ಎಸ್.ಎಸ್.ಸಂದೀಪ ಸಾಗರ, ಕಾರವಾರ
ಸಮುದ್ರ ತೀರದ ಮೇಲೆ ಬೇಕಾಬಿಟ್ಟಿಯಾಗಿ ವಾಹನಗಳ ಓಡಾಟ, ಅಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಿ ನೀರಿನಲ್ಲಿ ಮೋಜು ಮಸ್ತಿಗೆ ತೆರಳುವ ಪ್ರವಾಸಿಗರು. ಈ ರೀತಿಯ ಅವ್ಯವಸ್ಥೆಯಿಂದಾಗಿ ಭಟ್ಕಳ ತಾಲೂಕಿನ ಮುರ್ಡೇಶ್ವರಕ್ಕೆ (Murdeshwar News) ಬರುವ ಪ್ರವಾಸಿಗರು ಇದೀಗ ತಮ್ಮ ವಾಹನಗಳಿಗೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ಟೆಂಪೋವೊಂದು ಕಡಲ ತೀರದಲ್ಲಿ ನಿಲ್ಲಿಸಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಇದಕ್ಕೆ ನಿದರ್ಶನ ಎನ್ನುವಂತಾಗಿದೆ.
ಸಮುದ್ರ ತೀರದಲ್ಲೇ ಪಾರ್ಕಿಂಗ್
ಕ್ರಿಸ್‌ಮಸ್‌ನ ಸಾಲುಸಾಲು ರಜೆ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಮುರ್ಡೇಶ್ವರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದ ಕಾರಣ ಸಮುದ್ರ ತೀರದಲ್ಲಿ ಅಲೆಗಳು ಬರುವ ಸಮೀಪದಲ್ಲೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ಕಾರು, ಬಸ್ ಸೇರಿದಂತೆ ಹಲವಾರು ಪ್ರವಾಸಿ ವಾಹನಗಳನ್ನು ನೇರವಾಗಿ ಕಡಲತೀರಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಲಾಗುತ್ತಿದೆ. ಜತೆಗೆ ವಾಹನ ನಿಲುಗಡೆಯ ನಡುವೆಯೇ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಕಡಲಿನಲ್ಲಿ ಈಜಾಡುತ್ತಾ ಮೋಜು ಮಸ್ತಿ ಮಾಡುತ್ತಿರುತ್ತಾರೆ.
ಹೇಳುವವರಿಲ್ಲ, ಕೇಳುವವರಿಲ್ಲ
ಕಡಲ ತೀರದಲ್ಲಿ ವಾಹನಗಳು ಅತ್ತಿತ್ತ ಸಂಚಾರ ಮಾಡುವಾಗ ಸ್ವಲ್ಪ ಯಾಮಾರಿದರೂ, ನೀರಿನಲ್ಲಿ ಆಟವಾಡುತ್ತಿರುವವರು ವಾಹನದ ಚಕ್ರದಡಿ ಸಿಲುಕುವ ಸಾಧ್ಯತೆಯಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಸ್ವಲ್ಪ ವೇಗ ತೆಗೆದುಕೊಂಡರೂ ಅಪಾಯ ಎದುರಾಗುವುದನ್ನು ಅಲ್ಲಗಳೆಯುವಂತಿಲ್ಲ. ಇದರಿಂದಾಗಿ ಪ್ರವಾಸಿಗರ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಎದುರಾಗಿದೆ. ಜತೆಗೆ ವಾಹನಗಳ ಚಕ್ರ ಮರಳಿನಲ್ಲಿ ಸಿಲುಕುವ ಇಲ್ಲವೇ, ಸಮುದ್ರದಲ್ಲಿ ಅಲೆಗಳಿಗೆ ಸಿಕ್ಕು ಮುಳುಗುವ ಸಾಧ್ಯತೆಯೂ ಇದೆ. ಆದರೂ ಜಿಲ್ಲಾಡಳಿತವಾಗಲಿ, ಪ್ರವಾಸೋದ್ಯಮ ಇಲಾಖೆಯಾಗಲೀ ಇತ್ತ ಗಮನ ನೀಡುತ್ತಿಲ್ಲ. ಸ್ಥಳೀಯ ಪೊಲೀಸ್ ಸಿಬ್ಬಂದಿ ಸಹ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದು, ಕಡಲ ತೀರಕ್ಕೆ ವಾನಹನಗಳನ್ನು ತೆಗೆದುಕೊಂಡು ಹೋಗದಂತೆ ಎಚ್ಚರಿಸಲು ಒಬ್ಬ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಹೀಗಾಗಿ ಬಹುತೇಕ ಪ್ರವಾಸಿಗರು ತಮ್ಮ ವಾಹನಗಳನ್ನು ನೇರವಾಗಿ ಕಡಲ ತೀರಕ್ಕೆ ತರುತ್ತಿದ್ದಾರೆ.
ಇದನ್ನೂ ಓದಿ | ಹೆದ್ದಾರಿಯಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಜನಪ್ರಿಯ ನಟಿ; ಪತಿ ಮೂತ್ರ ವಿಸರ್ಜನೆಗೆ ಹೋದಾಗ ನಡೆಯಿತು ಅಟ್ಯಾಕ್
ಹೆಚ್ಚುವರಿ ಲೈಫ್ ಗಾರ್ಡ್ ಅಗತ್ಯತೆ
ಮುರ್ಡೇಶ್ವರ ಕಡಲ ತೀರದಲ್ಲಿ 4-5 ಜನ ಲೈಫ್ ಗಾರ್ಡ್ ನೇಮಕ ಮಾಡಲಾಗಿದ್ದು, ಏಕಕಾಲಕ್ಕೆ ಇಬ್ಬರು ಅಥವಾ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಮುರ್ಡೇಶ್ವರ ಕಡಲ ತೀರದಲ್ಲಿ ಜನ ಸಂಖ್ಯೆಗೆ ತಕ್ಕಂತೆ ಹೆಚ್ಚಿನ ಲೈಫ್‌ಗಾರ್ಡ್‌ಗಳನ್ನು ನೇಮಕ ಮಾಡಬೇಕಾದ ಅಗತ್ಯ ಇದೆ. ಸಮುದ್ರದಲ್ಲಿ ಆಟವಾಡುವ ವೇಳೆ ಆಳ ತಿಳಿಯದೇ ಅಲೆಗಳೊಂದಿಗೆ ಮುಂದೆ ತೇಲಿ ಹೋಗಿ ಸಾಕಷ್ಟು ಪ್ರವಾಸಿಗರು ಪ್ರಾಣ ಕಳೆದುಕೊಂಡ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ಜತೆಗೆ ಬೇರೆ ಬೇರೆ ಭಾಗಗಳಿಂದ ಬರುವಂತಹ ಪ್ರವಾಸಿಗರು ಎಷ್ಟೋ ಬಾರಿ ಲೈಫ್ ಗಾರ್ಡ್‌ಗಳು ನೀಡುವ ಸೂಚನೆಯನ್ನು ನಿರ್ಲಕ್ಷಿಸಿ ನೀರಿಗಿಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗಾಗಿ ಕಡಲ ತೀರಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎನ್ನುವ ಬೇಡಿಕೆ ಸಹ ಕೇಳಿಬಂದಿದೆ.
ಬೇಕಿದೆ ಶಾಶ್ವತ ಪಾರ್ಕಿಂಗ್ ವ್ಯವಸ್ಥೆ
ಮುರ್ಡೇಶ್ವರದಲ್ಲಿ ವಾಹನಗಳನ್ನು ನಿಲ್ಲಿಸಲು ಶಾಶ್ವತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿದ್ದು, ಆದಷ್ಟು ಕಡಲ ತೀರಗಳಿಗೆ ವಾಹನಗಳನ್ನು ಕೊಂಡೊಯ್ಯುವುದನ್ನು ತಪ್ಪಿಸಬೇಕಿದೆ. ಸಾಲು ಸಾಲು ರಜೆ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಆಗಮ ಹೆಚ್ಚಾಗಿದ್ದು, ಹೊಸ ವರ್ಷಾಚರಣೆ ಮುಗಿಯುವವರೆಗೆ ಜಿಲ್ಲಾಡಳಿತ ಪೊಲೀಸ್ ಇಲಾಖೆಯಿಂದ ಕನಿಷ್ಠ 2 ಸಿಬ್ಬಂದಿಯನ್ನಾದರೂ ತಾತ್ಕಾಲಿಕವಾಗಿ ನಿಯೋಜಿಸಬೇಕಿದೆ. ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಜಾಗ್ರತೆ ವಹಿಸಿ ಅಪಾಯವನ್ನು ತಪ್ಪಿಸಬೇಕಾಗಿದೆ.
ಕಡಲತೀರದಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನ ಸಮುದ್ರಪಾಲು
ಮುರ್ಡೇಶ್ವರ ಕಡಲತೀರದಲ್ಲಿ ಘಟನೆ ಪ್ರವಾಸಕ್ಕೆಂದು ಬಂದಿದ್ದವರು ಟಿಟಿ ವಾಹನ ನಿಲ್ಲಿಸಿದ್ದರು. ಅದೇ ವೇಳೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನೀರಿನಲ್ಲಿ ಸಿಲುಕಿದ ವಾಹನ ಸಿಲುಕಿದೆ. ಕೊನೆಗೆ ಕ್ರೈನ್ ಮೂಲಕ ವಾಹನವನ್ನು ಮೇಲಕ್ಕೆತ್ತಲಾಯಿತು. ಕಡಲತೀರದಲ್ಲೇ ವಾಹನ ನಿಲ್ಲಿಸಲು ಬಿಟ್ಟಿರುವ ಸ್ಥಳೀಯ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ | Maharashtra Lokayukta Bill | ಅಣ್ಣಾ ಹಜಾರೆ ಕನಸು ನನಸು, ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಬಿಲ್ ಪಾಸ್, ಇನ್ನು ಸಿಎಂ ವಿರುದ್ಧವೂ ತನಿಖೆ