ಪಂ. ಶ್ರೀಧರಾಚಾರ್ಯ ಹೆಚ್. ಎಲ್.
ಮಧ್ವಾಚಾರ್ಯರು 12ನೇ ಶತಮಾನದಲ್ಲಿ ಸಾಕ್ಷಿಗೆ, ಅಂತಃಪ್ರಜ್ಞೆಗೆ, ಅನುಭವಕ್ಕೆ ತಿಳಿಯುವ ಅಧ್ಯಾತ್ಮಸಂದೇಶ ಕೊಟ್ಟು, ವೇದಗಳ ನಿಜ ಆಂತರ್ಯ ತಿಳಿಸಿ, ಜೀವ-ಜಡ-ದೇವರು ಈ ಮೂರರ ನಿಜ ಸಂಬಂಧದ ಹಿನ್ನೆಲೆಯಲ್ಲಿ ‘‘ಈ ಜಗತ್ತು ಸತ್ಯ. ಸುಳ್ಳಲ್ಲ. ಜೀವನಿಗೆ ಅನಂತಕಾಲದ ಸುಖ ಅರ್ಥಾತ್ ಮುಕ್ತಿ ಇದೆ. ಅದಕ್ಕಾಗಿ ಅನಿವಾರ್ಯವಾದ, ಸಂತೋಷದ ‘ಶರಣು’ ಅರ್ಥಾತ್ ಪಾರಮಾರ್ಥಿಕವಾಗಿ ತಂದೆ-ತಾಯಿ-ಬಂಧು-ಬಳಗ ಎಲ್ಲವನ್ನಾಗಿ, ರಕ್ಷಕನನ್ನಾಗಿ ಆ ‘ಪರಬ್ರಹ್ಮ’ನನ್ನು ಭಜಿಸಿ, ಕೊಂಡಾಡುವ ಭಕ್ತಿಯ ಪರಾಕಾಷ್ಠೆಯ ತುಟ್ಟ ತುದಿಯನ್ನೇರುವ ದಾಸತ್ವದ ಸ್ಥಿತಿ ತಲುಪಿ, ಸಾಧನೆಯ ಮಾರ್ಗಗಳನ್ನು ಹೊಂದುವಂತೆ, ಆ ‘ದೇವರ’ ಸ್ಥಾನವನ್ನು ತೋರಿಸಿ ಕೊಟ್ಟ ಮಹಾನುಭಾವರು.
ಇವರನ್ನು “ಪೂರ್ಣಪ್ರಜ್ಞರು” “ಆನಂದತೀರ್ಥರು” “ಮಧ್ವರು” “ದಶಪ್ರಮತಿ” “ಸರ್ವಜ್ಞರು” ಮುಂತಾದ ಹಲವು ನಾಮಗಳಿಂದ ವೇದಗಳು ಉಲ್ಲೇಖಮಾಡಿವೆ. ವೇದದಲ್ಲಿ “ಮಾತರಿಶ್ವನ್” ಎನ್ನುವುದರ ಅರ್ಥ “ಮಾತರಿ ಶ್ವಯತಿ (ತದ್ವಿಷಯೇ) ಅಭಿವರ್ಧತೇ ಇತಿ ಮಾತರಿಶ್ವಾ” ಎಂಬ ವ್ಯುತ್ಪತ್ತಿಯಂತೆ ವಿದ್ಯೆಗಳ ವಿಷಯದಲ್ಲಿ ಸಮೃದ್ಧನಾಗಿರುವವನು ಎಂದರ್ಥ. ಅಥವಾ “ಮಾತರಿ ನಿರ್ಮಾತರಿ ಜಗನ್ನಿರ್ಮಾತೃವಿಷಯೇ ಶ್ವಯತಿ ಅವಗಚ್ಛತಿ ಇತಿ ಮಾತರಿಶ್ವಾ” ಎಂಬಂತೆ ಜಗನ್ನಿರ್ಮಾತೃವಾದ ಶ್ರೀಹರಿಯ ವಿಷಯದಲ್ಲಿ ಜ್ಞಾನಿಯಾಗಿರುವವನು ಎಂದರ್ಥ. ತಮ್ಮ ಅಪ್ರತಿಮ ವೈದುಷ್ಯದಿಂದ ತಾತ್ವಿಕಪ್ರಪಂಚದಲ್ಲಿ ಅಪೂರ್ವ ಅಧ್ಯಾತ್ಮಕ್ರಾಂತಿ ಮಾಡಿದ ಮಹಾಪುರುಷರು ಅವರು.
