Site icon Vistara News

Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?

Mahalaya 2022

ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ
ಮಹಾಲಯ (Mahalaya 2022) ಎಂಬುದು ಭಾರತಾದ್ಯಂತ ಆಚರಿಸಲ್ಪಡುವ ಹಬ್ಬ. ಭಾರತೀಯರೆಲ್ಲರೂ ಕೂಡ ಆಚರಿಸುವ ಒಂದು ಪುಣ್ಯವಾದ ಪರ್ವ. ಎಲ್ಲ ಜನಾಂಗದವರೂ ಎಲ್ಲ ಗೃಹಸ್ಥರೂ ಕೂಡ ಪಿತೃಗಳನ್ನು ನೆನೆದು ಕೃತಜ್ಞತೆಯಿಂದ ಆಚರಿಸುವ ಹಬ್ಬದ ಕಾಲವಾಗಿರುವುದರಿಂದ ಮಹಾಲಯಪರ್ವ ಅತಿ ಶ್ರೇಷ್ಠವಾದದ್ದು. ಆಚರಣೆಯ ಕ್ರಮದಲ್ಲಿ ವ್ಯತ್ಯಾಸವಿರಬಹುದು. ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಈ ಸಮಯದಲ್ಲಿ ಮಾಡುತ್ತಾರೆ. ಮತ್ತು ಪಿತೃದೇವತೆಗಳಿಗೆ ಪ್ರಿಯವಾಗಿರುವ ಪದಾರ್ಥಗಳು, ಎಂದರೆ, ಜೇನುತುಪ್ಪ, ಎಳ್ಳು, ತಣ್ಣಗಿರುವ ನೀರು, ಇವುಗಳಿಂದ ತರ್ಪಣವನ್ನು ನೀಡುತ್ತಾರೆ.

ಈ ಹಬ್ಬದ ವಿಶೇಷತೆ, ಮಹತ್ವವನ್ನು ಇಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ತಿಳಿಸಿಕೊಡಲಾಗಿದೆ.

ಮಹಾಲಯವನ್ನು ಎಂದು ಆಚರಿಸಬೇಕು?
ಉತ್ತರ: ಭಾದ್ರಪದ ಮಾಸದ ಕೃಷ್ಣ ಪಕ್ಷದ ೧೫ ದಿವಸಗಳನ್ನು ಮಹಾಲಯ (Mahalaya 2022) ಪಕ್ಷ ಎಂದು ಕರೆಯುವ ರೂಢಿ ಇದೆ. ಕೆಲವು ಕಲ್ಪಗಳಲ್ಲಿ ೧೬ ದಿವಸಗಳನ್ನೂ ಮಹಾಲಯ ಪಕ್ಷ ಎಂದು ಹೇಳುತ್ತಾರೆ. ಅದರ ಮುಂದಿನ ತಿಂಗಳು ಮೊದಲನೆಯ ದಿವಸದಲ್ಲಿ ಚಂದ್ರನಲ್ಲಿ ಎರಡು ಕಲೆಗಳು ಮಾತ್ರ ಇರುವುದರಿಂದ ಅದನ್ನೂ ಇದನ್ನೂ ಸೇರಿಸಿಕೊಂಡು ೧೬ ದಿವಸ ಮಹಾಲಯ ಪಕ್ಷ ಎನ್ನುತ್ತಾರೆ. ಎಂದರೆ, ೧೫ ದಿವಸ ಅಥವಾ ೧೬ ದಿವಸದ ಕೃಷ್ಣ ಪಕ್ಷದ ಕಾಲವನ್ನು ಮಹಾಲಯ ಪಕ್ಷ ಎಂಬುದಾಗಿ ಕರೆಯುತ್ತಾರೆ. ಇದು ಪ್ರಾಸಂಗಿಕವಾದ ವಿಷಯ ಮಾತ್ರವಲ್ಲದೆ ನಮ್ಮ ದೇಶದಲ್ಲಿ ಎಲ್ಲಾ ಭಾಗಗಳಲ್ಲಿಯೂ ಕೂಡ ಪುರಾತನವಾಗಿರುವ, ಸನಾತನ ಸಂಸ್ಕಾರಕ್ಕೆ ಒಳಪಟ್ಟಿರುವ ಎಲ್ಲರೂ ಕೂಡ ಭಕ್ತಿ ಶ್ರದ್ಧೆಯಿಂದ ಆಚರಿಸತಕ್ಕಂತಹ ಒಂದು ಕರ್ಮಕ್ಕೆ ಅತ್ಯಂತ ಪ್ರಶಸ್ತವಾದ ಕಾಲ ಮಹಾಲಯ ಪಕ್ಷಕಾಲ.

