ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
“ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್” – “ಈ ಜಗತ್ತೆಲ್ಲವೂ ವ್ಯಾಸಶೇಷ”
ಇದು ಬಹುಶ್ರುತ ಮಾತು. ವಿದ್ವದ್ವಲಯದಲ್ಲಿ ಈ ಮಾತಿಗೆ ತುಂಬ ತೂಕವಿದೆ.
ಅಲೌಕಿಕರಿಗೆ ದೇವರು ಸರ್ವಜ್ಞನಾದರೆ ಲೌಕಿಕರಿಗೆ ವ್ಯಾಸರು ಸರ್ವಜ್ಞ. ವ್ಯಾಸರು ಸರ್ವಜ್ಞರೂ ಅಹುದು. ಅವರು ಮರ್ಮಜ್ಞರೂ ಅಹುದು; ಮತ್ತವರು ಧರ್ಮಜ್ಞರೂ ಅಹುದು, ತತ್ತ್ವಜ್ಞರೂ ಅಹುದು. ವ್ಯಾಸರು ಅರಿಯದೆ ಇರುವುದು ಯಾವುದೂ ಇಲ್ಲ. ಅವರ ಜ್ಞಾನದ ವಿಸ್ತಾರ ತುಂಬ ದೊಡ್ಡದು. ಅದು ಜಗದಗಲ, ಮುಗಿಲಗಲ, ಮಿಗೆಯಗಲ!!
“ಮಹರ್ಷಿ” ಗೌರವಕ್ಕೆ ಪಾತ್ರರಾದ ವ್ಯಾಸ ಮಹರ್ಷಿಗಳೊಂದು ಬಹುದೊಡ್ಡ ವಿಶ್ವಕೋಶ.
ಅವರು ಆ ಕಾಲದ ವಿಶ್ವಕೋಶ ಮತ್ತು ಜ್ಞಾನಕೋಶ. ಅವರು ಈ ಕಾಲದ ಎನ್‌ಸೈಕ್ಲೋಪೀಡಿಯಾ ಮತ್ತು ವೀಕಿಪಿಡಿಯಾ. ಅವರೊಂದು ಎಣಿಕೆಗೆ ಸಿಕ್ಕದ ಜ್ಞಾನಭಂಡಾರ. ವ್ಯಾಸ ಎಂದರೆ “ವಿಸ್ತರಿಸಿಕೊಳ್ಳುವುದು” ಎಂದರ್ಥ.
ವ್ಯಾಸ ಮತ್ತು ಹವ್ಯಾಸಗಳು ಯಾವಾಗಲೂ ವಿಸ್ತರಿಸಿಕೊಳ್ಳುತ್ತಲೇ ಇರುತ್ತವೆ. ವ್ಯಾಸರದು ಕೊನೆ, ಮೊದಲಿಲ್ಲದ ವಿಸ್ತಾರ. ಅವರು ವೇದಮಯ ಮತ್ತು ಪುರಾಣಮಯ. ಅವರು ಬ್ರಹ್ಮಮಯ ಮತ್ತು ಭಾರತಮಯ.
ವ್ಯಾಸರು ವೇದಗಳನ್ನು ಕರಾತಲಾಮಲಕಗೊಳಿಸಿಕೊಂಡಿದ್ದರು. ಅವರು ವೇದಗಳನ್ನು ವಿಂಗಡಿಸುವುದಷ್ಟೇ ಅಲ್ಲ, ಅವುಗಳನ್ನು ವಿಸ್ತರಿಸಿ ವ್ಯಾಖ್ಯಾನಿಸಿದವರು. ಆದ್ದರಿಂದಲೇ ಅವರು ಬರೀ ವ್ಯಾಸರಲ್ಲ; ಅವರು ವೇದವ್ಯಾಸರು.
