುವ ಹೊರತಾಗಿಯೂ ಅಲ್ಲಿನ ಭಕ್ತರಿಗೆ ಬೇಕಾದ ಸೌಲಭ್ಯಗಳನ್ನು ನೀಡದೇ ಇರುವುದು, ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡದೇ ಇರುವುದು ಎಲ್ಲರಿಗೂ ಬೇಸರ ಮೂಡುವಂತೆ ಮಾಡಿದೆ.
ಕರ್ನಾಟಕ ಬೆಂಗಳೂರಿನಿಂದ ಹೋಗಿದ್ದ ಭಕ್ತರೊಬ್ಬರು ಶಬರಿಮಲೆಯಲ್ಲಿ ತಾವೆದುರಿಸಿದ ಸಮಸ್ಯೆಯನ್ನು ಬಿಡಿಬಿಡಿಯಾಗಿ ಸೋಶಿಯಲ್ ಮೀಡಿಯಾದ ಮೂಲಕ ಹೇಳಿಕೊಂಡಿದ್ದಾರೆ. 18 ಗಂಟೆಗಳ ಕಾಲ ಕಾದರೂ ಅಯ್ಯಪ್ಪನ ದರುಶನ ಲಭಿಸಲಿಲ್ಲ. 2009ರಿಂದ ಶಬರಿಮಲೆಗೆ ಪ್ರತಿ ವರ್ಷ ಹೋಗುತ್ತಿದ್ದು, ಇಂತಹ ಕೆಟ್ಟ ಪರಿಸ್ಥಿತಿಯನ್ನೂ ಇಲ್ಲಿಯವರೆಗೂ ಎಂದಿಗೂ ನೋಡಿಯೇ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಭಕ್ತರಿಗೆ ಸರಿಯಾಗಿ ಸೌಕರ್ಯಗಳನ್ನು ನೀಡದ ಕಾರಣ ನನ್ನ ಕಣ್ಣೆದುರೇ ಲೆಕ್ಕವಿರದಷ್ಟು ಅಯ್ಯಪ್ಪ ಭಕ್ತರು ತಲೆಸುತ್ತಿ ಬಿದ್ದುಹೋಗಿದ್ದಾರೆ. ಬಾಯಿಬಿಟ್ಟು ಅರಚಾಡಿದರೂ ಕುಡಿಯಲು ನೀರು ಕೊಡದಷ್ಟು ದರಿದ್ರವಿತ್ತು. ಬಾಲಕಿಯೊಬ್ಬಳು ಉಸಿರಾಟದ ಸಮಸ್ಯೆ ಎದುರಾಗಿ ಅಲ್ಲಿಯೇ ಮೃತಪಟ್ಟಿದ್ದಾಳೆ. ಹಿರಿಯ ವಯಸ್ಸಿನ ಮಹಿಳೆಯರು ಅಲ್ಲಿ ಸಮಸ್ಯೆ ಎದುರಿಸಿದ್ದಾರೆ. ಹಿರಿಯ ಭಕ್ತರು ಇದ್ದರೂ ಊಟ, ತಿಂಡಿ, ನೀರು, ಶೌಚಾಲಯ ಯಾವುದಕ್ಕೂ ಅವಕಾಶ ಕಲ್ಪಿಸಿರಲಿಲ್ಲ ಅಲ್ಲಿನ ದೇವಸ್ವ ಬೋರ್ಡ್ ಎಂದು ಅವರು ಹೇಳಿಕೊಂಡಿದ್ದಾರೆ.
ಶಬರಿ ಮಲೆ ದೇಗುಲ ತಲುಪುವುದಕ್ಕೆ ರಸ್ತೆಯಲ್ಲಿಯೇ ಐದು ಗಂಟೆ ಕಾಯುವಂತಾಗಿತ್ತು. ನಿಲಕ್ಕಲ್ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇರಲಿಲ್ಲ. ಸಿಬ್ಬಂದಿಯೂ ಇರಲಿಲ್ಲ. ಪಾರ್ಕಿಂಗ್ ಜಾಗದಲ್ಲಿ ಪಂಬಾಗೆ ಹೋಗಲು ಬಸ್ ವ್ಯವಸ್ಥೆಯೂ ಮಾಡಿರಲಿಲ್ಲ. ಯೋಗ್ಯ ಮತ್ತು ಸುಸ್ಥಿತಿಯ ಪ್ರಯಾಣ ವ್ಯವಸ್ಥೆ ಮಾಡಿರಲಿಲ್ಲ. ಪಂಬಾದಿಂದ ಶಬರಿಮಲೆಗೆ ಹೋಗಲು ಕನಿಷ್ಠ 16 ಗಂಟೆಗಳ ಕಾಲ ಕಾಯುವಂತೆ ಮಾಡಿದ್ದಾರೆ ಪೊಲೀಸರು. ಕ್ಯೂ ನಿಂತ ಬಳಿಕವೂ ದೇವರ ದರ್ಶನ ಸಿಗಲಿಲ್ಲ. ಕ್ಯೂ ನಡುವೆ ಶೌಚಾಲಯಕ್ಕೆ ವ್ಯವಸ್ಥೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರ ದರ್ಪ
ಕೇರಳ ಪೊಲೀಸರು ಶಬರಿ ಮಲೆಗೆ ಹೋಗಿದ್ದ ಭಕ್ತರ ಮೇಲೆ ದರ್ಪ ತೋರಿದ್ದರೆ. ಕೈಮುಗಿದು ಬೇಡಿಕೊಂಡರು ಸೌಕರ್ಯ ಕೊಡಲಿಲ್ಲ. ನಾವೇನು ನಿಮ್ಮನ್ನು ಇಲ್ಲಿಗೆ ಕರೆದಿಲ್ಲ. ಬಂದಿದ್ದೀರಿ ಅನುಭವಿಸಿ ಎಂದು ದುರಂಹಕಾರದ ಮಾತುಗಳನ್ನಾಡಿದ್ದಾರೆ ಎಂಬುದಾಗಿ ಭಕ್ತರು ಬರೆದುಕೊಂಡಿದ್ದಾರೆ.
ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
ಶಬರಿಮಲೆಯಲ್ಲಿ ಶುಚಿತ್ವ ಇಲ್ಲ ಹಾಗೂ ನಾನಾ ಸಮಸ್ಯೆಗಳು ಎದುರಾಗಿವೆ ಎಂದು ಕೇರಳ ಹೈಕೋರ್ಟ್ಗೆ ಇಬ್ಬರು ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಸಿದ ಕೋರ್ಟ್ ಶುಚಿತ್ವ ಕಾಪಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಮಂಗಳವಾರ ಕೋರ್ಟ್ ಮುಂದೆ ಅಲ್ಲಿನ ಎರ್ನಕುಳಂ ಎಡಿಜಿಪಿ ಹಾಜರಾಗಿದ್ದಾರೆ.
ಇದನ್ನೂ ಓದಿ : Article 370: ಕಾಶ್ಮೀರ ಕುರಿತ ಸುಪ್ರೀಂ ತೀರ್ಪಿಗೆ ಪಾಕಿಸ್ತಾನದ ಅಧಿಕಪ್ರಸಂಗ ಹೇಳಿಕೆ!
ವಕೀಲರು ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದರು. ಈ ವೇಳೆ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಬೇಸರಗೊಂಡು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ ದೇವಾಲಯದಲ್ಲಿ ಒದಗಿಸಲಾಗಿಲ್ಲ. ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ. ಅಲ್ಲದೇ ಇಲ್ಲಿನ ದೇವರ ದರ್ಶನಕ್ಕೆ ಹೋಗುವ ಸರತಿ ನಾಲು ಪದ್ಧತಿಯೇ ಸರಿಯಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಸರತಿ ಸಾಲಿನಲ್ಲಿ ಉಂಟಾಗುವ ಸಮಸ್ಯೆಯನ್ನು ಅದಷ್ಟು ಬೇಗ ನಿವಾರಿಸುವಂತೆ ಸೂಚಿಸಿದೆ.
ಕಳೆದ ವರ್ಷ ಶಬರಿಮಲೆಯಲ್ಲಿ ಈ ರೀತಿ ನೂಕುನುಗ್ಗಲಿನ ಪರಿಸ್ಥಿತಿ ಉಂಟಾಗಿರಲಿಲ್ಲ. ಆದರೆ ಈ ಬಾರಿ ಅನಧಿಕೃತ ಪ್ರವೇಶ ಸೇರಿದಂತೆ ನಾನಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಕೋರ್ಟ್ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ದೇವಸ್ವಂ ಬೋರ್ಡ್ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ. ಆದಾಗ್ಯೂ ಎಡಿಜಿಪಿಯನ್ನು ಕರೆಸಿ ಸೂಕ್ತ ನಿರ್ದೇಶನಗಳನ್ನು ನೀಡಲು ಕೋರ್ಟ್ ತೀರ್ಮಾನಿಸಿದೆ.