ಸಕಲ ತತ್ವವಿಷಯಗಳು, ಪ್ರಮಾಣಶಾಸ್ತ್ರ, ಪ್ರಮೇಯವಿಚಾರ, ಮೋಕ್ಷಸಾಧನೆ, ಮೋಕ್ಷ, ಜ್ಞಾನ, ಭಕ್ತಿ, ಆಚಾರ, ವಿಚಾರ, ಕರ್ಮ, ತರ್ಕ, ತಂತ್ರ, ಮಂತ್ರ, ಯಜ್ಞ, ಗಾನಶಾಸ್ತ್ರ, ರಾಜಕೀಯ ಹೀಗೆ ಸಕಲವಿಷಯಗಳಲ್ಲಿ ಪರಿಪೂರ್ಣ ಮಾಹಿತಿ ನೀಡುತ್ತಾ, ತಾತ್ವಿಕವಾದ ಅದ್ಭುತ ಮಹಿಮೆಗಳನ್ನು ತೋರುತ್ತಾ, ಭಾರತೀಯರಿಗೆ ಹೆಮ್ಮೆ ಎಂದೆನಿಸುವ ಭಾರತೀಯರಾಗಿ, ಕನ್ನಡನಾಡಿನಲ್ಲಿ ಅವತಾರ ಮಾಡಿ, ಕನ್ನಡಿಗರ ವಿಶೇಷ ಸಂತೋಷಕ್ಕೆ ಕಾರಣರಾದ, ಪ್ರಸಿದ್ಧ ವ್ಯಾಕರಣವನ್ನೂ ಮೀರಿದ ಅನಾದಿವೇದಪರಿಭಾಷಾಪರಿಯನ್ನು ಪ್ರಯೋಗಿಸಿ, ಸಮಗ್ರವೇದವಾಙ್ಮಯವೇ ಸರ್ವೋತ್ತಮದೈವನಾದ ಶ್ರೀವಿಷ್ಣುವಿನ ಗುಣಗಾನ ಎಂದು ಸಾರಿದ ಅಪ್ರತಿಮಚಿಂತಕರು ಎಂಬುದು ಅವರ ಪ್ರಶಸ್ತಿ.
ಅವರ ಮೂವತ್ತೆರಡು ಸಲ್ಲಕ್ಷಣಗಳ ಭವ್ಯ ಆಕೃತಿಯಂತೆ ಅನುಪಮಕೃತಿಶ್ರೇಣಿಯನ್ನೂ ಜನತೆಗೆ ನೀಡಿ, ಶಾಸ್ತ್ರಪ್ರಪಂಚದ ವಿಶ್ವರೂಪವನ್ನು ತೆರೆದಿಟ್ಟ ಮಹಾಮಹಿಮರು ಎಂಬುದು ಅವರ ಅನಾದೃಶಹಿರಿಮೆ. ದ್ವಾಪರದ ಕೊನೆಯ ಘಟ್ಟ. ಕಾಲದ ಜೊತೆಗೆ ಶಾಪದಿಂದ ಲುಪ್ತವಾದ ಜ್ಞಾನದ ಉದ್ಧಾರ ವೇದವ್ಯಾಸರಿಂದ ಆಗಿತ್ತು. ಆದರೆ ಕಾಲ ಕಳೆದಂತೆ ಕಲಿಪ್ರಭಾವದಿಂದ ಜನತೆ ತತ್ವಜ್ಞಾನದಿಂದ ದೂರಾಗಿ, ಪರಮಾತ್ಮನನ್ನು ಮರೆತು, ಆತ್ಮಚಿಂತನೆ ತೊರೆಯುವಂತಾಯಿತು. ಈ ಸಂದರ್ಭದಲ್ಲಿ ಅವತರಿಸಿದ ಮಧ್ವಾಚಾರ್ಯರು ಸಕಲಸಾಧಕರಿಗೆ ಆಶಾಕಿರಣವಾಗಿ ದ್ವೈತಸಿದ್ಧಾಂತದ ಮೂಲಕ ಮೋಕ್ಷಮಾರ್ಗದ ಮೆಟ್ಟಿಲುಗಳನ್ನು ತೋರಿಸಿಕೊಟ್ಟರು.
