ಬೆಂಗಳೂರು: ನಾಡಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಳೆಯ ನಡುವೆ ಮಹಿಳೆಯರು, ಮಕ್ಕಳು ನಾಗಬನಗಳಿಗೆ ತೆರಳಿ ಪೂಜೆ ಪುನಸ್ಕಾರ ಮಾಡಿದರು.
ಈ ಪಂಚಮಿ ಹಬ್ಬವು ಸಾಲು ಸಾಲು ಹಬ್ಬಗಳು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಪ್ರಾರಂಭವಾಗುತ್ತವೆ.
ಭಕ್ತಿ, ಶ್ರದ್ಧೆಯಿಂದ ನಾಗರ ಕಟ್ಟೆಗಳಿಗೆ ತೆರಳಿದ ಜನರು ನಾಗರ ಮೂರ್ತಿಗಳಿಗೆ ತನಿ ಎರೆದು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು. ಸುಬ್ರಹ್ಮಣ್ಯ ದೇಗಲಗಳಲ್ಲಿ ಮತ್ತು ಇತರ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ರಾಜಧಾನಿ ಬೆಂಗಳೂರಿನಲ್ಲಿ ನಾಗರಪಂಚಮಿಯ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ಮಲ್ಲೇಶ್ವರಂನ ಕಾಡುಮಲ್ಲಿಕಾರ್ಜುನ ದೇಗುಲಗಳಲ್ಲಿ ವಿಶೇಷ ಅಭಿಷೇಕ ಮಾಡಲಾಯಿತು.
ಈ ದೇಗುಲದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು. ಮುಂಜಾನೆಯಿಂದಲೇ ಭಕ್ತರಿಂದ ಪೂಜೆ ಆರಂಭವಾಗಿತ್ತು. ಮಲ್ಲೇಶ್ವರಂನ ಕಾಡುಮಲ್ಲಿಕಾರ್ಜುನ ದೇವಾಲಯದಲ್ಲಿ ಭಕ್ತರು ನಾಗ ಕಲ್ಲುಗಳಿಗೆ ಹಾಲೆರೆದರು. ಒಟ್ಟು 122 ನಾಗರ ಕಲ್ಲುಗಳಿದ್ದು, ಭಕ್ತರು ಪೂಜೆಯಲ್ಲಿ ನಿರತರಾಗಿದ್ದರು. ನಗರದ ಬಹುತೇಕ ಎಲ್ಲ ದೇಗಲಗಳಲ್ಲಿಯೂ ವಿಶೇಷ ಪೂಜೆಗಳು ನಡೆದವು. ನಾಗರಬನಗಳಲ್ಲಿನ ನಾಗ ಮೂರ್ತಿಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಭಕ್ತರು ಬೆಳಿಗ್ಗೆನಿಂದಲೇ ನಾಗ ದೇವಸ್ಥಾನ, ನಾಗರಕಟ್ಟೆ, ನಾಗಬನ ಮುಂತಾದ ನಾಗ ಪ್ರತಿಷ್ಟಾಪಿಸಿದ ಕಡೆಗಳಲ್ಲಿ ಸ್ವಚ್ಚ ಮಾಡಿ ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಹಿಳೆಯರು ನಾಗನಿಗೆ, ನಾಗರಕಲ್ಲಿಗೆ, ಹುತ್ತಕ್ಕೆ ಹಾಲೆರೆದು ಕಡಲೆ, ಯಳ್ಳುಂಡೆ, ಲಾಡು ಮುಂತಾದುವುಗಳು ನೈವೇದ್ಯ ನೀಡಿ ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟಾರ್ಥ ಈಡೇರಿಸಿಕೊಡುವಂತೆ ಬೇಡಿಕೊಂಡರು. ಇಂದು ಹಾಲೆರೆದು ಬೇಡಿಕೊಂಡರೆ ಜೀವನದ ಸಕಲ ಸಮಸ್ಯೆ ಗಳು ನಿವಾರಣೆ ಯಾಗುತ್ತವೆ ಎಂಬುದು ಜನರ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಉಂಡಿ ಹಬ್ಬ ಎಂದೇ ಈ ಹಬ್ಬ ಹೆಚ್ಚು ಪ್ರಸಿದ್ಧಿಯಾಗಿದೆ. ಕಾರಣ ಬಗೆಬಗೆಯ ಉಂಡೆ (ಲಾಡು) ಮಾಡಿ ನಾಗನಿಗೆ ಅರ್ಪಿಸುತ್ತಾರೆ. ಇಂದು ಕೂಡ ಮಹಳೆಯರು ನಾಗನಿಗೆ ವಿಶೇಷವಾಗಿ ಪೂಜೆ ಮಾಡಿ ಉಂಡೆಯನ್ನು ನೈವೇದ್ಯ ಮಾಡಿದರು. ನಾಗನಿಗೆ ಅರ್ಪಿಸಿ ಪೂಜಿಸಿದ ಅರಿಶಿನ ದಾರವನ್ನು ಎಲ್ಲರೂ ರಕ್ಷಾ ಸೂತ್ರದಂತೆ ತಮ್ಮ ಕೈಗೆ ಕಟ್ಟಿಕೊಂಡರು.
ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಕ್ಷೇತ್ರಪಾಲ, ಶ್ರೀ ವಾಸುಕಿ ನಾಗದೇವತಾ, ಶ್ರೀ ಚೌಡೇಶ್ವರಿ ದೇವಾಲಯ, ನಾಗರಕಟ್ಟೆ, ನಾಗರಬನ ಹೀಗೆ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ರ ಯಜ್ಞ, ಹವನ, ಮಹಾಮಂಗಳಾರತಿ ಮುಂತಾದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ| ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ?