ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ ಸದ್ಗುರು ಜಗ್ಗಿ ವಾಸುದೇವ್ ಅವರು ಚಿಕ್ಕಬಳ್ಳಾಪುರದ ಈಶ ಫೌಂಡೇಶನ್ ಆವರಣದಲ್ಲಿ ನಂದಿ ವಿಗ್ರಹ ಮತ್ತು ಮಹಾಶೂಲ ಪ್ರತಿಷ್ಠಾಪಿಸಿದರು. 112 ಅಡಿ ಎತ್ತರದ ಆದಿಯೋಗಿಯ ಎದುರು 21 ಅಡಿ ಎತ್ತರದ ನಂದಿ ಮತ್ತು 54 ಅಡಿಗಳ ಮಹಾಶೂಲವನ್ನು ಪ್ರತಿಷ್ಠಾಪಿಸಲಾಗಿದ್ದು, ಐತಿಹಾಸಿಕ ಘಳಿಗೆಯನ್ನು ವೀಕ್ಷಿಸಲು ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಹೊಸದಾಗಿ ಪ್ರತಿಷ್ಠಾಪನೆಯಾದ ಸ್ಥಳಗಳನ್ನು ಸಾರ್ವಜನಿಕ ದರ್ಶನಕ್ಕೆ ತೆರೆಯುವ ಮುನ್ನ, ಪ್ರತಿಷ್ಠಾಪನೆಯಲ್ಲಿ ಭಾಗಿಯಾದವರು, ನಂದಿಗೆ ಎಣ್ಣೆಯನ್ನು ಅರ್ಪಿಸಿದರು. ದಿನವಿಡೀ ನಡೆದ ಉತ್ಸವದಲ್ಲಿ ಸ್ಥಳೀಯ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ವರ್ಣರಂಜಿತ ಸಂಕ್ರಾಂತಿ ಜಾತ್ರೆಯನ್ನು ಒಳಗೊಂಡ ಸಾಂಪ್ರದಾಯಿಕ ಉತ್ಸವಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಆದಿಯೋಗಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ಮಾಧೇಶ್ವರನ ಭಕ್ತರಿಂದ ಪ್ರದರ್ಶಿಸಲ್ಪಟ್ಟ ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರವಾದ ಕಂಸಾಳೆ ನೃತ್ಯದಿಂದಾಗಿ, ಮನಮೋಹಕ ಸಾಂಸ್ಕೃತಿಕ ಸಂಜೆಯ ವೈಭವಕ್ಕೆ ಮತ್ತಷ್ಟು ಕಳೆಯೇರಿತು. ಪೌರಾಣಿಕ ಕಾಲದ ಹಿನ್ನೆಲೆ ಹೊಂದಿರುವ ಕಂಸಾಳೆಯು, ಹಿತ್ತಾಳೆಯಿಂದ ನಿರ್ಮಿತವಾದ ಜೋಡಿಯಾಗಿ ನುಡಿಸುವ ಸಂಗೀತ ವಾದ್ಯವಾಗಿದ್ದು, ಲಯಬದ್ಧ ರಾಗವನ್ನು ಉಂಟುಮಾಡಿ ಪ್ರೇಕ್ಷಕರನ್ನು ಸಮ್ಮೋಹನಕ್ಕೊಳಗಾಗಿಸುತ್ತದೆ.
ಇದನ್ನೂ ಓದಿ | Ram Mandir : ಅರುಣ್ ಯೋಗಿರಾಜ್ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ? ಇಲ್ಲಿದೆ ವಿವರ
ನಂದಿಯ ಮಹತ್ವ ವಿವರಿಸಿದ ಸದ್ಗುರು
ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು, ಪ್ರತಿಯೊಂದು ಶಿವ ದೇವಾಲಯದ ಹೊರಗೆ ಸಾಂಕೇತಿಕವಾಗಿ ನಂದಿಯನ್ನು ಕಾಣಬಹುದು. ನಂದಿಯು ಅವಿರತ ಕಾಯುವಿಕೆಯ ಸಂಕೇತವಾಗಿದೆ, ಏಕೆಂದರೆ ಕಾಯುವುದು ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠವಾದುದೆಂದು ಪರಿಗಣಿಸಲಾಗಿದೆ. ಸುಮ್ಮನೆ ಕುಳಿತು ಕಾಯುವುದು ಹೇಗೆ ಎಂದು ತಿಳಿದಿರುವವರು ಸಹಜವಾಗಿ ಧ್ಯಾನಸ್ಥನಾಗಿರುತ್ತಾರೆ. ಜನರು ಯಾವಾಗಲೂ ಧ್ಯಾನವನ್ನು ಒಂದು ರೀತಿಯ ಚಟುವಟಿಕೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಲ್ಲ, ಇದು ಒಂದು ಗುಣಧರ್ಮ ಎಂದು ತಿಳಿಸಿದರು.
