Site icon Vistara News

Mahalaya 2022 | ಮಹಾಲಯದ ದಿನ ಹಿರಿಯರ ಪೂಜೆ ಹೇಗೆ? ಯಾರನ್ನೆಲ್ಲಾ ನೆನೆಯಬೇಕು?

Mahalaya 2022

ನಮ್ಮ ಪಿತೃಗಳಿಗೆ ವರ್ಷದಲ್ಲೊಮ್ಮೆ ಕೃತಜ್ಞತೆ ಸಲ್ಲಿಸಲು ಇರುವ ಅವಕಾಶವೇ ಪಿತೃಪಕ್ಷ ಹಾಗೂ ಮಹಾಲಯ ಅಮಾವಾಸ್ಯೆ (Mahalaya 2022). ನಮ್ಮ ಇಂದಿನ ಜನ್ಮಕ್ಕೆ, ಜೀವನಕ್ಕೆ ನಮ್ಮ ಪಿತೃಗಳ ಕೊಡುಗೆ ಅಪಾರ. ಒಂದಲ್ಲಾ ಒಂದು ರೀತಿಯಲ್ಲಿ ಅವರು ನಮಗೆ ಕೊಡುಗೆ ನೀಡಿಯೇ ಇರುತ್ತಾರೆ. ಆದ್ದರಿಂದ ಅವರಿಗೆ ವರ್ಷದಲ್ಲಿ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ರೀತಿ ಕೃತಜ್ಞತೆ ಸಲ್ಲಿಸಲು ಜಾತಿ-ಧರ್ಮಗಳ ಭೇದವಿಲ್ಲ! ಪಿತೃಪಕ್ಷವು ಸರ್ವರಿಗೂ ಅನ್ವಯಿಸುವ ಆಚರಣೆಯಾಗಿದೆ.

ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಪೂರ್ವಿಕರು ವಸು-ರುದ್ರ-ಆದಿತ್ಯ ರೂಪದಲ್ಲಿ ಬಂದು ನಮ್ಮ ಕೃತಜ್ಞತೆ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಮಹಾಲಯ ಅಮಾವಾಸ್ಯೆಗೆ (Mahalaya 2022) ಸರ್ವ ಪಿತೃ ಅಮಾವಾಸ್ಯೆ ಎಂಬ ಹೆಸರೂ ಇದೆ. ಅಂದರೆ ಎಲ್ಲ ಪಿತೃಗಳನ್ನು ಅಂದು ಪೂಜಿಸಬಹುದಾಗಿದೆ. ಕೆಲವರು ಪಿತೃಪಕ್ಷವನ್ನು “ಮಾಳಪಕ್ಷʼʼ ಎಂದೂ ಕರೆಯುತ್ತಾರೆ. ಪಿತೃಕಾರ್ಯಗಳನ್ನು ನಮ್ಮ ರಾಜ್ಯದಲ್ಲಿ “ಹಿರಿಯರ ಹಬ್ಬʼʼ ಎಂದೂ ಆಚರಿಸಲಾಗುತ್ತದೆ. ಒಂದೊಂದು ಜಾತಿ ಜನಾಂಗದವರು ಒಂದೊಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಉದ್ದೇಶವೂ ಒಂದೇ ಆಗಿದೆ. ಅದು ನಮ್ಮೆಲ್ಲ ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವುದು.

