Site icon Vistara News

ನಾಳೆ ಲಲಿತಾ ಪಂಚಮಿ: ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ, ವಿಶೇಷ ಪೂಜೆ ನಿರ್ದೇಶನ

kumkumarchane

ಬೆಂಗಳೂರು: ನವರಾತ್ರಿಯ ಐದನೇ ದಿನವಾದ ಲಲಿತಾ ಪಂಚಮಿಯಂದು (ಸೆಪ್ಟೆಂಬರ್‌ ೩೦, ಶುಕ್ರವಾರ) ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ ಮತ್ತು ವಿಶೇಷ ಪೂಜೆ ನಡೆಸಲು ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸೂಚನೆ ನೀಡಿದ್ದಾರೆ. ಲೋಕ ಕಲ್ಯಾಣಕ್ಕಾಗಿ ನಡೆಯುವ ಈ ಪೂಜೆಯನ್ನು ಹಿಂದೂ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸಾಮೂಹಿಕವಾಗಿ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ನವರಾತ್ರಿಯಲ್ಲಿ ಪಾಡ್ಯದಿಂದ ನವಮಿಯವರೆಗೆ ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರ ವಿಶೇಷ ಆರಾಧನೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೆಪ್ಟೆಂಬರ್‌ 30ರಂದು ಲಲಿತಾ ಪಂಚಮಿಯಾಗಿದ್ದು, ಈ ದಿನದಂದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ 30ರಂದು ನಡೆಸಲು ಕಾರಣಾಂತರಗಳಿಂದ ಸಾಧ್ಯವಾಗದಿದ್ದಲ್ಲಿ ಅಕ್ಟೋಬರ್‌ 3ರ ದುರ್ಗಾಷ್ಟಮಿಯಂದು ಈ ಕಾರ್ಯಕ್ರಮವನ್ನು ನಡೆಸಬೇಕು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕಳೆದ ವರ್ಷದಿಂದ ಪ್ರಮುಖ ಹಬ್ಬಗಳ ಆಚರಣೆ
ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕಳೆದ ಒಂದು ವರ್ಷದಲ್ಲಿ ಪ್ರತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಬಲಿಪಾಡ್ಯಮಿಯಂದು ಗೋಪೂಜೆ, ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ವರಮಹಾಲಕ್ಷ್ಮಿ ವ್ರತದಂದು ಮಹಿಳೆಯರಿಗೆ ಅರಿಶಿನ-ಕುಂಕುಮ ಹಾಗೂ ಹಸಿರು ಬಳೆಗಳ ವಿತರಣೆ ನಡೆಯುತ್ತದೆ. ಕೋವಿಡ್‌ ಕಾಲದಲ್ಲಿ ಮಕ್ಕಳಿಗೋಸ್ಕರ ವಿಶೇಷ ಪೂಜೆ ನಡೆಸಲಾಗಿತ್ತು. ಹೀಗೆ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ದೇವಸ್ಥಾನದ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿ ಬೆಳೆಸುವುದು ನಮ್ಮ ಉದ್ದೇಶ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Exit mobile version