Site icon Vistara News

Mahalaya 2022 | ಮಹಾಲಯದಲ್ಲಿ ತರ್ಪಣ ನೀಡುವುದು ಹೇಗೆ? ಕಾರುಣ್ಯಪಿತೃಗಳು ಯಾರು?

Mahalaya 2022

ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ
ಮಹಾಲಯ (Mahalaya 2022)ದಲ್ಲಿ (ಭಾದ್ರಪದ ಮಾಸದ ಕೃಷ್ಣ ಪಕ್ಷದ ೧೫ ದಿವಸಗಳನ್ನು ಮಹಾಲಯ ಪಕ್ಷ ಎಂದು ಕರೆಯುವ ರೂಢಿ ಇದೆ) ಅಂದರೆ ಪಿತೃ ಪಕ್ಷದಲ್ಲಿ ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಮಾಡಲಾಗುತ್ತದೆ. ಪಿತೃದೇವತೆಗಳಿಗೆ ಪ್ರಿಯವಾಗಿರುವ ಪದಾರ್ಥಗಳು, ಎಂದರೆ, ಜೇನುತುಪ್ಪ, ಎಳ್ಳು, ತಣ್ಣಗಿರುವ ನೀರು, ಇವುಗಳಿಂದ ತರ್ಪಣವನ್ನು ನೀಡುತ್ತಾರೆ.

ಈ ಹಬ್ಬದ ವಿಶೇಷತೆ, ಮಹತ್ವವನ್ನು ತಿಳಿಸುವ ಪ್ರಶ್ನೋತ್ತರ ಮಾದರಿಯ ಲೇಖನ ಮಾಲಿಕೆಯ ಎರಡನೇ ಭಾಗ ಇಲ್ಲಿದೆ.

ಶ್ರಾದ್ಧದ ಆಚರಣೆ ಹೇಗೆ?
ಉತ್ತರ: ಪಿತೃಪಕ್ಷದ ಈ ೧೫ ದಿವಸಗಳಲ್ಲಿಯೂ ಕೂಡಾ ಪೂರ್ಣವಾಗಿ ಶ್ರಾದ್ಧವನ್ನು ಮಾಡಬೇಕು. ಪಿತೃಶ್ರಾದ್ಧ ಮಾಡುವ ತರಹದಲ್ಲಿಯೇ, ಸಾಂವತ್ಸರಿಕಶ್ರಾದ್ಧ ಮಾಡುವ ರೀತಿಯಲ್ಲೇ ಮಾಡಬೇಕು. ಹಾಗೆ ಮಾಡಲಿಕ್ಕಾಗದಿದ್ದರೆ ಅದಕ್ಕೆ ಪ್ರತಿನಿಧಿಯಾಗಿ ಸಂಕ್ಷೇಪವಾಗಿ ಮಾಡಬಹುದು. ನಮ್ಮ ದೇಶದಲ್ಲಿ ನಿತ್ಯವೂ ಒಂದಲ್ಲ ಒಂದು ಹಬ್ಬವೇ. ಇದಲ್ಲದೇ ೯೬ ಶ್ರಾದ್ಧಗಳು ಬೇರೆ. ಇವೆಲ್ಲವನ್ನೂ ಹೇಗೆ ಆಚರಿಸಬೇಕೆಂದು ವಿವೇಕಿಗಳಾದವರು ಕುಚೋದ್ಯ ಮಾಡಬಾರದು. “ತಿಂಗಳು ತಿಂಗಳು ಪೂರ್ಣಿಮೆ ಬರುತ್ತದೆಯಲ್ಲ, ತಿಂಗಳು ತಿಂಗಳು ಅಮಾವಾಸ್ಯೆ ಒದಗಿ ಚಂದ್ರ ಕಾಣುವುದಿಲ್ಲವಲ್ಲಾ. ಒಂದು ವರ್ಷದಲ್ಲಿ ಒಂದು ಸಲವಾದರೆ ಪರವಾಗಿಲ್ಲ, ಪ್ರತಿ ತಿಂಗಳೂ ಬಂದರೆ ಹೇಗೆ?” ಎಂದು ಕೇಳುತ್ತೇವೆಯೇ?! ಇದು ಪ್ರಕೃತಿ ನಿಯಮ.

