Site icon Vistara News

Mahavir Jayanti 2023 : ನಯನ ಪಥಗಾಮಿ ಭವತು ಮೇ

Mahavir Jayanti 2023 History and Significance of Jain festival in India

ಮಹಾವೀರ

ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ
ಅನಾದಿ ಕಾಲದಿಂದಲೂ ಜೈನ ಧರ್ಮವು ಸರ್ವ ಜೀವಿಗಳು ಬದುಕುವ ಕಲೆಯನ್ನು ಹೇಳುತ್ತ ಬಂದಿದೆ. ಪ್ರತಿಯೊಂದು ಪ್ರಾಣಿಯು ಸುಖವನ್ನು ಬಯಸುತ್ತದೆ. ನೆಮ್ಮದಿಯ ಬಾಳನ್ನು ಹೊಂದಲು ಪ್ರಯತ್ನಿಸುತ್ತವೆ. ಸೂಕ್ಷ್ಮಜೀವಿಯಿಂದ ಬಹುಗಾತ್ರದ ಪ್ರಾಣಿಯು ಕೂಡ ಸಂಸಾರದ ಸುಖವನ್ನು ಭೋಗಿಸಲು ಇಚ್ಚಿಸುತ್ತಾ ಕಾಲಕ್ಷೇಪ ಮಾಡುತ್ತವೆ.

ಸಂಸಾರ ಚಕ್ರದಲ್ಲಿ ಒಮ್ಮೆ ಸಿಲುಕಿದ ಪ್ರಾಣಿ ಅದರಲ್ಲಿಯೇ ಅಪ್ತವಾಗಿರಲು ಬಯಸಿದರು, ಮನುಷ್ಯ ಸಂಕಟಗಳಿಂದ ನರಳುತ್ತಾ ಇರುತ್ತಾನೆ. ದುಃಖ ಚಕ್ರದಿಂದ ಹೊರ ಬರಲು ಉಪಾಯ ಹುಡುಕುತ್ತಿರುತ್ತಾನೆ. ದಾರಿ ಕಾಣದೇ ಪರಿತಪಿಸುತ್ತಾನೆ. ದುಃಖದ ಕಾರಣ ಹುಡುಕದೇ ಸಂತೋಷವನ್ನು ಹೊಂದಲು ಸಾಧ್ಯವಾಗದು. ವಿವೇಕವುಳ್ಳ ಮನುಷ್ಯ ಪ್ರಾಣಿ ಮಾತ್ರ ಉಪಾಯಗಳನ್ನು ಹುಡುಕಿ ಸಂಸಾರ ನಿವೃತ್ತಿಯನ್ನು ಹೊಂದುತ್ತಾನೆ.

ಸಂಸಾರ ದುಃಖಗಳಿಂದ ಪಾರಾಗಲು ಕಾಲಕಾಲಕ್ಕೆ ಮಹಾಪುರುಷರು ಸಾಧನೆ ಮಾಡುವ ಮೂಲಕ ಭೋದಿಸಿ ಹೋಗಿರುತ್ತಾರೆ. ಪ್ರತಿಯೊಂದು ಜೀವಿಗೂ ಬೇಕಾಗಿರುವ ಮೌಲ್ಯಗಳನ್ನು ಸಾರಿರುತ್ತಾರೆ. ಜೈನ ಧರ್ಮದಲ್ಲಿಯೂ 24 ಜನ ತೀರ್ಥಂಕರರುಗಳು ಸಂಸಾರದ ಪ್ರಾಣಿಗಳಿಗೆ ಹಿತೋಪದೇಶವನ್ನು ನೀಡಿರುತ್ತಾರೆ. ಶ್ರೀ ವೃಷಭನಾಥರಿಂದ ಶ್ರೀ ಮಹಾವೀರವರೆಗೆ ಜೀವಿಗಳು ಸುಖವಾಗಿ ನೆಮ್ಮದಿಯಾಗಿ ಬದುಕಲು ʻಧರ್ಮ’ವೆಂಬ ತಳಹದಿಯನ್ನು ಹಾಕಿಕೊಟ್ಟಿರುತ್ತಾರೆ.

