ಮಂತ್ರಾಲಯ: ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಪೂರ್ವಾರಾಧನೆಯ ಪೂಜೆ-ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದು, ಬೃಂದಾವನದ ದರ್ಶನ ಪಡೆಯುತ್ತಿದ್ದಾರೆ. ಆರಾಧನೆಯ ನಿಮಿತ್ತ ನಡೆಯುವ ಏಳು ದಿನಗಳ ಕಾರ್ಯಕ್ರಮಗಳಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಬಹಳ ಮುಖ್ಯವಾದ ದಿನಗಳಾಗಿವೆ. ಈ ಮೂರೂ ದಿನ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಗುತ್ತದೆ. ನಂತರ ಹೂವುಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗುತ್ತದೆ.
ಗುರು ರಾಯರು ಈ ಮೂರು ದಿನಗಳ ಕಾಲ ಆಂತರಿಕ ಧ್ಯಾನವನ್ನು ಬಿಟ್ಟು ಭಕ್ತರೆಡೆಗೆ ತಮ್ಮ ದೃಷ್ಟಿ ಬೀರಲಿದ್ದು, ಅವರ ಇಷ್ಟಾರ್ಥಗಳನ್ನು ಈಡೇರಿಸಲಿದ್ದಾರೆ ಎಂಬ ನಂಬಿಕೆ ಇರುವ ಹಿನ್ನೆಲೆಯಲ್ಲಿ ಗುರುಸಾರ್ವಭಮರ ಕೃಪೆಗೆ ಪಾತ್ರರಾಗಲು ಭಕ್ತರು ತವಕಿಸುತ್ತಿದ್ದಾರೆ.
ಅತಿಥಿ ಗೃಹ ಉದ್ಘಾಟನೆ
ಆರಾಧನೆಯ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಪದ್ಮನಾಭ ತೀರ್ಥ ಅತಿಥಿ ಗೃಹವನ್ನು ಗುರುವಾರ ಉದ್ಘಾಟಿಸಲಾಗಿದೆ. ಶ್ರೀ ಸುಬುಧೇಂದ್ರ ತೀರ್ಥರು ಈ ಅತಿಥಿ ಗೃಹವವನ್ನು ಉದ್ಘಾಟಿಸಿ, ಭಕ್ತರಿಗೆ ಸಮರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಪುನರುಜ್ಜೀವನ ಗೊಳಿಸಿದ ಬೃಂದಾವನ ಗಾರ್ಡ್‌ನ್ ಅನ್ನೂ ಕೂಡ ಉದ್ಘಾಟಿಸಲಾಗಿದೆ.
ಆರಾಧನೆಯ ಮೊದಲ ದಿನವೇ ಶ್ರೀಗಳು ರಥಯಾತ್ರೆಗಾಗಿ ವಿಶೇಷವಾಗಿ ನಿರ್ಮಿಸಲಾಗಿರುವ ಕಾರಿಡಾರ್ “ಮಧ್ವಮಾರ್ಗʼʼವನ್ನು ಉದ್ಘಾಟಿಸಿದ್ದರು.
ಇಂದು ಪ್ರಶಸ್ತಿ ಪ್ರದಾನ
ಆರಾಧನೆಯ ನಿಮಿತ್ತ ಶುಕ್ರವಾರ ಸಂಜೆ ಶ್ರೀ ಮಠದ ಮುಂಭಾಗದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಹತ್ತು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ| ಮಂತ್ರಾಲಯ| ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಚಾಲನೆ