Site icon Vistara News

Maha Shivaratri 2024: ಶಿವರಾತ್ರಿ ಆಚರಣೆಯ ಮಹತ್ವ ಮತ್ತು ಹಿನ್ನೆಲೆ ತಿಳಿಯೋಣ…

Maha Shivaratri 2024

ಅಲಕಾ ಕೆ
ವರ್ಷದ ಅಷ್ಟೂ ದಿನಕ್ಕೂ ಒಂದೊಂದು ಹೆಸರಿಟ್ಟು ಹಬ್ಬ ಮಾಡುವ ದೇಶ ನಮ್ಮದು. ವರ್ಷವಿಡೀ ಸಂಭ್ರಮಿಸುತ್ತ ಬದುಕನ್ನು ಚಂದವಾಗಿರುವ ದೇಶದಲ್ಲಿ ಶಿವರಾತ್ರಿಯ ಆಚರಣೆಗೊಂದು ವಿಶೇಷ ಮಹತ್ವವಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಈತ ಸೃಷ್ಟಿಯಲ್ಲಿ ಸ್ಥಿತಿಯಿಂದ ಹೊರತಾದ ಎಲ್ಲವನ್ನೂ ಲಯ ಮಾಡುವವ. ಹೊಸ ಹುಟ್ಟಿಗೆ ಅವಕಾಶ ಉಂಟಾಗುವುದು ಹಳತೆಲ್ಲ ಹೋದಾಗಲೇ ತಾನೇ? ಅಂದರೆ ಹೊಸ ಹುಟ್ಟೆಂದರೆ ಹೊಸ ಶಕ್ತಿಯ ಹುಟ್ಟೂ ಹೌದು. ಶಿವರಾತ್ರಿಯೆಂದರೆ (Maha Shivaratri 2024) ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವುದು ಎಂಬ ಭಾವವೂ ಇದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಉಪವಾಸದಿಂದ ಬೇಡದ್ದನ್ನು ಕಳೆದುಕೊಂಡು, ಜಗನ್ನಿಯಾಮಕನ ಧ್ಯಾನದಿಂದ ಹೊಸಶಕ್ತಿಯನ್ನು ಮೈಗೂಡಿಸಿಕೊಳ್ಳುವ ಕಾಲ.

ಪೌರಾಣಿಕ ಹಿನ್ನೆಲೆ

ಈ ಆಚರಣೆಗೆ ಹಲವು ರೀತಿಯ ಪೌರಾಣಿಕ ಹಿನ್ನೆಲೆಗಳಿವೆ. ಶಿವ ಮತ್ತು ಶಕ್ತಿಯರು ಒಂದಾಗಿ ಅಖಂಡ ಶಕ್ತಿಯೊಂದು ಉದ್ಭವಿಸಿದ ದಿನವಿದು. ದೇವಾಸುರರು ಸಮುದ್ರ ಮಥನ ನಡೆಸಿದ ಕಾಲದಲ್ಲಿ, ಅಮೃತಕ್ಕಿಂತ ಮೊದಲು ವಿಷ ಹೊರಬಂತು. ಲೋಕವನ್ನು ಉಳಿಸುವುದಕ್ಕಾಗಿ ಶಿವ ಆ ವಿಷಯವನ್ನು ಕುಡಿದ. ಆ ಹಾಲಾಹಲ ಆತನ ಗಂಟಲಿನಲ್ಲಿ ನಿಲ್ಲುವಂತೆ ಮಾಡಿದಳು ಪಾರ್ವತಿ. ಇದರಿಂದ ಆತ ನೀಲಕಂಠನಾದ ಈ ಸಂದರ್ಭವನ್ನೂ ಶಿವರಾತ್ರಿಯಲ್ಲಿ ನೆನಪಿಸಲಾಗುತ್ತದೆ. ಇದಲ್ಲದೆ, ದೀರ್ಘ ತಪಸ್ಸಿನ ನಂತರ ಈಶ್ವರ ಲಿಂಗರೂಪಿಯಾಗಿ ಉದ್ಭವಿಸಿದ ಕಥಾನಕವೂ ಇದೆ. ಅದನ್ನು ಕಣ್ತುಂಬಿಕೊಳ್ಳುವುದಕ್ಕೆ ರಾತ್ರಿಯ ಜಾಗರಣೆ ಮಾಡಬೇಕೆನ್ನುವ ಪ್ರತೀತಿಯಿದೆ.

