Site icon Vistara News

Krishna Janmastami 2024: ಜನ್ಮಾಷ್ಟಮಿಯಂದು ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಏಕೆ?

Krishna Janmastami 2024

ಮನೆಮನೆಯಲ್ಲೂ ಆಚರಿಸಲ್ಪಡುವ ಜನ್ಮಾಷ್ಟಮಿಯು (Krishna janmastami 2024) ರೋಮಾಂಚನವನ್ನು ಉಂಟು ಮಾಡುವ ಹಿಂದೂ ಹಬ್ಬವಾಗಿದೆ (hindu festival). ಪ್ರತಿ ವರ್ಷ ಭಗವಾನ್ ಕೃಷ್ಣನ ಜನ್ಮ ದಿನವನ್ನು ಆಚರಿಸುವ ಮೂಲಕ ಮನೆ ಮನೆಯಲ್ಲೂ, ಮನ ಮನದಲ್ಲೂ ಕೃಷ್ಣನಿದ್ದಾನೆ ಎಂಬುದನ್ನು ಸಾರಲಾಗುತ್ತದೆ. ಈ ಬಾರಿ ಸೋಮವಾರ ಮತ್ತು ಮಂಗಳವಾರ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಈ ದಿನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಉಪವಾಸ ಮಾಡುತ್ತಾರೆ, ವಿವಿಧ ಕಾರ್ಯಕ್ರಮಗಳನ್ನು ಆಚರಿಸುತ್ತಾರೆ. ಸಂಘ ಸಂಸ್ಥೆಗಳು ರಾಧಾ ಕೃಷ್ಣ, ಯಶೋಧ ಕೃಷ್ಣ ಸ್ಪರ್ಧೆಯನ್ನು ಆಯೋಜಿಸುತ್ತವೆ. ರಾಧಾ ಕೃಷ್ಣ ರಾಸಲೀಲೆ, ಮೊಸರು ಕುಡಿಕೆ ಉತ್ಸವವನ್ನು ನಡೆಸುತ್ತವೆ. ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಮಡಿಕೆ ಒಡೆಯುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ. ಎತ್ತರದಲ್ಲಿ ಕಟ್ಟಿರುವ ಮೊಸರು, ಬೆಣ್ಣೆ ತುಂಬಿದ ಮಡಕೆಯನ್ನು ತಲುಪಲು ಮಾನವ ಪಿರಮಿಡ್‌ಗಳನ್ನು ರಚಿಸುವುದನ್ನು ನೋಡಲು ಕಣ್ಣಿಗೆ ಹಬ್ಬದಂತಿರುತ್ತದೆ.


ಜನ್ಮಾಷ್ಟಮಿಯಲ್ಲಿ ಕೃಷ್ಣನಿಗೆ ಬೆಣ್ಣೆ ಅರ್ಪಿಸುವುದು ಪಾಲಿಸಬೇಕಾದ ಪ್ರಮುಖ ಸಂಪ್ರದಾಯವಾಗಿದೆ. ಆದರೆ ಬೆಣ್ಣೆ ಏಕೆ ಅಂತಹ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರ ಹಿಂದೆ ಒಂದು ಕಥೆಯೇ ಇದೆ.

ಗೋಪಾಲಕರ ಸಮುದಾಯದಲ್ಲಿ ಬೆಳೆದ ಕೃಷ್ಣನಿಗೆ ಹಸುಗಳೆಂದರೆ ಬಹಳ ಪ್ರೀತಿ. ಅವುಗಳ ನಡುವೆಯೇ ಬೆಳೆದಿರುವ ಅವನು ಹಾಲು ಮತ್ತು ಅದರ ಉತ್ಪನ್ನಗಳ ಮೇಲೆ ಸಹಜವಾಗಿ ಪ್ರೀತಿ ಬೆಳೆಸಿಕೊಂಡಿದ್ದಾನೆ. ಬೆಣ್ಣೆಯ ಮೇಲೆ ಕೃಷ್ಣನ ಒಲವು ಗೋಪಾಲಕ ಸಮಾಜದಲ್ಲಿ ಅವನ ಆಳವಾದ ಬೇರುಗಳನ್ನು ಪ್ರತಿಬಿಂಬಿಸುತ್ತದೆ.