ಸೂರ್ಯೋದಯ, ಸೂರ್ಯಾಸ್ತಮನ, ನಿತ್ಯವೂ ಆಗುವುದಲ್ಲ ಎಂದು ಗಾಬರಿಪಡಬೇಡಿ. ಅದರ ಪಾಡಿಗೆ ಅದು ಆಗುತ್ತದೆ. ಆ ಸಮಯದಲ್ಲಿ ಪ್ರಕೃತಿಯನ್ನು ಉಪಯೋಗಿಸಿಕೊಳ್ಳುವುದು ವಿವೇಕಿಗಳಾದ ನಮಗೆ ಸೇರಿದೆಯೇ ಹೊರತು, ಅದನ್ನು ತಪ್ಪಿಸಲಾಗುವುದಿಲ್ಲ. ಈ ಕಾಲದಲ್ಲಿ ಪಿತೃಗಳ ಪ್ರಸನ್ನತೆ ಚೆನ್ನಾಗಿ ಕೂಡಿಬರುವುದರಿಂದ ಸದುಪಯೋಗಿಸಿ ಕೊಳ್ಳುವುದು ನಮ್ಮ ವಿವೇಕ. ಇಲ್ಲದಿದ್ದರೆ ಆ ಕೃತಜ್ಞತೆ ನಮಗೆ ಸೇರಿದ್ದು. ಅನುಕೂಲವಿರುವವರು ಈ ತರಹದಲ್ಲೂ ಆಚರಿಸಲಿ.

ಪ್ರಧಾನವಾಗಿ ಏನು ಮಾಡಬೇಕೆಂದರೆ, ಪಿತೃದೇವತೆಗಳ ಸ್ಮರಣೆ ಎಂದರೆ ನಮ್ಮ ಜನ್ಮಕ್ಕೆ ಕಾರಣರಾದ ಪಿತೃದೇವತೆಗಳು ಇದ್ದಾರೆ, ಅವರಿಂದ ನಾವೆಲ್ಲಾ ಬಂದಿದ್ದೇವೆ, ನಮ್ಮ ವೃದ್ಧಿಗೆ, ಸಂತಾನವೃದ್ಧಿಗೆ, ಅವರೇ ಕಾರಣರು. ನಮ್ಮನ್ನು ಅನುಗ್ರಹಿಸಲಿ ಎಂದು ಅವರ ಸ್ಮರಣೆಯನ್ನು ಮಾಡುವುದು ಕಷ್ಟದ ಕೆಲಸವಲ್ಲ. ಆ ನೆನಪಿನ ಜೊತೆಯಲ್ಲಿ ಅವರ ಸಂತೋಷಕ್ಕೋಸ್ಕರವಾಗಿ ಅನುಕೂಲವಿದ್ದರೆ, ಅವರಿಗೆ ಪ್ರಿಯವಾದ ಎಳ್ಳು ತರ್ಪಣ, ದರ್ಭೆಯಲ್ಲಿ ಅವರನ್ನು ಆಹ್ವಾನಿಸಿ ಪೂಜಿಸುವುದು, ಸತ್ಪಾತ್ರರಾದ ಜ್ಞಾನಿಗಳಾದ ಶ್ರೋತೃಗಳನ್ನು, ಬ್ರಹ್ಮವಿದರನ್ನು ಕರೆದು ಅವರಿಗೆ ಭೋಜನ ಮಾಡಿಸುವುದು, ಎಷ್ಟು ಸೌಕರ್ಯವಿದೆಯೋ ಅಷ್ಟು ಮಾಡಬಹುದು.