ನಾರಾಯಣನೇ ಪರದೈವ, “ಬ್ರಹ್ಮ” ಎಂದರೆ ಅನಂತಕಲ್ಯಾಣಗುಣಪರಿಪೂರ್ಣ ಎಂದು ಅರ್ಥ. ನಾರಾಯಣ ಮುಂತಾದ ಶಬ್ದಗಳಿಗೂ ಇದೇ ಅರ್ಥ. ಕೇವಲ ವರ್ಣಾತ್ಮಕ ಶಬ್ದಗಳಷ್ಟೇ ಅಲ್ಲದೇ ಈ ವಿಶ್ವದಲ್ಲಿ ಭೇರೀನಾದ, ಸಮು ದ್ರಘೋಷ, ಹಕ್ಕಿಗಳ ಚಿಲಿಪಿಲಿ, ಮೊದಲಾಗಿ ಇರುವ ಪ್ರತಿಯೊಂದು ಧ್ವನ್ಯಾತ್ಮಕ ಶಬ್ದಗಳೂ ಓಂಕಾರವಾಚ್ಯನಾದ ಭಗವಂತನ ಮಹಿಮೆಯನ್ನೇ ಸಾರುತ್ತವೆ. ಪರಬ್ರಹ್ಮನಾದ “ವಿಷ್ಣು” ಒಬ್ಬನೇ ಸ್ವತಂತ್ರ. ಅವನೇ ಸೃಷ್ಟಿ, ಸ್ಥಿತಿ, ಲಯ, ನಿಯಮನ, ಜ್ಞಾನ, ಅಜ್ಞಾನ, ಬಂಧ, ಮೋಕ್ಷಗಳೆಂಬ ಸಕಲಕ್ಕೂ ಮುಖ್ಯಕಾರಣ.
“ಶ್ರೀ”ತತ್ವ, “ಅವ್ಯಕ್ತ”ತತ್ವ, “ಚಿತ್ ಪ್ರಕೃತಿ” ಎನಿಸುವ ಮಹಾಲಕ್ಷ್ಮೀ ಎಂದೆಂದಿಗೂ ಈ ಸಂಸಾರಬಂಧನಕ್ಕೊಳಗಾಗದೇ ಪರಮಾತ್ಮನ ಅನುಗ್ರಹದಿಂದ ನಿತ್ಯಮುಕ್ತಳಾಗಿರುವಳು.ತೃಣಾದಿ ಚತುರ್ಮುಖಪರ್ಯಂತ ಇರುವ ಚೇತನರಿಗಿಂತ ಅನಂತಗುಣಅಧಿಕಳು. ಈ ಜಗತ್ತು ಪಾರಮಾರ್ಥಿಕವಾದುದು. ಸತ್ಯವಾಗಿದೆ. ಇದಕ್ಕೆ ಪ್ರತ್ಯಕ್ಷವೇ ಪ್ರಮಾಣ. ಪ್ರತ್ಯಕ್ಷಕ್ಕೆ ಯೋಗ್ಯವಾದ ವಿಷಯಗಳಲ್ಲಿ, ಅದರ ಸತ್ಯತೆಯ ವಿಷಯದಲ್ಲಿ ಯಾವ ವೇದವಾಕ್ಯಗಳೂ ಅದನ್ನು “ಸುಳ್ಳು” ಎಂದು ಹೇಳಲು ಸಾಧ್ಯವಿಲ್ಲ.
