Site icon Vistara News

Mahakavi Kalidas Jayanti : ವಿಶ್ವವಂದ್ಯ ಕವಿರತ್ನ ಕಾಳಿದಾಸ

mahakavi kalidas

#image_title

kalidasa jayanti Know All About Sanskrit Scholar and Poet Mahakavi Kalidas in kannada

ಗಣೇಶ ಭಟ್ಟ
ಆಂಗ್ಲರು ಈ ದೇಶಕ್ಕೆ ಕಾಲಿಟ್ಟಾಗ, ಅವರ ಮನಸ್ಸಿನಲ್ಲಿ ಭಾರತೀಯರೆಂದರೆ, ಸಂಸ್ಕೃತಿ ವಿಹೀನರು, ಗೊಡ್ಡು ಸಂಪ್ರದಾಯದವರು ಎಂದು ತಿಳಿದಿದ್ದರು. ಯಾವಾಗ ಪ್ರಾಚೀನವಾದ ವೇದ, ರಾಮಾಯಣ, ಮಹಾಭಾರತ, ಪುರಾಣಗಳು ಅವರ ಗಮನ ಸೆಳೆದವೋ, ಅದರಲ್ಲೂ ಕಾಳಿದಾಸನ ಅಭಿಜ್ಞಾನ ಶಾಂಕುಂತಲ ಕೃತಿ ಅವರ ಗಮನ ಸೆಳೆಯಿತೋ, ಭಾರತೀಯರ ಮೇಲೆ ಗೌರವಾದರವನ್ನು ಹೊಂದಲು ಕಾರಣವಾಯಿತು. ಇಂದು ಈ ಮಹಾಕವಿಯ ಜಯಂತಿ (Mahakavi Kalidas Jayanti).

ಆ ಕಾಲದ ಪ್ರತಿಭಾವಂತರಲ್ಲಿ ಒಬ್ಬರೆಂದು ಖ್ಯಾತರಾದ ಹದಿನೈದು ಭಾಷೆಗಳನ್ನು ಕಲಿತ ಸರ್. ವಿಲಿಯಂಜೋನ್ಸ್ ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮುಖ್ಯನ್ಯಾಯಾಧೀಶರಾಗಿ ಭಾರತಕ್ಕೆ ಆಗಮಿಸಿ, ಆರು ವರ್ಷಗಳಲ್ಲಿ ಸಂಸ್ಕೃತ ಕಲಿತು ಕಾಳಿದಾಸನ ಅಭಿಜ್ಞಾನ ಶಾಂಕುಂತಲ ನಾಟಕ ಗ್ರಂಥವನ್ನು ಆಂಗ್ಲಭಾಷೆಗೆ ಅನುವಾದಿಸಿದ. ನಂತರ ಇದನ್ನು ಜಾರ್ಜ್‌ ಫಾರಸ್ಟರ್‌ ಎಂಬಾತನು ಜರ್ಮನ್ ಭಾಷೆಗೆ ಭಾಷಾಂತರಿಸಿದ. ಈ ಅನುವಾದವನ್ನು ಓದಿಯೇ ಜರ್ಮನಿಯ ಶ್ರೇಷ್ಟಕವಿ-ಮಹಾಕವಿ ಗಯಟೆಯು ನಾಟಕವನ್ನು, ಕೃತಿ ರಚಿಸಿದ ಕಾಳಿದಾಸನನ್ನು ಮೆಚ್ಚಿಕೊಂಡಾಗ, ಕಾಳಿದಾಸ ವಿಶ್ವದ ಗಮನ ಸೆಳೆದಿದ್ದ.

ಕಾಳಿದಾಸರ ಕೃತಿಗಳಿಂದಾಗಿ ಆಂಗ್ಲರು ಸೇರಿದಂತೆ ವಿಶ್ವದಜನರು ಭಾರತೀಯರನ್ನು ನೋಡುವ ಬಗೆ ಬೇರೆಯಾಯಿತು. ಕವಿಕುಲಗುರು, ವರಕವಿ ಎಂದು ಖ್ಯಾತನಾದ ಕವಿರತ್ನ ಕಾಳಿದಾಸನು ತನ್ನ ಅಮರ ಕೃತಿಗಳ ಮೂಲಕ ಸಂಸ್ಕೃತ ಸಾಹಿತ್ಯಕ್ಕೆ ವಿಶ್ವಮಟ್ಟದ ಕೀರ್ತಿಯನ್ನು ಗಳಿಸಿಕೊಟ್ಟ ಶಾಶ್ವತ ಪ್ರಸಿದ್ಧಿ ಸಲ್ಲುತ್ತದೆ.