ಗಂಗಾವತರಣ

ಇನ್ನೊಂದು ಹಿನ್ನೆಲೆಯೆಂದರೆ ಗಂಗಾವತರಣದ್ದು. ಭಗೀರಥನ ಪ್ರಾರ್ಥನೆಯಂತೆ ಭೂಮಿಗಿಳಿಯಲು ಭಾಗೀರಥಿ ಒಡಂಬಟ್ಟಿದ್ದರೂ, ಧರಗಿಳಿಯುವ ರೀತಿ ಹೇಗೆ ಎಂಬುದು ಬಗೆಹರಿದಿರಲಿಲ್ಲ. ಕಾರಣ, ಗಂಗೆ ತನ್ನ ಪೂರ್ಣ ಶಕ್ತಿಯನ್ವಯ ಧರೆಗೆ ಧುಮ್ಮಿಕ್ಕಿದ್ದರೆ ಲೋಕವೇ ಅಲ್ಲೋಲಕಲ್ಲೋಲ ಆಗುತ್ತಿತ್ತು. ಹಾಗಾಗಿ ಆಕೆಯನ್ನು ತನ್ನ ಜಟೆಯಲ್ಲಿ ಬಂಧಿಸಿದ ಶಿವ ಗಂಗಾಧರನಾದ. ಅಲ್ಲಿಂದ ಆಕೆ ಧಾರೆಯಾಗಿ ಭೂಮಿಗೆ ಪ್ರವಹಿಸಿದಳು ಎನ್ನುತ್ತವೆ ಪುರಾಣಗಳು. ಈ ಹಿನ್ನೆಲೆಯಲ್ಲಿ ಶಿವಲಿಂಗಕ್ಕೆ ಜಲಾಭಿಷೇಕವೂ ಶ್ರೇಷ್ಠವೇ ಎನ್ನಲಾಗುತ್ತದೆ.

ಆಚರಣೆ ಹೇಗೆ?

ಇವೆಲ್ಲ ಶಿವರಾತ್ರಿಯ ಆಚರಣೆಗಿರುವ ನಾನಾ ಹಿನ್ನೆಲೆಗಳು. ಆದರೆ ಆಚರಣೆಯನ್ನು ಹೇಗೆ ಮಾಡಬೇಕು? ಉಪವಾಸ, ಧ್ಯಾನ ಮತ್ತು ಭಜನೆ ಈ ಆಚರಣೆಯ ಮುಖ್ಯ ಅಂಗಗಳು.

ಉಪವಾಸ

ದೇಹ ಮತ್ತು ಮನಸ್ಸುಗಳ ಶುದ್ಧೀಕರಣಕ್ಕೆ ಇದು ಅತ್ಯಂತ ಮಹತ್ವದ್ದು ಎಂದು ಹೇಳಲಾಗುತ್ತದೆ. ಈಗಿನ ಭಾಷೆಯಲ್ಲಿ ಹೇಳುವುದಾದರೆ, ದೇಹ-ಮನಸ್ಸುಗಳನ್ನು ಡಿಟಾಕ್ಸ್‌ ಮಾಡುವ ಕ್ರಮವಿದು. ಆರೋಗ್ಯದ ಸಮಸ್ಯೆ ಇರುವವರಿಗೆ, ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಉಪವಾಸದ ನೇಮವಿಲ್ಲ.