ಸರ್ವಧರ್ಮಗಳು ಇದೇ ಮಾರ್ಗವನ್ನು ತೋರಿಸಿವೆ. ಈ ಯುಗದಲ್ಲಿ ಅಂತಿಮ ತೀರ್ಥಂಕರರಾಗಿ ಅವತರಿಸಿ ಸಂಸಾರದ ಅಸಾರತೆಯನ್ನು ಸಾರಿ ಮುಕ್ತ ಮಾರ್ಗೋಪದೇಶವನ್ನು ನೀಡಿದವರು. ಭಗವಾನ್‌ ಶ್ರೀ ವರ್ಧಮಾನರು. (ಮಹಾವೀರ) ಈಗಿನ ಬಿಹಾರ ಪ್ರಾಂತ್ಯದ ಕುಂಡಲಪುರ ಗ್ರಾಮದಲ್ಲಿ (ವೈಶಾಲಿ) ಚೈತ್ರ ಶುಕ್ಲ ತ್ರಯೋದಶಿಯ ಶುಭ ದಿವಸದಂದು ಅವತರಿಸಿದರು. ಹುಟ್ಟುತ್ತಲೇ ಮತಿ, ಶ್ರುತ ಜ್ಞಾನಿಗಳ ಜೊತೆಗೆ ಅವಧಿ ಜ್ವಾನವನ್ನು ಹೊಂದಿದ್ದರಿಂದ ಸಾಮಾನ್ಯರಂತೆ ಅವರಿಗೆ ಯಾವುದೇ ಅಕ್ಷರಾಭ್ಯಾಸದ ಅಗತ್ಯತೆ ಇರಲಿಲ್ಲ.

ತೀಕ್ಷ್ಣ ಬುದ್ಧಿಯುಳ್ಳ ಅವರನ್ನು ನೋಡಿದವರ ಮತಿಯು ಶುದ್ಧವಾಗುತ್ತಿತ್ತು. ಹಾಗಾಗಿಯೇ ಅವರು ʻಸನ್ಮತಿ’ ಎನಿಸಿಕೊಂಡಿದ್ದರು. ತೀರ್ಥಂಕರ ಪ್ರಕೃತಿ ಬಂಧವಾಗಿದ್ದವರಿಗೆ ʻವಜ್ರ ವೃಷಭನಾರಾಚ ಸಂವಹನ’ (ಶರೀರ) ವಿರುತ್ತದೆ. ಅನಂತ ಶಕ್ತಿಯುಳ್ಳವರಾಗಿರುತ್ತಾರೆ. ಅವರ ಮುಂದೆ ಯಾವುದೇ ಪ್ರಾಣಿಗಳು ಯುದ್ಧ ಮಾಡಲು ಮುಂದಾಗವು. ಹಾಗಾಗಿ ವೀರ ಮಹಾವೀರರೆಂದು ಎನಿಸಿಕೊಂಡರು.

ಭಗವಾನ್‌ ಬುದ್ಧ ಮತ್ತು ಮಹಾವೀರರು ಸಮಕಾಲೀನರು. ಹಾಗೆಯೇ ಆ ಕಾಲದಲ್ಲಿನ ಸಾಮಾಜಿಕ ಹಾಗೂ ಧರ್ಮದ ಹೆಸರಿನ ಮೌಢ್ಯಗಳ ವಿರುದ್ಧ ಬೇಸತ್ತವರು. ಪರಸ್ಪರ ಮಾರ್ಗಗಳು ಒಂದೇ ಆಗದೇ ಇದ್ದರೂ ಈ ಇಬ್ಬರು ಮಹಾಪುರುಷರ ಗುರಿಯೊಂದೇ ಆಗಿತ್ತು. ಅದು ʻಮಾನವ ಕಲ್ಯಾಣ’.