ದೇಶ- ಕಾಲ- ಕೃತಿ

ಅಮೂಲ್ಯ ಕೃತಿಗಳನ್ನು ರಚಿಸಿದ ಸಂಸ್ಕೃತಕವಿಗಳು, ತನ್ನ ಹುಟ್ಟು, ವಾಸ, ಜೀವಿತಾವಧಿಯ ಕುರಿತಾಗಿ ಏನನ್ನೂ ತಮ್ಮ ಕೃತಿಗಳಲ್ಲಿ ಹೇಳಿಕೊಳ್ಳದಿರುವುದು, ಕವಿಗಳ ವಿಷಯವಾಗಿ ಅಧ್ಯಯನ ಕುತೂಹಲಿಗಳಿಗೆ ತೊಡಕನ್ನುಂಟುಮಾಡಿದೆ. ಆದ್ದರಿಂದ ಕವಿ ರಚಿಸಿದ ಕೃತಿಗಳ ಆಧಾರದಿಂದ, ಇತರ ಕವಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ ಸಂಗತಿಗಳಿಂದ ಹುಟ್ಟಿದ ಪ್ರದೇಶ, ಕಾಲಗಳನ್ನು ತಿಳಿಯಬಹುದು. ಕವಿ ಕಾಳಿದಾಸನ ಮೇಘದೂತ ಗ್ರಂಥದಲ್ಲಿ ಸಿಪ್ರಾನದೀ ತೀರದ ಉಜ್ಜಯನಿ, ಅಲ್ಲಿಯ ಮಹಾಕಾಲದೇವ, ಅಲ್ಲಿಯ ಪ್ರದೇಶಗಳು ಕಾಳಿದಾಸನ ಮೇಲೆ ಪ್ರಭಾವ ಬೀರಿರುವುದರಿಂದ ಕವಿಯ ಜನ್ಮಸ್ಥಳ, ‘ಉಜ್ಜಯನಿ’ಯೆಂದು, ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಪುಷ್ಪಗಳನ್ನು ಕಣ್ಣಿಗೆಕಂಡಂತೆ ವರ್ಣಿಸಿರುವುದರಿಂದ ಕವಿಯ ಜನ್ಮಸ್ಥಳ ‘ಕಾಶ್ಮೀರ’ವೆಂದು, ಕವಿಯು ಕಾಳಿಯ ಭಕ್ತನಾಗಿರುವುದರಿಂದ ಬಂಗಾಳದವರು ‘ಬಂಗಾಳ’ಪ್ರದೇಶದಲ್ಲಿ ಜನಿಸಿದವನೆಂದು… ಹೀಗೆ ಜನ್ಮ ಸ್ಥಳದ ಕುರಿತು ಹಲವುವಾದಗಳಿದ್ದರೂ, ಕವಿ ಕಾಳಿದಾಸ ಸಮಗ್ರಭಾರತದ ಕವಿ ಎನ್ನುವುದು ನಿರ್ವಿವಾದ.

ದಡ್ಡ ಬಹುದೊಡ್ಡ ಕವಿಯಾದ!

ಕ್ರಿ.ಶ. ನಾಲ್ಕನೇ ಶತಮಾನದ ಅಂತ್ಯ ಹಾಗೂ ಐದನೇ ಶತಮಾನದ ಆದಿಯಲ್ಲಿದ್ದ ಕವಿ ಕಾಳಿದಾಸ ರಘುವಂಶ-ಕುಮಾರಸಂಭವ ಮಹಾಕಾವ್ಯಗಳನ್ನು, ಋತುಸಂಹಾರ-ಮೇಘದೂತ ಖಂಡಕಾವ್ಯಗಳನ್ನು, ವಿಕ್ರಮೋರ್ವಶೀಯ-ಮಾಲವಿಕಾಗ್ರಿಮಿತ್ರ-ಅಭಿಜ್ಞಾನಶಾಕುಂತಲಗಳೆಂಬ ನಾಟಕಗಳನ್ನು ರಚಿಸಿದ್ದಾನೆ. ಕಾಳಿದಾಸನ ಜೀವಿತದ ಕುರಿತಾಗಿ ಅನೇಕ ಕಥೆಗಳು ಪ್ರಚಲಿತವಿದೆ. ಹೀಗೊಂದು ಗಾಥೆ ಆತನಕುರಿತಾಗಿದೆ. ಕಾಳಿದಾಸ ಬಾಲ್ಯದಲ್ಲಿ ದಡ್ಡನಾಗಿದ್ದ. ರಾಜ ‘ಭೀಮಶುಕ್ಲ’ನು ತನ್ನ ಮಗಳಾದ ‘ವಾಸಂತಿ’ಯನ್ನು ಆಸ್ಥಾನದ ಪ್ರಮುಖಪಂಡಿತ‘ವರರುಚಿ’ಗೆ ವಿವಾಹ ಮಾಡಿಕೊಡಲು ನಿಶ್ಚಯಿಸಿದ್ದ. ಆತನಿಗಿಂತ ವಿದ್ಯಾವಂತೆಯೆಂದು ಹೆಮ್ಮೆಪಡುತ್ತಿದ್ದ ರಾಜಕುಮಾರಿ ಇದಕ್ಕೆ ಒಪ್ಪಲಿಲ್ಲ.

