ಬೆಂಗಳೂರು: ಮಕರ ಸಂಕ್ರಾಂತಿಯ (Makara Samkranti) ದಿನವಾದ ಸೋಮವಾರ ನಾಡಿನೆಲ್ಲೆಡೆ ಭಕ್ತಿ ಭಾವದ ಸಂಭ್ರಮ. ದೇಗುಲಗಳು ವಿಶೇಷ ಪೂಜೆ, ಅಲಂಕಾರಗಳಿಂದ ಕಂಗೊಳಿಸಿದವು. ಅದರಲ್ಲೂ ಪೌರಾಣಿಕ ಪ್ರಸಿದ್ಧ ಪುಣ್ಯ ಕ್ಷೇತ್ರ ಬೆಂಗಳೂರಿನ (Bangalore News) ಶ್ರೀ ಗವಿ ಗಂಗಾಧರೇಶ್ವರ ದೇಗುಲ (Shri Gavi Gangadhareshwara Temple) ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಿ ಭಕ್ತ ಜನರನ್ನು ಮೂಕ ವಿಸ್ಮಿತಗೊಳಿಸಿತು. ಗುಹಾಂತರದಲ್ಲಿ ನೆಲೆಸಿರುವ ಗಂಗಾಧರೇಶ್ವರನ ಚರಣಕ್ಕೆ ವರ್ಷದಲ್ಲಿ ಒಂದೇ ಬಾರಿ ಸೂರ್ಯ ರಶ್ಮಿ (Sun Rays) ಸ್ಪರ್ಶಿಸುವ ಅಮೃತ ಘಳಿಗೆ ಭಕ್ತ ಜನರು ಸಾಕ್ಷಿಯಾದರು.
ಸೂರ್ಯ ದಕ್ಷಿಣಪಥದಿಂದ ಉತ್ತರಾಯನಕ್ಕೆ ತಿರುಗುವ ವೇಳೆ ಸೂರ್ಯ ಕಿರಣವು ಶಿವನ ವಾಹನ ನಂದಿಯ ಎರಡು ಕೊಂಬುಗಳ ನಡುವೆ ಸಾಗಿ ಶಿವ ಲಿಂಗವನ್ನು ಸ್ಪರ್ಶಿಸುವ ವಿಸ್ಮಯ ಮಕರ ಸಂಕ್ರಾಂತಿಯಂದು ಸಂಭವಿಸುತ್ತದೆ. ಸೋಮವಾರ ಸಂಜೆ 5.20ರಿಂದ 5.30ರ ನಡುವೆ ಈ ವಿಸ್ಮಯಕಾರಿ ವಿದ್ಯಮಾನ ಪ್ರತಿ ವರ್ಷದಂತೆಯೇ ನಡೆಯಿತು.
ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನಗರದ ನಾನಾ ಮೂಲೆಗಳಿಂದ ದೇಗುಲಕ್ಕೆ ಬಂದಿದ್ದರು. ದೇಗುಲದ ಒಳಗೆ ಎಲ್ಲರಿಗೂ ಪ್ರವೇಶ ಇರದಿದ್ದ ಕಾರಣ ಹೊರಭಾಗ ಎರಡು ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿತ್ತು. ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹಾಗೂ ದೇಗುಲದ ಆಡಳಿತ ಸಿಬ್ಬಂದಿ ಹರಸಾಹಸ ಪಟ್ಟರು.
ಸೂರ್ಯ ರಶ್ಮಿ ಸ್ಪರ್ಶದ ನಂತರ ಗಂಗಾಧರನಿಗೆ ಪಂಚಾಭೀಷೇಕ, ಪುಷ್ಪಾಭಿಷೇಕ, ಮಹಮಂಗಳಾರತಿ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ರವಿ ಸುಬ್ರಮಣ್ಯ, ಎಂಎಲ್ಸಿ ಶರವಣ ಸೇರಿ ಹಲವು ಮಂದಿ ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆ, ನಮ್ಮ ಪೂರ್ವಜರು ಎಷ್ಟು ವೈಜ್ಞಾನಿಕವಾಗಿ ಮಂದಿರಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಆಗಿದ್ದು, ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದರು.
