Site icon Vistara News

Makar Sankranti: ಸಂಕ್ರಾಂತಿಗೆ ಬೆಂಗಳೂರಲ್ಲಿ 500 ಜನರಿಂದ ಸೂರ್ಯ ನಮಸ್ಕಾರ

Sankranti celebratjons with several rounds of Surya Namaskar

ಬೆಂಗಳೂರು: ಸಂಕ್ರಾಂತಿ ಹಬ್ಬದಂದು (Makar Sankranti) ಬಹುತೇಕರು ದೇವಸ್ಥಾನಕ್ಕೆ ತೆರಳಿ ಪೂಜೆ-ಪುನಸ್ಕಾರ ಸಲ್ಲಿಸಿದ್ದರೆ, ಬೆಂಗಳೂರಿನ ಯೋಗಪಟುಗಳು ಸೂರ್ಯನಿಗೆ ನಮಿಸಿದ್ದಾರೆ. ಸಮಾಜವನ್ನು ಆರೋಗ್ಯಕರ ಮತ್ತು ದೃಢಕಾಯ ಮಾಡುವ ಸಲುವಾಗಿ, ಸಂಕ್ರಾಂತಿಯನ್ನು ಅನುಪಮವಾದ ರೀತಿಯಲ್ಲಿ ಆಚರಿಸಿದ್ದಾರೆ. 500 ಜನ ಯೋಗೋತ್ಸಾಹಿಗಳು (suryanamaskar) ಅನೇಕ ಸುತ್ತುಗಳ ಸೂರ್ಯ ನಮಸ್ಕಾರಗಳನ್ನು ಮಾಡಿದರು. ಬೆಂಗಳೂರಿನ ದೊಮಲೂರಿನ ಶ್ರೀ ಸೂರ್ಯನಾರಾಯಣ ದೇಗುಲದಲ್ಲಿ ಭಾನುವಾರ ಬೆಳಗ್ಗೆ ನಮನವನ್ನು ಸಲ್ಲಿಸಿದರು.

ಸೇಲ್ಸ್ ಫೋರ್ಸ್‌ನ ಪ್ರಾಡೆಕ್ಟ್ ಮ್ಯಾನೇಜ್ಮೆಂಟ್ ನಿರ್ದೇಶಕರಾಗಿರುವ ದೀಪಿಕಾ ರೆಡ್ಡಿಯವರು ಮಾತನಾಡಿ, ಭಾನುವಾರದ ಬೆಳಗಿನ ಸಮಯದಲ್ಲಿ, ಉತ್ತಮ ಆರೋಗ್ಯಕ್ಕಾಗಿ 500 ಜನ ಇಲ್ಲಿ ಸೇರಿರುವುದನ್ನು ಕಂಡು ಸಂತಸವಾಗುತ್ತಿದೆ. 13 ಸುತ್ತುಗಳ ಸೂರ್ಯನಮಸ್ಕಾರವನ್ನು, ಮಂತ್ರೋಚ್ಚಾರಣೆಯನ್ನು ಅನುಸರಿಸಿ ಧ್ಯಾನಸ್ತವಾದ ರೀತಿಯಲ್ಲಿ ಮಾಡಲಾಗಿದೆ. ಇದರ ಪರಿಣಾಮ ಇಲ್ಲಿ ಪ್ರಶಾಂತತೆ ಹಾಗೂ ಚೈತನ್ಯದಾಯಕ ಅನುಭವಗಳು ಉಂಟಾಗಿವೆ. ಇಂದಿನ ದಿನಕ್ಕೆ ಇದು ಒಳ್ಳೆಯ ಶುಭಾರಂಭವಾಗಿದೆ. ಆಯುಷ್ ಸಚಿವಾಲಯವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜತೆಗೂಡಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸೂರ್ಯನಮಸ್ಕಾರದ ಕಾರ್ಯಕ್ರಮವನ್ನು ಆರ್ಟ್ ಆಫ್ ಲಿವಿಂಗಿನ ಶ್ರೀ ಶ್ರೀ ಯೋಗ ಶಾಲೆಯು ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಆಯೋಜಿಸಿತ್ತು. ಭಾರತದಾದ್ಯಂತ 21 ಸೂರ್ಯ ದೇವಸ್ಥಾನಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಇದೂ ಕೂಡ ಒಂದಾಗಿತ್ತು. ಫಿಟ್ ಭಾರತ ಅಭಿಯಾನದ ಭಾಗವಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ದೃಢಕಾಯ ಭಾರತಕ್ಕಾಗಿ ಆರೋಗ್ಯದಿಂದಿರುವ ಪಣವನ್ನು ತೊಟ್ಟರು.

