ಚಿಕ್ಕಮಗಳೂರು: ಇದೊಂದು ವಿಸ್ಮಯಕಾರಿ ಹುತ್ತ (Mound of mud). ಕಳೆದ ಹಲವಾರು ವರ್ಷಗಳಿಂದ ಇದರ ರಹಸ್ಯವನ್ನು (Mystery) ಅರಿಯಲು ಸಾಕಷ್ಟು ಮಂದಿ ಪ್ರಯತ್ನ ಮಾಡಿದ್ದಾರೆ. ಆದರೆ, ಅದರ ಮರ್ಮ ತಿಳಿಯುವುದು ಸಾಧ್ಯವಾಗಿಲ್ಲ. ಹೀಗೆ ವೈಜ್ಞಾನಿಕ ಲೋಕಕ್ಕೆ ಸವಾಲಾಗಿದೆ (Mystery World) ನಿಂತಿದೆ ಮಲೆನಾಡಿನ ಹುತ್ತ..!
ಈ ವಿಸ್ಮಯಕಾರಿ ಹುತ್ತ ಇರುವುದು ಚಿಕ್ಕಮಗಳೂರು ಜಿಲ್ಲೆ (Chikkamagaluru News) ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಬಾನಳ್ಳಿ ಗ್ರಾಮದಲ್ಲಿ. ಈ ಹುತ್ತಕ್ಕೆ ವಾರ್ಷಿಕ ಪೂಜೆ ನಡೆಸಿದ ಮರುಕ್ಷಣವೇ ಅದು ಗಡಗಡ ನಡುಗುವುದು ವಿಸ್ಮಯ. ಈ ದಿನಕ್ಕಾಗಿಯೇ ಕಾದು ಕುಳಿತುಕೊಳ್ಳುವ ಸಾವಿರಾರು ಭಕ್ತರು ಈ ಪವಾಡಸದೃಶ ಘಟನೆಯನ್ನು ಕಣ್ತುಂಬಿಕೊಳ್ಳುತ್ತಾರೆ.
ಬಾನಳ್ಳಿ ಗ್ರಾಮದಲ್ಲಿ ದೀಪಾವಳಿ ಕಳೆದ ಬಳಿಕದ ಹುಣ್ಣಿಮೆಯಂದು ಉಣ್ಣಕ್ಕಿ ಜಾತ್ರೆ ನಡೆಯುತ್ತದೆ. ಈ ಪೂಜೆಯ ಸಂದರ್ಭದಲ್ಲಿ ಹುತ್ತ ನಡುಗುತ್ತದೆ. ಸುಮಾರು ಹತ್ತು ಅಡಿ ಎತ್ತರದ ಈ ಹುತ್ತ ಮಹಾಮಂಗಳಾರತಿ ನಡೆಯುತ್ತಿದ್ದಂತೆಯೇ ಕೆಲವೇ ಸೆಕೆಂಡ್‌ಗಳ ಕಾಲ ನಡುಗುತ್ತದೆ. ಆ ಕೆಲ ಸೆಕೆಂಡ್‌ಗಳ ಕಂಪನವನ್ನು ಕಣ್ತುಂಬಿಕೊಳ್ಳಲು ಜನರು ಕಾಯುತ್ತಿರುತ್ತಾರೆ. ಭಕ್ತ ಸಾಗರ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತದೆ.
ಇದು ನೈಸರ್ಗಿಕವಾಗಿಯೇ ಮಣ್ಣಿನಿಂದಲೇ ನಿರ್ಮಾಣಗೊಂಡ ಹುತ್ತ ಇದಾಗಿದೆ. ಭಾನುವಾರ ರಾತ್ರಿ ಇಲ್ಲಿ ಹುಣ್ಣಿಮೆ ಆಚರಣೆ ಮಾಡಲಾಗಿದ್ದು, ಹುತ್ತ ನಡುಗುವ ವಿಸ್ಮಯವನ್ನು ಮಲೆನಾಡಿನ ಭಕ್ತರು ಕಣ್ತುಂಬಿಕೊಂಡರು.
ಮಹಾಮಂಗಳಾರತಿಯ ಸಂದರ್ಭದಲ್ಲಿ ಹುತ್ತಕ್ಕೆ ಮಂಡಕ್ಕಿಯನ್ನು ಎರಚಿ ತಮ್ಮ ಭಕ್ತಿಯ ಸಮರ್ಪಣೆ ಮಾಡಲಾಗುತ್ತದೆ. ಇಲ್ಲಿಗೆ ಬರುವ ಭಕ್ತರಿಗೆ ಹುತ್ತದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದು ಚರ್ಮ ರೋಗವೂ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ ಎಂದು ಭಕ್ತರು ನಂಬಿದ್ದಾರೆ.
ರಾಜ್ಯದ ಎಲ್ಲ ಕಡೆಯಿಂದ ಜನ ಸಾಗರ
ಕೆಲವು ವರ್ಷಗಳ ಹಿಂದೆ ಮಲೆನಾಡಿನ ಕೆಲವೇ ಗ್ರಾಮಗಳಿಗೆ ಸೀಮಿತವಾಗಿದ್ದ ಈ ಉತ್ಸವ ಈಗ ಎಲ್ಲ ಜನರನ್ನು ಸೆಳೆಯುತ್ತದೆ. ದೀಪಾವಳಿ ಕಳೆದು ಬರುವ ಹುಣ್ಣಿಮೆಗೆ ಪೂರಕವಾಗಿ ಗುರುವಾರ ಅಥವಾ ಭಾನುವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ.
ರಾತ್ರಿ 8ರಿಂದ 8.30ರ ಮಧ್ಯೆ ಮಹಾ ಮಂಗಳಾರತಿ ನಡೆಯುತ್ತದೆ. ಬಳಿಕ ಹುತ್ತದ ಸುತ್ತ ಮೂರು ಸುತ್ತು ಹೋರಿಗಳನ್ನು ಓಡಿಸಲಾಗುತ್ತದೆ. ಬಳಿಕ ಹೋರಿಯನ್ನು ಕಾಡಿಗೆ ಬಿಡಲಾಗುತ್ತದೆ. ಹಿಂದೆ ಜಾನುವಾರುಗಳಿಗೆ ರೋಗ ರುಜಿನಗಳು ಬರಬಾರದು ಎಂಬ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿತ್ತು.
ಈ ಹುತ್ತ ಮಣ್ಣಿನಿಂದಲೇ ಆಗಿದೆ. ಇದಕ್ಕೆ ಯಾವುದೇ ಮೇಲ್ಚಾವಣಿ ಇಲ್ಲ. ಆದರೆ, ಎಷ್ಟೇ ಮಳೆ ಬಂದರೂ ಈ ಹುತ್ತ ಒಂದು ಇಂಚು ಕೂಡಾ ಕರಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.