Site icon Vistara News

Krishna Janmashtami: ಜನ್ಮಾಷ್ಟಮಿಗೆ ಕೃಷ್ಣನ ತವರೂರ ಮಂದಿ ನೈವೇದ್ಯ ಮಾಡುವ ವಿಶೇಷ ತಿನಿಸುಗಳಿವು!

janmashtami foods

ಕೃಷ್ಣ ಜನ್ಮಾಷ್ಟಮಿ (Krishna Janmashtami) ಎಂದರೆ ಎಲ್ಲರಿಗೂ ಸಡಗರ. ನಮ್ಮೆಲ್ಲರಲ್ಲೊಬ್ಬನಾಗಿ ನಮ್ಮಂತಿರುವ ದೇವನಲ್ಲಿ ಕೃಷ್ಣ ಪ್ರಮುಖನು. ಹಾಗಾಗಿಯೋ ಏನೋ, ಕೃಷ್ಣನನ್ನು ದೇವರಾಗಿ ಪೂಜಿಸುವುದಕ್ಕಿಂತ ಹೆಚ್ಚು ಆತನಲ್ಲಿ, ಮನೆಮಗನನ್ನೋ, ಹತ್ತಿರದ ಬಂಧುವನ್ನೋ, ಗೆಳೆಯನನ್ನೋ, ಆತ್ಮಸಖನನ್ನೋ, ಗುರುವನ್ನೋ ಕಾಣುತ್ತೇವೆ. ಎಲ್ಲವೂ ಆಗಿ, ಮನುಷ್ಯನಾದವನ ಬದುಕಿನಲ್ಲಿ ನಡೆಯುವ ಅಷ್ಟೂ ದ್ವಂದ್ವಗಳಿಗೆ ಸಮರ್ಥವಾಗಿ ಉತ್ತರ ಹುಡುಕಲು ನಮಗೆ ಕೃಷ್ಣನ ಬದುಕೇ ಸಾಕು. ಮಕ್ಕಳ ಬಾಲಲೀಲೆಗಳನ್ನು ಕಾಣಲು ಕೂಡಾ ಕೃಷ್ಣನೇ ಸಾಕು. ಪ್ರೀತಿ ಪ್ರೇಮ ಪ್ರಣಯದ ಪಾವಿತ್ರ್ಯತೆಯನ್ನು ಕಾಣಲು ಕೂಡಾ ಕೃಷ್ಣ ಬದುಕೇ ಸಾಕು. ಇಂಥ ಕೃಷ್ಣನ ಜನುಮದಿನವೆಂದರೆ ಅದು ಸಣ್ಣದೇ? ಅದೊಂದು ದೊಡ್ಡ ಸಂಭ್ರಮ.

ಇಂಥ ಕೃಷ್ಣ ಜನ್ಮಾಷ್ಠಮಿ ಭಾರತದಾದ್ಯಂತವಷ್ಟೇ ಅಲ್ಲ, ವಿದೇಶಗಳಲ್ಲೂ ಭರ್ಜರಿಯಾಗಿ ಆಚರಿಸಲ್ಪಡುತ್ತದೆ. ಉತ್ತರ ಭಾರತದಲ್ಲಿ ಅದರಲ್ಲೂ, ಕೃಷ್ಣನ ತವರಾದ ಉತ್ತರ ಪ್ರದೇಶದಲ್ಲಿ ಬ್ರಜ ನಿವಾಸಿಗಳಿಗೆ ಕೃಷ್ಣನ ಹುಟ್ಟುಹಬ್ಬವೆಂದರೆ ಅದೊಂದು ಜೀವಿತಾವಧಿಯ ಸಂಭ್ರಮ. ಕೃಷ್ಣನೆಂದರೆ ಭರ್ಜರಿಯಾಗಿ ಖುಷಿಪಟ್ಟು ತಿನ್ನುವ ಪುಟಾಣಿ ಮನೆಮಗನೇ ಎಂಬ ಭಾವವಿರುವ ನಾವುಗಳೆಲ್ಲ, ಕೃಷ್ಣನ ಹುಟ್ಟುಹಬ್ಬಕ್ಕೆ ಬಗೆಬಗೆಯ ತಿನಿಸುಗಳನ್ನು ಮಾಡಿ ನೈವೇದ್ಯ ಮಾಡಿ ಸಂಭ್ರಮಿಸುತ್ತೇವೆ.