ಪರಬ್ರಹ್ಮ ‘ನಿರ್ಗುಣ’ ‘ನಿರಾಕಾರ’ ಎಂದು ಕೆಲವು ವೇದವಾಕ್ಯಗಳು ಹೇಳುತ್ತಿರುವಂತೆ ಮೇಲ್ನೋಟಕ್ಕೆ ತೋರಿದರೂ, ಭಗವಂತನು ಅಪ್ರಾಕೃತನಾದುದರಿಂದ ಅಂದರೆ ನಮ್ಮಂತೆ ಜಡಪ್ರಕೃತಿಯ ಶರೀರ ಇಲ್ಲದಿರುವುರದಿಂದ, ಪ್ರಾಕೃತಿಕವಾದ ಆಕಾರ ಗುಣಗಳು ಇಲ್ಲದಿರುವುದರಿಂದ ಅವನನ್ನು ನಿರ್ಗುಣ, ನಿರಾಕಾರ ಎಂದು ಆ ವೇದವಾಕ್ಯಗಳು ಹೇಳುತ್ತವಷ್ಟೇ ಎಂಬ ಅತ್ಯಂತ ಪ್ರಬುದ್ಧ, ಪ್ರಾಮಾಣಿಕ ಅರ್ಥ ತಿಳಿಸಿ, ಈ ಹಿನ್ನೆಲೆಯಲ್ಲಿ ಸಮಸ್ತವೇದಗಳೂ ಪರಮಪ್ರಮಾಣಗಳೇ ಎಂದು ಮಂಡಿಸಿರುವರು.
ಚೈತನ್ಯಾತ್ಮಕವಾದ ಜ್ಞಾನಾನಂದಾದಿ ಗುಣಗಳಿಂದ ತುಂಬಿದ ಆಕಾರ ಪರಮಾತ್ಮನಿಗೆ ಇದೆ. ಅವನಿಗೆ ಅನಾದ್ಯನಂತಕಾಲದಲ್ಲೂ ಯಾವ ದೋಷವೂ ಇಲ್ಲ. ಜೀವರಲ್ಲಿ ಅವರವರ ಸ್ವರೂಪದಲ್ಲೇ ನಿತ್ಯವಾಗಿ ಅವರವರ ಯೋಗ್ಯತೆ, ಇಚ್ಛಾ, ಪ್ರಯತ್ನ, ಜ್ಞಾನ ಮುಂತಾದ ಚೈತನ್ಯಮಯವಾದ, ಎಂದೂ ನಾಶವಾಗದ, ವ್ಯತ್ಯಾಸವಾಗದ ಗುಣಗಳು ಇದ್ದೇ ಇವೆ. ಅವುಗಳಿಗೆ ಅನುಗುಣವಾಗಿ ಅನಾದಿಕಾಲದಿಂದ ಅವರವರಿಗೆ ಕರ್ಮವ್ಯತ್ಯಾಸ, ಅದರಿಂದಾಗಿ ಜನ್ಮಾಂತರದಲ್ಲಿ ಬೇರೆ ಬೇರೆ ಯೋನಿಗಳು, ಪುನಃ ಪುನಃ ಕರ್ಮಗಳು, ಕರ್ಮಗಳಲ್ಲಿ ವೈಚಿತ್ರ್ಯದಿಂದ ಫಲದಲ್ಲಿ ವ್ಯತ್ಯಾಸ ಈ ಮುಂತಾದ ತತ್ವಗಳನ್ನು ತಿಳಿಸಿದ ಮಹಾಜ್ಞಾನಿಗಳು.