ಕೆಲವರು ಹಿರಿಯರ ಹಬ್ಬದಂದು ಹಿರಿಯರು ಬಹಳವಾಗಿ ಇಷ್ಟಪಡುತ್ತಿದ್ದ ಆಹಾರ, ಬಟ್ಟೆ, ಇನ್ನಿತರ ವಸ್ತುಗಳನ್ನು ವಿಶೇಷವಾಗಿ ಸಿದ್ಧಪಡಿಸಿ ಹಿರಿಕರಿಗೆ ಒಪ್ಪಿಸುತ್ತಾರೆ. ಅವರನ್ನು ತಮ್ಮದೇ ಆದ ಶೈಲಿಯಲ್ಲಿ ಉಪಚರಿಸುತ್ತಾರೆ. ಈ ನೆಪದಲ್ಲಿ ಕುಟುಂಬದವರೆಲ್ಲರೂ ಒಂದೆಡೆ ಸೇರಿ, ಪೂರ್ವಿಕರನ್ನು ನೆನಪಿಸಿಕೊಳ್ಳುತ್ತಾರೆ. ಕಿರಿಯರಿಗೆ ತಮ್ಮ ಬೇರುಗಳ ಪರಿಚಯವನ್ನು ಗೊತ್ತಿಲ್ಲದೆಯೇ ಮಾಡಿಕೊಡಲಾಗುತ್ತದೆ. ಕೆಲವರು ಮನೆಯಲ್ಲಿಯೇ ಈ ಹಬ್ಬ ಮಾಡಿದರೆ ಇನ್ನು ಕೆಲವರು ತೀರ್ಥಕ್ಷೇತ್ರಗಳಲ್ಲಿ, ನದಿ-ಸಮುದ್ರದ ತೀರಗಳಲ್ಲಿ, ತೋಟಗಳಲ್ಲಿ ಅಥವಾ ಸಮಾಧಿಯ ಬಳಿ ಮಾಡುತ್ತಾರೆ. ಪೂಜೆಯ ನಂತರ ಎಡೆಯನ್ನು ಕಾಗೆಗಳಿಗಾಗಿ ಹೊರಗಿಡುವ ಪದ್ಧತಿ ಬಹುತೇಕ ಎಲ್ಲ ಜಾತಿ-ಜನಾಂಗಗಳಲ್ಲಿಯೂ ಇದೆ.

ಮೃತಪಟ್ಟವರ ಫೋಟೊ ಇದ್ದರೆ ಅದನ್ನು ದೇವರ ಫೊಟೊದಂತೆ ಇಟ್ಟು, ಅದರ ಮುಂದೆ ಅವರು ಇಷ್ಟ ಪಡುವ ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ನಂತರ ಬಗೆ ಬಗೆಯ ತಿನಿಸು, ಹಣ್ಣು-ಹಂಪಲುಗಳನ್ನು ನೈವೇದ್ಯ ಮಾಡಲಾಗುತ್ತದೆ. ಕೆಲವರು ಪೂಜೆ ಮುಗಿದ ನಂತರ ಎಡೆಯನ್ನು ಮನೆಯ ಹೊರಗೆ, ಅಥವಾ ಹೊರಗೆಯೇ ಪೂಜೆ ಮಾಡಿದ್ದರೆ ಅಲ್ಲಿ ಕಾಗೆಗಳಿಗೆ ಇಡುತ್ತಾರೆ. ಕಾಗೆ ಬಂದು ಅದನ್ನು ತಿಂದ ನಂತರವೇ ಮನೆಯ ಮಂದಿ ಊಟ ಮಾಡುವ ಸಂಪ್ರದಾಯವೂ ಕೆಲವು ಕಡೆ ಇದೆ.

ಹಿರಿಕರ ಹಬ್ಬಕ್ಕೆ ಅಥವಾ ಪಿತೃತರ್ಪಣ ನೀಡುವುದಕ್ಕೆ ನಮ್ಮಲ್ಲಿ ಎಲ್ಲಿಲ್ಲದ ಮಹತ್ವ ನೀಡಿಕೊಂಡೇ ಬರಲಾಗಿದೆ. “ಮಾಳಪಕ್ಷ ಮಾಡಲು ಮನೆ ಮಗನನ್ನಾದರೂ ಮಾರುʼʼ ಎಂಬ ಗಾದೆ ಮಾತೇ ಹುಟ್ಟಿಕೊಂಡಿದೆ ಎಂದರೆ ಇದಕ್ಕಿರುವ ಮಹತ್ವ ಅರಿವಾಗುತ್ತದೆ. ಈ ಹಿರಿಕರ ಹಬ್ಬವನ್ನು ಕೆಲವರು ದೀಪಾವಳಿ, ಸಂಕ್ರಾಂತಿ ಅಥವಾ ಯುಗಾದಿಯ ಸಂದರ್ಭದಲ್ಲಿ ಮಾಡುವುದೂ ಉಂಟು.