ಈ ಕಾಲವನ್ನು ಹಳ್ಳಿ ೧೮ ಜಾತಿಗಳೂ ಕೂಡ ಅತ್ಯಂತ ಕೃತಜ್ಞತೆಯಿಂದ ಪಿತೃಪೂಜೆಗೋಸ್ಕರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಈ ಭಾದ್ರಪದಮಾಸದ ಜೊತೆಗೆ ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಕನ್ಯಾ ಮಾಸವೆಂದು ಕರೆಯುತ್ತಾರೆ. ’ಕನ್ಯಾ ಗತೇ ಸವಿತರಿ’ ಸೂರ್ಯನು ಕನ್ಯಾರಾಶಿಗೆ ಪ್ರವೇಶ ಮಾಡಿದಾಗ ಕನ್ಯಾ ಮಾಸವೂ ಸೇರಿಕೊಂಡರೆ ಇನ್ನೂ ಪ್ರಶಸ್ತ ಇದು. ಕನ್ಯಾಮಾಸ ಬರದೇಹೋದರೂ ಭಾದ್ರಪದಮಾಸ ಕೃಷ್ಣಪಕ್ಷ (ಅಪರ ಪಕ್ಷ) ಮಹಾಲಯಕ್ಕೆ ಪ್ರಶಸ್ತವಾದದ್ದು. ಸೂರ್ಯನು ಕನ್ಯಾರಾಶಿಯಲ್ಲಿ ಸೇರಿಕೊಂಡಾಗ ಇನ್ನೂ ವಿಶೇಷ ಪ್ರಾಶಸ್ತ್ಯ ಉಂಟು ಅದಕ್ಕೆ. “ನಭಸ್ಯಸ್ಸ ಅಪರೇ ಪುಣ್ಯಃ ಪುಣ್ಯಃ ಕನ್ಯಾಗತೋ ರವಿಃʼʼ ನಭಸ್ಯ ಎಂದರೆ ಭಾದ್ರಪದ ಮಾಸ. ಅದರಲ್ಲಿ, ಅಪರಪಕ್ಷ ಪುಣ್ಯವಾದದ್ದು ಮತ್ತು ಸೂರ್ಯ ಕನ್ಯಾರಾಶಿ ಪ್ರವೇಶಮಾಡಿದ್ದೂ ಕೂಡಿಬಂದರೆ ಅದು ಪುಣ್ಯತಮವಾದದ್ದು ಎಂಬುದಾಗಿ ಶಾಸ್ತ್ರಗಳಲ್ಲೂ ಪ್ರಶಂಸೆ ಮಾಡಿದ್ದಾರೆ, ಈ ಪುಣ್ಯಕಾಲವನ್ನು.

“ಮಹಾಲಯ’ʼ ಪದದ ಅರ್ಥವೇನು?
ಉತ್ತರ: ಲಯ ಎಂದರೆ ಎಲ್ಲವೂ ಕೂಡ ತನ್ನ ಮೂಲದಲ್ಲಿ ಹೋಗಿ ಸೇರಿ ಕೊಂಡುಬಿಡತಕ್ಕದ್ದು. ತನ್ನ ಹಿಂದಿನ ರೂಪವನ್ನು ತೋರದೆ, ಮೂಲರೂಪದಲ್ಲಿ ಒಂದಾಗಿ ಸೇರಿಕೊಂಡುಬಿಡುವುದು. ಲಯವಾಗಿಬಿಡುವುದು. Absorb ಆಗಿಬಿಡುತ್ತದೆ ಮೂಲದಲ್ಲಿ. ಅಂತಹ ದೊಡ್ಡ absorption ಲಯ ಆಗಿಬಿಡುತ್ತದೆ ಮೂಲದಲ್ಲಿ. ಆ ಕಾರಣದಿಂದ ಮಹಾಲಯ ಎಂದು ಶಬ್ದಾರ್ಥ ಹೇಳುತ್ತದೆ. ಆದರೆ ಸಾಂಪ್ರದಾಯಿಕ ಗ್ರಂಥಗಳಲ್ಲಿ ಮಹಾಲಯಕ್ಕೆ ವಿವರಣೆ ಕೊಡುವಾಗ “ಮಹಾಂತಃ ಲೀಯಂತೇ ಅಸ್ಮಿನ್ ಇತಿ ಮಹಾಲಯಃ” ಮಹಾಂತರು ಎಂದರೆ ದೊಡ್ಡವರು, ಪಿತೃಗಳು. “ಅಸ್ಮಿನ್ ಲೀಯಂತೇ” ಎಂದರೆ ಇದರಲ್ಲಿ ಬಂದು ಸೇರಿಕೊಳ್ಳುತ್ತಾರೆ. ಇದನ್ನು ಮನೆಯಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಬಂದು ಸಂತೋಷವಾಗಿ ವಿಹರಿಸುತ್ತಾರೆ. ತಮ್ಮ ಮನೆಯಲ್ಲಿ ಹೇಗೆ ವಿಶ್ರಾಂತಿ ಪಡೆಯುತ್ತಾರೆಯೋ ಧಾರಾಳವಾಗಿ, ಹಾಗೆಯೇ ವಿಶಿಷ್ಟವಾದ ಈ ಅಪರಪಕ್ಷದಲ್ಲಿ ಇದ್ದು ಅವರು ಸುಖವನ್ನು ಅನುಭವಿಸುತ್ತಾರೆ. ಆ ಮಹಾಂತರೆಲ್ಲರೂ ಕೂಡ ಮನೆಯನ್ನಾಗಿ ಮಾಡಿಕೊಳ್ಳುವುದರಿಂದ ಇದಕ್ಕೆ ಮಹಾಲಯ. ಮಹಾತ್ಮರಾದ ಪಿತೃದೇವತೆಗಳೂ ಕೂಡ ಮನೆಯನ್ನು ಮಾಡಿಕೊಳ್ಳುವ ಜಾಗ, ಮನೆಯಲ್ಲಿ ರುವಂತೆಯೇ ಸುಖವಾಗಿರುವ ಕಾಲ ವಿಶೇಷ. ಲಯ ಎಂದರೆ ಸಂಸ್ಕೃತದಲ್ಲಿ ಮನೆ ಎಂಬ ಅರ್ಥವಾಗುತ್ತದೆ. “ವಿಷಂ ಪೀತ್ವಾ ಲಯಂ ಗತಃ’ ಈ ಮಹಾತ್ಮ ವಿಷ ಕುಡಿದು ಲಯಕ್ಕೆ ಹೋದ ಎಂದರೆ ವಿಷವನ್ನು ಕುಡಿದು ಸತ್ತು ಹೋಗಿಬಿಟ್ಟ ಎನ್ನುವ ಅರ್ಥವಲ್ಲ! ವಿಷಂ ಎಂದರೆ ಜಲ. “ಜಲಂ ಪೀತ್ವಾ ಗೃಹಂ ಗತಃʼʼ ಲಯ ಎಂದರೆ ಗೃಹ ಎನ್ನುವ ಅರ್ಥ ಇದೆ. ಆದ್ದರಿಂದ ಮಹಾಂತರು- ಪಿತೃಗಳು ಗೃಹವನ್ನಾಗಿ ಮಾಡಿಕೊಳ್ಳುವುದರಿಂದ ಮಹಾಲಯ ಎಂಬ ಹೆಸರು.