ಇದನ್ನೂ ಓದಿ: Road Accidents: ಸಂಕ್ರಮಣದ 24 ಗಂಟೆಯಲ್ಲಿ 8 ಭೀಕರ ಅಪಘಾತ; 14 ಮಂದಿ ಸಾವು

Makar Sankranti: ಜಕ್ಕೂರಿನಲ್ಲಿ ಅದ್ಧೂರಿಯಾಗಿ ನಡೆದ ಸುಗ್ಗಿ-ಹುಗ್ಗಿ; 8 ಸಾವಿರಕ್ಕೂ ಅಧಿಕ ಜನ ಭಾಗಿ

ಬೆಂಗಳೂರು: ಸಂಕ್ರಾಂತಿ ಹಿನ್ನೆಲೆಯಲ್ಲಿ (Makar Sankranti) ಮೂಲ ಸಂಸ್ಕೃತಿಯನ್ನು ಉಳಿಸಿ‌ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿ ಜಕ್ಕೂರಿನ ಕ್ರೀಡಾಂಗಡದಲ್ಲಿ ಅದ್ಧೂರಿಯಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜ. 13, 14ರಂದು ಎರಡು ದಿನಗಳ‌ ಕಾಲ ನಡೆದ ಕಾರ್ಯಕ್ರಮದಲ್ಲಿ ಜನಪದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಗಮನ ಸೆಳೆದವು. ರಘು ದೀಕ್ಷಿತ್ ಕಾರ್ಯಕ್ರಮ ಜನರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿತು. ಸುಗ್ಗಿ-ಹುಗ್ಗಿ ಕಾರ್ಯಕ್ರಮದಲ್ಲಿ ಕನಿಷ್ಠ 8 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು.

ಸುಗ್ಗಿ-ಹುಗ್ಗಿ 2024 ಕಾರ್ಯಕ್ರಮಕ್ಕಾಗಿ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ 12 ಜನಪದ ನೃತ್ಯ ತಂಡಗಳು ನೀಡಿದ ಪ್ರದರ್ಶನ ಜನ ಗಮನ ಸೆಳೆಯಿತು. ವೀರಗಾಸೆ, ಕಂಸಾಳೆ, ಹುಲಿ ಕುಣಿತ, ಸೋಮನ ಕುಣಿತ ಸೇರಿದಂತೆ ಎಲ್ಲಾ‌ 12 ಪ್ರಕಾರದ ಜನಪದ ನೃತ್ಯ ತಂಡಗಳನ್ನು ನಾಡಿನ‌ ಎಲ್ಲಾ ಮೂಲೆಗಳಿಂದಲೂ ಆಹ್ವಾನಿಸಲಾಗಿತ್ತು. ಉಪಾಂತ್ಯ ದಿನವಾದ ಭಾನುವಾರ ಬೆಳಗ್ಗಿನಿಂದಲೂ ಈ ತಂಡಗಳು ನೀಡಿದ ನೃತ್ಯ ಪ್ರದರ್ಶನ ನಗರ ಭಾಗದ ಜನರಿಗೆ‌‌ ಹೊಸ ಅನುಭವ ನೀಡಿತು.