ಯುವಾವಸ್ಥೆಯಲ್ಲಿಯೇ ಸಂಸಾರದ ಸಂಬಂಧಗಳನ್ನು ಕಳಚಿ, ತನ್ನಾತ್ಮ ಕಲ್ಯಾಣ ಮಾಡಿಕೊಳ್ಳುವ ಹಾಗೂ ಸನ್ಮಾರ್ಗವನ್ನು ತೋರಿಸುವ ಸಲುವಾಗಿ 30ನೇ ವಯಸ್ಸಿನಲ್ಲಿಯೇ ದೀಕ್ಷೆ (ಸನ್ಯಾಸ) ಗ್ರಹಣ ಮಾಡಿದರು.

Mahavir Jayanti 2023 History and Significance of Jain festival in India

ತಪಸನಿರ್ಜರಾಚ (ತ.ಸೂ) ಎನ್ನುವಂತೆ ಅನಂತ ಕಾಲದ ಕರ್ಮಗಳ ಬಂಧನವನ್ನು ಕಳಚಿಕೊಳ್ಳಬೇಕೆಂದರೆ ʻತಪಸ್ಸು’ ಮಾಡಲೇಬೇಕು. ಅಂತೆಯೇ ಶ್ರೀ ಮಹಾವೀರರು ಕೂಡ 12 ವರ್ಷಗಳ ಕಾಲ ಸಾಧನೆ ಮಾಡಿದರು. 42ನೇ ವಯಸ್ಸಿನಲ್ಲಿ ತಪಸ್ಸಿನ ಪ್ರತಿಫಲವಾಗಿ ʻʻಕೇವಲಜ್ಞಾನʼʼ (ಅರಿಹಂತ) ಹೊಂದಿದರು.

ಸಾಧನೆಯ ಪ್ರತಿಫಲವಾದ ದಿವ್ಯಜ್ಞಾನವನ್ನು ಹೊಂದಿದ ಮಹಾವೀರರು ʻಸಮವಸರಣ’ವೆಂಬ ಧರ್ಮಸಭೆಯ ಮೂಲಕ ಭವ್ಯ ಜೀವಿಗಳಿಗೆ ಉಪದೇಶವನ್ನು ನೀಡಿದರು. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯಗಳನ್ನು ಹಿಂಸೆಯನ್ನು ವಿರೋಧಿಸಿದರು. ಸಮ್ಯಕ್ತ್ಯವನ್ನು ಹೊಂದುವ ಉಪಾಯವನ್ನು ಹೇಳಿ ಮಿಥ್ಯಾತ್ವವನ್ನು ಬಿಡಿಸಲು ಪ್ರಯತ್ನಿಸಿದರು. ರಾಜಾ ಶ್ರೇಣಿಕನಂತೆ ಅನೇಕ ರಾಜರು ಮಹಾವೀರರ ಆಶ್ರಯ ಹೊಂದಿದರು. ತಮ್ಮ 72 ನೇ ವಯಸ್ಸಿನಲ್ಲಿ ಅಂತಿಮ ಕರ್ಮಗಳನ್ನು ನಿರ್ಜರೆ ಮಾಡಿ ಮೋಕ್ಷವನ್ನು ಹೊಂದುವ ಮೂಲಕ ಶಾಶ್ವತ ಸುಖವನ್ನು ಹೊಂದಿದರು.

