Site icon Vistara News

Banavasi Temple | ಬನವಾಸಿ ಆಯ್ತಾ ಅವ್ಯವಸ್ಥೆಗೆ ಹೆಸರುವಾಸಿ; ಸೌಕರ್ಯದ ಕೊರತೆಯಲ್ಲಿ ಕನ್ನಡದ ಪ್ರಥಮ ರಾಜಧಾನಿ

Banavasi Madhukeshwara Temple tourist

| ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ತಾಲೂಕಿನ ಬನವಾಸಿಯು ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕನ್ನಡದ ಪ್ರಥಮ ರಾಜಧಾನಿ ಎಂಬ ಹೆಗ್ಗಳಿಕೆ ಇರುವ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನಕ್ಕೆಂದು (Banavasi Temple) ಭೇಟಿ ನೀಡುವವರಿಗೆ ಸಮರ್ಪಕ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಬರುವ ಮುನ್ನ ಒಮ್ಮೆ ಯೋಚಿಸಿ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.

ಸಾಮಾನ್ಯವಾಗಿ ವರ್ಷವಿಡಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ನವೆಂಬರ್, ಡಿಸೆಂಬರ್ ತಿಂಗಳು ಬಂತೆಂದರೆ ಶೈಕ್ಷಣಿಕ ಪ್ರವಾಸವು ಆರಂಭವಾಗಿರುತ್ತದೆ. ಈ ವೇಳೆ ಪ್ರತಿನಿತ್ಯ ಹಲವು ಬಸ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕ್ಷೇತ್ರ ವೀಕ್ಷಣೆಗೆಂದು ಆಗಮಿಸುತ್ತಾರೆ. ಈ ವೇಳೆ ಮುಂಜಾನೆಯ ವೇಳೆ ಮುಖ ತೊಳೆಯಲು, ಶೌಚಾಲಯಕ್ಕೆ ತೆರಳಲು ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ. ಮಧುಕೇಶ್ವರ ದೇವಸ್ಥಾನದ ಬಳಿ ಕೇವಲ ಒಂದು ಸಾರ್ವಜನಿಕ ಶೌಚಾಲಯವಿದ್ದು, ಅದರಲ್ಲಿ ನಾಲ್ಕು ಕೋಣೆಯಲ್ಲಿ ಮಾತ್ರ ವ್ಯವಸ್ಥೆ ಇದೆ.

Banavasi Temple ಬನವಾಸಿ ದೇವಸ್ಥಾನ ಇಲ್ಲ ಮೂಲಸೌಕರ್ಯ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ

ಸಾವಿರಾರು ವರ್ಷಗಳ ಇತಿಹಾಸವುಳ್ಳ ಬನವಾಸಿ ಶ್ರೀ ಮಧುಕೇಶ್ವರ ದೇವಾಲಯದ ಸುತ್ತಮುತ್ತಲ ವ್ಯಾಪ್ತಿಯು ಕಳೆದ ಹಲವು ವರ್ಷಗಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದೆ. ಹಂಪಿ ಉತ್ಸವ, ಕಿತ್ತೂರು ಉತ್ಸವ ನಡೆಸಲು ಸಾಕಷ್ಟು ಅನುದಾನ ನೀಡುವ ಸರ್ಕಾರ, ಬನವಾಸಿ ಕದಂಬೋತ್ಸವಕ್ಕೆ ತಾರತಮ್ಯ ನೀತಿ ತಾಳುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ತಲೆಕೆಡಿಸಿಕೊಳ್ಳದ ಸ್ಥಳೀಯ, ಜಿಲ್ಲಾಡಳಿತ
ಪ್ರತಿನಿತ್ಯ ಇಲ್ಲಿ ಪ್ರವಾಸಿಗರು ಬರುವ ಜತೆಗೆ ಸ್ಥಳೀಯವಾಗಿ ಒಂದು ಮಟ್ಟಿಗೆ ಆದಾಯ ಬರುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಸೂಕ್ತ ವ್ಯವಸ್ಥೆಯನ್ನು ಮಾಡಲು ಸ್ಥಳೀಯ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಅಲ್ಲದೆ, ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಸಹ ಇಂಥ ಅವ್ಯವಸ್ಥೆ ಇದೆ ಎಂದು ಗೊತ್ತಿದ್ದರೆ ಇತ್ತ ಭೇಟಿಯನ್ನೇ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇಷ್ಟಾದರೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ.

ಸಾವಿರಾರು ಕಿ.ಮೀ. ದೂರದಿಂದ ಪ್ರಯಾಣಿಸಿ ಇಲ್ಲಿನ ಐತಿಹಾಸಿಕ ಸ್ಥಳ ನೋಡಲು ಬರುತ್ತೇವೆ. ಆದರೆ ಇಲ್ಲಿನ ಅವ್ಯವಸ್ಥೆ ಕಂಡು ಬೇಸರವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಒಂದಾದರೆ, ಶೌಚಾಲಯದ ಕೊರತೆಯೂ ಇದೆ. ಅಷ್ಟೇ ಅಲ್ಲದೆ ದೇವಾಲಯದ ಬಳಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಆದರೆ, ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ.
| ಎಂ.ಡಿ.‌ ರಂಗಸ್ವಾಮಿ, ಪ್ರವಾಸಿಗ

ಇದನ್ನೂ ಓದಿ | Cyclone Mandous | ಮಾಂಡೌಸ್‌ ಎಫೆಕ್ಟ್‌; 5 ದಿನ ಭತ್ತ ಕಟಾವು ಮಾಡ್ಬೇಡಿ ಎಂದ ಕೃಷಿ ಇಲಾಖೆ

Exit mobile version