Site icon Vistara News

Muslim college | ವಕ್ಫ್‌ ಬೋರ್ಡ್‌ನಲ್ಲಿ ಚರ್ಚೆ ಆಗಿದೆ, ಕಾಲೇಜು ಮುಸ್ಲಿಂ ಹೆಣ್ಮಕ್ಕಳಿಗೆ ಸೀಮಿತವಲ್ಲ ಎಂದ ವಕ್ಫ್‌ ಅಧ್ಯಕ್ಷ

moulana Shafi sa adi

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಮಹಿಳಾ ಕಾಲೇಜುಗಳ (Muslim college) ಸ್ಥಾಪನೆ ಬಗೆಗಿನ ಚರ್ಚೆ ತೀವ್ರಗೊಂಡಿದೆ. ವಕ್ಫ್‌ ಮಂಡಳಿಯಿಂದ ರಾಜ್ಯದಲ್ಲಿ ೧೦ ಕಾಲೇಜುಗಳನ್ನು ಸ್ಥಾಪಿಸುವ ನಿರ್ಧಾರ ಪ್ರಕಟಿಸಿದ್ದ ವಕ್ಫ್‌ ಮಂಡಳಿ ಅಧ್ಯಕ್ಷ ಮಹಮ್ಮದ್‌ ಶಾಪಿ ಸಅದಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಕ್ಫ್‌ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಳ್ಳಿ ಹಾಕಿದ್ದರು. ಸರಕಾರದ ಮಟ್ಟದಲ್ಲಿ ಈ ವಿಚಾರದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಇದಕ್ಕೆ ಪ್ರತಿಕ್ರಿಯಿಸಿರುವ ಮಹಮ್ಮದ್‌ ಶಾಫಿ ಸಅದಿ ಅವರು, ವಕ್ಫ್‌ ಮಂಡಳಿಯಲ್ಲಿ ಈ ವಿಚಾರ ಚರ್ಚೆ ಆಗಿದೆ. ಆದರೆ, ಇದನ್ನು ಇನ್ನೂ ಸರಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ ಎಂದಿದ್ದಾರೆ. ಜತೆಗೆ ಇದು ಮುಸ್ಲಿಂ ಹೆಣ್ಮಕ್ಕಳಿಗೆ ಸೀಮಿತವಾದ ಕಾಲೇಜು ಆಗಿರುವುದಿಲ್ಲ. ಎಲ್ಲ ಧರ್ಮದ ಹೆಣ್ಮಕ್ಕಳಿಗೂ ಮುಕ್ತವಾಗಿರುತ್ತದೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ಸುದ್ದಿಯಾಗಿದ್ದೇನು?
ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಕ್ಫ್‌ ಬೋರ್ಡ್‌ ಸರಕಾರ ನೀಡುವ ಅನುದಾನದಲ್ಲಿ ಪ್ರತಿ ಕಾಲೇಜಿಗೆ ೨.೫ ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು.

ಉಡುಪಿಯಲ್ಲಿ ಹಿಜಾಬ್‌ ವಿವಾದ ಉದ್ಭವಿಸಿದ ಬಳಿಕ ತರಗತಿಯಲ್ಲಿ ಹಿಜಾಬ್‌ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಷಯವಾಗಿ ಬಹುತೇಕ ಮುಸ್ಲಿಂ ಸಂಘ, ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಇದೀಗ ಚುನಾವಣೆಯ ಪರ್ವ ಕಾಲದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ ಮುಸ್ಲಿಂ ಹೆಣ್ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಮುಂದಾಗಿದೆ ಎಂದು ಹೇಳಲಾಗಿತ್ತು. ಹಿಜಾಬ್‌ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂಥವರಿಗೆ ಒಂದು ಸುರಕ್ಷಿತ ಅವಕಾಶವಾಗಿ ಕಾಲೇಜು ಸ್ಥಾಪನೆಗೆ ವಕ್ಫ್‌ ಮಂಡಳಿ ಮುಂದಾಗಿದೆ ಎನ್ನಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗಿತ್ತು.

ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಯನ್ನ ಪ್ರಮೋದ್‌ ಮುತಾಲಿಕ್‌ ಸೇರಿದಂತೆ ಹಲವು ಹಿಂದೂ ಮುಖಂಡರು ಆಕ್ಷೇಪಿಸಿದ್ದರು. ಇದು ಮುಸ್ಲಿಮರನ್ನು ಪ್ರತ್ಯೇಕಗೊಳಿಸುವುದಲ್ಲದೆ, ಅರೇಬಿಕ್‌ ಶಿಕ್ಷಣ ಸಂಸ್ಥೆಗಳಂತೆ ಅಲ್ಲಿ ಏನು ನಡೆಯುತ್ತದೆ ಎಂದು ತಿಳಿಯದೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು.

ಸರಕಾರದ ಚಿಂತನೆಯಲ್ಲಿಲ್ಲ ಎಂದ ಸಿಎಂ
ಈ ಮಧ್ಯೆ ಗುರುವಾರ ಬೆಳಗ್ಗೆ ವಿಧಾನ ಸೌಧದ ಎದುರು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ʻʻಪ್ರತ್ಯೇಕ ಕಾಲೇಜು ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಇದು ನಮ್ಮ ಸರ್ಕಾರದ ನಿಲುವು ಕೂಡಾ ಆಗಿಲ್ಲ. ಇಂಥ ಯಾವುದಾದರೂ ಪ್ರಸ್ತಾವನೆ ಇದ್ರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿʼʼ ಎಂದು ಹೇಳಿದರು.

