Site icon Vistara News

Krishna Janmashtami Special | ಶ್ರೀ ಕೃಷ್ಣ ಪರಮಾತ್ಮನೇ ಕರೆದುಕೊಟ್ಟ ಪವಿತ್ರ ಕ್ಷೀರ – ಗೀತಾಮೃತ

Krishna Janmashtami̇

ದೈವಜ್ಞ ಡಾ. ಹರೀಶ್‌ ಕಾಶ್ಯಪ
ಲೇಖಕರು, ಜ್ಯೋತಿಷಿ, ವಾಸ್ತುತಜ್ಞರು

ಡಾ. ಹರೀಶ್‌ ಕಾಶ್ಯಪ

ಭಾರತಂ ಸರ್ವ ಶಾಸ್ತ್ರೇಷು ಭಾರತೇ ಗೀತಿಕಾ ವರಾ ।
ವಿಷ್ಣೋಸಹಸ್ರನಾಮಾಪಿ ಜ್ಞೇಯಂ ಪಾಠ್ಯಂ ಚ ತದ್ದ್ವಯಮ್ ।।

ಸರ್ವ ಶಾಸ್ತ್ರಗಲ್ಲಿಯೂ ಶ್ರೇಷ್ಠವಾದುದು ಮಹಾಭಾರತ. ಆ ಮಹಾಭಾರತದಲ್ಲಿಯೂ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರ ನಾಮ ಶ್ರೇಷ್ಠವಾದವುಗಳು. ಆದ್ದರಿಂದ ಅವೆರಡನ್ನೂ ತಿಳಿದುಕೊಳ್ಳಬೇಕು ಮತ್ತು ಪಠಿಸಬೇಕು. ಪುರಾಣಗಳಲ್ಲಿ “ಶ್ರೀ ಮಹಾಭಾರತ” ವು ಬಲು ರಮ್ಯವಾಗಿದೆ. ಭಾರತವೆಂದರೆ “ಪಂಚಮ ವೇದ” ವೆನಿಸಿ ಸರ್ವ ವೇದ ಪುರಾಣಾದಿ ಸಾರವೆಂದು ಪ್ರಖ್ಯಾತವಾಗಿದೆ.

ಶ್ರೀಮನ್ಮಹಾಭಾರತದಲ್ಲಿ “ಗೀತೆ ಮತ್ತು ಶ್ರೀ ವಿಷ್ಣು ಸಹಸ್ರನಾಮ” ಎಂಬ ಎರಡು ಘಟ್ಟಗಳಿವೆ. ಸಾಕ್ಷಾತ್ ಶ್ರೀ ಪದ್ಮನಾಭನ ಮುಖ ಪದ್ಮದಿಂದ ಹೊರ ಹೊಮ್ಮಿ ಬಂದ “ಗೀತೆ” ಗೆ ಮಿಗಲಾದ ಗ್ರಂಥವಿಲ್ಲ!

ತಾಪತ್ರಯ ದುಃಖಿತನಾಗಿ, ಸಂಸಾರಾಂಧಕಾರದಲ್ಲಿ ತೊಳಲುತ್ತಾ, ಸಾಧು ಸಜ್ಜನರು ಕಷ್ಟ ಪಡುತ್ತಿರುವುದನ್ನು ಕಂಡು ಕರುಣಾವರಣಾಲಯರಾದ ಶ್ರೀ ವೇದವ್ಯಾಸದೇವರು ಸಜ್ಜನರಿಗೆ ಸದ್ ಜ್ಞಾನವನ್ನಿತ್ತು, ತತ್ತದ್ಯೋಗ ಸ್ವರೂಪ ಸುಖವನ್ನು ಹೊಂದಿಸಲು ಸಾಧಕವಾದ ಶ್ರೀ ಭಗವದ್ಗೀತೆಯನ್ನು ಶ್ರೀ ಕೃಷ್ಣ ಪರಮಾತ್ಮನು ಪಾರ್ಥನಿಗೆ ಹೇಳಿದ್ದನ್ನು ಶ್ರೀಮನ್ಮಹಾಭಾರತದಲ್ಲಿ ಶ್ಲೋಕ ರೂಪದಲ್ಲಿ ಗ್ರಥನ ಮಾಡಿರುವರು.

ಅಂತೆಯೇ ಅವರಿಂದ ರಚಿತವಾಗಿರು ಭಗವದ್ಗೀತೆಯು ಪರಮಾಪ್ತವಾಕ್ಯವಾಗಿ ಪರಮ ಪ್ರಮಾಣವಾಗಿದೆ. ಅಂಥಹಾ ಶ್ರೀ ಭಗವದ್ಗೀತೆಯು ಸರ್ವೋಪನಿಷತ್ಸಾರವೂ. ಬ್ರಹ್ಮಸೂತ್ರ ಪದನಿಶ್ಚಿತವೂ; ಯಥಾರ್ಥಜ್ಞಾನೋಪದೇಶಕವೂ ಆಗಿದೆ.

ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ ।
ಪಾರ್ಥೋ ವತ್ಸ: ಸುಧೀರ್ಭೋಕ್ತಾ ದುಗ್ಧ೦ ಗೀತಾಮೃತಂ ಮಹತ್ ।।

ಉಪನಿಷತ್ತುಗಳೆಂಬ ಹಸುಗಳಿಂದ ಅರ್ಜುನನೆಂಬ ಕರುವಿನ ಮೂಲಕ ಗೋಪಾಲಕೃಷ್ಣನಾದ ಶ್ರೀ ಕೃಷ್ಣ ಪರಮಾತ್ಮನೇ ಕರೆದುಕೊಟ್ಟ ಪವಿತ್ರ ಕ್ಷೀರ – ಗೀತಾಮೃತ. ಮಾನವನ ಬದುಕು ಹಸನಾಗಲು ಈ ಗೀತಾಮೃತ ಅತ್ಯವಶ್ಯ!

ಗೀತೆಯ ೧೮ ಅಧ್ಯಾಯಗಳ ಸಾರ ಸಂಗ್ರಹ ಇಲ್ಲಿದೆ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಾಮವೇತಾ ಯುಯುತ್ಸವಃ ।
ಮಾಮಕಾ: ಪಾಂಡವಾಶ್ಚೈವ ಕಿಮಕುರ್ವತ ಸಂಜಯಃ ।।

೧. ಯುದ್ಧಾರಂಭವಾಗಲಿದ್ದಾಗ ಅರ್ಜುನನು ಗುರು ಬಾಂಧವರನ್ನು ಕೊಲ್ಲಲಾರದೆ ಅಭಿಮಾನದಿಂದ ಧರ್ಮ ಯುದ್ಧವನ್ನು ಕೂಡ ಅಧರ್ಮವೆಂದು ತಿಳಿದು ವಿಷಾದದಿಂದ ಯುದ್ಧ ವಿಮುಖನಾದಂತಾಗುವನು.

೨. ಶ್ರೀ ಕೃಷ್ಣನು ಅರ್ಜುನನಿಗೆ ಜೀವೇಶರ ನಿತ್ಯತ್ವವನ್ನೂ; ಜೀವರ ಅಸ್ವಾತಂತ್ರ್ಯವನ್ನೂ, ಜ್ಞಾನದಿಂದ ಅಭಿಮನ ತ್ಯಾಗವನ್ನೂ; ನಿಷ್ಕಾಮ ಕಾರ್ಯವನ್ನೂ ಜ್ಞಾನಿ ಲಕ್ಷಣವನ್ನೂ ವರ್ಣಿಸುವನು.

೩. ಜ್ಞಾನ ಸಾಧನವಾದುದು ಸ್ವೋಚಿತಕರ್ಮಾನಿಷ್ಠಾನವೇ ಸ್ವಕರ್ಮವನ್ನು ಭಗವತ್ಪ್ರೀತಿಗಾಗಿ ತಪ್ಪದೆ ಮಾಡಬೇಕು.

೪. ಜ್ಞಾನ ಕರ್ಮೇಂದ್ರಿಯ ದೇವತೆಗಳಿಗೆ ಶ್ರೇಷ್ಠರಾದ ಬುದ್ಧ್ಯಾದಿ ದೇವತೆಗಳಿಗೆ ಮಿಗಿಲಾದವು ಶ್ರೀ ಹರಿ. ಶ್ರೀಶನೇ ಸರ್ವೋತ್ತಮನು. ಸರ್ವಜ್ಞನು. ಕರ್ಮಗಳು ವಿವಿಧವಾದರೂ ಅವುಗಳ ಫಲ ಜ್ಞಾನವೇ; ಅಂಥಹಾ ಜ್ಞಾನದಿಂದಲೇ ಶ್ರೀಮುಖ್ಯಪ್ರಾಣವಲ್ಲಭನ ಪ್ರಸಾದ.

೫. ಕಾಮಾದಿ ವರ್ಜನ ರೂಪ ಸನ್ಯಾಸ; ಶ್ರವಣ ಮನನ ಫಲ ಸಮರ್ಪಣ; ಧ್ಯಾನಾದಿ ಈಶ್ವರಾರಾಧನೆ ಕರ್ಮಾನುಷ್ಠಾನ ರೂಪ ತ್ಯಾಗ; ಎರಡೂ ಕರ್ಮಯೋಗದ ಎರಡೂ ಅವಶ್ಯಕ ಭಾಗಗಳು.