ಪ್ರಾರ್ಥನೆ ಎಂದರೆ ನೀವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ನಿಮ್ಮ ಪ್ರತಿಜ್ಞೆಗಳು, ನಿರೀಕ್ಷೆಗಳು ಅಥವಾ ಇನ್ನೇನಾದರೂ ಅವನಲ್ಲಿ ನಿವೇದಿಸಲು ಯತ್ನಿಸುತ್ತಿದ್ದೀರಿ. ಧ್ಯಾನ ಎಂದರೆ ನೀವು ಅಸ್ತಿತ್ವವನ್ನು, ಸೃಷ್ಟಿಯ ಅಂತಿಮ ಸ್ವರೂಪವನ್ನು ಆಲಿಸಲು ಸಿದ್ಧರಿದ್ದೀರಿ ಎಂದರ್ಥ. ನಿಮ್ಮಲ್ಲಿ ಹೇಳಲು ಏನೂ ಇಲ್ಲ, ನೀವು ಸುಮ್ಮನೆ ಕೇಳುತ್ತೀರಿ. ಅದು ನಂದಿಯ ಗುಣ ಎಂದು ಸದ್ಗುರುಗಳು ನಂದಿಯ ಮಹತ್ವವನ್ನು ವಿವರಿಸಿದರು.
ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ
ಮಹಾಶೂಲ (ಶಿವನ ತ್ರಿಶೂಲ)ದ ಕುರಿತು ಸದ್ಗುರುಗಳು ಮಾತಾಡುತ್ತಾ, ಇಡೀ ಸೃಷ್ಟಿಯು ಮೂರು ಅಂಶಗಳ ದ್ಯೋತಕವಾಗಿದೆ – ಸೃಷ್ಟಿ, ಸ್ಥಿತಿ ಮತ್ತು ಲಯ. ಭಾರತೀಯ ಸಂಸ್ಕೃತಿಯಲ್ಲಿ, ನಾವು ಈ ಮೂರು ಶಕ್ತಿಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎನ್ನುತ್ತೇವೆ. ಬ್ರಹ್ಮ ಹುಟ್ಟಿನ ಬಗ್ಗೆಯಾದರೆ, ವಿಷ್ಣುವು ಅಸ್ತಿತ್ವದ ನಿರ್ವಹಣೆ ಮತ್ತು ಶಿವ ವಿನಾಶದ ಬಗ್ಗೆ. ಆದಾಗ್ಯೂ, ಮೂಲ ರೂಪದಲ್ಲಿ ಈ ಮೂರು ಕೇವಲ ಒಂದೇ, ಏಕೆಂದರೆ ಸೃಷ್ಟಿ ಮತ್ತು ನಿರ್ವಹಣೆ ಕೇವಲ ವಿನಾಶತೆಯ ಮಡಿಲಲ್ಲೇ ಅಸ್ತಿತ್ವದಲ್ಲಿದೆ. ಅದೇ ಮಹಾಶೂಲದ ಮಹತ್ವ – ಮೇಲ್ನೋಟಕ್ಕೆ ಈ ಮೂರು ಬೇರೆ ಬೇರೆಯಾಗಿ ತೋರಿದರೂ, ನಿಜ ರೂಪದಲ್ಲಿ ಎಲ್ಲವೂ ಒಂದೇ ಎಂಬುದನ್ನು ನಿರಂತರವಾಗಿ ಸೂಚಿಸುವುದು.” ಎಂದರು.