ಇದನ್ನೂ ಓದಿ: ಕನ್ನಡದಲ್ಲೇ ಟ್ವೀಟ್ ಮಾಡಿ ಮಕರ ಸಂಕ್ರಾಂತಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ; ಪೊಂಗಲ್, ಮಾಗ್ ಬಿಹು ಹಬ್ಬಗಳಿಗೂ ವಿಶ್
ಭೂಲೋಕದ ಅದ್ಭುತ ದೇವಸ್ಥಾನ
ಗವಿ ಗಂಗಾಧರೇಶ್ವರ ದೇಗುಲ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಈ ಶುಭ ಸಂದರ್ಭದಲ್ಲಿ ಮಾತನಾಡಿ, ಇದು ಭೂಲೋಕದಲ್ಲೇ ಒಂದು ಅದ್ಭುತ ದೇವಸ್ಥಾನ. ಗಂಗಾಧರೇಶ್ವರ ಸ್ವಾಮಿ ದಕ್ಷಿಣಾಭಿಮುಖನಾಗಿ ಕುಳಿತಿದ್ದಾನೆ. ಈ ವಿಶೇಷ ದೇಗುಲದಲ್ಲಿ ವರ್ಷಕ್ಕೆ ಒಂದೇ ಬಾರಿ ಮಕರ ಸಂಕ್ರಾಂತಿ ದಿನದಂದು ದೇವರ ಲಿಂಗಕ್ಕೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ. ಮೂರರಿಂದ ಐದು ನಿಮಿಷಗಳ ಕಾಲ ಪಾದದಿಂದ, ಪೀಠದವರೆಗೆ ಸೂರ್ಯ ನಮಸ್ಕಾರ ಮಾಡುತ್ತಾನೆ. ಈ ಪುಣ್ಯ ಅವಸರವನ್ನು ಕಣ್ತುಂಬಿಕೊಳ್ಳುವವರಿಗೂ ಶಿವನಿಂದ ವಿಶೇಷ ಅನುಗ್ರಹವಾಗಲಿದೆ ಎಂದು ಹೇಳಿದರು.
ಸಣ್ಣ ಪ್ರಮಾಣದ ಗಂಡಾಂತರ ಸಾಧ್ಯತೆ
ಈ ಬಾರಿ ಗಂಗೆಗೆ ಸ್ವಲ್ಪ ಕೋಪ ಬಂದಿರುವುದರಿಂದ ಒಂದು ಜಲ ಕಂಟಕ ಆಗಬಹುದು. ಆದರೆ, ತುಂಬಾ ದೊಡ್ಡ ಗಂಡಾಂತರ ಏನು ಇಲ್ಲ, ಸಣ್ಣ ಪ್ರಮಾಣದ್ದು ಎಂದು ಹೇಳಿದ ಸೋಮಸುಂದರ ದೀಕ್ಷಿತರು, ʻಎಲ್ಲರಿಗೂ ಶುಭ ಆಗಲಿ ಅಂತ ದೇವರ ಬಳಿ ಕೇಳಿ ಕೊಂಡಿದ್ದೇವೆʼ ಎಂದು ಹೇಳಿದರು.
ಈ ಬಾರಿ ಸೂರ್ಯ ಸುಮಾರು 46 ಸೆಕೆಂಡ್ಗಳ ಕಾಲ ಲಿಂಗದ ಮೇಲಿದ್ದು ನಮಸ್ಕರಿಸಿದ್ದಾನೆ. ಪಾದದಿಂದ ಪೀಠದವರೆಗೆ ಸುಮಾರು 50 ಸೆಕೆಂಡ್ ಇದ್ದ. ಆದರೆ, ಗಂಗೆಯನ್ನು ಸ್ಪರ್ಶಿಸಿಲ್ಲ. ಹೀಗಾಗಿ ಗಂಗೆಗೆ ಕೋಪ ಬಂದಿರಬಹುದು. ಇದರಿಂದ ಸಣ್ಣ ಪ್ರಮಾಣದ ಅನಾಹುತ ಆಗಬಹುದು ಎಂದು ದೀಕ್ಷಿತರು ಅಭಿಪ್ರಾಯಪಟ್ಟಿದ್ದಾರೆ.