ಉಡುಪಿ: ಕಷ್ಟದಲ್ಲಿರುವ ಜನರನ್ನು, ದಿಕ್ಕುಗಾಣದೆ ನಿಂತವರನ್ನು ಕೊರಗಜ್ಜ (Koragajjana Pawada) ರಕ್ಷಿಸುತ್ತಾನೆ ಎಂಬ ನಂಬಿಕೆ ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಹಿಂದಿನಿಂದಲೂ ಇದ್ದ ಪ್ರತೀತಿ ಈಗ ಹೊಸ ಹೊಸ ವಿದ್ಯಮಾನಗಳ ಮೂಲಕ ಇನ್ನಷ್ಟು ಗಟ್ಟಿಯಾಗಿ ಬೇರೂರುತ್ತಿದೆ. ನಡು ರಾತ್ರಿ 3 ಗಂಟೆಗೆ ನಿದ್ದೆಗಣ್ಣಲ್ಲೇ ಮನೆಯಿಂದ ಹೊರಬಿದ್ದ ಮಗುವೊಂದು ರಸ್ತೆಗೆ ಬಂದಿದ್ದು, ಅದನ್ನು ಕೊರಗಜ್ಜನೇ (Koragajja Rescues child from Danger) ಅಪಾಯದಿಂದ ಪಾರು ಮಾಡಿದ್ದಾನೆ ಎಂದು ನಂಬಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ (Udupi News) ಕುಂದಾಪುರದ ಕೆದೂರಿನ ದಬ್ಬೆಕಟ್ಟೆ (Keduru near Kundapura) ಎಂಬಲ್ಲಿ ಇರುವ ಕಾರಣಿಕದ ಕೊರಗಜ್ಜ ಕ್ಷೇತ್ರದ ಸಮೀಪ ಈ ಪವಾಡ ನಡೆದಿದೆ. ಗುಡಿಯಿಂದ ಸ್ವಲ್ಪ ದೂರಲ್ಲಿರುವ ಮಗುವನ್ನೇ ಕೊರಗಜ್ಜ ರಕ್ಷಿಸಿದ್ದು.
ಇಲ್ಲಿನ ಮನೆಯೊಂದರ ಐದು ವರ್ಷದ ಪುಟ್ಟ ಹೆಣ್ಣುಮಗು ರಾತ್ರಿ ಮೂರು ಗಂಟೆಯ ಹೊತ್ತಿಗೆ ಮನೆಯಿಂದ ಹೊರಬಿದ್ದಿತ್ತು. ರಾತ್ರಿ ನಿದ್ದೆಗಣ್ಣಿನಲ್ಲಿ ನಡೆಯುತ್ತಿದ್ದ ಈ ಮಗು ಮನೆಯಿಂದ ಅದು ಹೇಗೆ ಹೊರಬಿತ್ತೋ ಗೊತ್ತಿಲ್ಲ. ಅಪ್ಪ ಅಮ್ಮನಿಗೆ ಗೊತ್ತಾಗದಂತೆ, ಯಾರಿಗೂ ಸಣ್ಣ ಸದ್ದೂ ಆಗದಂತೆ, ಹಾಸಿಗೆಯಲ್ಲಿ ಮಲಗಿದ್ದ ಆ ಮಗು ಎದ್ದು ನಡೆಯುತ್ತಾ ಹೊರಟಿತ್ತು.
ಮನೆಯ ಅಂಗಳ ದಾಟಿದ ಮಗು ಅಲ್ಲೇ ಒಳರಸ್ತೆಯಲ್ಲಿ ನಡೆದುಕೊಂಡು ಹೋಗಿ ವಾಹನಗಳು ಸಂಚರಿಸುವ ರಸ್ತೆಯ ಬದಿಗೆ ಬಂದಿದೆ. ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಕೊರಗಜ್ಜನ ಗುಡಿ ಇದೆ. ಆ ಗುಡಿಗೆ ಹೋಗುವ ದಾರಿ ತೋರಿಸುವ ನಾಮ ಫಲಕದ ಪಕ್ಕದಲ್ಲಿ ಬಂದು ಈ ಮಗು ನಿಂತಿತ್ತು. ಅಚ್ಚರಿ ಎಂದರೆ ಮನೆಯಿಂದ ಆ ಜಾಗಕ್ಕೆ ಮೂರು ಕಿ.ಮೀ ಅಂತರವಿದೆ.
