ಬೆಂಗಳೂರು: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಮುಜರಾಯಿ ದೇವಾಲಯಗಳಲ್ಲಿ (Muzrai Temples) ಮೊಬೈಲ್ ಬಳಕೆ ನಿಷೇಧಿಸಿ (Mobile Ban) ಸರ್ಕಾರ ಆದೇಶ ಹೊರಡಿಸಿದೆ. ಭಕ್ತರು ದೇವಾಲಯದಲ್ಲಿ ಮೊಬೈಲ್ ಬಳಸದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ (Muzrai department) ಹೊರಡಿಸಿದೆ. ತಮಿಳುನಾಡಿನ ದೇವಾಲಯಗಳಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ.
ದೇವಾಲಯಗಳ ಆವರಣದಲ್ಲಿ (Temple Premises) ಮೊಬೈಲ್ ಬಳಕೆ ಹೆಚ್ಚುತ್ತಿರುವುದರಿಂದ ಸಿಬ್ಬಂದಿಗಳಿಗೆ ಕಿರಿಕಿರಿ ಆಗುತ್ತದೆ. ಭಕ್ತರು ಏಕಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ಮಾಡಲು ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.
ಇದುವರೆಗೆ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧವಿರಲಿಲ್ಲ. ಆದರೆ, ಸೈಲೆಂಟ್ ಆಗಿ ಇಡಿ ಎಂಬ ಸೂಚನೆ ನೀಡಲಾಗಿತ್ತು. ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಬಳಕೆ ಮಾಡಬೇಡಿ ಎಂಬ ಮನವಿ ಇದುವರೆಗೆ ಇತ್ತು. ಫಲಕಗಳನ್ನೂ ಹಾಕಲಾಗಿತ್ತು. ಆದರೆ, ಇನ್ನು ಅದು ಕಡ್ಡಾಯವಾಗಿ ನಿಷೇಧ ಆಗಲಿದೆ. ಅರ್ಚಕರು ಮೊಬೈಲ್ ಬಳಸದಂತೆ ಈ ಹಿಂದೆಯೇ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಈ ನಿರ್ಬಂಧ ಭಕ್ತರಿಗೂ ವಿಸ್ತರಣೆ ಆಗಲಿದೆ.
ಆದೇಶದಲ್ಲಿ ಏನಿದೆ?
ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗುತ್ತಿದೆ. ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಮೊಬೈಲ್ ಫೋನ್ ಬಳಕೆಯ ಶಬ್ದಗಳಿಂದ ಸಿಬ್ಬಂದಿಗೂ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿದೆ- ಇದು ಧಾರ್ಮಿಕ ದತ್ತಿ ಇಲಾಖೆಯ ಸೂಚನೆ.
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ದೇವಾಲಯಗಳಿವೆ. ದೇವಾಲಯಗಳನ್ನು ಆದಾಯಕ್ಕೆ ಅನುಗುಣವಾಗಿ ಎ, ಬಿ ಮತ್ತು ಸಿ ಎಂದು ವಿಂಗಡಣೆ ಮಾಡಲಾಗಿದೆ.
ದೇವಾಲಯದಲ್ಲಿ ಸೂಚನೆಗಳನ್ನು ಹಾಕಲು ಸೂಚನೆ
ಧರ್ಮಾದಾಯ ಇಲಾಖೆ ವತಿಯಿಂದ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿರುವುದನ್ನು ಸೂಚನಾ ಫಲಕದಲ್ಲಿ ಹಾಕುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Jail mafia: ಜೈಲಿನೊಳಗಿಂದ ಮೊಬೈಲ್ ಡೀಲ್ ಬಂದ್; ಕೈದಿಗಳ ಆಟಕ್ಕೆ ಕಮಿಷನರ್ ಬ್ರೇಕ್
ಯಾಕೆ ಈ ಕಠಿಣ ನಿಯಮ?
ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವಾಗ ಹೆಚ್ಚಿನವರು ಮೊಬೈಲನ್ನು ಸೈಲೆಂಟ್ ಮೋಡ್‌ನಲ್ಲಿ ಹಾಕುತ್ತಾರೆ. ಆದರೆ, ಇತ್ತೀಚೆಗೆ ರೀಲ್ಸ್ ಹುಚ್ಚು ಜಾಸ್ತಿಯಾಗಿರುವುದರಿಂದ ತಾವು ಭೇಟಿ ನೀಡಿದ ದೇವಸ್ಥಾನಗಳಲ್ಲಿ ರೀಲ್ಸ್ ಮಾಡಿ ಹಾಕಲು ಮೊಬೈಲ್ ಬಳಕೆಯಾಗುತ್ತಿದೆ. ಈ ರೀಲ್ಸ್‌ಗಳಿಂದಲೂ ಇತರ ಭಕ್ತರಿಗೆ ತೊಂದರೆ ಆಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ.
ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು
ದೇವಾಲಯಗಳ ಪಾವಿತ್ರ್ಯತೆ ಉಳಿಸುವ ಉದ್ದೇಶದಿಂದ ಭಕ್ತರ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕು ಎಂದು ಈ ಹಿಂದೆಯೇ ಕರ್ನಾಟಕ ಹಿಂದೂ ದೇವಳಗಳ ಅರ್ಚಕರ ಒಕ್ಕೂಟ ಈ ಹಿಂದಿನ ಸರ್ಕಾರಕ್ಕೆ ಮನವಿ ಮಾಡಿತ್ತು. ಮುಖ್ಯ ಕಾರ್ಯದರ್ಶಿ ಕೆ.ಎಸ್‌ಎನ್ ದೀಕ್ಷಿತ್ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಎಲ್ಲ ಭಕ್ತರು ಧ್ಯಾನ, ಶ್ಲೋಕಪಠಣ ನಿರತರಾಗಿರುವ ಹೊತ್ತಿನಲ್ಲಿ ಕೆಲವರ ಕೆಟ್ಟ, ಕರ್ಕಶ ಮೊಬೈಲ್ ರಿಂಗ್ ಟೋನ್‌ಗಳು ವಾತಾವರಣವನ್ನು ಹಾಳುಮಾಡುತ್ತವೆ. ಕೆಲವರು ಮಹಿಳೆಯರು, ಹೆಣ್ಣು ಮಕ್ಕಳ ಫೋಟೊ ತೆಗೆಯುವ ಮೂಲಕ ಕಿರಿಕಿರಿ ಮಾಡುತ್ತಾರೆ ಎಂದು ಹೇಳಲಾಗಿತ್ತು.
ನಿಷೇಧ ಎಂದರೆ ಹೇಗಿರಬಹುದು?
ಮೊಬೈಲ್ ಬಳಕೆ ನಿಷೇಧ ಎಂದರೆ ಹೇಗಿರಬಹುದು. ಮೊಬೈಲನ್ನು ದೇವಸ್ಥಾನದ ಒಳಗೆ ಬಳಸಬಾರದು ಎಂದೇ ಅಥವಾ ದೇವಸ್ಥಾನದ ಒಳಗೆ ಒಯ್ಯಲೂ ಬಾರದು ಎಂಬ ನಿಯಮ ಬರಬಹುದೇ ಎಂಬುದು ನಿಯಮಾವಳಿ ಪ್ರಕಟವಾದ ಬಳಿಕ ತಿಳಿಯಲಿದೆ.