Site icon Vistara News

Mokshada Ekadashi 2022 | ಏನಿದು ಮೋಕ್ಷದಾ ಏಕಾದಶಿ?; ಆಚರಣೆ ಹೇಗೆ?

Mokshada Ekadashi 2022

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು “ಮೋಕ್ಷದಾʼʼ ಏಕಾದಶಿ (Mokshada Ekadashi 2022) ಎಂದು ಕರೆಯುತ್ತಾರೆ. ಈ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದನ್ನು “ವೈಕುಂಠʼʼ ಏಕಾದಶಿ ಎಂದು ಕರೆಯಲಾಗುತ್ತದೆ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದನ್ನೂ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ). ಈ ವರ್ಷ ಇನ್ನೂ ಧನುರ್ಮಾಸ ಬಂದಿಲ್ಲ. ಹೀಗಾಗಿ ಈ ಏಕಾದಶಿಯನ್ನು “ಮೋಕ್ಷದಾ ಏಕಾದಶಿʼʼ ಎಂದು ಆಚರಿಸಲಾಗುತ್ತಿದೆ.

ಈ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯಲಿದೆ. ಹೀಗಾಗಿಯೇ ಈ ಏಕಾದಶಿ ಶ್ರೇಷ್ಠವಾದದ್ದು ಎಂಬ ನಂಬಿಕೆ. ಹೆಸರೇ ಹೇಳುವಂತೆ ಈ ಏಕಾದಶಿ ಮೋಕ್ಷವನ್ನು ತರಲಿದೆ. “ಏಕಾದಶಿ” ಎಂದರೆ ಒಂದು ವ್ರತ. ಇಂದು ಉಪವಾಸವಿದ್ದು ಏಕಾದಶಿ ವ್ರತವನ್ನು ಆಚರಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ತಿಥಿಗಳ ಯಾದಿಯಲ್ಲಿ ಏಕಾದಶಿಯು ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಉಪವಾಸ ಆಚರಣೆಯ ಕಾರಣದಿಂದ ಏಕಾದಶಿ ಬಹಳ ಪ್ರಸಿದ್ಧಿ. ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ. ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು ಎಂದೂ ಆಗಿದೆ.

ಮೋಕದಾ ಏಕಾದಶಿ ಕಥೆಯೇನು?
ಪೌರಾಣಿಕ ಕತೆಯೊಂದರ ಪ್ರಕಾರ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಮೃತಪಟ್ಟಿರುವ ತಮ್ಮ ತಂದೆ ನರಕದಲ್ಲಿರುವುದು ಅವರ ದಿವ್ಯ ದೃಷ್ಟಿಯಿಂದಾಗಿ ಗೋಚರವಾಗುತ್ತದೆ. ಇದರಿಂದ ಅಘಾತಕ್ಕೊಳಗಾದ ರಾಜನು ಪಂಡಿತರ ಬಳಿ ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ತಿಳಿಸುವಂತೆ ಕೋರುತ್ತಾನೆ.

ಈ ಬಗ್ಗೆ ಬಹಳ ಯೋಚಿಸಿದ ಪಂಡಿತರು ಈ ಸಮಸ್ಯೆಗೆ ಪರಿಹಾರವು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಿಲ್ಲ, ಜತೆಗೆ ಮಾರ್ಗಶಿರ ಶುಕ್ಷ ಪಕ್ಷದ ಏಕಾದಶಿಯಂದು ಏಕಾದಶಿ ಆಚರಣೆ ಮಾಡುವಂತೆಯೂ, ಇದರಿಂದ ನಿಮ್ಮ ತಂದೆಯು ನರಕದಿಂದ ಪಾರಾಗುತ್ತಾರೆ ಎಂದು ತಿಳಿಸುತ್ತಾರೆ. ಆಗ ರಾಜನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಹೊರಬರುತ್ತದೆ. ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಹೇಳಲಾಗಿದೆ.

ಈ ಏಕಾದಶಿಯ ಆಚರಣೆ ಹೇಗೆ?
ಏಕಾದಶಿ ಎಂದರೆ ವಿಷ್ಣುವನ್ನು ಆರಾಧಿಸುವ ಸಮಯ. ಏಕಾದಶಿಯಂದು ಬೆಳಗ್ಗೆ ಸ್ನಾನ ಮಾಡಿ ಉಪವಾಸ ಆಚರಣೆ ಆರಂಭಿಸಿ. ವಿಷ್ಣುವನ್ನು ವಿಶೇಷವಾಗಿ ಪೂಜಿಸಬೇಕು. ಸಾಧ್ಯವಿದ್ದರೆ ಪೂಜೆಯ ನಂತರ ದಾನವನ್ನೂ ಮಾಡಬಹುದು. ಹಾಗೆಯೇ ಶ್ರೀಕೃಷ್ಣನನ್ನು ತುಳಸಿಯಿಂದ ಪೂಜಿಸಬಹುದು.

ಮಾರನೇ ದಿನ ಎಂದರೆ ದ್ವಾದಶಿಯಂದು ಉಪವಾಸವನ್ನು ಅಂತ್ಯಮಾಡಬೇಕು. ಏಕಾದಶಿಯಂದು ನಿಮ್ಮ ಮನೆಯ ಸಮೀಪವಿರುವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಕೂಡ ಸಲ್ಲಿಸಬಹುದು.

ಇದನ್ನೂ ಓದಿ | Prerane | ಎಣ್ಣೆ, ಬತ್ತಿ ಇಲ್ಲದೆ ಬೆಳಗುವ ದೀವಿಗೆ

Exit mobile version