ಧರ್ಮದ ಆಚರಣೆ ಮಾಡಲು ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶವನ್ನು ಮಹಾವೀರರು ತೋರಿದ್ದಾರೆ. ತಮ್ಮ ಯುವಾವಸ್ಥೆಯಲ್ಲಿಯೇ ರಾಜ್ಯ, ಸಂಪತ್ತು ಇತ್ಯಾದಿ ಸಂಸಾರದ ವ್ಯಾಮೋಹವನ್ನು ತೊರೆದು ಧರ್ಮದ ಆಶ್ರಯದಲ್ಲಿ ಮುನ್ನಡೆದರು. ಆಗಾಗ ಕೇಳಿ ಬರುವ ಮಾತಿದೆ, ಧರ್ಮಾಚರಣೆ ಏನಿದ್ದರೂ ವೃದ್ಧಾವಸ್ಥೆಯಲ್ಲಿ ಈಗೇನಿದ್ದರೂ “ಭೋಗ ಜೀವನ” ಎಂದು. ಈ ಮಾತು ಖಂಡಿತಾ ಮಿಥೈ. ಧರ್ಮಕ್ಕೆ ವೃದ್ಧಾವಸ್ಥೆಯೇ ಮಾತ್ರ ಸರಿಯಲ್ಲ. ಯಾರು ಧರ್ಮವನ್ನು ನಂಬಿ ನಡೆಯುತ್ತಾರೋ ಅವರು ಸದಾ ಮಾನಸಿಕವಾಗಿ ಯುವಕರಂತೆ ಉತ್ಸಾಹ, ಸಂತೋಷದಿಂದ ಬದುಕನ್ನು ಸಾಗಿಸುತ್ತಿರುತ್ತಾರೆ. ಇದಿಲ್ಲದೇ ಇರುವವರ ಬಾಳನ್ನು ನೋಡಲು ಸಾಕಷ್ಟು ಉದಾಹರಣೆಗಳು ನಮ್ಮೆಲ್ಲರ ಕಣ್ಮುಂದೆ ಇವೆ.

ಮಹಾವೀರ ಸಂದೇಶಗಳಾದ “ಬದುಕನ್ನು ಪ್ರೀತಿಸಿ ತನ್ನಂತೆ ಇತರರನ್ನು ಬದುಕಲು ಬಿಡಿʼʼ, ʻಪರಸ್ಪರ ಉಪಕಾರ ಜೀವನವಿರಲಿʼ; ಈ ಸಾರ್ವಕಾಲಿಕ ಸತ್ಯಗಳು ಸರ್ವಧರ್ಮಗಳು ಒಪ್ಪುವ ಸಾರವಿದು. ನಮ್ಮೆಲ್ಲರ ಜೀವನದಲ್ಲಿ ಅವರ ಉಪದೇಶ ಅಂಶಿಕವಾಗಿಯಾದರೂ ಪರಿವರ್ತನೆಗೆ ಸಹಕಾರಿಯಾಗಲಿ ಎಂದು ಮುನ್ನಡೆಯೋಣ. ಚಾಂದ್ರಮಾನ ಯುಗಾದಿಯೊಂದಿಗೆ ಸಂವತ್ಸರ ಪರಿವರ್ತನೆ. ಮನುಷ್ಯನು ಕಾಲವನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅದು ಪರಿವರ್ತನೆಯಾಗುತ್ತಲೇ ಇರುತ್ತದೆ. ನಾವುಗಳು ಅದರ ವೇಗದಲ್ಲಿ ಚಲಿಸುವ ಅಭ್ಯಾಸ ಮಾಡಿಕೊಳ್ಳಬೇಕು ಅಷ್ಟೇ.

ಲೇಖಕರು ಶಿವಮೊಗ್ಗ ಜಿಲ್ಲೆಯ ಶ್ರೀ ಹೊಂಬುಜ ಜೈನ ಮಠದ ಪೀಠಾಧ್ಯಕ್ಷರು.

ಇದನ್ನೂ ಓದಿ : Mahavir Jayanti : ರಾಜ್ಯದಲ್ಲಿ ಮಹಾವೀರ ಜಯಂತಿ ಸರಕಾರಿ ರಜಾ ದಿನ ಬದಲಾವಣೆ, ಏಪ್ರಿಲ್‌ 3ರ ಬದಲು ಏಪ್ರಿಲ್‌ 4

Exit mobile version