ಬಾಲ್ಯದಲ್ಲಿ ಕೃಷ್ಣನು ʼಬೆಣ್ಣೆ ಕಳ್ಳʼ ಎಂಬ ಅಡ್ಡಹೆಸರನ್ನು ಹೊಂದಿದ್ದ. ಅವನು ತನ್ನ ಸ್ವಂತ ಮನೆಯಿಂದ ಮಾತ್ರವಲ್ಲದೆ ಗೋಕುಲದಲ್ಲಿರುವ ನೆರೆಹೊರೆಯವರಿಂದಲೂ ಬೆಣ್ಣೆ ಮತ್ತು ಮೊಸರು ಕದ್ದು ತಿಂದು, ಸ್ನೇಹಿತರಿಗೂ ತಿನ್ನಿಸುತ್ತಿದ್ದ. ಇದು ಜನರಿಗೆ ಕೋಪ ತರಿಸಿದರೂ ಕೃಷ್ಣನ ಪ್ರೀತಿ ಅದು ಬೆಣ್ಣೆಯಂತೆ ಕರಗುವ ಹಾಗೆ ಮಾಡುತ್ತಿತ್ತು. ಕೃಷ್ಣನ ಮೋಡಿ ಹೇಗಿತ್ತೆಂದರೆ ಕಳ್ಳತನದ ಹೊರತಾಗಿಯೂ ಅವನು ಎಲ್ಲರ ಹೃದಯವನ್ನು ಗೆಲ್ಲುತ್ತಿದ್ದ.


ಕೃಷ್ಣನಿಗೆ ಬೆಣ್ಣೆಯ ಮೇಲಿನ ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ ಅವನ ತಾಯಿ ಯಶೋದೆ, ಅವನ ಪ್ರೀತಿಯ ರಾಧೆ ಮತ್ತು ಗೋಪಿಯರು ಅವನಿಗಾಗಿ ವಿಶೇಷವಾಗಿ ಬೆಣ್ಣೆಯನ್ನು ತಯಾರಿಸುತ್ತಿದ್ದರು. ತಮ್ಮ ಕೈಗಳಿಂದ ತಿನ್ನಿಸುತ್ತಿದ್ದರು. ಕೃಷ್ಣನು ತಾವು ಪ್ರೀತಿಯಿಂದ ಮಾಡಿದ ಬೆಣ್ಣೆಯನ್ನು ಸವಿಯುವುದನ್ನು ನೋಡಿ ಅವರ ಹೃದಯದಲ್ಲಿ ಅಪಾರ ಆನಂದ ತುಂಬುತ್ತಿತ್ತು.

ಇದನ್ನೂ ಓದಿ: Yadgiri News: ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಮಡಕೆಯನ್ನು ಒಡೆದು ಬೆಣ್ಣೆ ತಿನ್ನುವುದು ಸಂತೋಷ ಮತ್ತು ಪ್ರೀತಿಯಿಂದ ತುಂಬಿರುತ್ತದೆ ಎಂಬುದನ್ನು ಕೃಷ್ಣನೇ ಸಾರಿದ್ದ. ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಮತ್ತು ಅನಗತ್ಯ ಒತ್ತಡ ಅಥವಾ ನಿರ್ಬಂಧಗಳಿಲ್ಲದೆ ಆನಂದಿಸಲು ಅವಕಾಶ ನೀಡಬೇಕು ಎಂಬುದನ್ನು ಈ ಕಥೆಗಳು ಬಿಂಬಿಸುತ್ತವೆ.

Exit mobile version