Site icon Vistara News

Maha Shivaratri 2024: ಮಹೇಶ್ವರನ ಕುರಿತು ಎಷ್ಟೊಂದು ಕುತೂಹಲಕರ ಸಂಗತಿಗಳು!

Maheshwar

ಅಲಕಾ ಕೆ

ಭಕ್ತರ ಕರೆಗೆ ಓಗೊಳ್ಳದ ದೇವರಿಲ್ಲ. ಆದರೆ ಕರೆಯುವ (Maha Shivaratri 2024) ಭಕ್ತರು ಮೌನಿಗಳಾದರೆ ಅದರಲ್ಲಿ ದೇವರ ಪಾತ್ರವಿಲ್ಲ. ಹೀಗೆ ಮಹಾದೇವನನ್ನು ಕರೆಯುವವರು, ಜಪಿಸುವವರು, ಭಜಿಸುವವರು ಅವನ ಹಲವು ರೂಪಗಳನ್ನು, ಸಾಧ್ಯತೆಗಳನ್ನು ಕಲ್ಪಿಸಿಕೊಂಡಿದ್ದಾರೆ. ಹೆಸರು ಯಾವುದೇ ಹೇಳಿದರೂ, ಉಸಿರಿನಲ್ಲಿ ದೇವನಿದ್ದರೆ ಆತನ ಕಿವಿಗಾ ಕರೆ ದೂರವಲ್ಲ. ಹೀಗೆ ಕರೆಯುವ ಮುನ್ನ, ಆ ಮಹಾದೇವನ ಬಗೆಗೊಂದಿಷ್ಟು ಭಾವಗಳು ಈ ರೀತಿಯಲ್ಲಿ ಹರಡಿಕೊಂಡಿವೆ.
ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ. ದೇವರಾದರೂ ಸಂಸಾರಿಯಾಗಿ, ಸಂಸಾರಿಯಾದರೂ ವಿರಾಗಿಯಾಗಿ, ಭಕ್ತರಲ್ಲಿ ಅನುರಕ್ತನೂ ಆಗಿರುವ ಆತ ಲೋಕಕ್ಕೆ ನೀಡುವ ಸಂದೇಶವೇನು? ಶಿವಾರಾಧನೆಯ ಈ ಪರ್ವಕಾಲದಲ್ಲಿ ಮಹೇಶ್ವರನ ಬಗೆಗಿನ ಒಂದಿಷ್ಟು ಕುತೂಹಲಗಳನ್ನಿಲ್ಲಿ ತಣಿಸಿಕೊಳ್ಳೋಣ.

ಪರಿವರ್ತನೆ

ಈಗಿರುವ ಸಂವತ್ಸರ ಹೊರಳಿ ಮುಂಬರುವ ಹೊಸ ಸಂವತ್ಸರಕ್ಕೆ ದಾರಿ ಮಾಡುವ ಕೊಂಚ ಮೊದಲು, ಅಂದರೆ ಫಾಲ್ಗುಣ ಮಾಸದ ಅಮವಾಸ್ಯೆಯ ಮುನ್ನಾದಿನದ ಚತುರ್ದಶಿಯ ತಿಥಿಗೆ ಶಿವರಾತ್ರಿಯ ಆಚರಣೆ ನಡೆಯುತ್ತದೆ. ಹಾಗಾಗಿ ಈತ ಲಯಕ್ಕೆ ಮಾತ್ರವಲ್ಲ, ಪರಿವರ್ತನೆಗೂ ದೇವ. ಆದರೆ ಲೋಕದಲ್ಲಿ ಪರಿವರ್ತನೆ ಎನ್ನುವುದು ನಿತ್ಯನೂತನ ಎಂದಾದ್ದರಿಂದ, ನಿತ್ಯವೂ ಸ್ಮರಣೆಗೆ ಬರುವವ, ಭಕ್ತರನ್ನು ಉದ್ಧರಿಸುವವ ಈ ಲೋಕನಾಥ.