ಸಂತಸ ವ್ಯಕ್ತಪಡಿಸಿದ ಭಕ್ತರು
ಚಿಕ್ಕಬಳ್ಳಾಪುರ ಗ್ರಾಮದ ಸ್ಥಳೀಯ ನಿವಾಸಿಯಾದ ರಾಘವೇಂದ್ರ ಕುಮಾರ್ ಅವರು, ನಾನು ನನ್ನ ಕುಟುಂಬ ಸಮೇತ ಸದ್ಗುರು ಸನ್ನಿಧಿಗೆ ನಿಯಮಿತವಾಗಿ ಭೇಟಿ ನೀಡುತ್ತೇನೆ. ಭವ್ಯವಾದ ಆದಿಯೋಗಿಯ ಮುಂದೆ ಶಿವನ ತ್ರಿಶೂಲ ಮತ್ತು ನಂದಿಯ ಪ್ರತಿಷ್ಠಾಪನೆಯು ನನ್ನನ್ನು ಬೆರಗಾಗಿಸಿತು. ನನ್ನ ಮಕ್ಕಳು ಸಾಂಸ್ಕೃತಿಕ ಪ್ರದರ್ಶನವನ್ನು ಆನಂದಿಸಿದರು ಮತ್ತು ಕೃಷಿ ಮತ್ತು ಪಶುಪಾಲನೆಯ ಗ್ರಾಮ್ಯ ಸೊಗಡಿನ ವರ್ಣರಂಜಿತ ಪ್ರಸ್ತುತಿಗಳ ಮೂಲಕ ತಮ್ಮ ಮೂಲಸೆಲೆಯನ್ನು ಮತ್ತೆ ಕಂಡುಕೊಂಡರು ಎಂದು ಅಭಿಪ್ರಾಯ ಹಂಚಿಕೊಂಡರು.
ಎಲ್ಲಾ ವಯೋಮಾನದವರಲ್ಲಿ ಬಹು ಜನಪ್ರಿಯವಾಗಿರುವ ವರ್ಣರಂಜಿತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ, ದೈನಂದಿನ ಆದಿಯೋಗಿ ದಿವ್ಯದರ್ಶನದ ಜೊತೆಗೆ ಸನ್ನಿಧಿಯಲ್ಲಿ ಸಂದರ್ಶಕರು ವಿಶೇಷ ಲೇಸರ್ ಪ್ರದರ್ಶನದ ಆನಂದವನ್ನು ಅನುಭವಿಸಿದರು. ದಿವ್ಯ ದರ್ಶನವನ್ನು ಸದ್ಗುರು ಸನ್ನಿಧಿಯಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ | Makara Sankranti : ಗವಿ ಗಂಗಾಧರೇಶ್ವರನ ಚರಣ ಸ್ಪರ್ಶಿಸಿದ ಭಾಸ್ಕರ ; ಮುನಿದು ನಿಂತಳೇ ಗಂಗೆ?
ಸದ್ಗುರು ಸನ್ನಿಧಿಯನ್ನು ಅಕ್ಟೋಬರ್ 2022 ರಲ್ಲಿ ನಾಗ ಪ್ರತಿಷ್ಠಾಪನೆಯೊಂದಿಗೆ ಸಾರ್ವಜನಿಕರಿಗೆ ತೆರೆಯಲಾಯಿತು. ಸದ್ಗುರು ಸನ್ನಿಧಿಯು ಪ್ರಪಂಚದಾದ್ಯಂತ ಆಧ್ಯಾತ್ಮಿಕ ಮೂಲಸೌಕರ್ಯಗಳನ್ನು ನಿರ್ಮಿಸಿ ಸಂಪೂರ್ಣ ಮಾನವೀಯತೆಗೆ ಆಧ್ಯಾತ್ಮಿಕತೆಯ ಒಂದು ಹನಿಯನ್ನು ನೀಡುವ ಸದ್ಗುರುಗಳ ಆಶಯದ ಒಂದು ಭಾಗವಾಗಿದೆ.. ಸದ್ಗುರು ಸನ್ನಿಧಿಯಲ್ಲಿ ಪ್ರಸ್ತುತ ನಾಗ ಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗ ಇವುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಲಿಂಗ ಭೈರವಿ ದೇವಿ, ನವಗ್ರಹ ಮಂಟಪ ಮತ್ತು ಯೋಗ ಸಭಾಂಗಣಗಳೊಂದಿಗೆ ಎರಡು ತೀರ್ಥಕುಂಡಗಳ ಸ್ಥಾಪನೆಯಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