ಉತ್ತರ ಭಾರತೀಯರು ಈ ಕೃಷ್ಣ ಜನ್ಮಾಷ್ಠಮಿಗೆ ಮಾಡುವ ತಿನಿಸುಗಳೇ ವಿಭಿನ್ನ. ಕೃಷ್ಣ ಇಷ್ಟಪಡುವ ತಿನಿಸುಗಳೆಂದು ಅವರು ನೈವೇದ್ಯ ಮಾಡುವ ವಿಶೇಷ ತಿನಿಸುಗಳ ವಿವರ ಇಲ್ಲಿದೆ.

1. ಪಂಜಿರಿ: ಪಂಜಿರಿ ಎಂಬ ವಿಶೇಷ ತಿನಿಸು ಜನ್ಮಾಷ್ಠಮಿಗೆ ಮಾಡುವ ನೈವೇದ್ಯದಲ್ಲಿ ಪ್ರಮುಖವಾದುದು. ಹುರಿದು ಪುಡಿ ಮಾಡಿದ ಕೊತ್ತಂಬರಿ, ಸಕ್ಕರೆ, ತುಪ್ಪ, ಹಾಗೂ ಬೀಜಗಳ ಮಿಶ್ರಣವೇ ಇದು. ಕೆಲವೆಡೆ ಈ ಕೊತ್ತಂಬರಿಯ ಬದಲಾಗಿ ಗೋಧಿ ಹುಡಿಯನ್ನೂ ಬಳಸುತ್ತಾರೆ.

2. ಮಖಾನಾ ಪಾಗ್:‌ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತಾವರೆಯ ಬೀಜ ಮಖಾನಾದಿಂದ ಮಾಡುವ ಮಖಾನಾ ಪಾಗ್‌ ಎಂಬ ಕ್ರಂಚೀ ತಿನಿಸು ಅತ್ಯಂತ ರುಚಿಕರವಾದ ತಿಂಡಿ. ಇದನ್ನು ವಿಶೇಷವಾಗಿ ಕೃಷ್ಣನಿಗೆಂದೇ ಕೃಷ್ಣ ಜನ್ಮಾಷ್ಠಮಿಯ ದಿನ ಉತ್ತರ ಭಾರತದ ಹಲವೆಡೆ ಮನೆಗಳಲ್ಲಿ ಮಾಡಿ ಕೃಷ್ಣನಿಗೆ ನೈವೇದ್ಯ ಅರ್ಪಿಸುತ್ತಾರೆ. ತುಪ್ಪದಲ್ಲಿ ಮಖಾನಾವನ್ನು ಹುರಿದು ಸಕ್ಕರೆ ಪಾಕದಲ್ಲಿ ಹಾಕಿ ಅದಕ್ಕೆ ಏಲಕ್ಕಿ ಕಾಯಿತುರಿಗಳನ್ನು ಹಾಕಿ ಮಾಡು ಸಿಹಿಯಾದ ರುಚಿಯಾದ ತಿನಿಸಿದು.

3. ಮಖ್ಖನ್‌ ಮಿಶ್ರಿ: ಕೃಷ್ಣನೆಂದರೆ ಬೆಣ್ಣೆ, ಬೆಣ್ಣೆಯೆಂದರೆ ಕೃಷ್ಣ ನೆನಪಿಗೆ ಬರದಿದ್ದರೆ ಹೇಗೆ ಹೇಳಿ! ಹೌದು. ಬೆಣ್ಣೆಯಿಂದಲೇ ಮಾಡುವ ತಿನಿಸಿದು ಮಖ್ಖನ್‌ ಮಿಶ್ರಿ. ಜನ್ಮಾಷ್ಠಮಿಯ ದಿನ ಇದಕ್ಕೆ ಬಹುಮುಖ್ಯ ಸ್ಥಾನ. ಕೃಷ್ಣನ ಅತ್ಯಂತ ಇಷ್ಟದ ತಿನಿಸು ಎಂಬ ಹೆಗ್ಗಳಿಗೆ ಇದರದ್ದು. ಆಗಷ್ಟೇ ಕಡೆದ ಬೆಣ್ಣೆಗೆ ಕಲ್ಲುಸಕ್ಕರೆ ಹಾಕಿ ಮಾಡುವು ಸಿಹಿಬೆಣ್ಣೆಯಿದು!

4. ಚರಣಾಮೃತ: ಐದು ಬಗೆಯ ವಸ್ತುಗಳನ್ನು ಹಾಕಿ ಮಾಡುವ ಸಿಹಿ ಪಾನೀಯ. ದಕ್ಷಿಣ ಭಾರತೀಯರು ಇದನ್ನು ಪಂಚಾಮೃತ ಎಂದೂ ಕರೆಯುತ್ತಾರೆ. ಹಸಿ ಹಾಲು, ಸಕ್ಕರೆ, ಜೇನುತುಪ್ಪ, ತುಳಸೀ ದಳಗಳು, ತುಪ್ಪ ಹಾಗೂ ಮೊಸರು, ಈ ಐದು ವಸ್ತುಗಳನ್ನು ಬೆರೆಸಿ ಮಾಡುವ ತೀರ್ಥವಿದು. ಕೃಷ್ಣನ ಪೂಜೆ ಮಾಡಿ, ಭಕ್ತಿಯಿಂದ ಸೇವಿಸುವ ದ್ರವರೂಪದ ಅಮೃತವಿದು.

5. ಗೋಪಾಲ್‌ಕಲಾ: ಬಡವರ ಆಹಾರ ಎಂಬ ಹೆಸರೂ ಇರುವ ಈ ತಿನಿಸು ಬಹಳ ಸರಳವಾದ ತಿನಿಸು. ಕೃಷ್ಣನನ್ನು ಮೆಚ್ಚಿಸಲು ಭಕ್ತರು ಬಡವರಾದರೇನಂತೆ, ಒಂದು ಮುಷ್ಠಿ ಹಳೇ ಅವಲಕ್ಕಿಯಾದರೂ ಆದೀತು ಎಂಬುದಕ್ಕೆ ಕೃಷ್ಣ ಸುದಾಮರ ಕಥೆಯೇ ಕಣ್ಣ ಮುಂದಿದೆ. ಇಂಥ ಕೃಷ್ಣನಿಗೆ ಸರಳವಾದ ಗೋಪಾಲ್‌ಕಲಾ ಎಂದರೆ ಬಹಳ ಇಷ್ಟವಂತೆ. ಜನ್ಮಾಷ್ಠಮಿ ಆಚರಿಸಲು ಕೃಷ್ಣನಿಗೆ ನೈವೇದ್ಯ ಮಾಡಲು ಏನೂ ಇಲ್ಲದಿದ್ದರೂ, ಬಡತನವಿದ್ದರೂ ಈ ಸರಳ ಆಹಾರವೂ ಸಾಕಾಗುತ್ತದೆಯಂತೆ. ಅಕ್ಕಿ, ಸೌತೆಕಾಯಿ, ತೆಂಗಿನಕಾಯಿ, ಮೊಸರು, ತುಪ್ಪ, ಸಕ್ಕರೆ ಹಾಗೂ ಹುರಿದ ಜೀರಿಗೆ ಒಗ್ಗರಣೆ ಇತ್ಯಾದಿಯಿಂದ ಈ ಆಹಾರವನ್ನು ಮಾಡಬಹುದು. ಕೃಷ್ಣನ ನೈವೇದ್ಯದಲ್ಲಿ ಇದಕ್ಕೂ ಪ್ರಮುಖ ಸ್ಥಾನವಿದೆ.

6. ರವೆ ಲಡ್ಡು: ಕೃಷ್ಣನಿಗೆ ಲಡ್ಡು ಕೂಡಾ ಬಹಳ ಪ್ರಿಯ. ಹಾಗಾಗಿ ರವೆಯಿಂದ ಮಾಡಿದ ಲಡ್ಡೂ ಕೂಡಾ ಜನ್ಮಾಷ್ಠಮಿಯ ವಿಶೇಷ ತಿನಿಸುಗಳಲ್ಲೊಂದು.

7. ಸಾಬೂದಾನ ಖಿಚಡಿ: ಸಬ್ಬಕ್ಕಿ ಅಥವಾ ಸಾಬೂದಾನ ಖಿಚಡಿ ಕೂಡಾ ಉತ್ತರ ಭಾರತೀಯರಿಗೆ ಜನ್ಮಾಷ್ಠಮಿಯ ವಿಶೇಷಗಳಲ್ಲೊಂದು.

8. ಮಖಾನಾ ಖೀರು: ತಾವರೆಯ ಬೀಜ ಮಖಾನಾವನ್ನು ತುಪ್ಪದಲ್ಲಿ ಹುರಿದು ಮಾಡುವ ಖೀರು ಕೂಡಾ ಕೃಷ್ಣನಿಗೆ ಪ್ರಿಯವಾದದ್ದಂತೆ.

Exit mobile version