೬. ಇಂದ್ರಿಯ ನಿಗ್ರಹ, ಕಾಮಾದಿ ವರ್ಜನ ರೂಪ ಸಂನ್ಯಾಸದಿಂದ ಕೂಡಿದ ಶಾಸ್ತ್ರ ಶ್ರವಣಾದಿಗಳಿಂದ ಜ್ಞಾನ, ಅದರಿಂದ ಧ್ಯಾನ, ಅದರಿಂದ ಭವರೋಗ ನಿವಾರಕವಾದ ಭಗವದಪರೋಕ್ಷ ಮೋಕ್ಷಗಳು.

೭. ಅಪರೋಕ್ಷ ಜ್ಞಾನಕ್ಕೆ ಬಹಿರಂಗ ಸಾಧಕವಾದ ಕಾಮಾದಿ ವರ್ಜನ, ಅಂತರಂಗ ಸಾಧನವಾದ ಶ್ರವಣ ಮನನ ಧ್ಯಾನಾದಿಗಳೂ ಕೂಡ ಭಕ್ತಿಯಿಂದ ಕೂಡಿದ್ದರೇನೇ ಫಲಪ್ರದ. ಶ್ರೀ ಹರಿಯು ತಾನಾಗಿ ಪ್ರಸನ್ನನಾಗಬೇಕು. ಭಕ್ತಿ ರಹಿತರಿಗೆ ಅವನು ಸಿಗನು.

೮. ಅಂತ್ಯ ಕಾಲದಲ್ಲಿ ಶ್ರೀ ಹರಿಯನ್ನು ಸ್ಮರಿಸಿದವರಿಗೆ ಸದ್ಗತಿಯಾಗುವುದು. ಸ್ಮರಣೋಪಾಯದಿಂದ ಶ್ರೀ ಹರಿಯ ಪ್ರಾಪ್ತಿ. ಶ್ರೀ ಹರಿ ಲೋಕವನ್ನು ಜ್ಞಾನಿಗಳು ಸೇರುವ ಮಾರ್ಗಾದಿಗಳು.

೯. ಭಗವಂತನು ಸರ್ವತ್ರ ವ್ಯಾಪ್ತನು. ಸೃಷ್ಠಿ ಸಂಹಾರಗಳ ಸ್ವತಂತ್ರಕರ್ತನು. ಅವನ ಅಧೀನ ಈ ಜಗವು. ಅವನು ಸರ್ವ ನಿಯಾಮಕನು. ಅವನಿಗೆ ಕರ್ಮ ಲೇಪವಿಲ್ಲ. ಅಸುರರು ಅವನನ್ನು ಅನಿತಾ ತಿಳಿದು ಅಂಧ೦ತಮವನ್ನೂ; ಸುಜೀವರು ಯಥಾರ್ಥವಾಗಿ ತಿಳಿದು ಸ್ವಯೋಗ್ಯ ಮೋಕ್ಷಾನಂದವನ್ನೂ ಹೊಂದುವರು.

೧೦. ವಿಶಿಷ್ಠಾಧಿಕಾರಿಗಳು ಉಪಾಸಿಸಲು ಯೋಗ್ಯವಾದ ಭಗವಂತನ ವಿಭೂತಿ ರೂಪಗಳೂ; ವಿಭೂತಿ ರೂಪ ಸನ್ನಿಧಾನದಿಂದಲೇ ಆಯಾ ವಸ್ತುಗಳು ತಂತಮ್ಮ ಜಾತಿಯಲ್ಲಿ ಉತ್ತಮವೆನಿಸಿದೆ. ಅವುಗಳ ನಾಮ ರೂಪ ಕ್ರಿಯೆಗಳೆಲ್ಲವೂ ಶ್ರೀ ಭಗವಂತನ ಅಧೀನವಾದುವು.

೧೧. ವ್ಯಾಪ್ತೋಪಾಸಕರು ಭಜಿಸಲು ಯೋಗ್ಯವಾದ ಶ್ರೀಶನ ವಿಶ್ವರೂಪದ ವರ್ಣನೆ ಅವನ ಅನಂತ ಮಹಿಮೆ.

೧೨. ಶ್ರೀದೇವಿ ಪರಿಯಾದ ಶ್ರೀಮನ್ನಾರಾಯಣನ ಉಪಾಸನೆಯೇ ಅತಿ ಸುಲಭ. ಶೀಘ್ರ ಫಲಕಾರಿ ಮತ್ತು ಉಭಯೋಪಾಸನಾ ಫಲಪ್ರದವಾದುದರಿಂದ ಭಕ್ತನು ಕೇವಲ ಶ್ರೀದೇವಿಯನ್ನಲ್ಲದೆ ಶ್ರೀಶನನ್ನೂ ಭಜಿಸಿ ಸರ್ವ ಶ್ರೇಯೋಭಾಜನರಾಗುವರು.

