Site icon Vistara News

Mauni Amavasya 2023 | ಇಂದು ವಿಶೇಷ ಪುಣ್ಯಫಲ ನೀಡುವ ಮೌನಿ ಅಮಾವಾಸ್ಯೆ

Mauni Amavasya 2023

ಹಿಂದೂ ಧರ್ಮದಲ್ಲಿ ಪ್ರತಿ ತಿಥಿಗೂ ವಿಶೇಷ ಮಹತ್ವವಿದೆ. ಪಾಡ್ಯ, ಚತುರ್ದಶಿ, ಏಕಾದಶಿ, ಅಮಾವಾಸ್ಯೆ, ಹುಣ್ಣಿಮೆ ಹೀಗೆ ಎಲ್ಲ ತಿಥಿಗೂ ಅದರದ್ದೇ ಆದ ಆಚರಣೆಗಳಿವೆ. ಸನಾತನ ವೈದಿಕ ಧರ್ಮದಲ್ಲಿ ಕೆಲವು ಅಮಾವಾಸ್ಯೆಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅಂಥ ಅಮಾವಾಸ್ಯೆಗಳಲ್ಲಿ ಮೌನಿ ಅಮಾವಾಸ್ಯೆ (Mauni Amavasya 2023) ಸಹ ಒಂದು.

ಎಲ್ಲ ಅಮಾಮಾಸ್ಯೆಗಳಲ್ಲೂ ದಾನ ಮಾಡಿದರೆ ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ಆದರೆ ಮೌನಿ ಅಮಾವಾಸ್ಯೆಯಲ್ಲಿ ದಾನ ಮಾಡುವುದರ ಜೊತೆಗೆ ಮೌನ ವ್ರತ ಆಚರಣೆ ಮಾಡಲಾಗುತ್ತದೆ.

ಹೌದು, ಪುಷ್ಯ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ಮೌನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ಬಾರಿ ಜನವರಿ 21ರ ಶನಿವಾರದಂದು ಅಮಾವಾಸ್ಯೆ ಆಚರಣೆ ಮಾಡಲಾಗುತ್ತದೆ. ಬೆಳಗ್ಗೆ 6:17ಕ್ಕೆ ಆರಂಭವಾಗಿ 22ರ ಭಾನುವಾರ 02:22ರ ತನಕ ಇರಲಿದೆ. ಉದಯ ತಿಥಿಯ ಅನುಸಾರವಾಗಿ ಅಮಾವಾಸ್ಯೆಯನ್ನು ಶನಿವಾರವೇ ಆಚರಿಸಲಾಗುತ್ತದೆ.

ಈ ಅಮಾವಾಸ್ಯೆ ಶನಿವಾರ ಬಂದಿರುವ ಕಾರಣ ಇದಕ್ಕೆ ಶನೈಶ್ಬರ ಅಮಾವಾಸ್ಯೆ ಎಂದು ಸಹ ಕರೆಯುತ್ತಾರೆ. ಈ ರೀತಿಯ ಅಮಾವಾಸ್ಯೆಯು 30 ವರ್ಷಗಳ ನಂತರ ಬಂದಿದೆ. ಈ ದಿನದಂದು ಕುಂಭ ರಾಶಿಯಲ್ಲಿ ಶನಿಯ ಉಪಸ್ಥಿತಿ ಇರುವ ಕಾರಣ ಈ ಮೌನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದ್ದು, ವ್ರತಾಚರಣೆ ಮಾಡುವವರಿಗೆ ಅಧಿಕ ಪುಣ್ಯಫಲ ದೊರಕಲಿದೆ.

