Site icon Vistara News

Mahalaya 2022 | ಪಿತೃಕಾರ್ಯಗಳಿಗೆ ಹೆಸರಾದ ರಾಜ್ಯದ ತೀರ್ಥಕ್ಷೇತ್ರಗಳು ಯಾವವು ಗೊತ್ತೇ?

Mahalaya 2022

ಪಿತೃಪಕ್ಷದ ಹದಿನೈದು ದಿನಗಳೂ (Mahalaya 2022 ) ಪಿತೃದೇವತೆಗಳಿಗೆ ಶ್ರಾದ್ಧ ತರ್ಪಣ ಅರ್ಪಿಸಿ, ಅವರನ್ನು ಸಂತುಷ್ಟಗೊಳಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ದಾನ ಶೂರ ಕರ್ಣ ಎಲ್ಲವನ್ನೂ ದಾನ ಮಾಡಿದ್ದರೂ ಪಿತೃತಳಿಗೆ ಅನ್ನಾದಿಗಳನ್ನು ಉಣಬಡಿಸಿರಲಿಲ್ಲ ಎಂಬ ಕಾರಣಕ್ಕಾಗಿ ಮತ್ತೆ ಭೂಲೋಕಕ್ಕೆ ಆಗಮಿಸಿ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದ್ದನೆಂಬ ವಿಷಯ ಮಹಾಭಾರತದಲ್ಲಿದೆ.

ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡುವುದರಿಂದ ಅವರ ಆಶೀರ್ವಾದ ದೊರೆತು, ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಮೋಕ್ಷ ದೊರೆಯುತ್ತದೆ ಎಂಬುದು ನಂಬಿಕೆ. ಪಿತೃಗಳಿಗೆ ತರ್ಪಣ ನೀಡಲು ನದಿಗಳ ಸಂಗಮ ಸ್ಥಳದಲ್ಲಿರುವ ಪವಿತ್ರ ಕ್ಷೇತ್ರಗಳು ಅತ್ಯಂತ ಶ್ರೇಷ್ಠವಾದವು ಎಂದು ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ಹೇಳಲಾಗಿದೆ.

ನಮ್ಮ ದೇಶದಲ್ಲಿ ಶ್ರೀ ಕ್ಷೇತ್ರವಾದ ಗಯೆಯು (ಬಿಹಾರ ರಾಜ್ಯ) ಪಿತೃತರ್ಪಣ ಇತ್ಯಾದಿ ವಿಧಿ ವಿಧಾನಗಳಿಗೆ ಹೆಸರುವಾಸಿಯಾಗಿದ್ದು, ಮಹಾಲಯದ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಸುಮಾರು 50-75 ಲಕ್ಷದಷ್ಟು ಜನರು ಆಗಮಿಸಿ ಪಿತೃಕಾರ್ಯ ಕೈಗೊಳ್ಳುತ್ತಾರೆ. ಇದಲ್ಲದೆ, ಪ್ರಭಾಸ ಕ್ಷೇತ್ರ (ಗುಜರಾತ್), ಪುಷ್ಕರ (ರಾಜಸ್ಥಾನ), ಪ್ರಯಾಗ (ಉತ್ತರ ಪ್ರದೇಶ), ವಾರಣಾಸಿ (ಕಾಶಿ- ಉತ್ತರ ಪ್ರದೇಶ) ಮತ್ತು ಕುರುಕ್ಷೇತ್ರ (ಹರಿಯಾಣ), ಅಮರಕಂಟಕ (ಮಧ್ಯಪ್ರದೇಶ) ಕೂಡ ಈ ಕಾರ್ಯಕ್ಕೆ ಪ್ರಸಿದ್ಧವಾಗಿವೆ. ಇದರ ಜತೆಗೆ ಗಂಗೆ, ಯಮುನೆ ಮತ್ತು ನರ್ಮದಾ ನದಿಯ ತಟಗಳಲ್ಲಿ ಕೂಡ ಪಿತೃಕಾರ್ಯ ನಡೆಸಲಾಗುತ್ತದೆ.

ನಮ್ಮ ರಾಜ್ಯದಲ್ಲಿ ಕೂಡ ಈ ರೀತಿಯ ಕ್ಷೇತ್ರಗಳಿವೆ. ಅವುಗಳು ಯಾವವು ಎಂಬುದನ್ನು ನೋಡೋಣ;

1. ಗೋಕರ್ಣ
ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರ ಗೋಕರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಪುರಾಣ ಐತಿಹ್ಯವುಳ್ಳ ಸ್ಥಳ ಇದಾಗಿದ್ದು, ಪರಶುರಾಮರ ಏಳು ತೀರ್ಥಕ್ಷೇತ್ರಗಳಲ್ಲಿ ಮುಕ್ತಿದಾಯಕ ಕ್ಷೇತ್ರವಾಗಿದೆ. ಶ್ರೀ ಮಹಾಬಲೇಶ್ವರ ದೇವಸ್ಥಾನ, ಕೋಟಿ ತೀರ್ಥ ಬಹಳ ಪ್ರಸಿದ್ಧಿ ಪಡೆದಿವೆ.

