Site icon Vistara News

Maha Shivaratri 2024: ಶಿವರಾತ್ರಿ ಮಹೋತ್ಸವ ಅದ್ಧೂರಿಯಾಗಿ ನಡೆಯುವ ಕ್ಷೇತ್ರಗಳಿವು…

Maha Shivaratri 2024 shiva

ʻಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ ಬಡವನಯ್ಯʼ ಎನ್ನುತ್ತಾರೆ ಬಸವಣ್ಣನವರು. ನಿಜ, ಭಕ್ತಿಯನ್ನು ಹೇಗೆ ತೋರಿಸಿದರೂ ಮಹಾದೇವನಿಗದು ಪ್ರಿಯವೇ; ಇದಕ್ಕಾಗಿ ಶಿವಾಲಯವನ್ನೇ ನಿರ್ಮಿಸಬೇಕೆಂದಿಲ್ಲ. ಆದರೆ ನಮ್ಮ ಖುಷಿಗಾಗಿ, ಈಗಾಗಲೇ ಸ್ಥಿತವಿರುವ ಹೆಸರಾಂತ ಶಿವ ಸನ್ನಿಧಾನಗಳನ್ನೊಮ್ಮೆ ಹೀಗೆ ಸುತ್ತು ಹಾಕಿ ಬರಬಹುದಲ್ಲ. ಮಹಾಶಿವರಾತ್ರಿಯಂದು (Maha Shivaratri 2024) ದೇಶದೆಲ್ಲೆಡೆ ಸಡಗರ ಇರುವುದು ಹೌದು. ಆದರೆ ಕೆಲವು ಶಿವಾರಾಧನೆಯ ಕ್ಷೇತ್ರಗಳಲ್ಲಿ ಈ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಅಂಥ ಕೆಲವು ಕ್ಷೇತ್ರಗಳ ಬಗೆಗಿನ ವಿವರಗಳಿವು. ಖುದ್ದು ನೋಡಿದರೆ ಅದರ ಸೊಗಸು ಬೇರೆ ಎಂಬುದು ನಿಜವಾದರೂ ಹೀಗೆ ತಿಳಿದುಕೊಳ್ಳುವುದರಲ್ಲಿ ಕಷ್ಟವೇನಿಲ್ಲವಲ್ಲ.

ಕಾಶಿಯ ವಿಶ್ವನಾಥನ ಸನ್ನಿಧಿ

ವಾರಾಣಸಿ ಎಂದೂ ಕರೆಯಲಾಗುವ ಕಾಶಿ, ಭರತಖಂಡದ ಮಹತ್ವದ ಪುಣ್ಯಕ್ಷೇತ್ರ. ಹುಟ್ಟು-ಸಾವಿನಿಂದ ಹಿಡಿದು, ಕಲಿಕೆ, ಸಂಸ್ಕಾರಗಳವರೆಗೆ ಎಲ್ಲವಕ್ಕೂ ಕಾಶಿ ಕ್ಷೇತ್ರ ಶ್ರೇಷ್ಠ. ಮಹಾಶಿವರಾತ್ರಿಯ ಆಚರಣೆಗಳು ಕಾಶಿಯಲ್ಲಿ ಅಕ್ಷರಶ ಉತ್ಸವದ ವಾತಾವರಣವನ್ನು ಉಂಟುಮಾಡುತ್ತವೆ. ಇಲ್ಲಿನ ಶಿವ ಸನ್ನಿಧಿಯಲ್ಲಿ ನಡೆಯುವ ಶಿವರಾತ್ರಿಯ ಉತ್ಸವಕ್ಕೆಂದೇ ಉಪವಾಸ ಮಾಡುವ ಭಕ್ತರು ಬಹಳ ಮಂದಿ ಇದ್ದಾರೆ. ಶಿವನ ಮದುವೆಯ ದಿಬ್ಬಣವಂತೂ ಇಲ್ಲಿನ ಕೇಂದ್ರ ಆಕರ್ಷಣೆ. ಜಗನ್ನಾಥನ ಮದುವೆಗೆ ಜಗತ್ತೆಲ್ಲ ಸಿದ್ಧಗೊಳ್ಳುವಂತೆ, ಇಲ್ಲಿನ ಎಲ್ಲ ದೇವಾಲಯಗಳಲ್ಲೂ ತಯಾರಿಗಳಾಗುತ್ತವೆ. ಬೇರೆ ಬೇರೆ ದೇವ-ದೇವತೆಗಳ ವೇಷವನ್ನು ಧರಿಸಿದವರು ಮದುವೆಯ ದಿಬ್ಬಣದಲ್ಲಿ ಪಾಲ್ಗೊಳ್ಳುತ್ತಾರೆ. ಬಾಜ-ಭಜಂತ್ರಿ, ಹಾಡು-ಕುಣಿತಗಳ, ಹೂವು-ಹಣ್ಣುಗಳನ್ನು ಒಳಗೊಂಡ ಮದುವೆ ಮೆರವಣಿಗೆ ಸುಮಾರು 5 ತಾಸುಗಳ ಕಾಲ ನಡೆಯುತ್ತದೆ. ಅಂತಿಮವಾಗಿ ಹೊರಟ ಜಾಗಕ್ಕೇ ಮದುವೆಯ ಗದ್ದಲ ಬಂದು ನಿಲ್ಲುತ್ತದೆ.

