Site icon Vistara News

Shravanabelagola Swameeji : ಚಂದ್ರಗಿರಿಯ ತಪ್ಪಲಲ್ಲಿ ಪಂಚಭೂತಗಳಲ್ಲಿ ಲೀನವಾಯಿತು ಬೆಳಗೊಳದ ಮಹಾಬೆಳಕು

ShravanaBelagola swameeji

#image_title

ಹಾಸನ: ಶ್ರವಣಬೆಳಗೊಳದ ಕೀರ್ತಿಯನ್ನು ಜಗತ್ತಿನಾದ್ಯಂತ ಬೆಳಗಿಸಿದ ಧವಳ ಕೀರ್ತಿವಂತ ಸಂತ, ಶ್ರೀ ನೇಮಿ ಸಾಗರವರ್ಣಿ ಭಟ್ಟಾರಕ ಪರಂಪರೆಯ ಪೀಠಾಧೀಶ, ಪರಮಪೂಜ್ಯ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ (Shravanabelagola Swameeji) ಅವರು ಗುರುವಾರ ಸಂಜೆ ಸೂರ್ಯಾಸ್ತಮಾನಕ್ಕೆ ಮುನ್ನ ಜಗತ್ತಿನಿಂದ ಅಸ್ತಮಿಸಿ ಅಚಂದ್ರಾರ್ಕ ಕೀರ್ತಿಯ ನಕ್ಷತ್ರವಾಗಿ ಪ್ರತಿಷ್ಠಾಪಿತರಾದರು.

ಶ್ರಾವಕ ಪರಂಪರೆಯ ಭಟ್ಟಾರಕರು, ಸ್ವಾಮೀಜಿಗಳು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಶ್ರೀ ಚಾರುಕೀರ್ತಿ ಪಟ್ಟಾಚಾರ್ಯವರ್ಯರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಸೂರ್ಯಾಸ್ತಮಾನವಾಗುತ್ತಿದ್ದಂತೆಯೇ ಆಧ್ಯಾತ್ಮ ಯೋಗಿ, ಕರ್ಮಯೋಗಿ, ಭಟ್ಟಾರಕ ಶಿರೋಮಣಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಪಂಚಭೂತಗಳಲ್ಲಿ ಲೀನರಾದರು. 21 ಕುಶಾಲು ತೋಪುಗಳ ಸರ್ಕಾರಿ ಗೌರವ, ನೂರಾರು ಗಣ್ಯ ವ್ಯಕ್ತಿಗಳು, ಸಾವಿರಾರು ಜನರ ಅಶ್ರುತರ್ಪಣದ ನಡುವೆ ಚಂದ್ರಗಿರಿ ಬೆಟ್ಟದ ತಪ್ಪಲು ಒಂದು ಕ್ಷಣ ಕಣ್ಣೀರ ಕಡಲಾಯಿತು.

ಜಿನೈಕ್ಯರಾದ ಮಹಾಸ್ವಾಮೀಜಿಯವರ ಪಾರ್ಥಿವ ಶರೀರ

1949ರಲ್ಲಿ ಕಾರ್ಕಳ ತಾಲೂಕಿನ ವರಂಗದಲ್ಲಿ ಹುಟ್ಟಿ 1970ರಲ್ಲಿ ಶ್ರವಣಬೆಳಗೊಳ ಮಠದ ಮಠಾಧೀಶರಾಗಿ ಅಭಿಷಿಕ್ತರಾಗಿ, ಜಗದ್ವಂದ್ಯ ಬಾಹುಬಲಿ ಮೂರ್ತಿಗೆ ನಾಲ್ಕು ಮಹಾ ಮಸ್ತಕಾಭಿಷೇಕಗಳನ್ನು ನಡೆಸಿದ ಕೀರ್ತಿವಂತರಾಗಿ ಜೈನ ಸಮಾಜ ಮಾತ್ರವಲ್ಲ ಸರ್ವ ಸಮಾಜದಲ್ಲೂ ಗೌರವವನ್ನು ಸ್ವೀಕರಿಸುತ್ತಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಗುರುವಾರ ಮುಂಜಾನೆ ಶ್ರೀಮಠದಲ್ಲಿ ಕೊನೆಯುಸಿರೆಳೆದಿದ್ದರು. ಅವರು ಪೂರ್ವಾಹ್ನಿಕಗಳನ್ನು ನೆರವೇರಿಸುತ್ತಿದ್ದಾಗ ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ಮೃತ್ಯುವಶರಾಗಿದ್ದರು. ಅವರನ್ನು ತಕ್ಷಣವೇ ಬೆಳ್ಳೂರಿನ ಬಿಜಿಎಸ್‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟು ಹೊತ್ತಿಗೆ ಅವರು ಜಿನೈಕ್ಯರಾಗಿದ್ದನ್ನು ಸಾರಲಾಯಿತು.

ಬೆಳ್ಳೂರಿನ ಆಸ್ಪತ್ರೆಯಿಂದ ಶ್ರೀಗಳ ಪಾರ್ಥಿವ ಶರೀರವನ್ನು ಶ್ರೀಮಠಕ್ಕೆ ತಂದು ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಶ್ರವಣಬೆಳಗೊಳದ ಶಾಸಕ ಎಚ್‌.ಸಿ. ಬಾಲಕೃಷ್ಣ, ಹಾಸನ ಶಾಸಕ ಪ್ರೀತಂ ಗೌಡ, ಮಾಜಿ ಸಚಿವ ಮಂಜು, ಎಚ್‌. ವಿಶ್ವನಾಥ್‌ ಸೇರಿದಂತೆ ನಾನಾ ರಾಜಕೀಯ ಗಣ್ಯರು, ಸಿದ್ದಗಂಗಾ ಮತ್ತು ಸುತ್ತೂರು ಮಠದ ಶ್ರೀಗಳು ಹಾಗೂ ವಿವಿಧ ಜೈನ ಮಠಗಳ ಸ್ವಾಮೀಜಿಗಳು ಅಂತಿಮ ದರ್ಶನ ಪಡೆದರು.

ಚಾವುಂಡರಾಯ ಮಂಟಪದ ಬಳಿ ಪೊಲೀಸರಿಂದ ಗೌರವ ವಂದನೆ ಸಲ್ಲಿಕೆ ಬಳಿಕ ಶ್ರೀಗಳ ಅಂತಿಮ ಯಾತ್ರೆ ಶ್ರವಣ ಬೆಳಗೊಳದ ಮುಖ್ಯ ರಸ್ತೆಗಳಲ್ಲಿ ಸಾಗಿ ಚಂದ್ರಗಿರಿಯ ತಪ್ಪಲನ್ನು ತಲುಪಿತು. ಇತ್ತ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಹಾಸನ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಹರಿರಾಮ್ ಶಂಕರ್ ಸೇರಿ ಚಂದ್ರಗಿರಿ ಪರ್ವತದ ತಪ್ಪಲಿನಲ್ಲಿ ಅಂತಿಮ ಕ್ರಿಯೆಗಳಿಗೆ ವ್ಯವಸ್ಥೆ ಮಾಡಲಾಯಿತು. ಬೆಳಗ್ಗಿನಿಂದಲೇ ಪೂಜೆ, ಹೋಮ ಹವನ ನಡೆಸಿ ಶ್ರೀಗಂಧದ ಚಿತೆ ನಿರ್ಮಾಣ ಮಾಡಲಾಗಿತ್ತು. ಗಂಧದ ತುಂಡುಗಳು, ಕೊಬ್ಬರಿ, ತುಪ್ಪ, ಸೇರಿ ಹಲವು ಸುವಸ್ತುಗಳನ್ನು ಅಣಿಗೊಳಿಸಲಾಗಿತ್ತು.

ಸಿದ್ದರಾಮಯ್ಯ ಅವರಿಂದ ಅಂತಿಮ ನಮನ

ಸಾವಿರಾರು ಜನರ ಜಯಘೋಷ, ಜಿನಸ್ತುತಿಗಳ ನಡುವೆ ಚಂದ್ರಗಿರಿಯ ತಪ್ಪಲಿಗೆ ತರಲಾದ ಶ್ರೀಗಳ ಪಾರ್ಥಿವ ಶರೀರವನ್ನು ಮೊದಲು ವಿಂದ್ಯಗಿರಿಯಲ್ಲಿ ನೆಲೆಸಿರುವ ಬಾಹುಬಲಿ ಸ್ವಾಮಿಗೆ ಎದುರಾಗಿ ಕೂರಿಸಿ ಪೂಜೆ ಮಾಡಲಾಯಿತು. ಜೈನ ಅರ್ಚಕರು ಸಾಂಕೇತಿಕವಾಗಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಿದರು. ಬಳಿಕ ಮಹಾಸಾಧನೆ ಮಾಡಿದ ಜೀವವಳಿದ ಕಾಯಕವನ್ನು ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು.

ಚಂದ್ರಗಿರಿಯ ತಪ್ಪಲಿನಲ್ಲಿ ಮಹಾಸ್ವಾಮೀಜಿ ಅವರು ಪಂಚಭೂತಗಳಲ್ಲಿ ಲೀನರಾಗುವ ಮುನ್ನ…

ಒಂದು ಕಡೆ ಸೂರ್ಯ ಅಸ್ತಮಿಸುತ್ತಿದ್ದರೆ, ಇತ್ತ ಸೂರ್ಯನಂತೆ ಪ್ರಖರವಾದ ಮತ್ತು ಅಷ್ಟೇ ಕಠಿಣವಾದ ಬದುಕನ್ನು ಶಾಸ್ತ್ರಸಮ್ಮತವಾಗಿ, ಲೋಕಸಮ್ಮತವಾಗಿ ಬಾಳಿದ ಮಹಾಜೀವವೊಂದು ಉರಿಯುತ್ತಾ ಪ್ರಜ್ವಲಿಸಿದ ಅಗ್ನಿಯ ನಡುವೆ ಕಣ್ಮರೆಯಾಯಿತು. ಶ್ರವಣಬೆಳಗೊಳದ ಮಹಾಬೆಳಕು ಆರಿತು.

ಇದನ್ನೂ ಓದಿ : Shravanabelagola swameeji No more : ನಾಲ್ಕು ಮಹಾಮಸ್ತಕಾಭಿಷೇಕಗಳ ರೂವಾರಿ, ಶ್ರವಣಬೆಳಗೊಳದ ಮಹಾಬೆಳಕು

Exit mobile version