ಧ್ಯಾನ

ವರ್ಷವಿಡೀ ಧ್ಯಾನ-ಪೂಜೆ-ಜಪ-ತಪಗಳನ್ನು ಆಚರಿಸುವುದು ಇಂದಿನ ದಿನಗಳಲ್ಲಿ ಆಗದ ಮಾತು. ಅದಕ್ಕಾಗಿ ದಿನವೊಂದನ್ನು ಮೀಸಲಿರಿಸಿ, ಅಂದಿನ ದಿನ ಕುಂದಿಲ್ಲದಂತೆ ವ್ರತಾಚರಣೆಯಲ್ಲಿ ತೊಡಗುವುದು ಸೂಕ್ತ. ಅಂದಿನ ಧ್ಯಾನ, ಜಪದಿಂದ ವಿಶೇಷ ಶಕ್ತಿ ಸಂಚಯನವಾಗುತ್ತದೆಂಬ ನಂಬಿಕೆ ದೇಶದೆಲ್ಲೆಡೆ ಪ್ರಚಲಿತದಲ್ಲಿದೆ.

ಜಪ

ʻನಮಃ ಶಿವಾಯʼ ಎಂಬ ಪಂಚಾಕ್ಷರಿ ಮಂತ್ರದ ಜಪ ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಸೃಷ್ಟಿಯ ಪಂಚತತ್ವಗಳಾದ ಭೂಮಿ, ಜಲ, ಅಗ್ನಿ, ವಾಯು, ಆಕಾಶ ತತ್ವಗಳನ್ನು ಈ ಪಂಚಾಕ್ಷರಿ ಮಂತ್ರ ಸೂಚಿಸುತ್ತದೆ. ಈ ಮಂತ್ರವು ಉತ್ಪಾದಿಸುವ ಧ್ವನಿ ತರಂಗಗಳು ಮನಸ್ಸಿಗೆ ಏಕಾಗ್ರತೆ ಮತ್ತು ದೇಹಕ್ಕೆ ಚೈತನ್ಯವನ್ನು ನೀಡುತ್ತವೆ ಎಂಬ ಮಾತಿದೆ. ನಿಜ ಭಕ್ತಿಯಿಂದ ಈ ಮಂತ್ರದ ಮೂಲಕ ಶಿವನನ್ನು ಜಪಿಸಿದರೆ ಬದುಕು ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಪ್ರಾಜ್ಞರು.

ಪೂಜೆ

ಶಿವನಿಗೆ ಬಿಲ್ವಪತ್ರೆ, ಬಿಳಿಯ ಹೂಗಳು, ಭಸ್ಮ, ವಿಭೂತಿಯಂಥ ವಸ್ತುಗಳಿಂದ ಪೂಜಿಸುವುದು ಶ್ರೇಷ್ಠ ಎನ್ನಲಾಗುತ್ತದೆ. ಸರಳವಾದ ಜಲಾಭಿಷೇಕವೂ ಮಹಾದೇವನಿಗೆ ಮೆಚ್ಚುಗೆಯೆ. ಉಳಿದಂತೆ, ಪೂಜಾ ವಿಧಾನಗಳೆಲ್ಲ ಆಯಾ ಪ್ರಾಂತ್ಯಗಳ ಆಚರಣೆ ಅಥವಾ ಅವರವರ ಭಕ್ತಿಗೆ ಬಿಟ್ಟಿದ್ದು. ಬಾಹ್ಯದ ಪೂಜಾಡಂಬರಕ್ಕಿಂತಲೂ ಆಂತರಿಕವಾದ ಶುದ್ಧ ಭಕ್ತಿಯಿಂದ ನಿವೇದಿಸಿಕೊಳ್ಳುವುದು ಮಹಾದೇವನಿಗೆ ಪ್ರಿಯವಾಗುವಂಥದ್ದು.

Exit mobile version