ಏನೂ ಮಾಡಲಾಗದಿದ್ದರೆ ಹಸುವಿಗೆ ಒಂದೆರಡು ಹುಲ್ಲನ್ನು ಕೊಡಿ. ಇಲ್ಲದೆ ಹೋದರೆ ಬಯಲಲ್ಲಿ ನಿಂತು, ತೋಳು ಮೇಲೇರಿಸಿ, ಸೂರ್ಯನ ಕಿರಣಗಳು ಕಂಕುಳನ್ನು ಮುಟ್ಟುವಂತೆ ಮಾಡಿಕೊಂಡು, “ಪಿತೃದೇವತಗಳಿರಾ, ನಿಮ್ಮಲ್ಲಿ ಭಕ್ತಿ ಶ್ರದ್ಧೆ, ಕೃತಜ್ಞತೆ ಉಂಟು ನನಗೆ. ಆದರೆ ಕರ್ಮವನ್ನು ಆಚರಿಸುವುದಕ್ಕೆ ಎಳ್ಳನ್ನು ಕೊಳ್ಳಲೂ ಗತಿ ಇಲ್ಲ”ಎಂದು ಸತ್ಯಾರ್ಥವನ್ನು ಘೋಷಣೆ ಮಾಡಿದರೆ ಅಷ್ಟಕ್ಕೇ ಸಂತೋಷಗೊಳ್ಳುತ್ತಾರೆ. ಇದು ಆಪತ್ ಧರ್ಮ. ಎಂದರೆ ಅನುಕೂಲವಿರುವವರೂ ಈ ತರಹ ಮಾಡಬೇಕೆಂದಲ್ಲ. ಆಪತ್ತೇ ಇಲ್ಲದಿರುವಾಗ ಆಪದ್ಧರ್ಮವನ್ನು ಏಕೆ ಆವಾಹನೆ ಮಾಡಿಕೊಳ್ಳಬೇಕು? ವಿಶೇಷವಾದ ಕರ್ಮ ಮಾಡಿದರೂ, ಸಂಕ್ಷೇಪವಾಗಿ ಮಾಡಿದರೂ, ಫಲದಲ್ಲಿ ವ್ಯತ್ಯಾಸವಿಲ್ಲ. ಫಲ ಒಂದೇ. ಅವರನ್ನು ಧ್ಯಾನ ಮಾಡಿದರೂ ಸಾಕು. ಸಂತೋಷ ಪಡುತ್ತಾರೆ.

ಮಹಾಲಯದಲ್ಲಿ ತರ್ಪಣ ಹೇಗೆ ನೀಡಬೇಕು?
ಉತ್ತರ : ಈ ಮಹಾಲಯದಲ್ಲಿ ಉಳಿದ ಅಮಾವಾಸ್ಯೆ, ಸಂಕ್ರಮಣ ತರ್ಪಣಕ್ಕಿಂತಲೂ ವಿಶೇಷವಾದ ತರ್ಪಣ ಇದೆ. ಇಲ್ಲಿ ಬರುವ ಪಿತೃದೇವತೆಗಳೂ, ಅಮಾವಾಸ್ಯೆಯಲ್ಲಿ ಬರುವ ಪಿತೃದೇವತೆಗಳೂ ಬೇರೆ ಬೇರೆ. ಇಲ್ಲಿರುವ ವಿಶ್ವೇದೇವರುಗಳೂ ಕೂಡ ಬೇರೆ ಬೇರೆ. ಸಾಂವತ್ಸರಿಕ ಶ್ರಾದ್ಧದಲ್ಲಿ ಪುರೂರವಾರ್ದ್ರವ ವಿಶ್ವೇದೇವ ಎಂದು. ಪುರೂರವ ಆರ್ದ್ರವ, ಎಂದರೆ ಇಬ್ಬರು ದೇವತೆಗಳು. ಯಾವಾಗ ಎಂದರೆ ಅಮಾವಾಸ್ಯೆ ಮತ್ತು ವರ್ಷದ ಶ್ರಾದ್ಧದಲ್ಲಿ. ಇಲ್ಲಿ ವಿಶ್ವೇದೇವರಿಗೆ ಧ್ವನಿ ವಿರೋಚನ ಎಂದು ಹೆಸರು. ಉಳಿದ ವಾರ್ಷಿಕಶ್ರಾದ್ಧದಲ್ಲಿ, ಅಮಾವಾಸ್ಯೆ ಶ್ರಾದ್ಧ, ಸಂಕ್ರಮಣ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧಗಳಲ್ಲಿ ವಸು ರುದ್ರ ಆದಿತ್ಯ ಎಂದು ಪಿತೃದೇವತೆಗಳು ಕರೆಯಲ್ಪಡುತ್ತಾರೆ. ಇಲ್ಲಿ ಈ ಮಹಾಲಯದಲ್ಲಿ ಅವರನ್ನು ಕರಯಬೇಕಾದದ್ದು ಕಾರುಣ್ಯಪಿತೃಗಳೆಂದು. ಇವರ ಪೂಜೆ ವಿಶೇಷ.