Mahalaya 2022

ಇತಿಹಾಸವೇನು?: ಸೂರ್ಯವಂಶದ ಮಿತ್ರಸಹನೆಂಬ ರಾಜನು ವಸಿಷ್ಠರ ಶಾಪದಿಂದ ರಾಕ್ಷಸನಾಗಿ ಅದೇ ಸಿಟ್ಟಿನಿಂದ 101 ಮಕ್ಕಳನ್ನು ತಿಂದನು. ಇದರಿಂದ ಅವರೆಲ್ಲರೂ ನರಕವನ್ನು ಹೊಂದಿದರು. ಅವರ ಈ ದುರ್ಗತಿ ನಿವಾರಣೆಗಾಗಿ ವಸಿಷ್ಠರ ಅಪ್ಪಣೆಯಂತೆ ಋಷಿ ಪರಾಶರರು ಗೋಕರ್ಣಕ್ಕೆ ಬಂದು ರುದ್ರಪಾದವನ್ನು ನಿರ್ಮಿಸಿ ತಪಸ್ಸು ಮಾಡಿದರು. ಪ್ರತ್ಯಕ್ಷನಾದ ಈಶ್ವರನ ಅಪ್ಪಣೆಯಂತೆ ಅಲ್ಲಿ ಎಲ್ಲರ ಶ್ರಾದ್ಧವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಆ 101 ಮಂದಿಯೂ ಬ್ರಹ್ಮಲೋಕವನ್ನು ಹೊಂದಿದರು.

ಈ ಸ್ಥಳದು ಕುರಿತು ಇನ್ನೂ ಹಲವಾರು ಪುರಾಣ ಕಥೆಗಳು ಲಭ್ಯವಿದ್ದು. ಈ ಜಾಗದಲ್ಲಿ ಮಾಡಿದ ಕರ್ಮಕಾರ್ಯಗಳಿಗೆ ಅನಂತ ಫಲ ದೊರಕುವುದರಿಂದ ಗಯಾ ಕ್ಷೇತ್ರದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ದೇಶದ ವಿವಿಧೆಡೆಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡಿ ಶ್ರಾದ್ಧ, ಪಿಂಡ ಪ್ರಧಾನ, ಪಿತೃದೋಷ ಪರಿಹಾರಕ್ಕಾಗಿ ಕಾರ್ಯಗಳನ್ನು ನೆರವೇರಿಸುತ್ತಾರೆ.

2. ಶ್ರೀರಂಗಪಟ್ಟಣ
ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣ ಕೂಡ ಪಿತೃಕಾರ್ಯಗಳಿಗೆ ಹೆಸರುವಾಸಿ. ಇಲ್ಲಿ ಕಾವೇರಿ ನದಿಯು ಪೂರ್ವವಾಹಿನಿ ಹಾಗು ಪಶ್ಚಿಮವಾಹಿನಿಗಳಾಗಿ ಕವಲೊಡೆದು ಹರಿಯುತ್ತದೆ. ಇದರಿಂದಾಗಿ ಶ್ರೀರಂಗಪಟ್ಟನವು ಒಂದು ದ್ವೀಪದಂತಿದೆ. ಇಲ್ಲಿ ಕವಲೊಡೆದ ಕಾವೇರಿಯ ಮತ್ತು ಲೋಕಪಾವನಿ ನದಿಗಳು ಕೂಡುವ ಸಂಗಮವಿದ್ದು, ಸಂಗಮ ಕ್ಷೇತ್ರವಾಗಿ ಹೆಸರು ಪಡೆದಿದೆ.

Mahalaya 2022

ಪಶ್ಚಿಮ ವಾಹಿನಿಯು ಅಂತಿಮ ಕರ್ಮಗಳನ್ನು ಮಾಡಲು ಒಂದು ಪುಣ್ಯ ಕ್ಷೇತ್ರ. ಇಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೃತರ ಅಸ್ಥಿಗಳನ್ನು ವಿಸರ್ಜಿಸಿದರೆ ಮೋಕ್ಷ ಲಭಿಸುವುದೆಂದು ನಂಬಿಕೆಯಿದೆ. ಗಂಜಾಂ ಕಾವೇರಿ‌ ನದಿ ತೀರದ ಗೋಸಾಯಿಘಾಟ್‌ನಲ್ಲಿ, ಪಶ್ಚಿಮವಾಹಿನಿ, ಶ್ರೀರಂಗನಾಥ ಸ್ವಾಮಿ ದೇವಾಲಯ ಸ್ನಾನಘಟ್ಟ, ಸಂಗಮದಬಳಿ ಕಾವೇರಿ ನದಿಯಲ್ಲಿ ಆಸ್ತಿಕ ಮಂದಿ ಪಿತೃಗಳಿಗೆ ತರ್ಪಣ ನೀಡುತ್ತಾರೆ.

