Site icon Vistara News

Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ;‌ ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

Ram Mandir

Makrana marble, pink sandstone from Rajasthan, granite from Tamil Nadu and Telangana Used For Ram Mandir

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2024ರ ಜನವರಿ 22ರಂದು ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೇಶದ 4 ಸಾವಿರ ಸಂತರು ಸೇರಿ 10-15 ಸಾವಿರ ಗಣ್ಯರು ರಾಮಮಂದಿರ (Ram Mandir) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಬೆನ್ನಲ್ಲೇ, ರಾಮಮಂದಿರ ನಿರ್ಮಾಣಕ್ಕೆ ಹಲವು ರಾಜ್ಯಗಳ ಅಮೃತಶಿಲೆ (Marbles), ಗ್ರಾನೈಟ್‌ ಸೇರಿ ಹಲವು ರೀತಿಯ ಶಿಲೆಗಳನ್ನು ಬಳಸಿರುವ ಮಾಹಿತಿ ಲಭ್ಯವಾಗಿದೆ. ಅಷ್ಟರಮಟ್ಟಿಗೆ ರಾಮಮಂದಿರವು ಆತ್ಮನಿರ್ಭರದ (ಸ್ವಾವಲಂಬನೆ) ಸಂಕೇತವಾಗಿದೆ.

ಹೌದು, ರಾಮಮಂದಿರ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರಾನ ಅಮೃತಶಿಲೆ, ಪಿಂಕ್‌ ಸ್ಯಾಂಡ್‌ಸ್ಟೋನ್‌, ತಮಿಳುನಾಡು ಹಾಗೂ ತೆಲಂಗಾಣದ ಗ್ರಾನೈಟ್‌ ಸ್ಟೋನ್‌, ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಸಿಗುವ ಬಣ್ಣದ ಮಾರ್ಬಲ್‌ಗಳನ್ನು ಬಳಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಸ್ಥಾನದ ಭರತ್‌ಪುರದಿಂದ 4.7 ಲಕ್ಷ ಕ್ಯೂಬಿಕ್‌ ಫೀಟ್‌ ಪಿಂಕ್‌ ಸ್ಯಾಂಡ್‌ಸ್ಟೋನ್‌, 17 ಸಾವಿರ ಬಿಳಿ ಅಮೃತ ಶಿಲೆಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಬಾಲಾರ್‌ಶಾ ಹಾಗೂ ಅಲ್ಲಪಳ್ಳಿಯಿಂದ ತೇಗದ ಮರಗಳನ್ನು ತರಿಸಿಕೊಂಡು ರಾಮಮಂದಿರದ 44 ಬಾಗಿಲುಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ 14 ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. “ದೇಶೀಯ ಸಂಪನ್ಮೂಲಗಳನ್ನು ಬಳಸಿ ಭವ್ಯ ರಾಮಮಂದಿರ ನಿರ್ಮಿಸಲಾಗಿದೆ. ಇದೆಲ್ಲ ದೇಶೀಯ ಎಂಜಿನಿಯರಿಂಗ್‌ನ ದ್ಯೋತಕ” ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಮಾಹಿತಿ ನೀಡಿದ್ದಾರೆ.

ಆತ್ಮನಿರ್ಭರತೆಯ ಸಂಕೇತ

“ರಾಮಮಂದಿರವು ಆತ್ಮನಿರ್ಭರತೆಯ ಸಂಕೇತವಾಗಿದೆ. ದೇಶದ ಹಲವು ಐಐಟಿ ತಜ್ಞರು, ಎಂಜಿನಿಯರಿಂಗ್‌ ನಿಪುಣರು ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ರಾಮಮಂದಿರ ಆವರಣದ ಶೇ.70ರಷ್ಟು ಪ್ರದೇಶವು ಹಸಿರಿನಿಂದ ಕಂಗೊಳಿಸಲಿದೆ. ರಾಮಮಂದಿರ ಆವರಣದಲ್ಲಿ ಸುಸಜ್ಜಿತ ಚರಂಡಿ, ಲಿಫ್ಟ್‌, ಜಟಾಯು ಮೂರ್ತಿ ಇರಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಯಶ್‌-ಅಮಿತಾಭ್‌ ಬಚ್ಚನ್;‌ ಮಂದಿರ ಉದ್ಘಾಟನೆಗೆ ಯಾರಿಗೆಲ್ಲ ಆಹ್ವಾನ? ಪಟ್ಟಿ ಇಲ್ಲಿದೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Amith Sha : 550 ವರ್ಷಗಳ ರಾಮಮಂದಿರದ ಕನಸು… ಅಮಿತ್​ ಶಾ ಹೇಳಿಕೆಗೊಂದು ಕಾರಣವಿದೆ

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version