ಮನು ಋಷಿಯ ಜನನ ದಿನ
ಈ ಅಮಾವಾಸ್ಯೆಗೆ ಮೌನಿ ಅಮಾವಾಸ್ಯೆ ಎಂದು ಕರೆಯಲು ಕಾರಣವಿದೆ. ಅದೇನೆಂದರೆ ಇದೇ ಪವಿತ್ರ ತಿಥಿಯಂದು ಮನು ಋಷಿಗಳ ಜನನವಾಗಿತ್ತು. ಮನು ಶಬ್ಧದಿಂದ ಈ ಅಮಾವಾಸ್ಯೆಗೆ ಮೌನಿ ಅಮಾವಾಸ್ಯೆ ಎಂದು ಹೆಸರು ಬಂದಿದೆ. ಈ ದಿನ ಮೌನವಾಗಿದ್ದು, ದೇವರ ಸ್ಮರಣೆ ಮಾಡುವುದು ಶುಭವೆಂದು ಹೇಳಲಾಗುತ್ತದೆ.

ಮೌನಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪರಂಪರೆ ಇದೆ. ಸ್ನಾನದ ನಂತರ ವಿಷ್ಣು ಮತ್ತು ಸೂರ್ಯದೇವನನ್ನು ಪೂಜಿಸುವುದರ ಜೊತೆಗೆ ಸೂರ್ಯನಿಗೆ ಅರ್ಘ್ಯ ನೀಡಲಾಗುತ್ತದೆ. ಈ ದಿನ ಪೂಜೆ ಮಾಡಿ ತರ್ಪಣ ಬಿಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ದೊರಕುತ್ತದೆ ಮತ್ತು ದಾನ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.

ಮೌನಿ ಅಮಾವಾಸ್ಯೆಯಂದು ಅಕ್ಕಿ, ಕಂಬಳಿ, ಹೊದಿಕೆ, ಬಟ್ಟೆ ಮತ್ತು ಹಣ್ಣುಗಳನ್ನು ದಾನವಾಗಿ ನೀಡುವುದರಿಂದ ಶುಭವಾಗುತ್ತದೆ. ಅಷ್ಟೇ ಅಲ್ಲದೇ ಈ ದಿನ ತೀರ್ಥ ಯಾತ್ರೆ ಮಾಡುವುದು ಮತ್ತು ಭಾಗವತ ಶ್ರವಣಕ್ಕೆ ವಿಶೇಷ ಮಹತ್ವವಿದೆ. ಮೌನ ವ್ರತ ಆಚರಣೆ ಮಾಡುವುದರ ಜೊತೆಗೆ ಜಪ, ತಪ, ಅನುಷ್ಠಾನ, ಪೂಜೆ ಮತ್ತು ಆರಾಧನೆಗಳನ್ನು ಶ್ರದ್ಧೆಯಿಂದ ಮಾಡಲಾಗುತ್ತದೆ. ಮೌನಿ ಅಮಾವಾಸ್ಯೆಯನ್ನು ಆಚರಿಸುವುದರಿಂದ ಜಾತಕದಲ್ಲಿರುವ ಸಕಲ ಗ್ರಹ ದೋಷಗಳು ನಿವಾರಣೆಯಾಗುತ್ತವೆ ಮತ್ತು ಪಾಪಗಳಿಂದ ಮುಕ್ತಿ ದೊರಕುತ್ತದೆಯಂತೆ

ಗಂಗಾ ಸ್ನಾನ ಒಳ್ಳೆಯದು
ಮಾಘ ಮಾಸದ ಈ ಅಮಾವಾಸ್ಯೆಯಂದು ಗಂಗಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗೆಳ ಪ್ರಕಾರ ಮೌನಿ ಅಮಾವಾಸ್ಯೆಯಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಅಮೃತ ಪಾನ ಮಾಡಿದ್ದಕ್ಕೆ ಸಮವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಈ ದಿನ ಮಾಡುವ ಗಂಗಾ ಸ್ನಾನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಸಹ ಇದೆ.

ಇದನ್ನೂ ಓದಿ | Prerane | ಉಪನಿಷತ್ತು ಎಂದರೆ ಉಪದೇಶವಲ್ಲ!

Exit mobile version