3. ಉಪ್ಪಿನಂಗಡಿ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನ ವಿದ್ದು, ಇದೂ ಕೂಡ ಮುಕ್ತಿ ಕ್ಷೇತ್ರವೆನಿಸಿದೆ. ನೇತ್ರಾವತಿ ಹಾಗೂ ಕುಮಾರಾಧಾರಾ ನದಿಗಳ ಸಂಗಮ ಕ್ಷೇತ್ರ ಇದು. ಹೀಗಾಗಿಯೇ ಇದು ಗಯಾಪದ ಕ್ಷೇತ್ರ, ದಕ್ಷಿಣ ಕಾಶಿ ಎಂಬ ಹೆಸರನಿಂದಲೂ ಕರೆಯಲ್ಪಡುತ್ತದೆ.

Mahalaya 2022

ಕಾಶಿಯಲ್ಲಿರುವಂತೆಯೇ ಇಲ್ಲಿಯೂ ಈಶ್ವರನ ದೇಗುಲದ ಜತೆಯಲ್ಲಿಯೇ ಮಹಾಕಾಳಿ ಮತ್ತು ಕಾಲಭೈರವನ ದೇಗುಲವಿದೆ. ಗಂಗೆ-ಯಮುನೆಯರ ಸಂಗಮವಾಗಿ ಪ್ರಯಾಗವೆಂದು ಪ್ರಸಿದ್ಧವಾದ ಉತ್ತರ ಕಾಶಿಯಷ್ಟೇ, ನೇತ್ರಾವತಿ-ಕುಮಾರಾಧಾರಾ ಸಂಗಮ ತಾಣವಾಗಿ ಇದು ಪ್ರಸಿದ್ಧಿ ಪಡೆದಿದೆ.

ಇಲ್ಲಿ ಸಾವಿರ ಉದ್ಭವ ಲಿಂಗಗಳು ಭೂತಳದಲ್ಲಿವೆಯಂತೆ. ದೇಗುಲ ಮುಂಭಾಗದಲ್ಲಿಯೇ ನದಿಗಳು ಸಂಗಮವಾಗುತ್ತವೆ. ಇಲ್ಲಿಗೆ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಬಂದು ಪಿತೃಕಾರ್ಯ, ಅಸ್ತಿ ವಿಸರ್ಜನೆ, ಅಪರಕರ್ಮ ಇತ್ಯಾದಿಗಳನ್ನು ಮಾಡುತ್ತಾರೆ.

4. ಟಿ.ನರಸೀಪುರ
ಟಿ. ನರಸೀಪುರ ಎಂದೇ ಹೆಸರು ಮಾಡಿರು ತಿರುಮಕೂಡಲು ನರಸೀಪುರ ಮೈಸೂರು ಜಿಲ್ಲೆಯಲ್ಲಿದೆ. ಇಲ್ಲಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾಗುತ್ತದೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮಕೂಡಲು ಎಂಬ ಹೆಸರಿದೆ. ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ ದೇಗುಲವಿದೆ. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಗುಡಿಯ ಮುಂದೆ ಹಲ್ಲಿಯ ಕಂಬವಿದೆ.

Mahalaya 2022

ಕಪಿಲೆ ಮತ್ತು ಕಾವೇರಿ ನದಿಗಳ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರ ಮೂರ್ತಿಯ ಕೈಯಲ್ಲಿ ಗುಲಗಂಜಿಯ ಕೆತ್ತನೆ ಇರುವುದರಿಂದ “ಗುಂಜ ನರಸಿಂಹʼʼ ಎಂಬ ಹೆಸರೂ ಬಂದಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳದಿಂದಾಗಿ ಈ ಕ್ಷೇತ್ರ ಪ್ರಸಿದ್ಧಿಪಡೆದಿದೆ. ಇಲ್ಲಿಯ ಸಂಗಮದಲ್ಲಿ ಪಿತೃಕಾರ್ಯ, ಅಸ್ತಿ ವಿಸರ್ಜನೆ ಮತ್ತಿತರ ಕಾರ್ಯಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ | Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?

Exit mobile version