ಮಹಾಲಯ ತರ್ಪಣದಲ್ಲಿ ಕಾರುಣ್ಯ-ಪಿತೃಗಳ ಪೂಜೆ ಹೇಗೆ ಮಾಡುತ್ತಾರೆಂದರೆ, ಮಾಡುವಾಗ ಪ್ರತಿ ಅಮಾವಾಸ್ಯೆಯಲ್ಲಿ ಮಾಡುವಂತೆ ಪಿತೃವರ್ಗಕ್ಕೆ, ಮಾತೃವರ್ಗಕ್ಕೆ, ಪ್ರತ್ಯೇಕವಾಗಿ ಆವಾಹನೆ ಮಾಡಿ ಪೂಜೆ ಮಾಡುವ ಜೊತೆಗೆ, ಮಧ್ಯದಲ್ಲಿ ದಕ್ಷಿಣಾಗ್ರವಾದ ದರ್ಭೆಗಳನ್ನು ಹಾಸಿ ಅದರಲ್ಲಿ ಕಾರುಣ್ಯ ಪಿತೃಗಳನ್ನು ಆವಾಹನೆ ಮಾಡಿ ಅವರಿಗೆ ಪೂಜಿಸಿ ತರ್ಪಣ ಕೊಡುತ್ತಾರೆ.

ಕಾರುಣ್ಯಪಿತೃಗಳು ಎಂದರೆ ಯಾರು?
ಉತ್ತರ : ಕಾರುಣ್ಯಪಿತೃಗಳು ಯಾರು ಎಂದು ಶಾಸ್ತ್ರಗಳಲ್ಲಿ list ಇದೆ. ಇವರು ಸುಮಾರು ೪೧ ಮಂದಿ. ಅವರನ್ನು ಆವಾಹನೆ ಮಾಡಿ ತರ್ಪಣಕೊಟ್ಟು ತೃಪ್ತಿಪಡಿಸುವುದು. ಮಹಾಲಯ ಶ್ರಾದ್ಧವಲ್ಲದೆ ತೀರ್ಥಶ್ರಾದ್ಧ ಎಂದು ಮಾಡುತ್ತಾರೆ. ಗಂಗಾ, ಯಮುನಾ, ನರ್ಮದಾ, ಪುಷ್ಕರ ಮುಂತಾದ ತೀರ್ಥಕ್ಷೇತ್ರಗಳಲ್ಲಿ ಶ್ರಾದ್ಧ ಮಾಡುವಾಗ, ವಸು ರುದ್ರ ಆದಿತ್ಯ ಪಿತೃಗಳ ಜೊತೆಗೆ, ಈ ಕಾರುಣ್ಯ ಪಿತೃಗಳನ್ನೂ ವಿಶೇಷವಾಗಿ ಪೂಜಿಸಬೇಕು. ಇವರೆಲ್ಲರೂ ಪ್ರತಿ ಅಮಾವಾಸ್ಯೆಯಲ್ಲಿ ಪೂಜಿಸಲ್ಪಡುವ ಪಿತೃಷಟ್ಕಂ, ಮಾತೃಷಟ್ಕಂ ಎಂದರೆ ಪಿತೃಗಳಿಗೆ ಸೇರಿದ ೬ ಮಂದಿ, ಮಾತೃಗಳಿಗೆ ಸೇರಿದ ೬ ಮಂದಿ ಪುರುಷರು ೩ ಮಂದಿ ಅವರ ಪತ್ನಿಯರು ೩ ಮಂದಿ, ಈ ೧೨ ಮಂದಿಯೂ ಬರುತ್ತಾರೆ.