ಜೀವ ಸ್ವಭಾವಕ್ಕನುಗುಣವಾದ ಬಹುದೀರ್ಘಕಾಲೀನ ಸಾಧನೆಯ ಪಥದಲ್ಲಿ ಸಾಗಿ ಸಾತ್ವಿಕನಾದರೆ ಉತ್ತಮಗತಿ, ರಾಜಸನಾದರೆ ಮಧ್ಯಮಗತಿ, ತಾಮಸನಾದರೆ ಅಧೋಗತಿ.ಇದನ್ನು ಸುಂದರವಾಗಿ ವಿವರಿಸಿರುವ ಮಧ್ವಾಚಾರ್ಯರು ಈ ವಿಚಾರದಲ್ಲಿ ಗೀತಾ, ಉಪನಿಷತ್ ಮುಂತಾದವುಗಳ ಪ್ರಮಾಣ ನೀಡುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಮಧ್ವಾಚಾರ್ಯರು ಜೀವರನ್ನು ಒಳ್ಳೆಯವರು, ಕೆಟ್ಟವರು, ಉತ್ತಮರು, ಅಧಮರು ಎಂದೆಲ್ಲಾ ಹೇಳಿದ್ದಾರೆ ಎಂಬ ಆರೋಪ ಸರಿಯಲ್ಲ. ಬೇವು ಮಾವು ಎಂಬುದಾಗಿ ಭಿನ್ನ ಭಿನ್ನ ಬೀಜಗಳಿರುವಾಗ ವೃಕ್ಷವೆಂಬ ಫಲವೂ ಬೇವು ಮಾವು ಎಂದಾದೀತೇ ವಿನಹ ಎರಡೂ ಬೀಜಗಳು ಮಣ್ಣು-ನೀರಿನ ಸಂಬಂಧ ಸಮವಾಗಿ ಪಡೆದರೂ ಎರಡೂ ಬೇವೆಂದಾಗಲೀ ಅಥವಾ ಎರಡೂ ಮಾವೆಂದಾಗಲೀ ಆಗಲು ಸಾಧ್ಯವಿಲ್ಲ ಅಲ್ಲವೇ ? ಇದೇ ಮಧ್ವಾಚಾರ್ಯರ ಜೀವವೈವಿಧ್ಯ ವಿಚಾರ.
ಇದನ್ನೇ ತಾರತಮ್ಯ ಪ್ರಮೇಯವೆಂದು ಹೇಳುತ್ತಾರೆ. ವಿವಿಧಗಾತ್ರದ ಆಕಾರದ ಪಾತ್ರೆಗಳಲ್ಲಿ ನೀರು ತುಂಬಿಸುವಾಗ ಗಾತ್ರ-ಆಕಾರಗಳಿಗೆ ತಕ್ಕಂತೆ ನೀರು ತುಂಬುವುದೇ ವಿನಹ ಎಲ್ಲ ಪಾತ್ರೆಗಳಲ್ಲಿ ಸರಿಸಮವಾಗಿ ನೀರು ತುಂಬೀತೇ ? ಇದೇ ಪ್ಪತಿಯೊಬ್ಬ ಜೀವನು ಇನ್ನೊಬ್ಬ ಜೀವನಿಂದ ಭಿನ್ನನಾಗಿದ್ದಾನೆ ಎಂಬ ಜೀವ-ಜೀವಭೇದವಾದ. ಮೂಲಭೂತ ಅಣುಗಳ ವ್ಯತ್ಯಾಸದಿಂದ ಮೂಲವಸ್ತುಗಳ (ELEMENTS) ಗುಣ, ಸ್ವಭಾವ ವ್ಯತ್ಯಾಸವಿರುವುದು ಜಗತ್ ಪ್ರಸಿದ್ಧ. ಇದೇ ಜಡ-ಜಡಭೇದ. ಜ್ಞಾನ-ಇಚ್ಛಾದಿಗಳು ಜಡದಲ್ಲಿಲ್ಲ. ಇದು ಜಡ-ಜೀವರ ಭೇದ. ಯಾವ ಜಡವಸ್ತುವಾಗಲೀ, ಜೀವನಾಗಲೀ ಪರಬ್ರಹ್ಮನಿಗೆ ಯಾವ ರೀತಿಯಿಂದಲೂ ಸರಿ ಸಮಾನರಾಗಲಾರರು. ಇದೇ ಜಡ ಹಾಗೂ ಜೀವರಿಂದ ಪರಮಾತ್ಮನಿಗಿರುವ ಭೇದ. ಹೀಗಾಗಿ ಒಟ್ಟು ಸಾಮಾನ್ಯವಾಗಿ ” ಪಂಚಭೇದ” ಗಳ ಸಿದ್ಧಾಂತ ನಿರೂಪಿಸಿ, ಸಾಧಿಸಿ ತೋರಿಸಿದರು ಶ್ರೀಮದಾಚಾರ್ಯರು.