ಹದಿನೆಂಟು ಪುರಾಣಗಳನ್ನು ಬರೆದ ಹೆಗ್ಗಳಿಕೆ ಅವರದು. ಮತ್ಸಯಪುರಾಣ, ಮಾರ್ಕಂಡೇಯ ಪುರಾಣ, ಭವಿಷ್ಯಪುರಾಣ, ಬ್ರಹ್ಮಪುರಾಣ, ಬ್ರಹ್ಮಾಂಡ ಪುರಾಣ, ಭಾಗವತಪುರಾಣ, ಬ್ರಹ್ಮವೈವರ್ತಪುರಾಣ, ವಾಮನಪುರಾಣ, ವಾಯುಪುರಾಣ, ವಿಷ್ಣುಪುರಾಣ, ವರಾಹಪುರಾಣ, ಅಗ್ನಿಪುರಾಣ, ನಾರದಪುರಾಣ, ಪದ್ಮಪುರಾಣ, ಲಿಂಗಪುರಾಣ, ಗರುಡಪುರಾಣ, ಕೂರ್ಮಪುರಾಣ, ಸ್ಕಂದಪುರಾಣ – ಈ ಹದಿನೆಂಟು ಪುರಾಣಗಳನ್ನು ಜಗತ್ತಿಗೆ ಧಾರೆ ಎರೆದ ಕೀರ್ತಿ ವ್ಯಾಸರದು.
ವ್ಯಾಸರಿಗೆ ಬ್ರಹ್ಮಸೂತ್ರಗಳು ಆಪಾದಮಸ್ತಕ. ಅವರು ಸೂತ್ರಗಳಿಗೆ ದಿಕ್ಸೂಚಿ. ಮತ್ತವರು ಸೂತ್ರಗಳ ಮಾರ್ಗಸೂಚಿ. ಆದ್ದರಿಂದ ಅವರು ಬ್ರಹ್ಮಮಯ. ವ್ಯಾಸರು ಮಹಾಭಾರತದ ಕರ್ತೃ. ಅಷ್ಟು ಮಾತ್ರವಲ್ಲ, ಅವರು ಮಹಾಭಾರತದ ಒಂದು ಸಶಕ್ತ ಪಾತ್ರವೂ ಕೂಡ ಅಹುದು. ವ್ಯಾಸರು ಮಹಾಭಾರತದ ಕರ್ತಾ, ಧರ್ತಾ, ಭರ್ತಾ. ಅವರು ಮಹಾಭಾರತದ ತುಂಬೆಲ್ಲ ಹಾಸುಹೊಕ್ಕು!!
ರಾಮಾಯಣಕ್ಕೆ ಮಹರ್ಷಿ ವಾಲ್ಮೀಕಿಗಳು ಆದಿಯಾದ ಹಾಗೆ ಮಹಾಭಾರತಕ್ಕೆ ವ್ಯಾಸರು ಆದಿಯೂ ಅಹುದು; ಅವರು ಮಹಾಭಾರತದ ಬುನಾದಿಯೂ ಅಹುದು. ಮಹಾಭಾರತಕ್ಕೆ ಮುನ್ನುಡಿಯೂ ಅವರೇ, ಬೆನ್ನುಡಿಯೂ ಅವರೇ!!
ವ್ಯಾಸರು ಅಲೌಕಿಕ ಶಕ್ತಿಸಂಪನ್ನರು. ಅವರು ಕರ್ತುಂ, ಅಕರ್ತುಂ ಮತ್ತು ಅನ್ಯಥಾ ಕರ್ತುಂ ಶಕ್ತಿಸಂಪನ್ನರು. ವ್ಯಾಸರು ಲೌಕಿಕ, ಅಲೌಕಿಕ – ಎರಡರಲ್ಲೂ ಅಜಾತಶತ್ರುಗಳು.
ವ್ಯಾಸರು ಋಷಿಪುತ್ರರು. ಋಷಿ ಪರಾಶರ ಮುನಿಗಳು ವ್ಯಾಸರ ತಂದೆ. ಪರಿಣತಮತಿ ನಿಷಾದಪುತ್ರಿ ಸತ್ಯವತಿ ವ್ಯಾಸರ ತಾಯಿ. ವ್ಯಾಸರು ಪರಾಶರ, ಸತ್ಯವತಿಯರ ಕೂಡಲಸಂಗಮ. ವ್ಯಾಸರು ಪರಾಶರರ ಹಾಗೆ ಋಷಿಗಳೂ ಅಹುದು; ಅವರು ಸತ್ಯವತಿಯ ಹಾಗೆ ಪರಿಣತಮತಿಗಳೂ ಅಹುದು.
ವ್ಯಾಸರ ಮೈಬಣ್ಣ ಕಪ್ಪಾಗಿದ್ದುದರಿಂದ ಅವರನ್ನು “ಕೃಷ್ಣದ್ವೈಪಾಯನ” ಎಂದು ಕೂಡ ಕರೆಯುವುದು ಉಂಟು. ಅವರು ಬಹುಕಾಲ ಬದರೀವನದಲ್ಲಿ ವಾಸವಾಗಿದ್ದುದರಿಂದ ಅವರಿಗೆ ಬಾದರಾಯಣ ಎಂದು ಕೂಡ ಕರೆಯುತ್ತಾರೆ.
ದೇವರ ಇಪ್ಪತ್ನಾಲ್ಕು ಅವತಾರಗಳಲ್ಲಿ ವೇದವ್ಯಾಸರ ಅವತಾರ ಕೂಡ ಒಂದು ಎಂದು ಹೇಳಲಾಗುತ್ತದೆ. ವ್ಯಾಸರು ಬರೀ ವೇದವ್ಯಾಸರು ಮಾತ್ರವಲ್ಲ, ಅವರೊಂದು ಸ್ಮೃತಿಯನ್ನು ಕೂಡ ರಚಿಸಿದ್ದಾರೆ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿಗಳ ಹಾಗೆ ವ್ಯಾಸಸ್ಮೃತಿ ಕೂಡ ಸುಪ್ರಸಿದ್ಧ.
ವ್ಯಾಸರು ಜ್ಞಾನದ ಆಕರಗಳ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇದು ಕಾರಣ, ಭಾರತೀಯ ವಾಙ್ಮಯವು ವೇದವ್ಯಾಸರಿಗೆ ಸದಾ ಋಣಿಯಾಗಿದೆ. ಭಾರತೀಯ ಸಂಸ್ಕೃತಿಯನ್ನು ಕಟ್ಟುವಲ್ಲಿ ಮತ್ತು ಸನಾತನ ಧರ್ಮದ ಸಂಪನ್ಮೂಲಗಳನ್ನು ಸಂವರ್ಧಿಸುವಲ್ಲಿ ವೇದವ್ಯಾಸರ ಪಾತ್ರ ತುಂಬ ಮಹತ್ತರವಾಗಿದೆ.
ಮಹರ್ಷಿ ವ್ಯಾಸರು ತ್ರಿಕಾಲದರ್ಶಿಗಳಾಗಿದ್ದರು. ಅವರಿಗೆ ಭೂತ, ವರ್ತಮಾನ, ಭವಿಷ್ಯದ ವಕ್ತಾರರಾಗಿದ್ದರು. ಮಹಾಭಾರತದ ಪ್ರತಿಯೊಬ್ಬ ವ್ಯಕ್ತಿಯ ವರ್ತಮಾನ, ಇತಿಹಾಸ ಮತ್ತು ಭವಿಷ್ಯ ಅವರಿಗೆ ಗೊತ್ತಿತ್ತು.
ಅದು ಧೃತರಾಷ್ಟ್ರನಾದರೂ ಸರಿ; ಅದು ದುರ್ಯೋಧನನಾದರೂ ಸರಿ; ಅದು ಧರ್ಮರಾಜನಾದರೂ ಸರಿ; ಅದು ದ್ರೌಪದಿಯಾದರೂ ಸರಿ; ಅದು ಗಾಂಧಾರಿಯಾದರೂ ಸರಿ – ಅವರೆಲ್ಲರ ಪೂರ್ವಾಪರಗಳು, ಇತಿಮಿತಿ, ಪರಿಮಿತಿಗಳು ವ್ಯಾಸರಿಗೆ ಚೆನ್ನಾಗಿ ಗೊತ್ತಿತ್ತು. ವ್ಯಾಸರು ಅಪ್ಪಟ ಮಾತೃಭಕ್ತರು. ಅವರು ಅಮ್ಮನ ಮಗ.