ವಕ್ಫ್‌ ಬೋರ್ಡ್‌ ಅಧ್ಯಕ್ಷರು ಹೇಳುವುದೇನು?
ವಕ್ಫ್‌ ಬೋರ್ಡ್‌ನಿಂದ ಮಹಿಳಾ ಕಾಲೇಜು ಸ್ಥಾಪನೆಯ ತಮ್ಮ ಹೇಳಿಕೆಯನ್ನು ಅಧ್ಯಕ್ಷ ಮಹಮ್ಮದ್‌ ಶಾಫಿ ಸಅದಿ ಅವರು ಪುನರುಚ್ಚರಿಸಿದ್ದಾರೆ. ವಕ್ಫ್‌ ಮಂಡಳಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತಾವನೆಯನ್ನೂ ಸಿದ್ಧಪಡಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು.

ʻʻವಕ್ಫ್ ಬೋರ್ಡ್‌ ಅಧೀನದಲ್ಲಿ ಚರ್ಚೆ ಮಾಡಿದ್ದೇವೆ. ಇದನ್ನು ಸರ್ಕಾರದ ಮಟ್ಟಕ್ಕೆ ನಾವಿನ್ನೂ ತೆಗೆದುಕೊಂಡು ಹೋಗಿಲ್ಲ. ಶಾಲಾ, ಕಾಲೇಜು ಆರಂಭ ಮಾಡಲು ಸರ್ಕಾರದಿಂದ ಅನುಮತಿ ಬೇಕು. ಸರ್ಕಾರಕ್ಕೆ ಪ್ರಸ್ತಾವನೆ ನೀಡಲು ಈಗಾಗಲೇ ವರದಿ ಸಿದ್ಧ ಮಾಡುತ್ತಿದ್ದೇವೆʼʼ ಎಂದು ವಕ್ಫ್‌ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದರು.

ಬೇಟಿ ಬಚಾವೋ, ಬೇಟಿ ಪಡಾವೊ ಮಾದರಿ ಕಾರ್ಯಕ್ರಮ
ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನಕ್ಕೆ ಪೂರಕವಾಗಿ ನಾವು ಹೆಣ್ಮಕ್ಕಳ ಕಾಲೇಜು ಆರಂಭಕ್ಕೆ ಮುಂದಾಗಿದ್ದೇವೆ. ಇದು ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಶಾಲಾ ಕಾಲೇಜುಗಳಲ್ಲ. ಎಲ್ಲಾ ಧರ್ಮದ ಹೆಣ್ಣು ಮಕ್ಕಳಿಗೂ ಈ ಶಾಲಾ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅವಕಾಶ ಇದೆ. ಇಷ್ಟೇ ಅಲ್ಲ, ಯಾವುದೇ ಸಂಸ್ಥೆ, ಸಂಘಟನೆಗಳು ಮಾತ್ರವಲ್ಲ ಹಿಂದೂ ಸಂಘಟನೆಗಳು ಮುಂದೆ ಬಂದರೂ ಕಾಲೇಜು ಅರಂಭಕ್ಕೆ ಅವಕಾಶ ಕೊಡುತ್ತೇವೆ ಎಂದು ಮೊಹಮ್ಮದ್‌ ಶಾಪಿ ಹೇಳಿದರು.

ಹಿಜಾಬ್‌ಗೂ ಕಾಲೇಜಿಗೂ ಸಂಬಂಧವಿಲ್ಲ
ʻʻಹಿಜಾಬ್‌ಗೂ ಈ ಕಾಲೇಜುಗಳ ಆರಂಭಕ್ಕೂ ಯಾವುದೇ ಸಂಬಂಧ ಇಲ್ಲ. ಎಲ್ಲಾ ಧರ್ಮದ ಹೆಣ್ಣು ಮಕ್ಕಳಿಗೂ ಅವಕಾಶ ನೀಡಲು ಆರಂಭ ಮಾಡಲಾಗುತ್ತಿದೆʼʼ ಎಂದ ಸಅದಿ ಅವರು, ಹಿಂದೂ ಸಂಘಟನೆಗಳ ಆರೋಪಕ್ಕೆ ನಾನು ಏನನ್ನೂ ಹೇಳಲ್ಲ. ಶಿಕ್ಷಣವೊಂದೇ ಇದರ ಉದ್ದೇಶ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕುʼʼ ಎಂದು ಆಶಿಸಿದರು. ʻʻನಾವು ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡುವುದಿಲ್ಲ. ಕಾಲೇಜು ಆರಂಭಕ್ಕೆ ಸರಕಾರ ಅವಕಾಶ ನೀಡುತ್ತದೆ ಎಂಬ ನಂಬಿಕೆ ಇದೆʼʼ ಎಂದು ಹೇಳಿದರು.

ಇದನ್ನೂ ಓದಿ | Muslim college | ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದ ಸಿಎಂ

Exit mobile version