ಧಾರವಾಡ: ಮಹಾಶಿವರಾತ್ರಿ (Maha Shivaratri 2023) ಹಿನ್ನೆಲೆಯಲ್ಲಿ ಬೆಳಗಿನಜಾವ 3 ಗಂಟೆಯಿಂದಲೇ ಭಕ್ತರು ಸೋಮೇಶ್ವರನ ದರ್ಶನ ಪಡೆದುಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ಮುಂಜಾನೆಯೇ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆಸಿ, ಆನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಪ್ರತಿವರ್ಷ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಸೋಮೇಶ್ವರ ದೇವಸ್ಥಾನ ಭಕ್ತರಿಂದ ತುಂಬಿ ತುಳುಕುತ್ತದೆ. ಶಾಲ್ಮಲಾ ನದಿ ದಡದಲ್ಲಿರುವ ಈ ಸೋಮೇಶ್ವರ ದೇವಸ್ಥಾನ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಶಿವರಾತ್ರಿ ಎಂದು ಭಕ್ತರು ಉಪವಾಸ ವೃತ ಕೈಗೊಳ್ಳುವುದರಿಂದ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನೇಕರು ಹಣ್ಣು, ಹಂಪಲು ವಿತರಣೆ ಮಾಡುವುದು ಕಂಡು ಬಂತು. ಮಹಾಶಿವರಾತ್ರಿ ವಿಶೇಷವಾಗಿ ಗರ್ಭಗುಡಿ ಪ್ರವೇಶಿಸಲು ಭಕ್ತರಿಗೆ ಅವಕಾಶ ಕಲ್ಪಿಸಿರುವುದರಿಂದ ಎಲ್ಲ ಭಕ್ತರು ಸೋಮೇಶ್ವರನಿಗೆ ಬಿಲ್ವಪತ್ರೆ ಹಾಗೂ ಹೂವುಗಳನ್ನು ಏರಿಸಿ ಕೃತಾರ್ಥರಾಗುತ್ತಿದ್ದಾರೆ.
ಐತಿಹಾಸಿಕ ತ್ರಿಕುಟೇಶ್ವರನಿಗೆ ನಮಿಸಿದ ಭಕ್ತರು
ಗದಗಿನ ಐತಿಹಾಸಿಕ ತ್ರಿಕೂಟೇಶ್ವರ ಹಾಗೂ ಸೋಮೇಶ್ವರ ದೇವಸ್ಥಾನಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆಮಾಡಿದೆ. ತ್ರಿಕುಟೇಶ್ವರ ದೇವಸ್ಥಾನದ ವಿಶೇಷತೆ ಎಂದರೆ ಒಂದೆ ಪಾಣ ಬಟ್ಟಲು ಬ್ರಹ್ಮ-ವಿಷ್ಣು-ಮಹೇಶ್ವರರ ತ್ರಿಲಿಂಗುಗಳ ಉದ್ಭವ ಲಿಂಗುವಿದೆ.
ಸೋಮೇಶ್ವರ ಹಾಗೂ ತ್ರಿಕೂಟೇಶ್ವರನಿಗೆ ಮಹಾ ರುದ್ರಾಭಿಷೇಕ, ಪಂಚಾಮೃತ, ಫಲ ಪಂಚಾಮೃತ, ಗಂಗಾಭಿಷೇಕ ಮಾಡಲಾಗಿದೆ. ಸೋಮೇಶ್ವರನಿಗೆ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಸೋಮೇಶ್ವರ ವಿಗ್ರಹ ತ್ರಿಚಕ್ರದಿಂದ ಕೆತ್ತನೆ ಮಾಡಲಾಗಿದ್ದು, ತ್ರಿಚಕ್ರದ ಮೇಲೆ ಶಿವನ ಸ್ಥಾಪನೆ ಮಾಡಲಾಗಿದೆ. ಪಾರ್ವತಿ ಹಾಗೂ ಶಿವನ ಸಮ್ಮಿಲನ ಇಲ್ಲಿಯೇ ಆದದ್ದು ಎಂಬ ನಂಬಿಕೆ ಇದೆ.
ಇದನ್ನೂ ಓದಿ: Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ
ಹೀಗಾಗಿ ಐತಿಹಾಸಿಕ ದೇವಸ್ಥಾನಕ್ಕೆ ಗದಗ ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಮಹಾ ಶಿವರಾತ್ರಿ ಅಂಗವಾಗಿ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಎಳೆ ನೀರು ಅಭಿಷೇಕ, ರುದ್ರಾಭಿಷೇಕ, ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಯಾಮ ಪೂಜೆ, ಮಹಾ ಮಂಗಳಾರತಿ ಹೀಗೆ ಅನೇಕ ವಿಶೇಷ ಪೂಜೆಗಳು ನಡೆಯಲಿವೆ.
ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದು, ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರ ಇಷ್ಟಾರ್ಥ ಈಡೇರಿಸುವಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದು ದೇವಸ್ಥಾನ ಅರ್ಚಕ ಪ್ರದೀಪ ಹಿರೇಮಠ ತಿಳಿಸಿದ್ದಾರೆ.
ಮಹಾ ಶಿವರಾತ್ರಿಯ ಇನ್ನಷ್ಟು ವಿಶೇಷ ಸುದ್ದಿಗಳಿಗೆ ಈ ಲಿಂಕ್ ಮಾಡಿ