ಅವರು ಋಷಿಗಳಾದರೂ ಸಹ ಅಮ್ಮ ಕರೆದಾಗಲೆಲ್ಲ ಅಮ್ಮನ ಮುಂದೆ ಪ್ರತ್ಯಕ್ಷರಾಗುತ್ತಿದ್ದರು. ಅಮ್ಮ ಹೇಳಿದ ಪ್ರತಿಯೊಂದು ಮಾತನ್ನೂ ಅವರು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅವರು ಅಮ್ಮನ ಆಜ್ಞೆ, ಆದೇಶವನ್ನು ಶಿರೋಧಾರ್ಯವಾಗಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಆ ಕಾಲದ ಜನಗಳ ಭಾಷೆಯಲ್ಲಿ ಹೇಳುವುದಾದರೆ ಅವರೊಬ್ಬ “ಆಪದ್ಬಾಂಧವʼʼ ಮತ್ತು ಈ ಕಾಲದ ಜನಗಳ ಭಾಷೆಯಲ್ಲಿ ಹೇಳುವುದಾದರೆ ಅವರೊಬ್ಬ “ಟ್ರಬಲ್‌ಶೂಟರ್”!.
ಅಮ್ಮನ ಆದೇಶವನ್ನು ಶಿರಸಾವಹಿಸಿ ಅವರು ಕುರುಕುಲ ಮತ್ತು ಕುರುವಂಶಾವಳಿ ಬೆಳೆಯುವುದಕ್ಕೆ ಕಾರಣರಾಗುತ್ತಾರೆ. ಅವರು ಅಮ್ಮನ ಆದೇಶಕ್ಕೆ ತಲೆಬಾಗಿ ಧೃತರಾಷ್ಟ್ರ, ಪಾಂಡುರಾಜ ಮತ್ತು ವಿದುರರಿಗೆ ಜನ್ಮಕೊಡುತ್ತಾರೆ. ತನ್ಮೂಲಕ ಅವರು ಕೌರವ, ಪಾಂಡವ ಸಂತಾನದ ಹಸಿರು ನಿಶಾನೆಯಾಗುತ್ತಾರೆ.
ಭೀಷ್ಮ ಪಿತಾಮಹರು ಅಪ್ಪನಿಗಾಗಿ ಆಜನ್ಮ ಬ್ರಹ್ಮಚಾರಿಯಾಗಿ ಉಳಿದರೆ ವ್ಯಾಸ ಮಹರ್ಷಿಗಳು ಅಮ್ಮನಿಗಾಗಿ ಮತ್ತು ಅಮ್ಮನ ಇಚ್ಛಾಪೂರ್ತಿಗಾಗಿ ಸಂತತಿ ಸಂತಾನವರ್ಧಕರಾಗುತ್ತಾರೆ.
ವ್ಯಾಸ ಮಹರ್ಷಿಗಳ ಬದುಕು ಬರೀ ಬದುಕಲ್ಲ, ಅದೊಂದು ಭಗವದ್ಗೀತೆ. ಅದೊಂದು ಭರವಸೆ. ನಮ್ಮ ದೃಷ್ಟಿಯಲ್ಲಿ, ಭಗವದ್ಗೀತೆ ಎಂದರೆ ಭರವಸೆ ಮತ್ತು ಭಗವದ್ಗೀತೆ ಎಂದರೆ ಆತ್ಮವಿಶ್ವಾಸ. ವ್ಯಾಸರೂ ಕೂಡ ಹಾಗೇನೇ. ವ್ಯಾಸರೆಂದರೆ ಭರವಸೆ ಮತ್ತು ವ್ಯಾಸರೆಂದರೆ ಆತ್ಮವಿಶ್ವಾಸ. ನಮಗೆಲ್ಲ ಇಷ್ಟೊಂದು “ಬ್ರಹ್ಮಾಂಡ” ಜ್ಞಾನವನ್ನು ನೀಡಿದ ವ್ಯಾಸರ ವಿಷಯದಲ್ಲಿ ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ. ಅವುಗಳನ್ನು ಗಮನಿಸುವಾ.
1.ವ್ಯಾಸರ ತಂದೆ, ತಾಯಿಗಳಾದ ಋಷಿ ಪರಾಶರ ಮತ್ತು ನಿಷಾದಪುತ್ರಿ ಸತ್ಯವತಿಯರದು ಪ್ರೇಮವಿವಾಹ. ವ್ಯಾಸ ಮಹರ್ಷಿಗಳು ಅವರುಗಳ ಪ್ರೇಮಸಂಗಮದ ಕೂಸು.
೨. ತಿಥಿ, ಮಿತಿಗಳ ಪ್ರಕಾರ, ವ್ಯಾಸರು ಆಷಾಢ ಪೂರ್ಣಿಮೆಯಂದು ಜನಿಸುತ್ತಾರೆ.