೧೩. ಕ್ಷೇತ್ರ ವಿವರಣೆ – ಅದರ ವಿಕಾರಗಳು – ಕ್ಷೇತ್ರಜ್ಞನ ಮಹಿಮೆ ಅವನನ್ನು ತಿಳಿದ ಜ್ಞಾನಿಗಳ ಲಕ್ಷಣ ಮತ್ತು ಜ್ಞಾನಫಲ!!

೧೪. ತ್ರಿಗುಣ ಅಂದರೆ ಸತ್ವರಜಸ್ತಮೋ ಗುಣಗಳ ಸ್ವರೂಪ, ಅವುಗಳ ಕಾರ್ಯ, ಫಲಗಳ ವರ್ಣನೆ, ಗುಣಾತೀತನಾಗಲು ಉಪಾಯ.

೧೫. ಸಂಸಾರ ಸ್ವರೂಪ. ಜಗತ್ತೆಂಬ ಅಶ್ವತ್ಥದ ವರ್ಣನೆ. ಸಂಸಾರ ತರುಣೋಪಾಯ; ಶ್ರೀಹರಿ ಸರ್ವೋತ್ತಮತ್ವ; ಜೀವಜಡಾತ್ಯಂತ ಭಿನ್ನತ್ವ; ಶ್ರೀಪತಿತ್ವ; ಶ್ರೀ ಮುಖ್ಯಪ್ರಾಣ ನಿಯಾಮಕತ್ವ; ಸರ್ವ ಜಗಜ್ಜನ್ಮಾದಿ ಸ್ವತಂತ್ರಕಾರಣತ್ವ; ಮುಕ್ತಿದಾತೃತ್ವ; ಶಾಸ್ತ್ರಸಾರ ನಿರೂಪಣೆ!

೧೬. ದೈವೀ ಸಂಪತ್ತು – ಅಸುರೀ ಸಂಪತ್ತುಗಳ ವರ್ಣನೆ. ಅಸುರೀ ಸಂಪತ್ತಿನ ಅನರ್ಥ ಫಲ. ಶಾಸ್ತ್ರವೇ ಅನುಸರಣೀಯವಾಗಿದೆ. ಸ್ವಬುದ್ಧಿ ಕುತರ್ಕಗಳಲ್ಲ. ಶ್ರೀ ಹರಿಯೇ ಸಚ್ಚಾಸ್ತ್ರ ಪ್ರವರ್ತಕನು.

೧೭ ಸತ್ವಾದಿ ಗುಣಗಳ ವರ್ಣನೆ. ಶ್ರದ್ಧೆ ಆಹಾರ ಯಜ್ಞ; ತಪಃ ( ತ್ರಿವಿಧ ) ದಾನಗಳ ಸಾತ್ವಿಕತೆ, ರಾಜಸತೆ, ತಾಮಸತೆಗಳ ವರ್ಣನೆ. ತತ್ಫಲ ಕಥನ.

ಮಹಾ ಪುರುಷಾರ್ಥವಾದ ಮೋಕ್ಷಕ್ಕೆ ಜ್ಞಾನವೇ ಸಾಧನ ಜ್ಞಾನವು. ಶ್ರವಣಾದಿಗಳಿಂದಲೇ ಜನ್ಯವು. ಶ್ರವಣಾದಿಗಳು ಭಕ್ತಿಯುತವಾಗಿರಬೇಕು. ಭಕ್ತಿಗೆ ಇಂದ್ರಿಯ ನಿಗ್ರಹ, ಕರ್ಮ ಫಲ, ತ್ಯಾಗಗಳು ಸಾಧನವಾಗಿದೆ. ಮಹಿಮಾ ಜ್ಞಾನವಿಲ್ಲದೆ ಭಕ್ತಿಯೇ ಇಲ್ಲ. ಅಂಥಹಾ ಭಕ್ತಿಯಿಂದ ಪ್ರಸನ್ನನಾಗಿ ಶ್ರೀ ಮುಖ್ಯಪ್ರಾಣ ವಲ್ಲಭನು ಸ್ವರೂಪಾನಂದಾವಿರ್ಭಾವ ರೂಪವಾದ ಮುಕ್ತಿಯನ್ನು ದಯಪಾಲಿಸುವನು.

ಇದನ್ನೂ ಓದಿ | ಶ್ರೀಕೃಷ್ಣ ಜನ್ಮಾಷ್ಟಮಿ ದಿನ ವ್ರತದ ಆಚರಣೆ ಹೇಗೆ?

Exit mobile version