kalidasa jayanti Know All About Sanskrit Scholar and Poet Mahakavi Kalidas in kannada

ಇದರಿಂದ ಅವಮಾನಿತನಾಗಿ ರಾಜಕುಮಾರಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ, ವರರುಚಿಯು ಮಂತ್ರಿಯೊಂದಿಗೆ ಸೇರಿ, ದಡ್ಡನಾಗಿದ್ದ ಕಾಳಿದಾಸನನ್ನು ರಾಜಕುಮಾರಿ ವಾಸಂತಿಗೆ ವಿವಾಹ ಮಾಡಲು ಪ್ರಯತ್ನಿಸಿ, ಯಶಸ್ವಿಯಾಗುತ್ತಾನೆ. ನಂತರ ನಿಜ ವಿಷಯ ತಿಳಿದ ರಾಜಕುಮಾರಿ ವಾಸಂತಿಯು ಕಾಳಿದಾಸನಿಗೆ ತನ್ನ ಆರಾಧ್ಯದೇವತೆ ಕಾಳಿಯನ್ನು ಆರಾಧಿಸು ಎಂಬ ಸಲಹೆಯಂತೆ, ಆತ ಹಾಗೆ ಮಾಡಲು, ಕಾಳಿ ಪ್ರಸನ್ನಳಾಗಿ ಕಾಳಿದಾಸನ ನಾಲಿಗೆ ಮೇಲೆ ಬೀಜಾಕ್ಷರವನ್ನು ಬರೆದ ಕಾರಣ ಆತನಲ್ಲಿ ಅನ್ಯಾದೃಶ್ಯವಾದ ಕವಿತಾಶಕ್ತಿ-ಪಾಂಡಿತ್ಯ ಮೂಡಿದವು.

ಆ ಕ್ಷಣದಲ್ಲೇ ದೇವಿಯ ಕುರಿತು ‘ಶ್ಯಾಮಲಾದಂಡಕ’ ರಚಿಸಿ, ಕಾಳಿಯನ್ನು ಮೆಚ್ಚಿಸಿ ಮಹಾಮೇಧಾವಿ ಕಾಳಿದಾಸನಾದ. ಪತ್ನಿಯು ಗಂಡನಲ್ಲಾದ ಈ ಬದಲಾವಣೆಯನ್ನು ಗಮನಿಸಿ “ಅಸ್ತಿ ಕಶ್ಚಿತ್‌ವಾಗ್ವಿಶೇಷಃ?”ಎಂದು ಕೇಳಿದಾಗ, ಕಾಳಿದಾಸ ‘ಅಸ್ತ್ಯುತ್ತರಸ್ಯಾಂದಿಶಿದೇವತಾತ್ಮಾ….. ಎಂದು ಪ್ರಾರಂಭಿಸಿ ಕುಮಾಸಂಭವ ಮಹಾಕಾವ್ಯವನ್ನು, ‘ಕಶ್ಚಿತ್ ಕಾಂತಾ ವಿರಹಗುರುಣಾ….. ಎಂದು ಮೇಘದೂತ ಖಂಡಕಾವ್ಯವನ್ನು, ‘ವಾಗರ್ಥಾವಿವ ಸಂಪ್ರಕ್ತೌ …..’ ಎಂದು ರಘುವಂಶ ಮಹಾಕಾವ್ಯದ ಉದಯಕ್ಕೆ ಕಾರಣವಾಯ್ತು. ಕವಿ ಕಾಳಿದಾಸನ ಕುರಿತಾಗಿ ಬೇರೆಬೇರೆ ರೀತಿಯಾಗಿ, ಬೇರೆಬೇರೆ ಹೆಸರಿನಿಂದ ಕಥೆ ಪ್ರಚಲಿತವಿರುವುದನ್ನು ಕಾಣುತ್ತೇವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ದೇಶ ಪ್ರೇಮ, ಈಶಪ್ರೇಮದ ಕವಿ