೩. ತಂದೆ ಪರಾಶರ ಮುನಿಗಳ ಆಶೀರ್ವಾದದಿಂದ ವ್ಯಾಸರು ಜನಿಸಿದ ತಕ್ಷಣ ಯೌವನಸ್ಥರಾಗುತ್ತಾರೆ. ಅವರದು ನಿತ್ಯಯೌವನ; ಮತ್ತವರದು ಅಳಿವಿಲ್ಲದ ಯೌವನ. ಅವರು ಯೌವನ ನಿತ್ಯಚಿರಂಜೀವಿ.
೪.ಹುಟ್ಟಿದ ತಕ್ಷಣ ವ್ಯಾಸರು ತಪಸ್ಸನ್ನು ಮಾಡಲು ದ್ವೈಪಾಯನ ದ್ವೀಪಕ್ಕೆ ಹೋಗುತ್ತಾರೆ.
೫.ರಾಮಾಯಣದ ಕರ್ತೃ ವಾಲ್ಮೀಕಿ ತಪಸ್ಸು ಮಾಡುತ್ತಿದ್ದರೆ ಅವರ ಮೇಲೆ ಹುತ್ತ ಬೆಳೆಯುತ್ತದೆ. ಹುತ್ತದ ಕಾರಣದಿಂದಾಗಿಯೇ, ಅವರನ್ನು ವಾಲ್ಮೀಕಿ ಎಂದು ಕರೆಯುವುದು!! ಹಾಗೆಯೇ ವ್ಯಾಸರು ಕೂಡ ಘೋರ ತಪಸ್ಸನ್ನು ಮಾಡಿ ಕಪ್ಪಾಗುತ್ತಾರೆ. ತಪಸ್ಸಿನಿಂದ ಅವರ ಮೈ ಕಾಯ್ದು, ಕಾಯ್ದು ಕಪ್ಪಾದ ಕಾರಣದಿಂದಾಗಿಯೇ, ಅವರನ್ನು “ಕೃಷ್ಣದ್ವೈಪಾಯನ” ಎಂದು ಕರೆಯುತ್ತಾರೆ.
೬.ಶ್ರೀಮದ್ ಭಗವತ್‌ಪುರಾಣದಲ್ಲಿ ವಿವರಿಸಲಾದ ಭಗವಾನ್ ವಿಷ್ಣುವಿನ 24 ಅವತಾರಗಳಲ್ಲಿ, ಮಹರ್ಷಿ ವೇದವ್ಯಾಸರ ಹೆಸರೂ ಕೂಡ ಇದೆ.
೭.ಬಹುಶ್ರುತ ಮತ್ತು ಬಹುಜನಜ್ಞಾತ ಅಷ್ಟಚಿರಂಜೀವಿಗಳಲ್ಲಿ ಮಹರ್ಷಿ ವೇದವ್ಯಾಸರು ಕೂಡ ಒಬ್ಬರು.
೮.ವೇದವ್ಯಾಸರು ಈಗಲೂ ಇದ್ದಾರೆ. ಏಕೆಂದರೆ ಅವರು ಅಮರರು; ಮತ್ತವರು ಚಿರಂಜೀವಿಗಳು.
೯.ವ್ಯಾಸರು ದೈಹಿಕವಾಗಿ ಮತ್ತು ಭೌತಿಕವಾಗಿ ಮತ್ತು ನಮ್ಮ ಜೊತೆ ಇದ್ದಾರೋ ಇಲ್ಲವೋ ಎಂಬ ಜಿಜ್ಞಾಸೆ ಬೇಡ. ಅವರು ವೇದ, ಪುರಾಣ, ಇತಿಹಾಸ, ಮಹಾಭಾರತವಾಗಿ ಈಗಲೂ ನಮ್ಮ, ನಿಮ್ಮಗಳ ಜೊತೆಯಲ್ಲಿ ಇರುವುದಂತೂ ಅಕ್ಷರಶಃ ಸತ್ಯ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
೧೦.ವೇದವ್ಯಾಸರ ಸಲಹೆಯನ್ನು ಶಿರೋಧಾರ್ಯವಾಗಿಸಿಕೊಂಡು ಧೃತರಾಷ್ಟಪತ್ನಿ ಗಾಂಧಾರಿ “ಶತಕೌರವ” ಸಂತಾನಕ್ಕೆ ಜನ್ಮಕೊಡುತ್ತಾಳೆ.
