ಶಿವಮೊಗ್ಗ/ಕೊಡಗು: ಶಿವರಾತ್ರಿ ಪ್ರಯುಕ್ತ (Maha Shivaratri 2023) ಶಿವಮೊಗ್ಗದ (Shivamoga) ಹರಕೆರೆ ರಾಮೇಶ್ವರ ದೇವಾಲಯದಲ್ಲಿ ಸಹಸ್ರ ಲಿಂಗಗಳಿಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಹಿಂಬದಿಯಲ್ಲಿರುವ ತುಂಗಾ ನದಿಯಲ್ಲಿ (Tunga river) ಭಕ್ತರು ಪವಿತ್ರ ಸ್ನಾನ ಮಾಡಿ, ಸಹಸ್ರ ಲಿಂಗಗಳಿಗೆ ಪೂಜೆ ಸಲ್ಲಿಸಿದರು.
ಇಲ್ಲಿರುವ ಬೃಹದಾಕಾರದ ಶಿವಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಸಂಘಟನೆಗಳು ನಿರಂತರವಾಗಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟವು. ದೇವರ ದರ್ಶನ ಮಾಡಿ ಬರುವ ಭಕ್ತರಿಗೆ ಪ್ರಸಾದ, ಪಾನಕ, ಭಕ್ತಾದಿಗಳಿಗೆ ನೀರು, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಸ್ಥಾನದ ಎದುರು ಭಕ್ತರ ಸಂದಣಿ ಹೆಚ್ಚಾದ ಕಾರಣ ಪೊಲೀಸರು ತೀರ್ಥಹಳ್ಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಿದ್ದರು.
ಶಿವ ಜಪದಲ್ಲಿ ಮುಳುಗಿದ ಮಡಿಕೇರಿ ಮಂದಿ
ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಅದರಲ್ಲೂ ಮಂಜಿನ ನಗರಿ ಮಡಿಕೇರಿಯಲ್ಲೂ (Madikeri) ಶಿವ ದೇವಾಲಯಗಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಶಿವ ಮಂದಿರಗಳಲ್ಲಿ ವಿಶೇಷ ಪೂಜೆಗಳ ಮೂಲಕ ವಿಷಕಂಠನ ಸ್ಮರಣೆ ಮಾಡಲಾಯಿತು.
ಕಾಫಿನಾಡು ಕೊಡಗಿನಲ್ಲಿಯೂ ಕೂಡ ಶಿವಾರಾಧನೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಮಂಜಿನ ನಗರಿ ಮಡಿಕೇರಿಗೆ ಹೊಂದಿಕೊಂಡಿರುವ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಸನ್ನಿದಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿಂದು ಮಹಾದೇವನಿಗೆ ಹಾಲು, ನೀರು, ತುಪ್ಪ, ಜೇನು, ಎಳನೀರುಗಳಿಂದ ಅಭಿಷೇಕ ಮಾಡಲಾಯಿತು. ಫಲ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಕ್ಷೇತ್ರದಲ್ಲಿ ನೆಲೆನಿಂತಿರುವ 52 ಅಡಿ ಎತ್ತರದ ಬೃಹತ್ ಶಿವ ಮೂರ್ತಿಯನ್ನು ಕಂಡು ಪುಳಕಿತರಾದರು.
ಗದಗ ಶ್ರೀ ತ್ರಿಕೋಟೇಶ್ವರ, ಸೋಮೇಶ್ವರ ದೇವರಿಗೆ ವಿಶೇಷ ಪೂಜೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Khalistan Terror: ಖಲಿಸ್ತಾನಿ ಪರ ಘೋಷಣೆ ಕೂಗದಿದ್ದರೆ ಶಿವರಾತ್ರಿ ಆಚರಣೆ ಧ್ವಂಸ; ಆಸ್ಟ್ರೇಲಿಯಾದ ದೇಗುಲಕ್ಕೆ ಬೆದರಿಕೆ
ಜತೆಗೆ ಇತಿಹಾಸ ಪ್ರಸಿದ್ಧ ಮಡಿಕೇರಿಯ ಓಂಕಾರೇಶ್ವರ ದೇವಾಲಯ ಹಾಗೂ ಮುನೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆಗಳು ನಡೆಯುತ್ತಿದ್ದು ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ದೇವರ ಕೃಪೆಗೆ ಪಾತ್ರರಾದರು.