ಮಂತ್ರಾಲಯ: ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರಸ್ವಾಮಿಗಳ 351ನೇ ಆರಾಧನಾಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ, ಶ್ರೀ ಗುರು ರಾಯರ ಗುಣಗಾನ ಮಾಡುತ್ತಿದ್ದಾರೆ.
ಶನಿವಾರ ಬೆಳಗ್ಗೆ ವಾಡಿಕೆಯಂತೆ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಉಪ ಕಾರ್ಯನಿರ್ವಹಣಾಧಿಕಾರಿ ರಮೇಶ್ ಬಾಬು ಗುರು ಅವರು ಆಗಮಿಸಿ, ದೇಗುಲದಿಂದ ತಂದ ಶ್ರೀವರಿ ಶೇಷ ವಸ್ತ್ರವನ್ನು ಮೆರವಣಿಗೆಯಲ್ಲಿ ತಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀಗಳಿಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಟಿಟಿಡಿಯ ಅನೇಕ ಅಧಿಕಾರಿಗಳು, ಅರ್ಚಕರು ಹಾಗೂ ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿದ್ದರು.
ಶ್ರೀವರಿ ಶೇಷ ವಸ್ತ್ರ ಸ್ವೀಕರಿಸಿದ ಶ್ರೀ ಸುಬುಧೇಂದ್ರ ತೀರ್ಥರಿಗೆ ತಿರುಪತಿ ದೇಗುಲದ ಪ್ರಸಾದವನ್ನು ನೀಡಿ, ದೇಗುಲದ ವತಿಯಿಂದ ಗೌರವಿಸಲಾಯಿತು. ನಂತರ ಶ್ರೀಗಳು ಈ ಶ್ರೀವರಿ ವಸ್ತ್ರವನ್ನು ರಾಯರಿಗೆ ಅರ್ಪಿಸಿದರು.
ನಂತರ ಶ್ರೀ ಸುಬುಧೇಂದ್ರ ತೀರ್ಥರು ಬೃಂದಾವನಕ್ಕೆ ತಾವೇ ಮಹಾಪಂಚಾಮೃತಾಭಿಷೇಕ ನೆರವೇರಿಸಿದರು. ಮಹಾಪಂಚಾಮೃತಾಭಿಷೇಕದ ನಂತರ ಸ್ವರ್ಣ ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ರಥೋತ್ಸವಕ್ಕೆ ಸಾಕ್ಷಿಯಾದರು. ಇದಲ್ಲದೆ ಮಧ್ಯಾರಾಧನೆಯ ಅಂಗವಾಗಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಮಧ್ಯಾರಾಧನೆಗೆ ಆಗಮಿಸಿದ ಎಲ್ಲ ಭಕ್ತರಿಗೆ ಪರಿಮಳ ಪ್ರಸಾದವನ್ನು ವಿತರಿಸಲಾಯಿತು. ಸುಮಾರು ೬೦ ಟನ್ ಆಹಾರ ಧಾನ್ಯ ಬಳಸಿ ಪ್ರಸಾದ ತಯಾರಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಇದನ್ನೂ ಓದಿ| ರಾಯರ ಆರಾಧನೆ | ಶ್ರೀರಂಗಂ ದೇಗುಲದ ಶೇಷ ವಸ್ತ್ರ ಗುರು ರಾಯರಿಗೆ ಸಮರ್ಪಣೆ