ಆ ದಾರಿಯಲ್ಲಿ ಅಷ್ಟು ಹೊತ್ತಿಗೆ ವಾಹನಗಳ ಸಂಚಾರ ಕಡಿಮೆ. ವಾಹನ ಸಂಚಾರವಿದ್ದರೂ ಎಲ್ಲರೂ ವೇಗವಾಗಿಯೇ ಸಾಗುತ್ತಾರೆ. ಈ ಹೊತ್ತಿನಲ್ಲಿ ಕೊರಗಜ್ಜನ ನಾಮಫಲಕದ ಪಕ್ಕದಲ್ಲಿ ಒಂದು ಮಗು ನಿಂತಿದೆಯಲ್ಲಾ ಎಂದು ಆ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವಿಶ್ವ ಎಂಬವರಿಗೆ ಕಂಡಿತು.
ವಿಶ್ವ ಅವರು ಮೂರು ಗಂಟೆಯ ಹೊತ್ತಿಗೆ ತಮ್ಮ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಅವರಿಗೆ ವೇಗವಾಗಿ ಸಾಗುವಾಗಲೂ ಮಾರ್ಗದ ಬದಿಯಲ್ಲಿ ನಾಮಫಲಕದ ಪಕ್ಕದಲ್ಲಿ ಒಂದು ಮಗು ನಿಂತಿರುವಂತೆ ಕಂಡಿತು. ಅವರು ಕಾರಿನ ವೇಗವನ್ನು ಸ್ವಲ್ಪ ತಗ್ಗಿಸಿ ಸ್ವಲ್ಪ ಮುಂದೆ ಹೋಗಿ ನಿಂತರು.
ಕಂಡಿದ್ದೇನು ಎಂದು ಮತ್ತೆ ಮನನ ಮಾಡಿಕೊಂಡರು. ಒಂದು ಪುಟ್ಟ ಮಗು ಕಂಡಿತು. ಮಗುವಿಗೆ ಬಟ್ಟೆ ಕೂಡಾ ಹಾಕಿರಲಿಲ್ಲ. ಬದಲಿಗೆ ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ ಅಳುತ್ತಿತ್ತು. ಹಾಗಂತ ಒಮ್ಮೆಗೇ ಕಾರಿನಿಂದ ಇಳಿದು ಬಂದು ನೋಡುವಷ್ಟು ಧೈರ್ಯ ವಿಶ್ವ ಅವರಿಗೂ ಬರಲಿಲ್ಲ. ಯಾಕೆಂದರೆ ಈ ಭಾಗದಲ್ಲಿ ರಾತ್ರಿಯ ಹೊತ್ತು ಯಾವ್ಯಾವುದೋ ದುಷ್ಟ ಶಕ್ತಿಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡು ಹೆದರಿಸುತ್ತವೆ ಎಂಬ ನಂಬಿಕೆ ಇದೆ. ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ದಾರಿಯ ಬಳಿಯಲ್ಲಿ ಮಗುವನ್ನು ಬಿಟ್ಟು ಅದನ್ನು ವಿಚಾರಿಸಲು ಹೋದಾಗ ಹೊಡೆದು ಕೊಲ್ಲುವ, ದರೋಡೆ ಮಾಡುವ, ಕಾರು ಅಪಹರಿಸುವ ಘಟನೆಗಳೂ ನಡೆಯಬಹುದು ಎಂಬ ಆತಂಕ ಸಹಜವಾಗಿಯೇ ಇರುತ್ತದೆ. ಸಾಲದ್ದಕ್ಕೆ ದಬ್ಬೆಕಟ್ಟೆ ಎನ್ನುವುದು ಮನೆಗಳಿದ್ದರೂ ಒಂದು ರೀತಿಯ ಕಾಡು ಪ್ರದೇಶ.
