Site icon Vistara News

Eco friendly Ganesha : ಪರಿಸರಸ್ನೇಹಿ ಗಣಪನನ್ನು ಮನೆಯಲ್ಲೇ ತಯಾರಿಸಿ; ಇಲ್ಲಿದೆ ನೋಡಿ ಸರಳ ಉಪಾಯ

Eco friendly Ganesha

ಗಣೇಶ ಚತುರ್ಥಿಗೆ (Eco friendly Ganesha) ದಿನಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಗಣಪನ ಹಬ್ಬದ ಕಳೆ ಈಗಾಗಲೇ ಆರಂಭವಾಗಿದೆ. ಹಾಗೆಯೇ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪರಿಸರವನ್ನು ಕಾಪಾಡಿ ಎನ್ನುವ ಜಾಗೃತಿ ಅಭಿಯಾನಗಳೂ ಅಲ್ಲಲ್ಲಿ ನಡೆಯುತ್ತಿವೆ. ಇನ್ನೊಂದತ್ತ ಮಾರುಕಟ್ಟೆಗಳಲ್ಲಿ ಬಣ್ಣ ಬಣ್ಣದ ಗಣಪನ ಮೂರ್ತಿಗಳು ಬಂದು ಕುಳಿತಿವೆ. ಆದರೆ ನೀವು ಮನಸ್ಸು ಮಾಡಿದರೆ ನಿಮ್ಮ ಮನೆಯಲ್ಲೇ ಗಣಪನನ್ನು ತಯಾರಿಸಿಕೊಂಡು, ಅದಕ್ಕೆ ಪೂಜೆ ಮಾಡಬಹುದು. ಈ ರೀತಿ ಮನೆಯಲ್ಲಿ ನಿಮ್ಮ ಕೈಯಾರೆ ಮಾಡಿದ ಗಣಪನ ಬಗ್ಗೆ ನಿಮಗೆ ಹೆಚ್ಚಿನ ಭಾವನಾತ್ಮಕ ಸಂಬಂಧವೂ ಉಂಟಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿಯಲ್ಲಿ ಗಣಪನನ್ನು ತಯಾರಿಸಬಹುದು ಎನ್ನುವ ಯೋಚನೆ ನಿಮಗೆ ಬಂದಿದ್ದರೆ ಇಲ್ಲಿವೆ ನೋಡಿ ಕೆಲವು ಸರಳ ಉಪಾಯಗಳು.

ಮಣ್ಣಿನ ಗಣಪ

ಜೇಡಿ ಮಣ್ಣಿನಿಂದ ಗಣಪತಿಯ ವಿಗ್ರಹವನ್ನು ತಯಾರಿಸಬಹುದು. ನೈಸರ್ಗಿಕವಾಗಿ ಸಿಗುವ ಜೇಡಿಮಣ್ಣನ್ನು ಚೆನ್ನಾಗಿ ಕಲೆಸಿ, ಮಾರುಕಟ್ಟೆಯಲ್ಲಿ ಸಿಗುವ ಗಣಪತಿ ಮೂರ್ತಿಯ ಅಚ್ಚಿಗೆ ಹಾಕಬೇಕು. ಅದು ಒಣಗಿದ ನಂತರ ನೀವೇ ನಿಮ್ಮ ಕೈಯಾರೆ ಅದಕ್ಕೆ ಬಣ್ಣಗಳನ್ನು ಹಚ್ಚಿ, ನೆಚ್ಚಿನ ಗಣಪನ ಸಿಂಗಾರವನ್ನು ಮಾಡಬಹುದು. ಈ ರೀತಿ ಕೆಲಸ ಮಾಡುವಾಗ ಒಬ್ಬರೇ ಕುಳಿತು ಮಾಡದೆ, ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಸೇರಿಸಿಕೊಂಡರೆ ನಿಮ್ಮ ಮನೆಯಲ್ಲಿ ಹಬ್ಬದ ಕಳೆ ಇನ್ನಷ್ಟು ಹೆಚ್ಚಾಗುತ್ತದೆ.

