ಬೆಂಗಳೂರು: ರಾಜ್ಯದಲ್ಲಿ ಆಜಾನ್ ವಿವಾದ ಹುಟ್ಟಿಕೊಂಡ ಬಳಿಕ ಯಾವುದೇ ಧಾರ್ಮಿಕ ಕೇಂದ್ರಗಳು ಲೌಡ್ ಸ್ಪೀಕರ್ ಬಳಸಬೇಕೆಂದರೆ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ೧೭೦೦೦ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಅವುಗಳ ಪೈಕಿ 10,899 ಧಾರ್ಮಿಕ ಕೇಂದ್ರಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಅಧಿಕೃತವಾಗಿ ಆದೇಶ ಮಾಡಿದೆ.
ವಿವಿಧ ಧಾರ್ಮಿಕ ಕೇಂದ್ರಗಳಿಂದ ಒಟ್ಟು 17,850 ಅರ್ಜಿಗಳು ಬಂದಿದ್ದು, ಈ ಪೈಕಿ ೧೦,೮೯೯ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗಿದೆ. ನಾನಾ ಕಾರಣಗಳನ್ನು ನೀಡಿ ಉಳಿದವುಗಳನ್ನು ತಿರಸ್ಕರಿಸಲಾಗಿದೆ. 450 ರೂಪಾಯಿ ಶುಲ್ಕ ಪಡೆದು ಲೌಡ್ ಸ್ಪೀಕರ್ ಬಳಕೆಗ ಪಡೆದಿರುವ ಅನುಮತಿ ಎರಡು ವರ್ಷಗಳ ಅವಧಿಯದ್ದಾಗಿರುತ್ತದೆ. ಆ ಬಳಿಕ ಇದನ್ನು ನವೀಕರಿಸಬೇಕು.
ರಾಜ್ಯಾದ್ಯಂತ ಮೂರು ಸಾವಿರಕ್ಕು ಹೆಚ್ಚು ಹಿಂದೂ ದೇವಾಲಯಗಳಿಗೆ ಅನುಮತಿ ಸಿಕ್ಕಿದೆ. 1400ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಇನ್ನು ಧ್ವನಿವರ್ಧಕ ಬಳಸಬಹುದು. ಬೆಂಗಳೂರಿನಲ್ಲಿ 1,841 ಮಸೀದಿಗಳಿಗೆ ಅನುಮತಿ ಸಿಕ್ಕಿದೆ.
ರಾಜ್ಯದಲ್ಲಿ ಆಜಾನ್ ಕೂಗುವ ವಿಚಾರಕ್ಕೆ ಸಂಬಂಧಿಸಿ ವಿವಾದ ಸೃಷ್ಟಿಯಾದಾಗ ಸರಕಾರ ಕೆಲವೊಂದು ನಿಯಮಗಳನ್ನು ವಿಧಿಸಿತ್ತು. ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು. ಪರವಾನಗಿ ಇಲ್ಲದೆ ಲೌಡ್ ಸ್ಪೀಕರ್ ಬಳಸಬಾರದು ಎಂದು ನಿರ್ಬಂಧ ವಿಧಿಸಿತ್ತು. ಪರವಾನಗಿ ನೀಡುವ ಅಧಿಕಾರವನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.
ಬಳಕೆಗೆ ನಿಯಮಾವಳಿಗಳೇನು?
ಈಗ ಧ್ವನಿವರ್ಧಕಕ್ಕೆ ಅನುಮತಿ ನೀಡಲಾಗಿದ್ದರೂ ಬಳಕೆಗೆ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ.
ಹಿಂದೂ, ಮುಸ್ಲಿಂ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯವಾಗಲಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ದಿಷ್ಟ ಸಮಯ (Time) ಹಾಗೂ ಶಬ್ದದ ಬಗ್ಗೆ ಡೆಸಿಬಲ್ ನಿಗದಿ ಮಾಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಡಿಸೆಬಲ್ ಮಿತಿ ಇರಬೇಕು. ಕಾನೂನು ಉಲ್ಲಂಘಿಸಿದ್ರೆ, ಡಿಎಸ್ಪಿ ದರ್ಜೆಯಿಂದ ಮೇಲ್ಪಟ್ಟ ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಧ್ವನಿ ವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆ ಆದರೆ ಕ್ರಮಕೈಗೊಳ್ಳಲಾಗುತ್ತೆ. ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ನಡೆಸುವವರಿಗೂ ಅನುಮತಿ ಕಡ್ಡಾಯ ಮಾಡಲಾಗಿದೆ.
ಸರ್ಕಾರ ನಿಗದಿ ಮಾಡಿರುವ ಡೆಸಿಬಲ್ ಎಷ್ಟು?
ಕೈಗಾರಿಕಾ ಝೋನ್ – ಹಗಲಿನಲ್ಲಿ 75 ಡೆಸಿಬಲ್ – ರಾತ್ರಿ 70 ಡೆಸಿಬಲ್
ಕಮರ್ಷಿಯಲ್ ಝೋನ್ – ಹಗಲಿನಲ್ಲಿ 65 ಡೆಸಿಬಲ್ – ರಾತ್ರಿ 55 ಡೆಸಿಬಲ್
ರೆಸಿಡೆನ್ಸಿಯಲ್ ಝೋನ್ – ಹಗಲಿನಲ್ಲಿ 55 ಡೆಸಿಬಲ್ – ರಾತ್ರಿ 45 ಡೆಸಿಬಲ್
ಸೈಲೆಂಟ್ ಝೋನ್ – ಹಗಲಿನಲ್ಲಿ 50 ಡೆಸಿಬಲ್ – ರಾತ್ರಿ 40 ಡೆಸಿಬಲ್
ರಾತ್ರಿ 10 ರಿಂದ ಧ್ವನಿವರ್ಧಕ, ತಮಟೆ, ಡಿಜೆಗಳಿಗೆ ಬ್ರೇಕ್
ರಾತ್ರಿ 10 ರಿಂದ ಬೆಳಗ್ಗೆ 6ರ ರವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ನೀಡಲಾಗುತ್ತೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ. ಮನೆ ಮತ್ತು ಖಾಸಗಿ ಕಾರ್ಯಕ್ರಮದಲ್ಲಿ ೫ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಇರಬಾರದು.
ಇದನ್ನೂ ಓದಿ | ಆಜಾನ್ V/s ಭಜನೆ: ಅವಧಿ ಮೀರಿದ್ರೆ ಮತ್ತೆ ರಾಮ ಜಪದ ಎಚ್ಚರಿಕೆ ನೀಡಿದ ಕಾಳಿ ಸ್ವಾಮಿ