ನಂತರ ತಂದೆ ಕಡೆಯಂದ ೫ ಮಂದಿ ಎಂದರೆ ತಂದೆಗೆ ಸಂಬಂಧಪಟ್ಟವರು- ಚಿಕ್ಕಪ್ಪ, ದೊಡ್ಡಪ್ಪ, ತಂದೆಯ ತಂಗಿ ಅವರ ಪುತ್ರ, ತಂಗಿ ಯಜಮಾನರು ಒಟ್ಟು ೫ ಮಂದಿ, ತಾಯಿಯ ಕಡೆಯಿಂದ ೫ ಮಂದಿ, ಸಹೋದರಿ ಕಡಯಿಂದ ೩ ಮಂದಿ, ಪತ್ನಿಗೆ ಸಂಬಂಧಿಸಿದಂತೆ ೪, ಪುತ್ರನಿಗೆ ಸಂಬಂಧಿಸಿದಂತೆ ಇಬ್ಬರು. ಪುತ್ರ ಇಲ್ಲದಿದ್ದರೆ ಅವನಿಗೂ ಶ್ರಾದ್ಧ ಮಾಡಬೇಕಿದ್ದರೆ ಅವನ ಹೆಂಡತಿ, ಪುತ್ರಿಯರಿಗೆ ಸಂಬಂಧಪಟ್ಟಂತೆ ಇಬ್ಬರು ಪುತ್ರಿ, ದೌಹಿತ್ರ.

ಇಷ್ಟಲ್ಲದೆ ಇನ್ನೊಂದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಯಾರು ಮಾಡುತ್ತಾ ಇಲ್ಲವೋ ಅವರು ಮಾಡಬೇಕು ಅದನ್ನು. ತನ್ನ ಆಚಾರ್ಯ ಪರಮಪದವನ್ನು ಹೊಂದಿದ್ದರೆ ಅವರನ್ನು ಕುರಿತು ಮಾಡಬೇಕು. ತಾನು ಯಜ್ಞವನ್ನು ಮಾಡುತ್ತಿದ್ದಾಗ ಇದ್ದ ಋತ್ವಿಕ್ ಪರಮಪದಿಸಿದ್ದರೆ ಆ ಋತ್ವಿಕ್‌ನನ್ನು ಕುರಿತು ಮಾಡಬೇಕು. ಅಷ್ಟೇ ಅಲ್ಲ, ಗುರುವಾದವನು ತನ್ನ ಶಿಷ್ಯನು ಅಸ್ತಂಗತವಾಗಿದ್ದರೆ ಅವನ ಹೆಸರು ಗೋತ್ರ ಹೇಳಿ ಅವನಿಗೆ ತರ್ಪಣ ಕೊಡಬೇಕು. ಮಿತ್ರಂ; ಅಷ್ಟು ಮಾತ್ರವಲ್ಲದೇ ಭೃತ್ಯಂ ಅವನ ಸೇವಕ ನಿಷ್ಠೆಯಾಗಿ ಅವನ ಸೇವೆ ಮಾಡುತ್ತಿದ್ದ ಪಕ್ಷದಲ್ಲಿ ಅವನನ್ನು ಜ್ಞಾಪಿಸಿಕೊಂಡು ಕೃತಜ್ಞತೆಯಿಂದ ಅವನಿಗೂ ತರ್ಪಣ ಕೊಡಬೇಕು. ಈ ೪೧ ಮಂದಿಯನ್ನು ಕುರಿತು ಕೊಡುವ ತರ್ಪಣಕ್ಕೆ ಕಾರುಣ್ಯ ಪಿತೃಗಳ ತರ್ಪಣ ಎಂದು ಹೆಸರು.

ತರ್ಪಣವನ್ನು ಯಾರು ಯಾರು ಬದುಕಿಲ್ಲವೋ ಅವರಿಗೆ ಮಾತ್ರ ಕೊಡಬೇಕು! ಅವರ ಹೆಸರು ಮತ್ತು ಗೋತ್ರಗಳನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಅದರ ಬದಲು ’ಏಕ್ ದಂ ಶ್ರಾದ್ಧಂ ಕರಿಷ್ಯೇ’ ಎಂದು ಮಾಡುವುದು ಬಹಳ ಸುಲಭವಾದದ್ದು! ಕಾರುಣ್ಯ ಪಿತೃಗಳನ್ನು ಒಟ್ಟಿಗೆ ಆಹ್ವಾನಿಸಿ ಹೇಳಿಬಿಟ್ಟರೆ ಇವೆಲ್ಲಾ ೪೧ ಮಂದಿ ಬೇಕಾಗಿಲ್ಲ. ಅಪಾಯವೇನೆಂದರೆ ಈ ೪೧ ಮಂದಿಯಲ್ಲಿ ಬದುಕಿರುವವರು ಎಷ್ಟೋ ಜನ ಇರಬಹುದು! ಗತಿಸಿದವರ ಗೋತ್ರಗಳು ಬೇರೆ ಬೇರೆ ಇರಬಹದು. ಹಾಗೆಂದು ನಾನಾ ಗೋತ್ರಗಳನ್ನು ಸೇರಿಸಿ ಹಾಗೆ ಮಾಡಬಾರದು.