ಪೇಪರ್ ಗಣೇಶ

ಮಣ್ಣಿನಂತೆ ಪೇಪರ್‌ ಮೇಚ್‌ನಿಂದಲೂ ನೀವು ಗಣಪನ ವಿಗ್ರಹವನ್ನು ತಯಾರಿಸಬಹುದು. ಮಾರುಕಟ್ಟೆಯಿಂದ ತಂದ ಪೇಪರ್‌ ಪಲ್ಪ್‌ಗೆ ಅಂಟನ್ನು ಹಾಕಿ ಕಲಸಿ ಅದನ್ನು ವಿಗ್ರಹ ರೂಪದಲ್ಲಿ ಮಾಡಿ. ಅದು ಚೆನ್ನಾಗಿ ಒಣಗಿದ ನಂತರ ನಿಮ್ಮ ಇಷ್ಟದಂತೆ ಅದಕ್ಕೆ ಬಣ್ಣ ಹಚ್ಚಿ. ಈ ರೀತಿ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ, ಅಷ್ಟೇ ಅಲ್ಲದೆ ಹಳೆಯದಾಗಿ ಮೂಲೆ ಸೇರಿದ ಪೇಪರ್‌ ಅನ್ನು ಮರುಬಳಕೆ ಮಾಡಿಕೊಂಡಂತೆಯೂ ಆಗುತ್ತದೆ. ಈ ಗಣಪತಿಯನ್ನು ವಿಸರ್ಜನೆ ಮಾಡಿದಾಗ ಅದು ಮಣ್ಣಿನ ಗಣಪತಿಯಂತೆ ನೀರಿನಲ್ಲಿ ಕರಗಿ ಹೋಗುತ್ತದೆ.

ಬೀಜಗಳ ಗಣೇಶ

ನಿಸರ್ಗ ಪ್ರೇಮಿಗಳು ಈ ಗಣಪತಿ ಹಬ್ಬವನ್ನು ಬೀಜಗಳ ಗಣಪನ ಪ್ರತಿಷ್ಠಾಪನೆ ಮಾಡಿ ಆಚರಿಸಬಹುದು. ಗಣಪತಿ ವಿಗ್ರಹ ಮಾಡುವುದಕ್ಕೆ ಒಂದಿಷ್ಟು ಜೇಡಿ ಮಣ್ಣು ತಂದಿಟ್ಟುಕೊಳ್ಳಿ. ಅದರ ಜತೆಗೆ ತರಹೇವಾರಿ ಬೀಜಗಳನ್ನು ಸೇರಿಸಿ ಅದನ್ನು ಕಲೆಸಿ. ನಂತರ ಆ ಮಣ್ಣು ಮತ್ತು ಬೀಜಗಳ ಮಿಶ್ರಣದಿಂದ ಗಣಪತಿ ವಿಗ್ರಹವನ್ನು ತಯಾರಿಸಿ. ಈ ವಿಗ್ರಹವನ್ನು ನೀವು ನಿಮ್ಮ ಮನೆಯ ಗಾರ್ಡನ್‌ನಲ್ಲಿ ಸುಮ್ಮನೆ ಇಟ್ಟರೂ ಸಾಕು. ಅದರಿಂದ ಬೀಜಗಳು ಮೊಳಕೆಯೊಡೆದು ಹಲವಾರು ರೀತಿಯ ಗಿಡಗಳು ಬೆಳೆಯಲಾರಂಭಿಸುತ್ತವೆ. ನಂತರ ನೀವು ಅದನ್ನು ನಿಮಗೆ ಇಷ್ಟ ಬಂದ ಜಾಗದಲ್ಲಿ ನೆಡಬಹುದು. ಅಥವಾ ಬೀಜಗಳ ಗಣೇಶನನ್ನು ಮನೆಯಿಂದ ಹೊರಗೆ ಇರುವ ಖಾಲಿ ಜಾಗದಲ್ಲಿ ಸುಮ್ಮನೆ ಹಾಕಿ ಬಂದರೂ ಅದರಿಂದ ಗಿಡಗಳು ಹುಟ್ಟಿಕೊಂಡು, ಮರಗಳಾಗುತ್ತವೆ.