ಆದರೆ ಮೂಲತಃ ನೋಡುವ ಪಕ್ಷಕ್ಕೆ ದೊಡ್ಡ ಲಯ ಉಂಟಾಗುತ್ತದೆ ಈ ಸಮಯದಲ್ಲಿ. ಯಾವುದು ಯಾವುದರಲ್ಲಿ ಲಯ ಹೊಂದುತ್ತದೆ ಎಂದರೆ ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲವೂ ಕೂಡ ತನ್ನ ಮೂಲದಲ್ಲಿ ಲಯ ಹೊಂದುತ್ತವೆ. ಯೋಗ ಮಾರ್ಗದಲ್ಲಿ, ಜ್ಞಾನಮಾರ್ಗದಲ್ಲಿ ಹೋಗುವಾಗ ಭೂತಶುದ್ಧಿಯು ಒದಗುವಾಗ ತತ್ತ್ವಗಳು ತಮ್ಮ ಹಿಂದಿನ ತತ್ತ್ವದಲ್ಲಿ ಹೋಗಿ ಲಯ ಹೊಂದುತ್ತವೆ. ಅದು ಯೋಗಿಗೆ ಯಾವಾಗ ಬೇಕಾದರೂ ಆಗಬಹುದು. ಕಾಲವೂ ಅದಕ್ಕೆ ಅನುಗುಣ ವಾಗಿರುವುದರಿಂದ, ಈ ಸಮಯದಲ್ಲಿ ಪ್ರಕೃತಿಯಲ್ಲಿ ಲಯವು ಸಹಜವಾಗಿ, ಸುಲಭವಾಗಿ ಆಗುವ ಕಾಲವಾದ್ದರಿಂದ ಇದನ್ನು ಬರೀ ಲಯವಲ್ಲ, ಮಹಾಲಯ ಎಂದು ಕರೆಯುತ್ತಾರೆ.

ಈ ಮನೋಲಯವಾದಾಗ ಆಗಬೇಕಾದ ಕೆಲಸವೆಂದರೆ ಪಿತೃಗಳ ಪೂಜೆ. ಈ ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಹೊಂದಿರುವ ಅದಕ್ಕನುಗುಣವಾಗಿ ತತ್ತ್ವಗಳು ಲಯವನ್ನು ಹೊಂದಿರತಕ್ಕಂತಹ, ಇನ್ನೂ ಒಳಗಡೆ ಪ್ರವೇಶಿಸಿದರೆ ಪಿತೃಗಳಿಗೂ ಮೂಲಭೂತವಾಗಿರುವ ಅಷ್ಟ ಪ್ರಕೃತಿಗಳು. ಅದಕ್ಕೂ ಮೂಲವಾಗಿರುವ ಹಿರಣ್ಯಗರ್ಭ. ಅದಕ್ಕೂ ಮೂಲವಾಗಿರುವ ಪರಂಜ್ಯೋತಿ. ಅಲ್ಲಿಯವರೆಗೂ ಮಹಾಲಯ ಮಾಡುವ ಸಾಧ್ಯತೆಗಳಿವೆ. ದಾರಿಯಲ್ಲಿ ಪಿತೃದೇವತೆಗಳಿಗೆ ನಮಸ್ಕರಿಸಿ, ನಮ್ಮನ್ನು ಪ್ರವೃತ್ತಿಮಾರ್ಗಕ್ಕೆ ತರಬೇಡಿ, ಇನ್ನೂ ಮೇಲಕ್ಕೆ ಕಳುಹಿಸಿಕೊಡಿ ಎಂದು ಪ್ರಾರ್ಥಿಸಿ ಪರಬ್ರಹ್ಮದವರೆಗೂ ತಲುಪುವುದಕ್ಕನುಗುಣವಾಗಿ ಲಯವಾಗುತ್ತದೆ. ಮನೋಲಯವಾಗುತ್ತದೆ. ತತ್ತ್ವದ ಲಯವಾಗುತ್ತದೆ. ಅದಕ್ಕೆ ಅನುಗುಣವಾಗಿರುವ, ಅನುಕೂಲಕರವಾಗಿರುವ ಒಂದು ಕಾಲ/ಪಕ್ಷ ಇದು ಆಗಿರುವುದರಿಂದ ಇದನ್ನು ಪಿತೃಪಕ್ಷ “ಮಹಾಲಯಪಕ್ಷ’ʼ ಎಂಬುದಾಗಿ ಕರೆಯುತ್ತಾರೆ.

ಮಹಾಲಯ ಶ್ರಾದ್ಧವು ನಿತ್ಯ ಕರ್ಮವೋ? ಕಾಮ್ಯ ಕರ್ಮವೋ?
ಉತ್ತರ: ಮಹಾಲಯ ನಿತ್ಯಕರ್ಮಗಳಿಗೆ ಸೇರಿದ್ದು. ನಿತ್ಯಕರ್ಮ ಎಂದು ಏಕೆ ಒತ್ತಿ ಹೇಳುತ್ತೇವೆ ಎಂದರೆ, ಕೆಲವರು ನಿತ್ಯಕರ್ಮ ಅಲ್ಲ ಇದು, ಕಾಮ್ಯಕರ್ಮ ಎಂದು ಹೇಳುತ್ತಾ ಕಾಮನೆ ಯಾರಿಗೆ ಇದೆಯೋ ಅವರು ಮಾಡಬೇಕು. ಇಲ್ಲದಿದ್ದರೆ ಮಾಡಬೇಕಾಗಿಲ್ಲ ಎಂದು ಹೇಳುತ್ತಾರೆ. ಅವರು ಕಾಮ್ಯಕರ್ಮ ಎಂದು ಹೇಳಲು ಕಾರಣವೇನೆಂದರೆ ಮಹಾಲಯ ತರ್ಪಣವನ್ನು ಪ್ರಥಮೆಯಲ್ಲಿ ಮಾಡಿದರೆ ಇಂತಹ ಫಲ, ದ್ವಿತೀಯೆಯಲ್ಲಿ ಮಾಡಿದರೆ ಇಂತಹ ಫಲ, ಅಮಾವಾಸ್ಯೆಯಲ್ಲಿ ಮಾಡಿದರೆ ಇಂತಹ ಫಲ ಎಂದು ಬೇರೆ ಬೇರೆ ಫಲಗಳನ್ನು ಹೇಳಿದೆ. ಆದ್ದರಿಂದ ಕಾಮ್ಯಕರ್ಮ ಎನ್ನುತ್ತಾರೆ. ಆದರೆ ಕಾಮ್ಯಕರ್ಮ ಎಂದು ಹೇಳುವ ಉದ್ದೇಶವೇನೆಂದರೆ, ಆ ಕಾಮನೆ ಇಟ್ಟುಕೊಂಡು ಮಾಡಿದರೆ ಆ ಫಲ ಸಿಗುತ್ತದೆ. ಕಾಮನೆ ಇಟ್ಟುಕೊಳ್ಳದೆ ಕೇವಲ ಭಗವತ್ಪ್ರೀತ್ಯರ್ಥವಾಗಿ ಮಾಡಿದರೆ ಪಿತೃಗಳಿಗೂ, ಪಿತೃಗಳಿಗೂ ಪಿತೃವಾಗಿರುವ ಬ್ರಹ್ಮದೇವರಿಗೂ, ಅವರಿಗೂ ಪಿತೃವಾಗಿರುವ ಪರಮಾತ್ಮನಿಗೂ ತೃಪ್ತಿಯನ್ನು ಉಂಟು ಮಾಡುತ್ತದೆ ಈ ಕರ್ಮ. ಇದು ನಿತ್ಯಕರ್ಮವೇ. ಕಾಮ್ಯಕರ್ಮವಲ್ಲ. ಕಾಮನೆಯಿಂದ ಮಾಡಿದರೆ ಮಾತ್ರ ಕಾಮ್ಯವಾಗುತ್ತದೆ.

ಕಾಮ್ಯಕರ್ಮಗಳನ್ನು ಕೂಡ ಗೃಹಸ್ಥರಾದವರು ಆಚರಿಸಿದರೆ ಅದನ್ನು ತಪ್ಪು ಎಂದು ಹೇಳಬಾರದು. ಭಗವದ್ಗೀತೆಯಲ್ಲಿ ಭಗವಂತ, ’ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ’ ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದೇ ಇರತಕ್ಕಂತಹ ಕರ್ಮಗಳೆಲ್ಲಾ ನಾನೇ ಆಗಿದ್ದೇನೆ. ಅದು ಪವಿತ್ರವಾದದ್ದು’ ಎಂದು ಹೇಳುತ್ತಾನೆ. “ಅವರು ಯಾವ ಕಾಮ್ಯಕರ್ಮಗಳನ್ನೂ ಮಾಡುವುದಿಲ್ಲ. ಉದಕಶಾಂತಿ ಮಾಡಿದರೆ ಬೇರೆಬೇರೆ ಸ್ತೋತ್ರ ಬರುತ್ತದೆ. ಕಾಮ್ಯ ಕಾರಣದ ಶಾಂತಿ ಮಾಡುವುದಿಲ್ಲ. ಶಾಂತಿ ಬೇಡ ಅವರಿಗೆ” ಎಂದು ಹೇಳಬಾರದು. ಹಾಗೆ ಹೇಳಿದರೆ, ಔಷಧಿಯೇ ತೆಗೆದು ಕೊಳ್ಳಬಾರದು. ಔಷಧಿ ತೆಗೆದುಕೊಳ್ಳಬೇಕಾದರೆ, ಏನು ಸಂಕಲ್ಪ ಮಾಡುತ್ತೀರಿ? ಈ ಜ್ವರ ಹೋಗಲಿ ಎಂಬ ಕಾಮನೆಯಿಂದ. ಆ ಕಾಮನೆ ಇಟ್ಟುಕೊಂಡು ಔಷಧಿ ಸೇವಿಸ ಬಾರದು ಎಂದರೆ ಎಂತಹ ಮೂರ್ಖತನ ಇದು? ಔಷಧಿ ಸೇವಿಸಿದ ಪಕ್ಷದಲ್ಲಿ ಎಂತಹ ಒಳ್ಳೆಯ ಕೆಲಸವನ್ನು ಮಾಡುತ್ತದೆ ನೋಡಿ ಅದು. ಇಂತಹ ಕಾಮ್ಯಕರ್ಮಗಳು ಭಗವಂತನಿಗೆ ಪ್ರಿಯವಾದದ್ದು ಎಂದು ಆಚಾರ್ಯರು ತತ್ತ್ವಮುಕ್ತಾಕಲಾಪದಲ್ಲಿ “ತಸ್ಮಾತ್ ನಾನಾಮರೇಜ್ಯಾ ನ ಭವತಿ ಪರಭಕ್ತ್ಯಂಗಮಿತಿ ಅಯುಕ್ತಮ್” ಎಂದು ಹೇಳಿದ್ದಾರೆ. [ಈ ನಾನಾ ದೇವತೆಗಳ ಪೂಜೆಯೂ (ಭಗತ್‌ಪ್ರೀತ್ಯರ್ಥವಾಗಿ ಮಾಡಿದಾಗ) ಪರಭಕ್ತಿಯ ಅಂಗವಾಗುವುದು ಎನ್ನುವುದು ಯುಕ್ತವೇ]. ಮತ್ತೊಂದು, ಆ ಕಾಮನೆ ಗಳನ್ನು ಪೂರೈಸುವ ದೇವತೆಗಳು ಅಥವಾ ಆ ದೇವತೆಗಳಿಗೂ ಅಂತರ್ಯಾಮಿಯಾಗಿ ಸಾಕ್ಷಾತ್ ಪರಮಾತ್ಮನೇ ವರ ಕೊಡುವುದರಿಂದ ಭಗವತ್ ಪ್ರೀತ್ಯರ್ಥವಾಗಿ ಆಚರಿಸುವ ಪಕ್ಷಕ್ಕೆ ಅದು ಮೋಕ್ಷಕ್ಕೆ ಸಹಾಯ ಮಾಡುತ್ತದೆ. ಇದು ವಾಸ್ತವವಾಗಿ ನಿತ್ಯಕರ್ಮಕ್ಕೆ ಸೇರಿದೆ. ಕಾಮ್ಯವಲ್ಲ. ಶ್ರಾದ್ಧವನ್ನು ಮಾಡುವ ಅಧಿಕಾರ ಯಾರಿಗೆ ಇದೆಯೋ, ಅವರೆಲ್ಲರೂ ಆಚರಿಸಲೇಬೇಕು.