ಅವರು ಯಾರು ಎಂದು list ಮಾಡಿ ಇಟ್ಟುಕೊಂಡು ಅವರನ್ನು ಕುರಿತೇ ಮಾಡಬೇಕು. ಅವರವರ ಗೋತ್ರಗಳನ್ನು ಬೇರೆ ಬೇರೆ ಹೇಳಬೇಕು ಮತ್ತು ಅವರಿಗೆ ವಸು ರುದ್ರ ಆದಿತ್ಯ ಎಂದು ಹೇಳದೇ ಎಲ್ಲರಿಗೂ ವಸುರೂಪಂ ಎಂದೇ ಹೇಳಬೇಕು. ಅದು ಮೊದಲನೆಯ listನಲ್ಲಿ. ತಂದೆ ಕಡೆಯ ಪಿತೃಗಳಿಗೂ ಕೂಡ ವಸುರೂಪಂ ಎಂದೇ ಹೇಳಬೇಕು. ರುದ್ರ, ಆದಿತ್ಯ ಕೂಡದು.

ಶ್ಲೋಕ ರೂಪದಲ್ಲಿ ಪಿತೃ ಷಟ್ಕಂ, ಮಾತೃ ಷಟ್ಕಂ ಅಮಾವಾಸ್ಯೆಯಲ್ಲಿ ಮಾಡುವಾಗ ತಂದೆ ಕಡೆಯಿಂದ ೬ ಮಂದಿ, “ಸಪತ್ನೀ ಜನನೀ ತಥಾ” ತಂದೆಗೆ ಇಬ್ಬರು ಪತ್ನಿಯರಿದ್ದರೆ, ತನ್ನ ತಾಯಿಯಲ್ಲದೇ ಮಲತಾಯಿ, ಆ ಮಹಾತಾಯಿಯನ್ನು ಇದರ ಜೊತೆಗೆ ಸೇರಿಸಿಕೊಳ್ಳಬೇಕು.

ಇಲ್ಲಿ ಕಾರುಣ್ಯ ಎಂದರೆ, “ಅಯ್ಯೋ ಪಾಪ, ಅವರನ್ನು ಕುರಿತು ಯಾರೂ ಮಾಡುವವರಿಲ್ಲ. ನಾವಾದರೂ ಮಾಡೋಣ” ಎಂದು ಕರುಣೆ ತೋರುವ ಅರ್ಥವಲ್ಲ! ನಮಗೆ ವಿಶೇಷ ಕರುಣೆಯನ್ನು ತೋರಿಸುವುದರಿಂದ, ಕಾರುಣ್ಯಪಿತೃಗಳು ಎಂಬ ಹೆಸರು. ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೂ ಕೊಡಬೇಕಾಗಿಲ್ಲ, ಯಾರು ಯಾರಿಗೆ ಅವರ ಬಾಂಧವ್ಯ ಉಂಟಾಗಿದೆಯೋ ಅವರಲ್ಲಿ ಮೃತರಾದವರಿಗೆ ಮಾತ್ರ ಕೊಟ್ಟು ಅವರ ಹೆಸರುಗಳನ್ನು ಜ್ಞಾಪಕವಿಟ್ಟುಕೊಂಡರೆ ಸಾಕು. ಈ ೪೧ ಮಂದಿಯಲ್ಲಿ ನಮ್ಮ listಗೆ ಸೇರಿರುವವರು ಯಾರು, ಅವರ ಗೋತ್ರಗಳು ಏನು ಎಂಬುದನ್ನು ತಿಳಿದು ಮಾಡಬೇಕು.

(ಮುಂದಿನ ಭಾಗದಲ್ಲಿ ಮಹಾಲಯದಲ್ಲಿ ಮಧುವನ್ನು ಹೇಗೆ ಸಮರ್ಪಿಸುವುದು?)

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?

Exit mobile version