ಜೀವರಲ್ಲಿ ಅನಾದಿಯಿಂದ ಇರುವ, ಸ್ವರೂಪವಲ್ಲದ, ಸ್ವಾಭಾವಿಕವಲ್ಲದ ಜಡದ ಸಂಬಂಧ ಅದು ಲಿಂಗಶರೀರರೂಪ ದಿಂದ ಇರುವುದು. ಅದೇ ಸಂಸಾರಬಂಧ. ಅನಾದಿಯಿಂದಲೇ ಇರುವ ಅಹಂಕಾರ-ಮಮಕಾರಗಳ ನಿಮಿತ್ತ, ಭಗವಂತನೇ ನಿಯಾಮಕನಾಗಿ ಈ ಬಂಧನಕ್ಕೂ ಕಾರಣನು. ಇದನ್ನು ಬಿಡಿಸಿಕೊಳ್ಳಲು ಜೀವ ಸ್ವತಂತ್ರನಲ್ಲ. ಶಕ್ತನೂ ಅಲ್ಲ. ಅಂತಹ ಜೀವವನ್ನು ತನಗೆ ಯಾವ ಪ್ರಯೋಜನವಿಲ್ಲದಿದ್ದರೂ ಈ ಸಂಸಾರಬಂಧನದಿಂದ ಬಿಡಿಸಿ, ನಿತ್ಯಸುಖ ಅಭಿವ್ಯಕ್ತವಾಗುವ, ದುಃಖದ ಲವಲೇಶವೂ ಇಲ್ಲದ ಮೋಕ್ಷವನ್ನು ಕೊಡಲು ಸರ್ವಶಕ್ತ, ಸರ್ವತಂತ್ರ, ಸ್ವತಂತ್ರ, ಸರ್ವಜ್ಞನಾದ ವ್ಯಕ್ತಯಿಂದಷ್ಟೇ ಸಾಧ್ಯವಷ್ಟೇ ? ಇವನನ್ನೇ ಶಾಸ್ತ್ರಗಳು “ಪರಬ್ರಹ್ಮ” ಎಂದಿವೆ. ಅವನೇ ದೇವರು. ಇದು ಅವನ ಪರಮ ಕಾರುಣ್ಯವಲ್ಲವೇ?
ಆದರೆ ಆ ದೇವರು ಸುಮ್ಮ-ಸುಮ್ಮನೆ ಮೋಕ್ಷ ಕೊಡಲಾರ. ನಿಮ್ಮಿಂದ ಏನೋ ಬಯಸುತ್ತಾನೆ. ಅರೆ ! ಇದೇನಿದು ! ದೇವರಿಗೂ ನಿಮ್ಮಿಂದ ಬೇಕಾಗುವ ವಸ್ತುವಿನ ಕೊರತೆಯೇ ? ಹೆದರದಿರಿ. ಅವನು ನಮ್ಮಿಂದ ಬಯಸುವುದು ನಿರ್ಮಲವಾದ, ತನ್ನ ಬಗೆಗಿನ ಮಾಹಾತ್ಮ್ಯಜ್ಞಾನತುಂಬಿದ, ತಾನು ತನ್ನವರಿಗಿಂತಲೂ ಅತೀ ಹೆಚ್ಚಿನಮಟ್ಟದ ಸ್ನೇಹ-ಪ್ರೀತಿಯನ್ನಷ್ಟೇ. ಇಡೀ ಪ್ರಪಂಚವೇ ಅವನದ್ದಾಗಿರುವಾಗ ಅವನಿಗೆ ಕೊಡಲು ನಮ್ಮದು ಅಂತ ಏನಿದೆ ?
ಈ ಪ್ರೀತಿ-ಸ್ನೇಹಗಳನ್ನೇ ಶಾಸ್ತ್ರಗಳು “ಭಕ್ತಿ” ಎಂದಿವೆ. ಈ ಕ್ರಮದಲ್ಲಿ ಭಕ್ತಿಪಂಥದ ಬೀಜ ಬಿತ್ತಿದ ಜ್ಞಾನಿವರೇಣ್ಯರೇ ಶ್ರೀಮಧ್ವಾಚಾರ್ಯರು.