ತೆಂಗಿನಕಾಯಿ ಗಣಪತಿ

ಕಲಾತ್ಮಕತೆ ಇರುವವರು ಎಂತಹ ವಸ್ತುವಿನಿಂದ ಎಂತಹ ಕಲಾಕೃತಿಯನ್ನು ಬೇಕಾದರೂ ತಯಾರಿಸಬಲ್ಲರು. ಅದೇ ರೀತಿ ಕಲೆಗಾರರು ಈ ಬಾರಿಯ ಗಣೇಶ ಚತುರ್ಥಿಗೆ ತೆಂಗಿನ ಕಾಯಿಯಲ್ಲೇ ಗಣೇಶನನ್ನು ತಯಾರಿಸಬಹುದು. ತೆಂಗಿನ ಕಾಯಿಯನ್ನೇ ಗಣಪನ ಡೊಳ್ಳು ಹೊಟ್ಟೆಯ ರೀತಿ ಮಾಡಿ, ಅದಕ್ಕೆ ಬೇರೆ ಬೇರೆ ಕಲಾತ್ಮಕ ವಸ್ತುಗಳನ್ನು ಸೇರಿಸಿ ಅಂದದ ಗಣಪನನ್ನು ತಯಾರಿಸಬಹುದು. ನಂತರ ಅದನ್ನು ನೆಲದಲ್ಲಿ ಹಾಕಿದರೆ ತೆಂಗಿನ ಮರ ಹುಟ್ಟಲೂಬಹುದು. ಅಥವಾ ಗಣಪನ ವಿಸರ್ಜನೆ ಮಾಡಿದ ನಂತರ ಕಾಯಿಯನ್ನು ಒಡೆದು ಅದರಿಂದ ಏನಾದರೂ ಸಿಹಿ ತಯಾರಿಸಿ, ಕುಟುಂಬಸ್ಥರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಲೂ ಬಹುದು.

ಹಿಟ್ಟಿನ ಗಣೇಶ

ಗಣಪತಿ ಹಬ್ಬಕ್ಕೆ ಯಾರದ್ದಾದರೂ ಮನೆಯಲ್ಲಿ ಹೋಳಿಗೆ ಅಥವಾ ಮೋದಕ ಮಾಡುತ್ತಿದ್ದರೆ, ಈ ಐಡಿಯಾವನ್ನು ನೀವು ಬಳಸಿಕೊಳ್ಳಬಹುದು. ಮನೆಯಲ್ಲಿರುವ ಯಾವುದಾದರೂ ಹಿಟ್ಟನ್ನೇ ಬಳಸಿಕೊಂಡು ಗಣಪತಿ ವಿಗ್ರಹವನ್ನು ನೀವು ಮಾಡಬಹುದು. ಮೋದಕ ಮಾಡಲು ತರುವ ಅಕ್ಕಿ ಹಿಟ್ಟು, ಹೋಳಿಗೆಗೆ ಬಳಸುವ ಮೈದಾ ಹಿಟ್ಟನ್ನೂ ಬಳಸಿಕೊಂಡು ನೀವು ಗಣಪನನ್ನು ತಯಾರಿಸಬಹುದು. ಅದಕ್ಕೆ ನೈಸರ್ಗಿಕ ಆಹಾರ ಬಣ್ಣವನ್ನು ಹಾಕಿದರೆ ನಿಮ್ಮ ಗಣಪ ವರ್ಣರಂಜಿತವಾಗಿಯೂ ಕಾಣಿಸುತ್ತಾನೆ. ಹಿಟ್ಟು ಗಟ್ಟಿಯಾಗಬೇಕೆಂದರೆ ಅದನ್ನು ಒಲೆಯ ಮೇಲೆ ಹಬೆಯಲ್ಲಿ ಬೇಯಿಸಬಹುದು. ದೇವರನ್ನು ವಿಸರ್ಜನೆ ಮಾಡುವಾಗ ಆ ವಿಗ್ರಹವನ್ನು ಪುಡಿ ಮಾಡಿ, ಹಕ್ಕಿಗಳಿಗೆ ಆಹಾರವಾಗಿ ಹಾಕಬಹುದು.