ದ್ವಾದಶ ಪಿತೃಗಳಿಗೆ ತರ್ಪಣ
ಮಹಾಲಯ ಅಮಾವಾಸ್ಯೆಯಂದು ದ್ವಾದಶ ಪಿತೃಗಳಿಗೆ ವಿಶೇಷವಾಗಿ ತರ್ಪಣ ನೀಡಲಾಗುತ್ತದೆ. ದ್ವಾದಶ ಪಿತೃಗಳು ಎಂದರೆ ಯಾರು ಎಂಬ ಮಾಹಿತಿ ಇಲ್ಲಿದೆ;
ಪಿತೃವರ್ಗ: ಅಸ್ಮತ್‌ ಪಿತರಂ (ತಂದೆ), ಅಸ್ಮತ್‌ ಪಿತಾಮಹಂ (ತಂದೆಯ ತಂದೆ), ಅಸ್ಮತ್‌ ಪ್ರಪಿತಾಮಹಂ (ತಂದೆಯ ತಂದೆಯ ತಂದೆ)
ಮಾತೃ ವರ್ಗ: ಅಸ್ಮತ್‌ ಮಾತರಂ (ತಾಯಿ), ಅಸ್ಮತ್‌ ಪಿತಾಮಹೀಂ (ತಂದೆಯ ತಾಯಿ) ಅಸ್ಮತ್‌ ಪ್ರಪಿತಾಮಹೀಂ (ತಂದೆಯ ತಂದೆಯ ತಾಯಿ), ಅಸ್ಮತ್‌ ಸಾಪತ್ನಿ ಜನನೀ (ತಂದೆಯ ಮೊತ್ತಬ್ಬ ಹೆಂಡತಿ ಇದ್ದರೆ).
ಮಾತಾಮಹ ವರ್ಗ: ಅಸ್ಮತ್‌ ಮಾತಾಮಹಂ (ತಾಯಿಯ ತಂದೆ), ಅಸ್ಮತ್‌ ಮಾತಾ ಪಿತಾಮಹಂ (ತಾಯಿಯ ತಂದೆಯ ತಂದೆ), ಅಸ್ಮತ್‌ ಮಾತಃ ಪ್ರಪಿತಾಮಹಂ (ತಾಯಿಯ ತಂದೆಯ ತಂದೆಯ ತಂದೆ).
ಮಾತಾಮಹಿ ವರ್ಗ: ಅಸ್ಮತ್‌ ಮಾತಾಮಹೀಂ (ತಾಯಿಯ ತಾಯಿ), ಅಸ್ಮತ್‌ ಮಾತಃ ಪಿತಾಮಹೀಂ (ತಾಯಿಯ ತಂದೆಯ ತಾಯಿ), ಅಸ್ಮತ್‌ ಮಾತಾಃ ಪ್ರಪಿತಾಮಹೀಂ (ತಾಯಿಯ ತಂದೆಯ ತಂದೆಯ ತಾಯಿ)
(ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಡಬೇಕು)

ಯಾರನ್ನೆಲ್ಲಾ ನೆನೆಯಬೇಕು?
ಮಹಾಲಯದ ಸಂದರ್ಭದಲ್ಲಿ ಕುಟುಂಬದಲ್ಲಿ ಮೃತಪಟ್ಟವರಲ್ಲಿ ಕ್ರಮವಾಗಿ ಮೊದಲು ತಂದೆ, ತಾಯಿ, ಹೆಂಡತಿ, ಅತ್ತೆ, ಮಾವ, ಮಗ, ಸಹೋದರರು, ದೊಡ್ಡಪ್ಪ, ಚಿಕ್ಕಪ್ಪ ಹಾಗೂ ಅವರ ಹೆಂಡತಿ, ತಾಯಿಯ ತಮ್ಮ ಅಥವಾ ಅಣ್ಣ, ಅವರ ಹೆಂಡತಿಯರು, ಮಗಳು, ಅಕ್ಕ, ತಂಗಿ ಹಾಗೂ ಅವರ ಮಕ್ಕಳಿಗೆ, ಭಾವ, ಮೈದುನ ಮುಂತಾದವರು ಹಾಗೂ ವಿಶೇಷವಾಗಿ ಗುರುಗಳು, ಕುಲಪುರೋಹಿತರು ಸೇರಿದಂತೆ ಯಾರು ನಮಗೆ ತಿಳಿದಂತೆ ಮೃತರಾಗಿದ್ದಾರೋ ಅವರಿಗೆಲ್ಲಾ ಕ್ರಮವಾಗಿ ತರ್ಪಣಗಳನ್ನು ಕೊಡುವ ಪದ್ಧತಿ ಇದೆ. ಕೆಲವರನ್ನು ಅವರನ್ನು ನೆನೆದು ವಿಶೇಷ ಪೂಜೆ ಮಾಡುತಾರೆ.