ಶ್ರಾದ್ಧ ಮಾಡುವ ಅಧಿಕಾರವಿಲ್ಲದವರು (ಜೀವತ್ಪಿತೃಗಳು) ಈ ವಿಷಯವನ್ನು ಕೇಳಬಹುದೇ?
ಉತ್ತರ : ಈ ವಿಷಯವನ್ನು ಕೇಳಿ ಅಧಿಕಾರಿಗಳಲ್ಲದವರು ಯಾರೂ ಹೆದರಬೇಕಾಗಿಲ್ಲ. ಇದು ಅವರಿಗೆ ತಿಳುವಳಿಕೆಗೋಸ್ಕರ. ಈಗ ಮಾಡುವ ಸಂದರ್ಭ ಇಲ್ಲದಿದ್ದರೂ ಮುಂದೆಂದಾದರೂ ಸಂದರ್ಭ ಬಂದಾಗ ಆಚರಿಸಲೇಬೇಕಾಗುತ್ತದೆ. ಮಹಾಲಯ ಅಮಾವಾಸ್ಯೆಯನ್ನು ಮನೆಯಲ್ಲಿ ಅಧಿಕಾರಿಗಳು ಆಚರಿಸುತ್ತಿದ್ದರೆ ಅವರಿಗೆ ಉಪಯೋಗವಾಗುವ ಸಾಮಗ್ರಿಗಳನ್ನು ಒದಗಿಸಿ ಕೊಡುವ ಸಂಸ್ಕಾರ ಕೂಡಿ ಬರುತ್ತದೆ. ಆದ್ದರಿಂದ ಈ ವಿಷಯ ಎಲ್ಲರಿಗೂ ಅಗತ್ಯವಾಗಿದೆ.

ಮಹಾಲಯ ಪಕ್ಷದಲ್ಲಿ ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?
ಉತ್ತರ : ಈ ಮಹಾಲಯಪಕ್ಷದಲ್ಲಿ ಎಲ್ಲ ದಿವಸಗಳೂ ಪ್ರಸಿದ್ಧವಾದವು. ಇದನ್ನು ಆಷಾಢಾದಿ ಪಂಚಮಹಾಪಕ್ಷ ಎನ್ನುತ್ತಾರೆ. ಎಂದರೆ, ಆಷಾಡ ಮುಂತಾದ ಅಪರ ಪಕ್ಷಗಳಲ್ಲಿ ಎರಡನೆಯದು. ಆಷಾಡೇ ಎಂದರೆ ಆಷಾಡಮಾಸದ ಪೂರ್ಣಿಮೆ. ಆ ಪೂರ್ಣಿಮೆಯಿಂದ ಮುಂದಕ್ಕೆ ೫ನೇ ಅಪರ ಪಕ್ಷವಾಗುತ್ತದೆ. ಅಲ್ಲಿಂದ ಪ್ರತಿಯೊಂದು ಅಪರಪಕ್ಷವೂ ಪಿತೃಗಳ ಪೂಜೆಗೆ ಪ್ರಶಸ್ತವಾಗಿದೆ. ಅದರಲ್ಲೂ ಮಹಾಲಯ – ಈ ಪಂಚಮ ಅಪರಪಕ್ಷ ಪ್ರಶಸ್ತವಾದದ್ದು ಪಿತೃಪೂಜೆಗೆ. ಪಿತೃಗಳೂ ಈ ಪೂಜೆಯಿಂದ ಸಂತೋಷದಿಂದ ತಮ್ಮ ಮನೆ ಎಂದು ತಿಳಿದು ಸದಾ ಬರುತ್ತಾ ಇರಲಿ ಎಂದು ಆಲಂಕಾರಿಕ ಭಾಷೆಯಲ್ಲಿ ಪುರಾಣಗಳಲ್ಲಿ ಹೇಳಿದ್ದಾರೆ. ಈ ಪಂಚಮ ಅಪರಪಕ್ಷದಲ್ಲಿ ಧರ್ಮರಾಯ ತನ್ನ ಲೋಕದಲ್ಲಿ ಇರುವ ಎಲ್ಲ ಪಿತೃಗಳಿಗೂ ರಜಾ ಕೊಟ್ಟು ನಿಮ್ಮ ನಿಮ್ಮ ಮಕ್ಕಳು ನಿಮ್ಮನ್ನು ಕುರಿತು ಜೇನುತುಪ್ಪವನ್ನು ಕೊಟ್ಟು ಸಂತೋಷಪಡಿಸುತ್ತಿದ್ದಾರೆ. ಅದನ್ನು ಅನುಭವಿಸಿ ತತ್ ಕ್ಷಣದಲ್ಲೇ ಎಂದು ಒಡನೆಯೇ ಕಳುಹಿಸಿಕೊಡುತ್ತಾನೆ! ಎಂತಹ leave ಇದು. Leave without payನೇ ಎಂದು ಅಪಹಾಸ್ಯ ಮಾಡಬಾರದು. ಇದು ಒಂದು ಆಲಂಕಾರಿಕ ಭಾಷೆಯಷ್ಟೇ.

