ಭೋಪಾಲ್: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು (Ram Mandir) 2024ರ ಜನವರಿ 22ರಂದು ಲೋಕಾರ್ಪಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಮತ್ತೊಂದೆಡೆ, ಶ್ರೀರಾಮನ ದರ್ಶನಕ್ಕಾಗಿ ಮುಂಬೈನಿಂದ ಅಯೋಧ್ಯೆಗೆ ಮುಸ್ಲಿಂ ಯುವತಿ ಶಬನಮ್ ಶೇಖ್ (Shabnam Shaikh) ಅವರು ಕೈಗೊಂಡಿರುವ ಪಾದಯಾತ್ರೆಯು ಮಧ್ಯಪ್ರದೇಶ ತಲುಪಿದೆ. ಪಾದಯಾತ್ರೆ ವೇಳೆ ಮಾರ್ಗಗಳ ಮಧ್ಯೆ ಹಿಂದು ಕಾರ್ಯಕರ್ತರು, ಮಾಧ್ಯಮದವರ ಜತೆ ಮಾತನಾಡುವ ಅವರು, “ಭಗವಾನ್ ಶ್ರೀರಾಮ ಎಲ್ಲರಿಗೂ ಸೇರಿದವನು” ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಸಿಂಧಾವದಲ್ಲಿ ಹಿಂದು ಕಾರ್ಯಕರ್ತರ ಜತೆ ಶಬನಮ್ ಶೇಖ್ ಮಾತನಾಡಿದ್ದಾರೆ. “ಭಗವಾನ್ ಶ್ರೀರಾಮನು ಯಾವುದೇ ಜಾತಿ, ಧರ್ಮಕ್ಕೆ ಸೇರಿದವನಲ್ಲ. ಆತ ಎಲ್ಲರಿಗೂ ಸೇರಿದವನು. ಆತನ ದರ್ಶನಕ್ಕಾಗಿ ನಾನು ತೆರಳುತ್ತಿದ್ದೇನೆ. ಹಿಂದುಗಳು ಸೇರಿ ಎಲ್ಲರಿಂದ ನನಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ” ಎಂದು ಹೇಳಿದ್ದಾರೆ. ಮುಂಬೈನಿಂದ ಅಯೋಧ್ಯೆಗೆ ಇರುವ 1,425 ಕಿಲೋಮೀಟರ್ ಮಾರ್ಗವನ್ನು ಪಾದಯಾತ್ರೆ ಮೂಲಕವೇ ಕ್ರಮಿಸಲು ಶಬನಮ್ ಶೇಖ್ ತೀರ್ಮಾನಿಸಿದ್ದಾರೆ. ಗೆಳೆಯರಾದ ರಮಣ್ ರಾಜ್ ಶರ್ಮಾ ಹಾಗೂ ವಿನೀತ್ ಪಾಂಡೆ ಅವರೊಂದಿಗೆ ಶಬನಮ್ ಶೇಖ್ ಪಾದಯಾತ್ರೆ ಕೈಗೊಂಡಿದ್ದಾರೆ.
“ಜೈ ಶ್ರೀರಾಮ್. ಶ್ರೀರಾಮನ ದರ್ಶನ ಮಾಡುವುದೇ ನನ್ನ ಜೀವನದ ಗುರಿಯಾಗಿದೆ. ಇದಕ್ಕಾಗಿ ನಾನು ಅಯೋಧ್ಯೆಗೆ ನಡೆದುಕೊಂಡೇ ಸಾಗುತ್ತಿದ್ದೇನೆ” ಎಂದು ಶಬನಮ್ ಶೇಖ್ ಹೇಳಿದ್ದಾರೆ. ಇವರಿಗೆ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇನ್ನು ಇಸ್ಲಾಂ ಧರ್ಮದಲ್ಲಿ ಜನಿಸಿ, ರಾಮನ ದರ್ಶನಕ್ಕೆ ತೆರಳುತ್ತಿರುವ ಯುವತಿಗೆ ಮಾರ್ಗದುದ್ದಕ್ಕೂ ಹಿಂದುಗಳು, ಹಿಂದು ಸಂಘಟನೆಗಳ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ. ಇವರು ಪಾದಯಾತ್ರೆಯ ವಿಡಿಯೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಅವು ವೈರಲ್ ಆಗುತ್ತಿವೆ.
ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್ಎಸ್ಎಸ್ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕರೆ ನೀಡಿದ್ದಾರೆ.
ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್ ಶಾ ಹೇಳಿಕೆಗೊಂದು ಕಾರಣವಿದೆ
ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