ಋಗ್ವೇದದಲ್ಲಿ ಸರಮೆಯೆಂಬ ನಾಯಿಯ ಕೈಯಲ್ಲಿ ಒಂದು ಸಂದೇಶವನ್ನು ಕಳುಹಿಸಿದುದಾಗಿ ನಿರೂಪಿತವಾಗಿದೆ. ರಾಮಾಯಣದಲ್ಲಿ ರಾಮನು ಆಂಜನೇಯನ ಮೂಲಕ, ಯುಧಿಷ್ಠಿರನು ಕೃಷ್ಣನ ಮೂಲಕ, ನಳನು ಹಂಸದ ಮೂಲಕ ಸಂದೇಶಗಳನ್ನು ಕಳುಹಿಸಿದರೆಂದು ನಿರೂಪಿತವಾದಂತೆ, ಮೇಘದೂತಕಾವ್ಯದಲ್ಲಿಯೂ ವಿರಹಿಯಾದ ಯಕ್ಷನೊಬ್ಬನು, ಮೇಘ (ಮೋಡ)ವನ್ನೆ ದೂತ (ಸಂದೇಶವಾಹಕ)ನನ್ನಾಗಿ ಪ್ರಾರ್ಥಿಸಿ, ಕ್ಷೇಮ ಸಂದೇಶವನ್ನು ವಿರಹಿಣಿಯಾದತನ್ನ ಭಾರ್ಯೆಗೆ ತಲುಪಿಸುವಂತೆ ಕೇಳಿಕೊಳ್ಳುವ ಕಾಲ್ಪನಿಕ ಪ್ರಸಂಗವನ್ನು ಕಾಣಬಹುದು.

ಸಕಲವೇದ-ಶಾಸ್ತ್ರ -ಪುರಾಣೇತಿಹಾಸಗಳ ಸಾರಸ್ವತ ನಿಧಿಯೇ ಆಗಿದ್ದ, ಅಲೌಕಿಕ ಪ್ರತಿಭಾ ಸಂಪನ್ನನಾದ ಕವಿ ಕಾಳಿದಾಸ, ದೇಶಪ್ರೇಮ-ಈಶಪ್ರೇಮ ಹಾಗೂ ಅಪಾರವಾದ ಪ್ರವಾಸದ ಅನುಭವ ಪಡೆದಿದ್ದ. ತನ್ನೆಲ್ಲಾ ಕಾವ್ಯಗಳಲ್ಲಿ ಸರಳ-ಸುಂದರ-ಸರಸತೆಯಿಂದಕೂಡಿದ, ಅರ್ಥ ಮಾಧುರ್ಯ ಭರಿತವಾದ ವೈದರ್ಭಿಶೈಲಿಯ ಪದಗಳ ಬಳಕೆಯಿಂದ ಸರ್ವ ಸಹೃದಯರನ್ನು ಆಕರ್ಷಿಸಿದ್ದಾನೆ. ಔಚಿತ್ಯಪೂರ್ಣವಾದ ಉಪಮಾ ಮುಂತಾದ ಅಲಂಕಾರಗಳ ಮೂಲಕ, ಆ ಆರಸಕ್ಕೆ ಉಚಿತವಾದ ವಿವಿಧ ಛಂದಸ್ಸಿನ ಮೂಲಕ ತನ್ನ ಕಾವ್ಯದ ಸೊಬಗನ್ನು ತೆರೆದಿಟ್ಟಿದ್ದಾನೆ. ವರಕವಿ ಕಾಳಿದಾಸನು ಸಹಸ್ರಾರು ವರ್ಷಗಳಿಂದ ತನ್ನಕಾವ್ಯದ ಮೂಲಕ ವಿಶ್ವವನ್ನೇ ತನ್ನತ್ತ ಸೆಳುದು ವಿಶ್ವವಂದ್ಯನಾಗಿದ್ದಾನೆ, ವಿಶ್ವ ಕವಿಯಾಗಿದ್ದಾನೆ.

-ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ.

ಇದನ್ನೂ ಓದಿ : Prerane : ವಿದ್ಯೆ ಇಲ್ಲದವರು ಪಶುಗಳಿಗೆ ಸಮಾನರು! ಅದು ಹೇಗೆ?

Exit mobile version