ಹರಿದ್ವಾರ

ಕಾಶಿಯಂತೆಯೇ ಇದು ಸಹ ದೇಗುಲಗಳ ಬೀಡು. ಇಲ್ಲಿನ ವೈಭವೇಪೇತ ಗಂಗಾರತಿಯಿಂದ ಹಿಡಿದು ಪುಣ್ಯಸ್ನಾನದವರೆಗೆ ಭಕ್ತರಿಗೆ ಕಣ್ತುಂಬಿಕೊಳ್ಳಲು ಬಹಳಷ್ಟು ವಿಷಯಗಳಿವೆ. ಹೃಷಿಕೇಶದ ಯಾತ್ರಾರ್ಥಿಗಳಿಂದ ಹಿಡಿದು, ಬಂಗೀ ಜಂಪಿಂಗ್‌ ಮಾಡುವ ಸಾಹಸಪ್ರಿಯರವರೆಗೆ ಎಲ್ಲರಿಗೂ ಹೇಳಿ ಮಾಡಿಸಿದ ಜಾಗವಿದು. ಮಹಾಶಿವರಾತ್ರಿಯಂದು ನಡೆಯುವ ತರಹೇವಾರಿ ಉತ್ಸವಗಳು ಕಣ್ಮನ ಸೂರೆಗೊಳ್ಳುವಂತೆ ಇರುತ್ತವೆ. ಇಲ್ಲಿನ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜೆ, ಆರತಿಗಳು ಶಿವನ ಆರಾಧನೆಗಾಗಿ ನಡೆಯುತ್ತವೆ.

ಹೃಷಿಕೇಶ

ಗಂಗಾ ಮತ್ತು ಚಂದ್ರಭಾಗಾ ನದಿಗಳ ಸಂಗಮದಲ್ಲಿನ ಕ್ಷೇತ್ರದಲ್ಲೂ ಶಿವರಾತ್ರಿಯ ಸಂಭ್ರಮ ಮನ ಸೆಳೆಯುವಂಥದ್ದು. ಹಿಮಾಲಯದ ತಪ್ಪಲಿನ ಈ ಕ್ಷೇತ್ರದಲ್ಲಿ ಹಲವಾರು ದೇಗುಲಗಳು ಅಸ್ತಿಕರ ಭಕ್ತಿತಾಣಗಳಾಗಿವೆ. ಭಕ್ತಿಗೆ ಮಾತ್ರವೇ ಅಲ್ಲ, ಸಾಹಸಪ್ರಿಯರನ್ನೂ ಕೈ ಬೀಸಿ ಕರೆಯುವ ಈ ತಾಣದಲ್ಲಿ ವೈಟ್‌ರಿವರ್‌ ರ್ಯಾಫ್ಟಿಂಗ್‌ನಿಂದ ಹಿಡಿದು, ಹಲವಾರು ರೋಮಾಂಚಕ ಕ್ರೀಡೆಗಳಿಗೆ ಅವಕಾಶವಿದೆ. ಶಿವನ ಉತ್ಸವಕ್ಕೆಂದು ಹೋಗುವ ಎಲ್ಲ ವಯೋಮಾನದವರಿಗೂ ಸಲ್ಲುವಂಥ ಸ್ಥಳವಿದು.