ಇದನ್ನೂ ಓದಿ : Readymade Bagina Trend: ಗೌರಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ಕಾಲಿಟ್ಟ 3 ಶೈಲಿಯ ರೆಡಿಮೇಡ್‌ ಬಾಗಿಣ

ಐಸ್ ಗಣೇಶ

ಇನ್ನೂ ಕಲಾತ್ಮಕವಾಗಿ ಯೋಚಿಸುವವರು ನೀರನ್ನು ಐಸ್‌ ಮಾಡಿ, ಅದರಿಂದಲೇ ಗಣಪತಿಯನ್ನಯ ತಯಾರಿಸಬಹುದು. ಗಣಪತಿ ಮೂರ್ತಿಯ ಅಚ್ಚನ್ನು ಖರೀದಿಸಿ, ಅದರಲ್ಲಿ ನೀರು ತುಂಬಿ, ಡೀಪ್‌ ಫ್ರೀಜ್‌ ಮಾಡಿದರೆ ಆಯಿತು. ಪೂಜೆಯ ಸಮಯದಲ್ಲಿ ಗಣಪನನ್ನು ಹೊರ ತೆಗೆದು, ಆತನಿಗೆ ಸಿಂಗಾರ ಮಾಡಿ, ಪೂಜೆ ಮಾಡಬಹುದು. ಇದರಿಂದ ಅತ್ಯಂತ ಆಕರ್ಷಕ ಗಣಪನನ್ನೂ ಕಾಣಬಹುದು. ಯಾವುದಾದರೂ ಟ್ರೇನಲ್ಲಿ ಗಣಪನನ್ನು ಇಟ್ಟು ಪೂಜೆ ಮಾಡಿ. ಐಸ್‌ ತನ್ನಿಂತಾನೇ ಕರಗಿದ ನಂತರ ಅದನ್ನು ಯಾವುದಾದರೂ ಗಿಡಕ್ಕೆ ಹಾಕಬಹುದು.

ಲೋಹದ ವೈರ್‌ಫ್ರೇಮ್ ಗಣೇಶ

ನೀವು ದೀರ್ಘಕಾಲ ಬರುವಂತಹ ಪರಿಸರ ಸ್ನೇಹಿ ಗಣಪನನ್ನು ತಯಾರಿಸಬೇಕು ಎಂದುಕೊಂಡಿದ್ದರೆ ನೀವು ಲೋಹದ ವೈರ್‌ಫ್ರೇಮ್‌ಗಳಿಂದ ಗಣಪನ ವಿಗ್ರಹವನ್ನು ತಯಾರಿಸಬಹುದು. ಲೋಹದ ತಂತಿಗಳನ್ನು ಬಳಸಿಕೊಂಡು ಅದರಿಂದ ಗಣಪನ ವಿಗ್ರಹ ತಯಾರಿಸಿ. ಅದಕ್ಕೆ ಬಟ್ಟೆ, ಹೂವು, ಎಲೆಗಳಿಂದ ಅಲಂಕಾರ ಮಾಡಿ. ಪೂಜೆಯಾಗಿ ದೇವರನ್ನು ವಿಸರ್ಜನೆ ಮಾಡಿದ ನಂತರ ನೀವು ಗಣಪನನ್ನು ಮುಂದಿನ ವರ್ಷದ ಬಳಕೆಗೆಂದು ಎತ್ತಿಟ್ಟುಕೊಳ್ಳಬಹುದು. ಇದು ಕೂಡ ಪರಿಸರಲ್ಲಿ ಮಾಲಿನ್ಯವಾಗುವುದನ್ನು ತಡೆಗಟ್ಟುತ್ತದೆ.

Exit mobile version