ಲಯವೆಂಬ ಬಿಡುಗಡೆ

ಕಾಲವನ್ನು ಚಕ್ರವೆಂದು ಕರೆಯಲಾಗುತ್ತದೆ. ಒಳಿತು-ಕೆಡುಕು, ಸುಖ-ಶೋಕಗಳ ಕಾಲಗಳು ಮೇಲೆ-ಕೆಳಗೆ ಉರುಳುತ್ತಲೇ ಇರುತ್ತವೆ. ಹಾಗಾಗಿ ಹೊಸತು ಸೃಷ್ಟಿಯಾಗಿ, ಇರುವುದು ನಿರ್ವಹಣೆಯಾಗಿ, ಬೇಡದ್ದು ಅಳಿಯುತ್ತಲೇ ಇರಬೇಕು. ಈ ಪ್ರಕ್ರಿಯೆಯನ್ನು ಸಾಗರದ ಉಬ್ಬರ-ಇಳಿತಕ್ಕೆ ಹೋಲಿಸುವವರೂ ಇದ್ದಾರೆ. ಕಾರಣ, ಈ ಎಲ್ಲಾ ಪ್ರಕ್ರಿಯೆಗೆ ತನ್ನದೇ ಆದ ವಿಶಿಷ್ಟವಾದ ಲಯವೊಂದಿದೆ- ನೃತ್ಯವೊಂದರ ಲಯದಂತೆ. ನಟರಾಜನ ಹೆಜ್ಜೆಯ ರಿಂಗಣದಂತೆ, ಕಾಲಚಕ್ರದ ಗತಿಯೂ ಲಯಬದ್ಧವಾದುದು ಎಂಬ ಕಲ್ಪನೆಯಿದೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ಪ್ರಳಯ ಶಿವನ ತಾಂಡವಕ್ಕೆ ಬಹಳಷ್ಟು ಹೊಳಹುಗಳು ದೊರೆಯುತ್ತದೆ. ʻಲಯʼ ಎನ್ನುವ ಕ್ರಿಯೆಗೂ ವಿಶಿಷ್ಟವಾದ ಲಯವೊಂದಿರುವುದನ್ನು ಈ ತಾಂಡವದ ಮೂಲಕ ಅರಿತುಕೊಳ್ಳಬಹುದು ನಾವು.
ಆದಿಗುರು, ಆದಿಯೋಗಿ ಎನ್ನುವ ಹೆಸರುಗಳು ಮಹಾದೇವನಿಗಿವೆ. ತಪಸ್ಸು, ಧ್ಯಾನಗಳು ಆತನ ಯಾವತ್ತಿನ ಚರ್ಯೆಗಳು. ಭವಬಂಧನಗಳನ್ನು ಕಳೆಯುವುದಕ್ಕೆ ಇವೆಲ್ಲ ಮಾರ್ಗಗಳಾಗಿ ಭವಿಗಳಾದ ನಮಗೆ ಗೋಚರಿಸಿದರೆ, ನಮ್ಮಂತೆ ಹುಟ್ಟಿಲ್ಲದ ಆತ ಅಭವ. ಯೋಗ ಭಂಗಿಗಳಲ್ಲಿ, ಆದಿಯೋಗಿಯನ್ನು ಸಾಂಕೇತಿಸುವ ನಟರಾಜಾಸನಕ್ಕೆ ಅದರದ್ದೇ ಆದ ಮಹತ್ವವವಿದೆ. ಇದನ್ನು ಕ್ರಮಬದ್ಧವಾಗಿ ಮಾಡುವುದಕ್ಕೆ ದೇಹ-ಮನಸ್ಸುಗಳಲ್ಲಿ ಅತಿ ಹೆಚ್ಚಿನ ಸಮತೋಲನವನ್ನು ಈ ಆಸನ ಬೇಡುತ್ತದೆ. ಮಾತ್ರವಲ್ಲ, ಯೋಗಾಭ್ಯಾಸಿಯಲ್ಲಿನ ಋಣಾತ್ಮಕ ಶಕ್ತಿಗಳೆಲ್ಲ ಲಯವಾಗುವಂತೆಯೂ ಮಾಡಬಲ್ಲ ಭಂಗಿಯಿದು. ಹಾಗಾಗಿ ಮಹಾಶಿವರಾತ್ರಿಯಲ್ಲಿ ಪರಶಿವನ ತಾಂಡವವನ್ನೂ ನೆನಪಿಸಿಕೊಳ್ಳಲಾಗುತ್ತದೆ. ಮಹಾದೇವನ ಸ್ಮರಣೆಯ ಮೂಲಕ ಹಳೆಯದು, ಬೇಡದ್ದೆಲ್ಲ ಲಯವಾಗಿ ಹೊಸ ಪರಿವರ್ತನೆಗೆ ನಾಂದಿಯಾಗಲಿ ಎನ್ನುವ ಮಹೋನ್ನತ ಆಶಯವನ್ನು ಅರಿಯಬೇಕಿದೆ

ನೀಲಕಂಠ

ದೇವಾಸುರರು ಸಮುದ್ರ ಮಥನವನ್ನು ಮಾಡಿದ ಕಥೆಯನ್ನು ನಾವೆಲ್ಲರೂ ಕೇಳಿದವರೇ. ಅಮೃತವನ್ನು ಬಯಸಿ ಎಲ್ಲರೂ ನಿರೀಕ್ಷೆಯಲ್ಲಿದ್ದಾಗ ಮೊದಲಿಗೆ ಹಾಲಾಹಲ ಬಂತು. ಅದಕ್ಕೊಂದು ಸರಿಯಾದ ಅಂತ್ಯ ಕಾಣಿಸದಿದ್ದರೆ ಲೋಕವನ್ನೆಲ್ಲ ಆ ವಿಷ ನಾಶ ಮಾಡುವ ಭೀತಿ ಎದುರಾಯಿತು. ದೇವತೆಗಳು ಜಗದೀಶ್ವರನ ಮೊರೆ ಹೊಕ್ಕರು. ಲೋಕವನ್ನು ಕಾಪಾಡುವ ಉದ್ದೇಶದಿಂದ ಆ ಘೋರ ವಿಷವನ್ನು ಈಶ ತನ್ನ ಕಂಠದಲ್ಲಿ ಇರಿಸಿಕೊಂಡ, ಈ ಮೂಲಕ ನೀಲಕಂಠನಾದ. ಇದೇ ಹಿನ್ನೆಲೆಯಲ್ಲಿ, ಲೋಕದ ಕಷ್ಟಗಳನ್ನೆಲ್ಲ ಕಳೆಯಬಲ್ಲ ಆತನ ಮಹಿಮೆಯನ್ನು ಶಿವರಾತ್ರಿಯಲ್ಲಿ ಕೊಂಡಾಡಲಾಗುತ್ತದೆ.

ಶಿವ-ಶಕ್ತಿಯ ಸಂಯೋಗ

ಒಂದಾನೊಂದು ಕಾಲದಲ್ಲಿ ಲೋಕಕಂಟಕನಾಗಿದ್ದ ತಾರಕ ಎಂಬ ಅಸುರನ ಸಂಹಾರಕ್ಕಾಗಿ ಲೋಕವೇ ನಿರೀಕ್ಷಿಸುತ್ತಿತ್ತು. ಆದರೆ ಆತನ ಮೃತ್ಯು ಶಿವ-ಪಾರ್ವತಿಯ ಸಂತಾನದಿಂದಲೇ ಎಂಬುದು ವಿಧಿ ಲಿಖಿತವಾಗಿತ್ತು. ಆದರೆ ದಾಕ್ಷಾಯಿಣಿಯನ್ನು ಕಳೆದುಕೊಂಡ ಶೋಕದಲ್ಲಿದ್ದ ಶಿವ, ಲೋಕದ ಪರಿವೆಯಿಲ್ಲದಂತೆ ಘೋರ ತಪಸ್ಸಿನಲ್ಲಿ ತೊಡಗಿಕೊಂಡಿದ್ದ. ಹಾಗಿದ್ದ ಮೇಲೆ, ಪರ್ವತ ರಾಜನ ಮಗಳಾಗಿ ಶಿವನಿಗಾಗಿಯೇ ಹುಟ್ಟಿದ್ದ ಪಾರ್ವತಿಯನ್ನು ಆತ ವರಿಸುವುದು ಹೇಗೆ? ಶಿವನ ಮನಸ್ಸನ್ನು ಪರಿವರ್ತಿಸುವುದಕ್ಕೆ ಮನ್ಮಥ ಬಾಣಗಳನ್ನು ಹೂಡಿದ. ತನ್ನ ತಪೋಭಂಗವಾಗಿದ್ದಕ್ಕೆ ಕುಪಿತನಾದ ಶಿವ, ಮೂರನೇ ಕಣ್ಣಿನಿಂದ ಕಾಮನನ್ನು ದಹಿಸಿಬಿಟ್ಟ. ಇದ್ಯಾವುದಕ್ಕೂ ವಿಚಲಿತಳಾಗದ ಪಾರ್ವತಿ ತನ್ನ ಭಕ್ತಿಯಿಂದಲೇ ಶಿವನನ್ನು ಒಲಿಸಿಕೊಂಡಳು. ಇವರಿಬ್ಬರ ವಿವಾಹದಿಂದ ಜನಿಸಿದ ಸ್ಕಂದ ಅಥವಾ ಕಾರ್ತಿಕೇಯನಿಂದಲೇ ತಾರಕಾಸುವ ಹತನಾದ. ಆವರೆಗೆ ಖಂಡ ಶಕ್ತಿಯಾಗಿದ್ದ ಶಿವ-ಪಾರ್ವತಿಯರು, ಒಂದಾಗಿ ಅಖಂಡ ಶಕ್ತಿಯಾದ ಹಿನ್ನೆಲೆಯೂ ಶಿವರಾತ್ರಿಗಿದೆ.

Exit mobile version