ಇದೇ ಸಾಗಿ ಹೆಮ್ಮರವಾಗಿ ದಾಸಸಾಹಿತ್ಯಕ್ಕೆ ತಳಪಾಯವಾಗಿ, ದಾಸಶ್ರೇಷ್ಠರಾದ “ಕರ್ನಾಟಕಸಂಗೀತಪಿತಾಮಹ”ರಾದ ಶ್ರೀಪುರಂದರದಾಸರನ್ನು ಕೊಟ್ಟಿತಲ್ಲವೇ. ಇವರಿಂದ ಪ್ರಾರಂಭವಾಗಿ ಕನಕದಾಸರು, ವಾದಿರಾಜರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರೇ ಮೊದಲಾದ ನೂರಾರು ದಾಸರಿಂದಾಗಿ ಲಕ್ಷ-ಲಕ್ಷಗಟ್ಟಲೇ ಶಾಸ್ತ್ರೀಯ ಸಂಗೀತಕ್ಕೊಳಪಡುವ, ತತ್ವ ತುಂಬಿದ, ಭಕ್ತಿರಸ ತುಂಬಿದ ಕೃತಿಗಳ ರಚನೆಯಾದವು. ಅದೂ ನಮ್ಮ ಹೆಮ್ಮೆಯ ಕರ್ನಾಟಕದ ಕಸ್ತೂರಿ ಕನ್ನಡದಲ್ಲಿ. ಇದೆಲ್ಲವೂ ಕನ್ನಡಸಾಹಿತ್ಯಕ್ಕೆ ಕೊಡುಗೆ ಆಗಿಲ್ಲವೇ? ಹಾಗಾದರೆ ಇವೆಲ್ಲಕ್ಕೂ ಮೂಲಭೂತರಾಗಿ ಶ್ರೀಮಧ್ವಾಚಾರ್ಯರು ಕಾರಣರಾದ್ದರಿಂದ ಅವರಿಂದ ಈ ಕರ್ನಾಟಕಕ್ಕೆ ಎಷ್ಟು ದೊಡ್ಡ, ಭಕ್ತಿ ತುಂಬಿದ ಸಾಹಿತ್ಯಭಂಡಾರ ದೊರಕಿದಂತಾಗಿದೆಯಲ್ಲವೇ ? ಈ ಎಲ್ಲದರ ಕೀರ್ತಿ ಶ್ರೀಮಧ್ವಾಚಾರ್ಯರಿಗೇ ಸಲ್ಲುತ್ತದೆಯಲ್ಲವೇ?
ಒಟ್ಟಿನಲ್ಲಿ “ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ” ಪರಮಾತ್ಮನ ಪರಮಪ್ರಸಾದ ಅರ್ಥಾತ್ ಅವನ ಅನುಗ್ರಹ ಪಡೆದು, ಈ ದುಃಖದ ಸಂಸಾರದಿಂದ ಪಾರಾಗಲು ಸಾಧನಮಾರ್ಗದಲ್ಲಿ ತೊಡಗಿರಿ ಎಂದು ಕರ್ಮಸಂದೇಶದ ಮರ್ಮ ತಿಳಿಸಿದ ಶ್ರೀಮಧ್ವಾಚಾರ್ಯರು “ಎಂದೂ ಸೋಮಾರಿಗಳಾಗಿರಬೇಡಿ” ಎಂಬ ಸಂದೇಶ ನೀಡಿದ್ದಾರೆ,
ಇಂತಹ ಮಹಾನ್ ಚೇತನರು ಭೂಲೋಕ ತ್ಯಜಿಸಿ, ಬದರಿಕಾಶ್ರಮ ಪ್ರವೇಶ ಮಾಡಿದ ದಿನ ಮಧ್ವನವಮಿ (Madhva Navami 2023). ಈ ದಿನ ವಿಶೇಷವಾಗಿ ಅವರ ಸ್ಮರಣೆ ಮಾಡಿ, ಜೀವನದಲ್ಲಿ ಅವರ ಸಂದೇಶಗಳನ್ನು ಪಾಲಿಸೋಣ.
ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.