Site icon Vistara News

Ram Mandir : ರಾಮ ಮಂದಿರಕ್ಕಾಗಿ 30 ವರ್ಷಗಳಿಂದ ಮೌನ ವ್ರತ! ಜ.22ರಂದು ಮಾತನಾಡಲಿದ್ದಾಳೆ ಈ ಶಬರಿ!

Mauni Mata

ಬೆಂಗಳೂರು: ರಾಮಮಂದಿರ ನಿರ್ಮಾಣಗೊಳ್ಳುವ ಮೂಲಕ ಭಾರತದ ಬಹುಸಂಖ್ಯಾತ ಹಿಂದೂಗಳ ಶತಮಾನಗಳ ಕನಸು ನನಸಾಗಲಿದೆ. ಹೀಗಾಗಿ ಈ ಕ್ಷಣ ಪ್ರತಿಯೊಬ್ಬ ಹಿಂದೂವಿಗೆ ವಿಶೇಷ. ವಿಶಾಲ ಭಾರತದ ನಾನಾ ಪ್ರದೇಶದ ಜನರಿಗೆ ಬೇರೆಬೇರೆ ಕಾರಣಕ್ಕೆ ಅಯೋಧ್ಯೆಯ ಬಾಲರಾಮ ಮತ್ತು ಆತನ ಮಂದಿರ ಪ್ರಮುಖ ಎನಿಸಿಕೊಳ್ಳಲಿದೆ. ಅಂತೆಯೇ ರಾಮನ ಪ್ರಾಣಪ್ರತಿಷ್ಠೆಯಾಗುವ ದಿನ ಜಾರ್ಖಂಡ್​ನ ಮಾತೆಯೊಬ್ಬರಿಗೆ ತಮ್ಮದೇ ಆದ ಕಾರಣಕ್ಕೆ ಮಹತ್ವದ್ದಾಗಿದೆ. ಹೇಗೆಂದರೆ ರಾಮ ಮಂದಿರ ನಿರ್ಮಾಣಗೊಳ್ಳುವ ತನಕ ಮಾತನಾಡುವುದಿಲ್ಲ ಎಂದು ಕಳೆದ 30 ವರ್ಷಗಳಿಂದ ಮೌನವ್ರತ ಕೈಗೊಂಡಿರುವ ಅವರು ಜ.22ರಂದು ತಮ್ಮ ಶಪಥ ಪೂರೈಸಲಿದ್ದಾರೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮವಾದ ದಿನವಾದ 1992ರ ಡಿಸೆಂಬರ್‌ 2ರಂದು ಜಾರ್ಖಂಡ್​ನ ಈ ಮಹಿಳೆ ಸರಸ್ವತಿ ದೇವಿ ಅನಿರ್ದಿಷ್ಟ “ಮೌನ ವ್ರತ” ಕೈಗೊಂಡಿದ್ದರು. ಸರಯೂ ನದಿಯ ದಡದಲ್ಲಿರುವ ಪವಿತ್ರ ನಗರದಲ್ಲಿ ರಾಮ ಮಂದಿರ ಉದ್ಘಾಟನೆಯಾಗುವವರೆಗೂ ತಾವು ಒಂದೇ ಒಂದು ಮಾತನ್ನೂ ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಈಗ 85 ವರ್ಷವಾಗಿರುವ ಅವರ ಕನಸು ಅಂತಿಮವಾಗಿ ಜನವರಿ 22ರಂದು ಪೂರೈಕೆಯಾಗಲಿದೆ. ದೇವಾಲಯದ ಉದ್ಘಾಟನೆಗೆ ಸಾಕ್ಷಿಯಾಗಲು ಅವರು ಈಗಾಗಲೇ ಸೋಮವಾರ ರಾತ್ರಿ ಧನ್​ಬಾದ್​ನಿಂದ ಪವಿತ್ರ ನಗರಕ್ಕೆ ತೆರಳಿದ್ದಾರೆ. ತಮ್ಮ ವ್ರತದ ಕಾರಣಕ್ಕೆ ಅವರಿಗೆ ಮೌನಿ ಮಾತಾ ಎಂಬ ಹೆಸರೂ ಇದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇವಿಯನ್ನು ಮಹಂತ ನೃತ್ಯ ಗೋಪಾಲ್ ದಾಸ್ ಅವರ ಶಿಷ್ಯರು ಆಹ್ವಾನಿಸಿದ್ದಾರೆ ಎಂದು ಸರಸ್ವತಿ ದೇವಿ ಅವರ ಕಿರಿಯ ಮಗ ಹರೇ ರಾಮ್ ಅಗರ್ವಾಲ್ ತಿಳಿಸಿದ್ದಾರೆ. ‘ಮೌನಿ ಮಾತಾ’ ದೇವಾಲಯದ ಪ್ರತಿಷ್ಠಾಪನೆಯ ದಿನಾಂಕ ಘೋಷಿಸಿದಾಗಿನಿಂದ ಸಂತೋಷದಿಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವಾದ ದಿನ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೂ ಮೌನ ಆಚರಿಸುವುದಾಗಿ ನನ್ನ ತಾಯಿ ಪ್ರತಿಜ್ಞೆ ಮಾಡಿದ್ದರು. ದೇವಾಲಯದ ಪ್ರತಿಷ್ಠಾಪನೆಯ ದಿನಾಂಕವನ್ನು ಘೋಷಿಸಿದಾಗಿನಿಂದ ಅವರು ಸಂತೋಷವಾಗಿದ್ದಾರೆ” ಎಂದು 55 ವರ್ಷದ ಹರೇ ರಾಮ್ ಅಗರ್ವಾಲ್ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. .