೧೧. ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದಾಗ ಅದನ್ನು ವ್ಯಾಸರು ಬಲವಾಗಿ ಖಂಡಿಸುತ್ತಾರೆ. ಕೃಷ್ಣ ಅಶ್ವತ್ಥಾಮನಿಗೆ ಹಾಕಿದ ಶಾಪವನ್ನು ವ್ಯಾಸರು ಅನುಮೋದಿಸುತ್ತಾರೆ. ಅಶ್ವತ್ಥಾಮನ ವಿಷಯದಲ್ಲಿ ಕೃಷ್ಣನು ಜಾರಿಮಾಡಿದ “ಶಠಂ ಪ್ರತಿ ಶಾಠ್ಯಂ” ರಣನೀತಿಗೆ ವ್ಯಾಸರು ಸಹ ಧ್ವನಿಕೂಡಿಸುತ್ತಾರೆ.
೧೨. ಹಾವು ಮುತ್ತಿಕೊಂಡಿರುವ ಭೂಸಹಿತಪ್ರಪಂಚದ ಮೊದಲ ಭೌಗೋಳಿಕ ನಕ್ಷೆಯ ಕಲ್ಪನೆ ವೇದವ್ಯಾಸರದು.
೧೩. ವೇದವ್ಯಾಸರ ಹೆಂಡತಿಯ ಹೆಸರು ಅರುಣಿ. ಶುಕದೇವ ವ್ಯಾಸ ಮಹರ್ಷಿಗಳ ಮಗ. ಶುಕ ಮಹಾಯೋಗಿ. ತಪಸ್ಸು, ತತ್ತ÷್ವಜ್ಞಾನಗಳಲ್ಲಿ ಅಪ್ಪನನ್ನೇ ಮೀರಿಸಿದ ಬಾಲಯೋಗಿಯಾತ.
೧೪. ವೇದವ್ಯಾಸರು ನಾಲ್ಕು ಜನ ಶ್ರೇಷ್ಠ ಶಿಷ್ಯರನ್ನು ಹೊಂದಿದ್ದರು. ಅವರು ತಮ್ಮ ನಾಲ್ಕು ಜನ ಶಿಷ್ಯರಿಗೆ ನಾಲ್ಕು ವೇದಗಳನ್ನು ಕಲಿಸುತ್ತಾರೆ. ವ್ಯಾಸರು ತಮ್ಮ ಶಿಷ್ಯನಾದ ಪೈಲನಿಗೆ ಋಗ್ವೇದ, ವೈಶಂಪಾಯನನಿಗೆ ಯಜುರ್ವೇದ, ಜೈಮಿನಿಗೆ ಸಾಮವೇದ ಮತ್ತು ಸುಮಂತುವಿಗೆ ಅಥರ್ವವೇದವನ್ನು ಕಲಿಸುತ್ತಾರೆ.
೧೫. ವೇದವ್ಯಾಸರು ಮಹಾತಪಸ್ವಿಗಳು ಎಂಬುವುದಕ್ಕೆ ಒಂದು ಉದಾಹರಣೆ ಇಲ್ಲಿದೆ; ಕುರುಕ್ಷೇತ್ರ ಯುದ್ಧಾನಂತರ, ಅದೊಮ್ಮೆ ವ್ಯಾಸಮಹರ್ಷಿಗಳು ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ನೋಡಲು ಕಾಡಿಗೆ ಹೋಗುತ್ತಾರೆ. ಆ ಒಂದು ಸಂದರ್ಭದಲ್ಲಿ, ಯುಧಿಷ್ಠಿರನೂ ಕೂಡ ಅಲ್ಲಿಯೇ ಇರುತ್ತಾನೆ. ಅವರೆಲ್ಲರೂ ವ್ಯಾಸರ ಎದುರಿನಲ್ಲಿ ತಮ್ಮನ್ನು ಅಗಲಿಹೋದ ಸಂಬಂಧಿಗಳ “ಪುನರ್ದರ್ಶನ” ಮಾಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸುತ್ತಾರೆ. ವ್ಯಾಸರು ಅವರನ್ನೆಲ್ಲ ಗಂಗಾನದಿಯ ದಡಕ್ಕೆ ಕರೆತಂದು ಅವರಿಗೆಲ್ಲ ತಮ್ಮ ತಪೋಬಲದಿಂದ ಕುರುಕ್ಷೇತ್ರ ಯುದ್ಧದಲ್ಲಿ ಮೃತರಾದ ಭೀಷ್ಮ, ದ್ರೋಣಾದಿಗಳ “ಪುನರ್ದರ್ಶನ” ಮಾಡಿಸುತ್ತಾರೆ.