ವಿಶ್ವ ಅವರು ಈ ಎಲ್ಲ ವಿಚಾರಗಳನ್ನು ಗಮನಿಸಿ ಎರಡು ಮನಸ್ಸು ಮಾಡಿದರಾದರೂ ತಕ್ಷಣವೇ ಅಲ್ಲೇ ಇರುವ ಗುಡಿಯ ಕೊರಗಜ್ಜನನ್ನು ನೆನಪಿಸಿಕೊಂಡರು. ನಂಬಿದವರಿಗೆ ಅಭಯ ನೀಡುವ, ಕಷ್ಟದಲ್ಲಿರುವವರ ರಕ್ಷಣೆ ಮಾಡುವ ಕೊರಗಜ್ಜನ ಮೇಲೆ ನಂಬಿಕೆ ಇಟ್ಟು ಮಗುವಿನ ಬಳಿಗೆ ಹೋಗೇ ಬಿಡುವುದು ಎಂದು ತೀರ್ಮಾನಿಸಿದರು.
ಹಾಗೆ ಕಾರಿನಿಂದ ಇಳಿದು ನಾಮಫಲಕದ ಬಳಿಗೆ ಹೋದರು. ಆಗ ಮಗು ಇನ್ನಷ್ಟು ಜೋರಾಗಿ ಅಳಲು ಶುರು ಮಾಡಿತು. ವಿಶ್ವ ಅವರು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿ ಕೇಳಿದಾಗ ತನಗೇ ಗೊತ್ತಿಲ್ಲದಂತೆ ನಡೆದುಕೊಂಡು ಬಂದಿದ್ದಾಗಿ ಹೇಳಿತು.
ಆಗ ವಿಶ್ವ ಅವರು ಅಲ್ಲೇ ಇದ್ದ ಮನೆಯ ಕಡೆಗೆ ಹೋಗಿ ಅಲ್ಲಿದ್ದವರನ್ನು ಎಬ್ಬಿಸಿ ವಿಷಯ ತಿಳಿಸಿದರು. ಆಗ ಅವರು ಬಂದು ಮಗು ಯಾರದ್ದು ಎಂದು ಗುರುತಿಸಿದರು. ಆ ಜಾಗದಿಂದ ಮಗುವಿನ ಮನೆಗೆ ಮೂರು ಕಿ.ಮೀ. ದೂರವಿತ್ತು. ಕೊನೆಗೆ ಮಗುವಿನ ಮನೆಗೆ ಹೋಗಿ ವಿಷಯ ತಿಳಿಸಲಾಯಿತು. ಅವರು ಬಂದು ಕಣ್ಣೀರು ಹಾಕುತ್ತಲೇ ದೇವರಂತೆ ಬಂದು ಕಾಪಾಡಿದಿರಿ ಮಗುವನ್ನು ಎಂದು ಹೇಳಿದರು. ಆಗ ವಿಶ್ವ ಅವರು ನಾನು ಕೂಡಾ ನಿಲ್ಲಿಸುತ್ತಿರಲಿಲ್ಲ. ನಂಗೂ ಭಯವಾಗಿತ್ತು. ಆದರೆ, ಕೊರಗಜ್ಜನ ಮೇಲೆ ನಂಬಿಕೆ ಇಟ್ಟು ಕಾರಿನಿಂದ ಇಳಿದೆ. ಕೊರಗಜ್ಜನೇ ಈ ಮಗುವಿಗೆ ದಾರಿ ತೋರಿಸಿದ್ದು, ನಾನಲ್ಲ ಎಂದು ಹೇಳಿದರು.
ಇದನ್ನೂ ಓದಿ: Koragajja Miracle: ಕರಾವಳಿಯಲ್ಲಿ ಕೊರಗಜ್ಜನ ಪವಾಡ; ಕಳೆದುಹೋದ ಹಣ ಕೆಲವೇ ಹೊತ್ತಿನಲ್ಲಿ ಸಿಕ್ಕಿತು