ತರ್ಪಣ ನೀಡುವುದು ಹೇಗೆ?
ತರ್ಪಣಗಳಲ್ಲಿ ಎರಡು ವಿಧಗಳಿವೆ. ಒಂದು ಜಲ ತರ್ಪಣ, ಇನ್ನೊಂದು ತಿಲ ತರ್ಪಣ. ಮಹಾಲಯದ ಸಂದರ್ಭದಲ್ಲಿ ಹೆಚ್ಚಾಗಿ ತಿಲ ತರ್ಪಣ ನೀಡಲಾಗುತ್ತದೆ. ತಿಲ ತರ್ಪಣ ಎಂದರೆ ಎಳ್ಳು-ನೀರು ಸೇರಿಸಿ ನೀಡುವ ತರ್ಪಣ.

ತಿಲ ತರ್ಪಣ ನೀಡುವಾಗ, ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಬಲಗೈ ಅನಾಮಿಕ ಬೆರಳಿಗೆ (ಕಿರು ಬೆರಳಿನ ಪಕ್ಕದ ಬೆರಳು – ಉಂಗರದ ಬೆರಳು) ಹಾಕಿಕೊಳ್ಳಬೇಕು. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅಂದರೆ ದರ್ಭೆ ದೊರೆಯದೇ ಇದ್ದಾಗ ಚಿನ್ನದ ಅಥವಾ ಬೆಳ್ಳಿಯ ಪವಿತ್ರದ ಉಂಗುರವನ್ನು ಧರಿಸಿಕೊಂಡು ಅಂಗೈಯಲ್ಲಿ ತುಳಸೀದಳವನ್ನಿಟ್ಟು ಕೊಂಡು ತರ್ಪಣವನ್ನು ಕೊಡಬಹುದು.

ದರ್ಭೆಯ ಪವಿತ್ರ ಇಲ್ಲದ ಪಕ್ಷದಲ್ಲಿ ಮೂರು ದರ್ಭೆಗಳನ್ನು ಅನಾಮಿಕಾ ಬೆರಳಿಗೆ ಸುತ್ತಿಕೊಂಡು ತರ್ಪಣ ಕೊಡುವ ಸಂಪ್ರದಾಯವೂ ಕೆಲವೆಡೆ ಇದೆ. ಒಂದು ವೇಳೆ ದರ್ಭೆ ಸಿಗದೇ ಇದ್ದಲ್ಲಿ ಬೆರಳುಗಳ ಮಧ್ಯದಲ್ಲಿ “ತುಳಸೀದಳ” ವನ್ನು ಸಿಕ್ಕಿಸಿ ಕೊಂಡಾದರೂ ತರ್ಪಣವನ್ನು ಕೊಡಬಹುದು.

ತರ್ಪಣ ನೀಡಿದ ನಂತರ ಅಥವಾ ಹಿರಿಯ ಪೂಜೆ ಮಾಡಿದ ನಂತರ ಕೆಲವರು ತಮ್ಮ ಕೈಯಲ್ಲಾಗಿರುವುದನ್ನು ದಾನ ನೀಡುವ ಪದ್ಧತಿಯೂ ಇದೆ. ಹಿರಿಯರು ಹೆಚ್ಚಾಗಿ ಪ್ರೀತಿಸುತ್ತಿದ್ದ ವಸ್ತುಗಳನ್ನು ತಂದು ದಾನ ಕೊಡುವ ಸಂಪ್ರದಾಯ ಹಿರಿಯರ ಹಬ್ಬದಲ್ಲಿದೆ.

ಇದನ್ನೂ ಓದಿ | Pitru Paksha | ಪಿತೃ ಪಕ್ಷ ಎಂದರೇನು? ಏಕೆ ಮತ್ತು ಹೇಗೆ ಆಚರಣೆ ಮಾಡಬೇಕು?

Exit mobile version