೧೬. ಪಾಂಡವರು ಸ್ವರ್ಗಾರೋಹಣ ಮಾಡುವುದಕ್ಕೆ ಸ್ವತಃ ವೇದವ್ಯಾಸರೇ ಮಾರ್ಗಸೂಚಿಯನ್ನು ನೀಡುತ್ತಾರೆ. ವ್ಯಾಸರ ಆಜ್ಞೆಯನ್ನು ಪಡೆದುಕೊಂಡು ಪಾಂಡವರು ಸ್ವರ್ಗಾರೋಹಣ ಕ್ರಿಯೆ-ಪ್ರಕ್ರಿಯೆಗೆ “ಅಥಶ್ರೀ” ಹೇಳುತ್ತಾರೆ.
೧೭.ವೇದವ್ಯಾಸರ ಇನ್ನೊಂದು ವಿಶೇಷತೆ ಎಂದರೆ, ಅವರು ಮಹಾಭಾರತವನ್ನು ಬರೆಯುವುದಕ್ಕೆ ನಾವೆಲ್ಲರೂ ಪೂಜಿಸುವ “ಪ್ರಥಮವಂದಿತ” ಗಣೇಶನನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಗಣೇಶ ಮಾತ್ರ ವ್ಯಾಸರನ್ನು ಜೀರ್ಣಿಸಿಕೊಳ್ಳಬಲ್ಲ ಮತ್ತು ಅರಗಿಸಿಕೊಳ್ಳಬಲ್ಲ. ವ್ಯಾಸರು ಇಡೀ ಜಗತ್ತು “ಜೈ” ಎನ್ನುವಂತೆ ಮಹಾಭಾರತವನ್ನು ಹೇಳುತ್ತ ಹೋದರೆ ಗಣಪತಿಯು ಇಡೀ ಜಗತ್ತು “ಸೈ” ಎನ್ನುವಂತೆ ಮಹಾಭಾರತವನ್ನು ಬರೆದು ದಾಖಲಿಸುತ್ತಾನೆ.
ಕೊನೆಯಲ್ಲೊಂದು ಮಾತು.
ಈ ಪ್ರಪಂಚದಲ್ಲಿ ಬೇರೆ ಯಾರೆಲ್ಲ ಬರೆದುದನ್ನು ಓದಿ ಮುಗಿಸಬಹುದು. ಆದರೆ ವ್ಯಾಸರು ಬರೆದುದನ್ನು ಮಾತ್ರ ಓದಿಮುಗಿಸುವುದು ಸಾಧ್ಯವೇ ಇಲ್ಲ. ವ್ಯಾಸರು ಅಷ್ಟೊಂದು ಬರೆದಿದ್ದಾರೆ. ವ್ಯಾಸರು ಅಷ್ಟಿಷ್ಟು ಬರೆದಿಲ್ಲ. ಅವರು ಬರೆದದ್ದನ್ನೆಲ್ಲ ಓದಲು ಒಂದಲ್ಲ, ಎರಡಲ್ಲ, ಹಲವಾರು ಜನ್ಮಗಳೇ ಬೇಕು. ವಿದ್ಯೆಯ ಆಪಾತಾಳನಭವಾದ ವ್ಯಾಸರಿಗೊಂದು “ಜೈ ಹೋ” ಹೇಳುತ್ತ ಅವರಿಗೆ ತಲೆಬಾಗಿ ವಂದಿಸುವಾ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಒಂದಂಶ ಕಡಿಮೆಯಾಗಿದ್ದರೂ ಚಿನ್ನವು ಅಪರಂಜಿಯಾಗುವುದಿಲ್ಲ!