ಮಂಡಿ

ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಭೂತನಾಥನ ದೇಗುಲದಲ್ಲಿ ಶಿವರಾತ್ರಿಯ ಉತ್ಸವಗಳು ಇಡೀ ದೇಶದ ಗಮನ ಸೆಳೆಯುವಷ್ಟು ಭರ್ಜರಿಯಾಗಿಯೇ ಇರುತ್ತದೆ. ಇಲ್ಲಿನ ರಾಜಮನೆತನದವರು ಸುಮಾರು ೫೦೦ ವರ್ಷಗಳ ಹಿಂದೆ ಈ ಪದ್ಧತಿಯನ್ನು ಆರಂಭಿಸಿದ್ದರಂತೆ. ಈ ಶಿವನ ಆರಾಧನಾ ಮಹೋತ್ಸವ ಸುಮಾರು ಒಂದು ವಾರದವರೆಗೆ ನಡೆಯುತ್ತದೆ. ಇದಕ್ಕಾಗಿ ದೇಶದ ಹಲವೆಡೆಗಳಿಂದ ಭಕ್ತರು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ದಂಡು ಆಗಮಿಸುತ್ತದೆ. ಪ್ರತಿವರ್ಷದ ಶಿವರಾತ್ರಿಯಂದು ನಡೆಯುವ ಶೋಭಾಯಾತ್ರೆಯಲ್ಲಿ ರಾಜ್ಯದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಾರೆ.

ಶ್ರೀಶೈಲ ಮತ್ತು ಶ್ರೀಕಾಳಹಸ್ತಿ

ಈ ಎರಡೂ ಕ್ಷೇತ್ರಗಳು ಆಂಧ್ರಪ್ರದೇಶದಲ್ಲಿವೆ. ಶ್ರೀಕಾಳಹಸ್ತೀಶ್ವರ ದೇಗುಲದ ಉತ್ಸವಗಳು ಪ್ರಖ್ಯಾತವಾದದ್ದು. ಹಲವು ರೀತಿಯ ಸೇವೆಗಳು, ಭಜನೆ, ಪೂಜೆ ಮತ್ತು ಸೇವೆಗಳಿಗಾಗಿಯೆ ಹಲವಾರು ಸ್ಥಳಗಳಿಂದ ಭಕ್ತರು ಆಗಮಿಸುತ್ತಾರೆ. ಇನ್ನು ಕೃಷ್ಣಾ ನದಿ ದಂಡೆಯಲ್ಲಿನ ಶ್ರೀಶೈಲದಲ್ಲಿರುವ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯ ದೇಗುಲದಲ ಶಿವರಾತ್ರಿಯ ಉತ್ಸವಗಳು ಸಹ ಭಕ್ತರ ಮನ ಸೆಳೆಯುವಂಥವು. ಹಸಿರಿನ ತಾಣದಲ್ಲಿರುವ ಈ ದೇಗುವ ದೇಶದ ಪ್ರಾಚೀನ ದೇವಾಲಯಗಳಲ್ಲಿ ಒಂದು.

ಅಸ್ಸಾಂನ ಕ್ಷೇತ್ರಗಳು

ಬ್ರಹ್ಮಪುತ್ರಾ ನದಿ ಸೃಷ್ಟಿಸಿರುವ ಪಿಕಾಕ್ ದ್ವೀಪದಲ್ಲಿರುವ ಉಮಾನಂದ ದೇಗುವದಲ್ಲೂ ಶಿವರಾತ್ರಿಯ ಸಡಗರ ಜೋರು. ರಾಜಧಾನಿ ಗುವಾಹತಿಯಲ್ಲಿರುವ ಈ ಸನ್ನಿಧಾನಕ್ಕೆ ದೇಶದೆಲ್ಲೆಡೆಯಿಂದ ಭಕ್ತವೃಂದ ಶಿವರಾತ್ರಿಯ ದರ್ಶನಕ್ಕೆ ಆಗಮಿಸುತ್ತದೆ. ಇದಲ್ಲದೆ, ಸಮೀಪದ ಶಿವಸಾಗರವೂ ಜನಪ್ರಿಯ ಶಿವಾರಾಧನೆಯ ತಾಣಗಳಲ್ಲಿ ಒಂದು. ಅಸ್ಸಾಂನ ಅಹೋಂ ರಾಜಮನೆತನ ಶಿವಸಾಗರವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡಿತ್ತು. ಈ ಸಾಂಸ್ಕೃತಿಕ ನಗರಿಯಲ್ಲೂ ಶಿವರಾತ್ರಿಯ ಸಂಭ್ರಮ ಜನಮನಸೂರೆಗೊಳ್ಳುವಂತೆ ಇರುತ್ತದೆ.