ಕೈಸನ್ನೆ ಮೂಲಕ ಸಂವಹನ

ಮೌನಿ ಮಾತೆಯ ಶಪಥ ಅವರ ಕುಟುಂಬಕ್ಕೆ ಇದು ಸುಲಭವಾಗಿರಲಿಲ್ಲ. ಅವರು ಸಂಜ್ಞೆ ಮೂಲಕ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದರು. ಅದನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗಿತ್ತು ದೇವಿ ಅವರ ಸೊಸೆ ಇನ್ನು ಅಗರ್ವಾಲ್ ಹೇಳಿದರು.

ಒಂದು ಗಂಟೆ ವ್ರತವನ್ನು ಮುರಿದಿದ್ದರು

ವಯಸ್ಸಿನ ಕಾರಣಕ್ಕೆ ಅವರು 2020ರವರೆಗೆ ಮೌನ ವ್ರತ ಮುರಿದು ಮಧ್ಯಾಹ್ನ ಒಂದು ಗಂಟೆ ಮಾತ್ರ ಮಾತನಾಡುತ್ತಿದ್ದರು. ಆದರೆ, ಆಗಸ್ಟ್ 5, 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕಿದಾಗಿನಿಂದ ಅವರು ಮತ್ತೆ ಪೂರ್ಣ ಮೌನಕ್ಕೆ ಜಾರಿದರು.

ಇದನ್ನೂ ಓದಿ : Ram Mandir: ರಾಮಮಂದಿರ ಉದ್ಘಾಟನೆಗೆ ವಿರೋಧ; ಅಪಪ್ರಚಾರಗಳಿಗೆ ಕಿವಿ ಕೊಡದಂತೆ ಶೃಂಗೇರಿ ಮಠ ಕರೆ

ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ಎಂಟು ಮಕ್ಕಳ ತಾಯಿಯಾಗಿರುವ ದೇವಿ 1986ರಲ್ಲಿ ಪತಿ ದೇವಕಿನಂದನ್ ಅಗರ್ವಾಲ್ ಅವರ ಮರಣದ ನಂತರ ತಮ್ಮ ಜೀವನವನ್ನು ರಾಮನಿಗೆ ಅರ್ಪಿಸಿದ್ದರು. ಅಂದಿನಿಂದ ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಗಳಲ್ಲಿ ಕಳೆದಿದ್ದರು.

ತಪಸ್ಸು ಮಾಡಿದ್ದ ಮಾತೆ

2001ರಲ್ಲಿ, ದೇವಿ ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಏಳು ತಿಂಗಳ ಕಾಲ ‘ತಪಸ್ಸು’ ಮಾಡಿದ್ದಾರೆ. ಅಲ್ಲಿ ಭಗವಾನ್ ರಾಮನು ತನ್ನ ವನವಾಸದ ಹೆಚ್ಚಿನ ಭಾಗವನ್ನು ಕಳೆದಿದ್ದ ಎಂದು ನಂಬಲಾಗಿದೆ ಅಗರ್ವಾಲ್ ಅವರ ಪ್ರಕಾರ, ಅವರ ಅತ್ತೆ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಬೆಳಿಗ್ಗೆ ಸುಮಾರು ಆರರಿಂದ ಏಳು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದರು. ಸಂಧ್ಯಾ ಆರತಿ ನಂತರ ಸಂಜೆ ರಾಮಾಯಣ ಮತ್ತು ಭಗವದ್ಗೀತೆ ಓದುತ್ತಿದ್ದರು ಎಂದು ಹೇಳಿದ್ದಾರೆ

ದೇವಿ ದಿನಕ್ಕೆ ಒಮ್ಮೆ ಮಾತ್ರ ಆಹಾರ ತಿನ್ನುತ್ತಿದ್ದ ಅವರು, ಅಕ್ಕಿ ಮತ್ತು ಬೇಳೆಕಾಳುಗಳ ರೊಟ್ಟಿಗೆ ಸೀಮಿತವಾಗಿದ್ದರು. ದೇವಿ ಬಗ್ಗೆ ನೆರೆಯವರಿಗೂ ಗೌರವವಿದೆ. ನಾವು ಮಾತಾ ಜಿ ಅವರನ್ನು ಗೌರವಿಸುತ್ತೇವೆ. ಅವರು ಮಾತನಾಡುವುದನ್ನು ನಾವು ಎಂದಿಗೂ ನೋಡಿಲ್ಲ.ಹೆಚ್ಚಿನ ಸಮಯವನ್ನು ಪ್ರಾರ್ಥನೆಗಳಿಗೆ ಅಥವಾ ತನ್ನ ಸಸ್ಯಗಳ ಪಾಲನೆಗೆ ಮೀಸಲಿಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಬಿತಾ ಶರ್ಮಾ ಎಂಬುವರು, ದೇವಿ ತಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

Exit mobile version