ಇದನ್ನೂ ಓದಿ | Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ

ಸಮಾರಂಭದಲ್ಲಿ ಕಳೆದ‌ ಎರಡು ದಿನಗಳಿಂದ ರಂಗೋಲಿ, ಚಿತ್ರಕಲೆ ಹಾಗೂ ಜನಪದ ನೃತ್ಯ ಸ್ಫರ್ಧೆಯಲ್ಲಿ ಪಾಲ್ಗೊಂಡ ವಿಜೇತ ವಿದ್ಯಾರ್ಥಿಗಳು ಹಾಗೂ ನೃತ್ಯಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭೂಮಿ ತಾಯಿ ಬಳಗ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಜನಪದ ಸಂಗೀತ ಕಾರ್ಯಕ್ರಮ ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.

ನಮ್ಮ ಮೂಲ ಹಳ್ಳಿಗಳಲ್ಲಿವೆ ಎಂಬುದನ್ನು ಮರೆಯಬಾರದು: ಕೃಷ್ಣ ಬೈರೇಗೌಡ

ಸುಗ್ಗಿ-ಹುಗ್ಗಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂಮಿ- ಪ್ರಕೃತಿಯನ್ನು ಆರಾಧಿಸುವ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ದಾಟಿಸುವ ಸಲುವಾಗಿಯೇ ಸುಗ್ಗಿ-ಹುಗ್ಗಿ 2024 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಾವಿಂದು ಐಟಿ ಸಿಟಿ ಬೆಂಗಳೂರಿನಲ್ಲಿದ್ದೇವೆ. ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಈ ಕಾಂಕ್ರೀಟ್ ಕಾಡಿನಲ್ಲಿ ನೆಲೆಗೊಂಡಿದ್ದೇವೆ. ಆದರೆ, ನಮ್ಮ ಮೂಲ ಹಳ್ಳಿಗಳಲ್ಲಿವೆ ಎಂಬುದನ್ನು ನಾವು ಮರೆಯಬಾರದು. ನಗರ ಭಾಗದ ಇಂದಿನ ಮಕ್ಕಳಿಗೆ ನಮ್ಮ ಹಳ್ಳಿ ಹೇಗಿರುತ್ತೆ? ನಮ್ಮ ಹಳ್ಳಿಯ ಬದುಕಿನ ಖುಷಿ ಎಂತಹದ್ದು? ಭತ್ತ ರಾಗಿಯ ತೆನೆ ಹೇಗಿರುತ್ತದೆ? ಎಂಬ ಕುರಿತು ತಿಳಿವಳಿಕೆ ಕಡಿಮೆ. ಹೀಗಾಗಿ ನಮ್ಮ ಮಕ್ಕಳಿಗೆ ಹಳ್ಳಿಯ ಬದುಕಿನ‌ ಶ್ರೀಮಂತಿಕೆಯನ್ನು ಪರಿಚಯಿಸುವ ಮತ್ತು ಆ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವೇ ಈ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಎಂದು ಹೇಳಿದರು.

ಇದನ್ನೂ ಓದಿ | Makar Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ತಿನ್ನುವುದೇಕೆ?

ಸಂಕ್ರಾಂತಿ ಯಾವುದೇ ಧರ್ಮದ ಹಬ್ಬವಲ್ಲ ಬದಲಾಗಿ ಇದು ಮಣ್ಣಿನ ಹಬ್ಬ, ಎಲ್ಲಾ ರೈತರ ಹಬ್ಬ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸಬೇಕು. ಆ ಮೂಲಕ ನಮಗೆ ಅನ್ನ ನೀರು ಕೊಡುವ ಭೂಮಿಗೆ ಕೃತಜ್ಞತೆ ಸಲ್ಲಿಸಬೇಕು. ಅಲ್ಲದೆ, ಈ ಉತ್ತರಾಯಣ ಎಲ್ಲರ ಬದುಕಲ್ಲೂ ಶಾಂತಿ ಸುಖ ಮತ್ತು ನೆಮ್ಮದಿ ನೀಡಲಿ.‌ ಎಲ್ಲರ ಬದುಕಲ್ಲೂ ಕತ್ತಲು ಸರಿದು ಬೆಳಕು ಹರಿಯಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಶುಭ ಹಾರೈಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version