ಖಜುರಾಹೊ

ಮಧ್ಯಪ್ರದೇಶದ ಬುಂದೇಲ್‌ಖಂಡ್‌ ಪ್ರಾಂತ್ಯದ ಈ ದೇಗುಲದಲ್ಲಿ ನಡೆಯುವ ಶಿವನ ಆರಾಧನೆ ಕಣ್ಮನ ಸೆಳೆಯುವಂತಿರುತ್ತದೆ. ಶಿವನ ಆರಾಧಕರೇ ಹೆಚ್ಚಿರುವ ಈ ಪ್ರಾಂತ್ಯದಲ್ಲಿ ಪವಿತ್ರಸ್ನಾನ, ಉಪವಾಸ ಮುಂತಾದವುಗಳ ನಂತರ ಮಾತಂಗೇಶ್ವರನ ದರ್ಶನಕ್ಕೆಂದು ಆಗಮಿಸುತ್ತಾರೆ. ರಾತ್ರಿಡೀ ಪೂಜೆ-ಭಜನೆಗಳು ನಡೆಯುತ್ತವೆ. ಈ ಸಂದರ್ಭಕ್ಕಾಗಿ ಹತ್ತು ದಿನಗಳ ಜಾತ್ರಾ ಮಹೋತ್ಸವವೂ ನಡೆಯುತ್ತದೆ. ಸಾಂಸ್ಕೃತಿಕವಾಗಿಯೂ ಈ ಸ್ಥಳ ಭಾರತದಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ.

ಉಜ್ಜಯಿನಿ

ಭಾರತದಲ್ಲಿ ಕುಂಭ ಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಉಜ್ಜಯಿನಿಯೂ ಒಂದು. ಹಾಗಾಗಿ ಆಸ್ತಿಕರಿಗೆ ಅಚ್ಚುಮೆಚ್ಚಿನ ಸ್ಥಳವೂ ಇದು ಹೌದು. ಶಿಪ್ರಾ ನದಿಯ ಪೂರ್ವ ದಂಡೆಯ ಮೇಲಿರುವ ಈ ಕ್ಷೇತ್ರ ಶಿವರಾತ್ರಿಗೆಂದು ವಿಶೇಷವಾಗಿ ಸಜ್ಜುಗೊಳ್ಳುತ್ತದೆ. ಮಹಾಕಾಲೇಶ್ವರನ ದರ್ಶನಕ್ಕೆಂದು ದೇಶದೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ.

ಪುರಿ

ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ಭಾರತಕ್ಕೇ ಪ್ರಖ್ಯಾತ. ಇಲ್ಲಿನ ಲೋಕನಾಥನನ್ನು ಶ್ರೀರಾಮಚಂದ್ರನೇ ಪ್ರತಿಷ್ಠಾಪಿಸಿದನೆಂದು ಪ್ರತೀತಿಯಿದೆ. ಹಾಗಾಗಿ ಸಾವಿರಾರು ವರ್ಷಗಳಿಂದಲೂ ಶಿವನ ಆರಾಧನೆಯ ಕೇಂದ್ರವಾಗಿಯೇ ಪುರಿ ಗುರುತಿಸಿಕೊಂಡಿದೆ. ಶಿವರಾತ್ರಿಯಂದು ವಿಶೇಷ ಪೂಜೆ, ಸೇವೆ ಮತ್ತು ಆರಾಧನೆಗಳು ಇಲ್ಲಿ ನಡೆಯುತ್ತವೆ. ಇಲ್ಲಿನ ಲೋಕನಾಥನ ಮುಳುಗಿದ ಲಿಂಗದ ಪೂರ್ಣ ದರ್ಶನ ದೊರೆಯುವುದು ಶಿವರಾತ್ರಿಯ ಮೊದಲಿನ ಏಕಾದಶಿಯಂದು. ಹಾಗಾಗಿ ಈ ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ನೆರೆದಿರುತ್ತದೆ.

ಇದನ್ನೂ ಓದಿ: Maha Shivaratri 2024: ಶಿವರಾತ್ರಿ ಆಚರಣೆಯ ಮಹತ್ವ ಮತ್ತು ಹಿನ್ನೆಲೆ ತಿಳಿಯೋಣ…

Exit mobile version