ಆಲಂಕಾರಿಕವಾಗಿ ಎಂದರೆ ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ವಿಶೇಷವಾಗಿರುವ ಸೇವೆಯನ್ನು, ಸಂತೋಷವನ್ನು ಅಪೇಕ್ಷೆಪಡುತ್ತಾರೆ. ನಮ್ಮ ಶರೀರದಲ್ಲಿ ಉತ್ತರಾಯಣ ದಕ್ಷಿಣಾಯನ ಮಾರ್ಗವನ್ನು ಸೂಚಿಸುವ ನಾಡಿಗಳಿವೆ. ಅದರಲ್ಲಿ ದಕ್ಷಿಣಾಯನ ಮಾರ್ಗದಲ್ಲಿರುವ ಶಕ್ತಿಗಳು ಪಿತೃ ಮಾರ್ಗದ ಶಕ್ತಿಗಳು. ಧೂಮಾದಿ ಮಾರ್ಗದ ಶಕ್ತಿಗಳು ಯಾರುಂಟೋ ಅವರು. ಈ ಭೂಮಿಯ ಸುಖವನ್ನು ಅನುಭವಿಸತಕ್ಕ ಪ್ರವೃತ್ತಿಗೆ ಅಭಿಮುಖವಾಗಿರುವ ಒಂದು ವಾತಾವರಣ ಇರುವ ಕಾಲ ಎಂದರೆ ದಕ್ಷಿಣಾಯನಕ್ಕೆ ಅನುಗುಣವಾದ ಶಕ್ತಿಗಳು. ಎಂದರೆ ಸೃಷ್ಟಿಯನ್ನು ಮುಂದುವರಿಸುವ ಶಕ್ತಿಗಳು ಯಾರುಂಟೋ ಅವರ ಪ್ರಸನ್ನತೆಯನ್ನು ಹೊಂದುವುದಕ್ಕೆ ಅನುಗುಣ ವಾಗಿರುವ ಕಾಲವಾಗಿರುವುದರಿಂದ ಅವರನ್ನು ಭೂಲೋಕಕ್ಕೆ ಕಳುಹಿಸಿ ಕೊಡುತ್ತಾನೆ.

(ಮುಂದಿನ ಭಾಗದಲ್ಲಿ ಶ್ರಾದ್ಧದ ಆಚರಣೆ ಹೇಗೆ?)

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಇದನ್ನೂ ಓದಿ | Pitru Paksha | ಪಿತೃ ಪಕ್ಷ ಎಂದರೇನು? ಏಕೆ ಮತ್ತು ಹೇಗೆ ಆಚರಣೆ ಮಾಡಬೇಕು?

Exit mobile version